Saturday, September 21, 2024
spot_img
More

    Latest Posts

    ನಾಗಸ್ವರ ವಾದಕ ಲಿಂಗಪ್ಪ ಕಟೀಲು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

    ಬೆಂಗಳೂರು: ದಶಕಗಳ ಕಾಲ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಸ್ಥಾನ ನಾಗಸ್ವರ ವಾದಕರಾಗಿ ಸೇವೆ ಸಲ್ಲಿಸುತ್ತಿರುವ ಕಟೀಲು ಲಿಂಗಪ್ಪ ಶೇರಿಗಾರ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭವು ನ. 7ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನೆರವೇರಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಸಿ.ಟಿ. ರವಿ, ಸಂಸದ ತೇಜಸ್ವಿಸೂರ್ಯ, ಶಾಸಕ ಉದಯ ಬಿ. ಗರುಡಾಚಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ರಶ್ಮಿ ಮಹೇಶ್, ನಿರ್ದೇಶಕ ಎಸ್. ರಂಗಪ್ಪ ಮುಂತಾದವರು ಉಪಸ್ಥಿತರಿದ್ದರು.

    ನೂರು ವರ್ಷಗಳ ಪರಂಪರೆ

    ಪುರಾಣ ಪ್ರಸಿದ್ಧ ಕಟೀಲು ದೇವಸ್ಥಾನದಲ್ಲಿ ನಾಗಸ್ವರ ನುಡಿಸುವುದರಲ್ಲಿ ಲಿಂಗಪ್ಪ ಅವರ ಕುಟುಂಬಕ್ಕೆ ಸುಮಾರು ನೂರು ವರ್ಷಗಳ ಪರಂಪರೆ ಇದೆ. ‘ನಾನು ಕಟೀಲು ದೇವಸ್ಥಾನದಲ್ಲಿ 42 ವರ್ಷಗಳಿಂದ ನಾಗಸ್ವರ ವಾದನ ಮಾಡುತ್ತ ಬಂದಿದ್ದೇನೆ. ಮೊದಲು ನನ್ನ ತಂದೆ 40 ವರ್ಷಗಳ ಕಾಲ ನಾಗಸ್ವರ ನುಡಿಸಿದ್ದಾರೆ. ಅದಕ್ಕೂ ಮೊದಲು ಕೂಡ ನಮ್ಮ ಕುಟುಂಬದವರೇ ನಾಗಸ್ವರ ನುಡಿಸಿದ್ದು, ಕಟೀಲು ಕ್ಷೇತ್ರದಲ್ಲಿ ನಮ್ಮ ಕುಟುಂಬ ಸುಮಾರು ನೂರು ವರ್ಷಗಳಿಂದ ಈ ಸೇವೆ ಮಾಡುತ್ತ ಬಂದಿದೆ’ ಎನ್ನುತ್ತಾರೆ ಲಿಂಗಪ್ಪ.

    ನಿತ್ಯ ನಾಲ್ಕೈದು ಗಂಟೆ ವಾದನ: ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಲಿಂಗಪ್ಪ ಅವರ ನಾಗಸ್ವರ ವಾದನ ಮುಂಜಾನೆಯೇ ಶುರುವಾಗುತ್ತದೆ. ‘ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಹಾಗೂ ಮಧ್ಯೆ ತುಲಾಭಾರ-ಚಂಡಿಕಾ ಹೋಮಗಳ ಅವಧಿಯದ್ದೂ ಸೇರಿ ದಿನಕ್ಕೆ ಸುಮಾರು ನಾಲ್ಕೈದು ಗಂಟೆ ನಾಗಸ್ವರ ನುಡಿಸುತ್ತೇನೆ’ ಎಂದು ಲಿಂಗಪ್ಪ ಅವರು ಮಾಹಿತಿ ನೀಡಿದರು.

    ಲಿಂಗಪ್ಪ ಅವರ ಕಿರು ಪರಿಚಯ

    ಇವರು ದಿವಂಗತ ವಾಸು ಶೇರಿಗಾರ-ಸೀತಾ ಶೇರಿಗಾರ ದಂಪತಿಯ ಪುತ್ರ. ಖ್ಯಾತ ನಾಗಸ್ವರ ವಾದಕರಾಗಿದ್ದ ತಂದೆ ವಾಸು ಶೇರಿಗಾರ ಅವರೇ ಲಿಂಗಪ್ಪ ಅವರಿಗೆ ನಾಗಸ್ವರ ವಾದನದ ಮೊದಲ ಗುರು. ನಂತರ ಖ್ಯಾತ ನಾಗಸ್ವರ ವಾದಕ ಮಧುರೈನ ಎಂ.ಪಿ.ಆರ್. ಅಯ್ಯಾ ಸ್ವಾಮಿ ಅವರಿಂದಲೂ ತರಬೇತಿ ಪಡೆದರು. ಅಲ್ಲದೆ ಖ್ಯಾತ ಕೊಳಲುವಾದಕರಾಗಿದ್ದ ಕೃಷ್ಣ ಭಟ್ ಅವರಲ್ಲೂ ಅಭ್ಯಾಸ ಮಾಡಿದ್ದರು.

    ಕಟೀಲು ಮಾತ್ರವಲ್ಲದೆ ಕೊಲ್ಲೂರು, ಧರ್ಮಸ್ಥಳ, ಸುಬ್ರಹ್ಮಣ್ಯ ಮುಂತಾದ ದೇವಾಲಯಗಳಲ್ಲೂ ಲಿಂಗಪ್ಪ ಅವರು ನಾಗಸ್ವರ ಕಛೇರಿ ನಡೆಸಿಕೊಟ್ಟು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪರ್ಯಾಯ ಸಂದರ್ಭದಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಾಗಸ್ವರ ಕಛೇರಿ ನಡೆಸಿಕೊಟ್ಟಿದ್ದಲ್ಲದೆ, ಪಲಿಮಾರು ಶ್ರೀಗಳಿಂದ ‘ನಾಗಸ್ವರ ವಿಶಾರದ’ ಪ್ರಶಸ್ತಿ ಸ್ವೀಕರಿಸಿರುತ್ತಾರೆ.

    ಶ್ರೀ ಕ್ಷೇತ್ರ ಕಟೀಲಿಗೆ ಈ ಹಿಂದೆ ಭೇಟಿ ನೀಡಿರುವ ಶ್ರೀ ಕಂಚಿ ಕಾಮಕೋಟಿ ಮಠಾಧೀಶರು ಇವರ ನಾಗಸ್ವರ ವಾದನವನ್ನು ಮೆಚ್ಚಿ ಬಂಗಾರದ ಪದಕ ನೀಡಿ ಗೌರವಿಸಿರುತ್ತಾರೆ. ಮಾತ್ರವಲ್ಲ ಪ್ರತಿವರ್ಷ ಬೆಂಗಳೂರಿನ ಮಲ್ಲೇಶ್ವರದ ರಾಘವೇಂದ್ರ ಮಠದಲ್ಲಿ ವಿಶೇಷವಾಗಿ ನಾಗಸ್ವರ ವಾದನ ಕಛೇರಿ ನಡೆಸಿಕೊಟ್ಟು ಭಕ್ತರಿಂದ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ. ಅಲ್ಲದೆ ವಿಶಾಖಪಟ್ಟಣದ ಆಂಜನೇಯ ದೇವಸ್ಥಾನ, ತಮಿಳುನಾಡಿನ ಮಧುರೈ, ನಾಗರಕೋಯಿಲ್ ಮುಂತಾದ ಕಡೆಗಳಲ್ಲಿ ಕಛೇರಿ ನೀಡಿ ಜನಮೆಚ್ಚುಗೆ ಗಳಿಸಿರುತ್ತಾರೆ.

    ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯವರು ಕೇರಳದ ಶ್ರೀ ಎಡನೀರು ಮಠದಲ್ಲಿ ಪ್ರಾಯೋಜಿಸಿದ್ದ ಸಂಗೀತ ಗೋಷ್ಠಿ, ಮಂಗಳೂರಿನ ಸಂಗೀತ ಸಭಾ, ಮಣಿಕೃಷ್ಣ ಅಕಾಡೆಮಿ, ಉಡುಪಿಯ ರಾಗಧನ ಮುಂತಾದ ಸಂಸ್ಥೆಗಳು ಆಯೋಜಿಸಿದ್ದ ಸಮಾರಂಭಗಳಲ್ಲಿ ನಾಗಸ್ವರ ಕಚೇರಿ ನೀಡಿ ಜನಪ್ರಿಯತೆ ಗಳಿಸಿರುತ್ತಾರೆ. ಕಟೀಲಿನಲ್ಲಿ ನಡೆದ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಸಂಗೀತ ಕ್ಷೇತ್ರದಲ್ಲಿನ ಕೊಡುಗೆಗಾಗಿ ವಿದ್ವತ್ ಸನ್ಮಾನ ಸ್ವೀಕರಿಸಿರುತ್ತಾರೆ. 2017ರಲ್ಲಿ ನಡೆದ ಕಟೀಲು ದಿ. ಗೋಪಾಲಕೃಷ್ಣ ಆಸ್ರಣ್ಣ ಅವರ ಜನ್ಮಶತಾಬ್ದಿ ಕಾರ್ಯಕ್ರಮದಲ್ಲಿ ನಾಗಸ್ವರ ವಿಶೇಷ ವಾದನಕ್ಕಾಗಿ ‘ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ’ಗೂ ಪಾತ್ರರಾಗಿರುತ್ತಾರೆ. ಆಕಾಶವಾಣಿಯ ಗ್ರೇಡೆಡ್ ಕಲಾವಿದರಾಗಿರುವ ಇವರು ದೂರದರ್ಶನದಲ್ಲಿಯೂ ಕಾರ್ಯಕ್ರಮ ನೀಡಿರುತ್ತಾರೆ. ಕಟೀಲು ವಲಯ ಗಾಣಿಗ ಸಂಘದ ಅಧ್ಯಕ್ಷರೂ ಆಗಿರುವ ಲಿಂಗಪ್ಪ ಅವರು, ಸಮಾಜದ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ.

    ಧನ್ಯವಾದ: ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಧನ್ಯವಾದಗಳು. ನನ್ನನ್ನು ಪ್ರಶಸ್ತಿಗೆ ಪರಿಗಣಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವರಾದ ಸಿ.ಟಿ. ರವಿ ಅವರಿಗೂ ಧನ್ಯವಾದಗಳು. ನನಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿರುವ ಆತ್ಮೀಯರಾದ ಈಶ್ವರ ಕುಮಾರ್ ಕಟೀಲ್, ಪ್ರದ್ಯುಮ್ನ ರಾವ್ ಅವರಿಗೂ ಕೃತಜ್ಞತೆಗಳು ಎಂದು ಲಿಂಗಪ್ಪ ಅವರು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

    ನನ್ನ ಎಲ್ಲ ಸಾಧನೆಗಳಿಗೆ ಕಟೀಲು ದೇವಿಯ ಆಶೀರ್ವಾದವೇ ಕಾರಣ. ತಾಯಿ ದುರ್ಗಾಪರಮೇಶ್ವರಿಯ ಸೇವೆ ಮಾಡಿದ್ದಕ್ಕೆ ಇವೆಲ್ಲ ಲಭಿಸಿವೆ. ಮತ್ತಷ್ಟು ಸೇವೆ ಮಾಡುವ ಉತ್ಸಾಹವೂ ಉಂಟಾಗಿದೆ. ಈ ಸಾಧನೆ ಹಿಂದೆ ದೇವಳದ ಆಡಳಿತ ಮಂಡಳಿ, ಅರ್ಚಕ ವೃಂದ ಹಾಗೂ ಸಿಬ್ಬಂದಿ ವರ್ಗದ ಸಹಕಾರವೂ ಸಾಕಷ್ಟಿದೆ.

    | ಲಿಂಗಪ್ಪ ಶೇರಿಗಾರ ಕಟೀಲು ದೇವಸ್ಥಾನದ ಆಸ್ಥಾನ ನಾಗಸ್ವರ ವಾದಕ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!