Thursday, May 2, 2024
spot_img
More

    Latest Posts

    ಕ್ಯಾಪ್ಟನ್ ಭರತ್ ಯೋಗೇಂದ್ರ: ಆರ್ಮಿ ಸೆಲೆಕ್ಷನ್​ನಲ್ಲಿ ಪ್ರಥಮ ಸ್ಥಾನ, ಬೆಳ್ಳಿ ಪದಕ!

    ಬೆಂಗಳೂರು: ಗಾಣಿಗ ಸಮುದಾಯದ ಪ್ರತಿಭಾವಂತ ಯುವಕ, ಮೈಸೂರಿನ ಶ್ರೀರಾಮಕೃಷ್ಣ ವಿದ್ಯಾಶಾಲಾ ಹಳೇ ವಿದ್ಯಾರ್ಥಿ ಕ್ಯಾಪ್ಟನ್ ಭರತ್ ಯೋಗೇಂದ್ರ ಅವರು ಆರ್ಮಿ ಸೆಲೆಕ್ಷನ್​ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಲ್ಲದೆ, ಅತ್ಯುತ್ಕೃಷ್ಟ ಬೆಳ್ಳಿ ಪದಕವನ್ನೂ ಗಳಿಸಿ ಸಾಧಕ ಎನಿಸಿಕೊಂಡಿದ್ದಾರೆ. ಇವರು ನ್ಯಾಷನಲ್ ಮಿಲಿಟರಿ ಅಕಾಡೆಮಿಯ ಫಸ್ಟ್ ಇನ್ ಆರ್ಡರ್ ಆಫ್ ಮೆರಿಟ್ ಆ್ಯಂಡ್ ಟೆಕ್ನಿಕಲ್ ಗ್ರ್ಯಾಜುವೇಟ್ ಕೋರ್ಸ್​ನಲ್ಲಿ ಬೆಳ್ಳಿ  ಪದಕ ಗಳಿಸಿದ್ದಾರೆ.

    ಈ ಸಾಧನೆ ಹಿನ್ನೆಲೆಯಲ್ಲಿ ತಾವು ಓದಿದ್ದ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭ ಕ್ಯಾಪ್ಟನ್ ಭರತ್ ಯೋಗೇಂದ್ರ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಕಳೆದ ಆಗಸ್ಟ್ 15ರಂದು ಮೈಸೂರಿನ ಯಾದವಗಿರಿಯ ಶ್ರೀರಾಮಕೃಷ್ಣ ವಿದ್ಯಾಶಾಲೆಯ ಪ್ರಾಂಶುಪಾಲರಾದ ಎಸ್. ಬಾಲಾಜಿ ಅವರು ಕ್ಯಾಪ್ಟನ್ ಭರತ್ ಯೋಗೇಂದ್ರ ಅವರ ಸಂದರ್ಶನವನ್ನು ಮಾಡಿದ್ದಾರೆ. ಈ ಸಂದರ್ಶನದಲ್ಲಿ ಭರತ್ ಸಾಕಷ್ಟು ವಿಷಯಗಳನ್ನು ಹೇಳಿಕೊಂಡಿದ್ದಾರೆ.

    ರಾಮಕೃಷ್ಣ ವಿದ್ಯಾಶಾಲೆಯಲ್ಲಿ ತಾವು ಓದುತ್ತಿದ್ದಾಗ ಸಿಕ್ಕ ವಿದ್ಯಾಭ್ಯಾಸ ಹಾಗೂ ಆ ಸಂದರ್ಭದಲ್ಲಿ ಇದ್ದ ಶಿಸ್ತುಬದ್ಧ ಪಠ್ಯೇತರ ಚಟುವಟಿಕೆಗಳು ನಾನು ಸೇನೆಗೆ ಆಯ್ಕೆ ಆಗುವಲ್ಲಿ ಹಾಗೂ ನಂತರ ಸೇನಾ ತರಬೇತಿಯಲ್ಲಿ ಬಹಳಷ್ಟು ಉಪಯೋಗಕ್ಕೆ ಬಂದವು ಎಂಬುದಾಗಿ ಭರತ್ ತಮ್ಮ ಗುರುಗಳ ಬಳಿ ಹೇಳಿಕೊಂಡಿದ್ದಾರೆ.

    ಕ್ಯಾಪ್ಟನ್ ಭರತ್ ಯೋಗೇಂದ್ರ (ಚಿತ್ರಕೃಪೆ: @vvceofficial)

    ಪಿಯುಸಿ, ಡಿಗ್ರಿ, ಇಂಜಿನಿಯರಿಂಗ್.. ಹೀಗೆ ಈ ಮೂರರಲ್ಲಿ ಯಾವುದನ್ನು ಮುಗಿಸಿದರೂ ಸೇನೆಗೆ ಸೇರಬಹುದು. ಪಿಯುಸಿ ಬಳಿಕ ಸೇನೆಗೆ ಸೇರುವುದಾದರೆ ಎನ್​ಡಿಎ, ಪದವಿ ಬಳಿಕ ಸೇನೆಗೆ ಸೇರುವುದಾದರೆ ಸಿಡಿಎಸ್ ಪರೀಕ್ಷೆ ಬರೆಯಬೇಕು. ಇಂಜಿನಿಯರಿಂಗ್ ಮುಗಿದ ಬಳಿಕ ಸೇನೆಗೆ ಸೇರುವುದಾದರೆ ಅದಕ್ಕೂ ಪರೀಕ್ಷೆ ಇದೆ. ಇನ್ನು ಯಾವುದೇ ವಿದ್ಯಾರ್ಹತೆ ಬಳಿಕ ಸೇನೆಗೆ ಸೇರುವುದಿದ್ದರೂ ಲಿಖಿತ ಪರೀಕ್ಷೆ ಬಳಿಕ ಎಸ್​ಎಸ್​ಬಿ ಸಂದರ್ಶನ ಎದುರಿಸಬೇಕು. ಇದು ಅತ್ಯಂತ ಕಠಿಣ ಸಂದರ್ಶನ. ಇವೆಲ್ಲದರ ಬಳಿಕ ವೈದ್ಯಕೀಯ ಪರೀಕ್ಷೆ, ಸೈಕಲಾಜಿಕಲ್ ಟೆಸ್ಟ್ ಕೂಡ ಇರುತ್ತದೆ. ಹೀಗಾಗಿ ಸೇನೆಗೆ ಸೇರಲು ಬಯಸುವ ವಿದ್ಯಾರ್ಥಿಗಳು ಎಲ್ಲ ವಿಭಾಗದಲ್ಲೂ ಉತ್ತಮರಾಗಿರಬೇಕು. ಮಾನಸಿಕವಾಗಿ, ದೈಹಿಕವಾಗಿಯೂ ಅತ್ಯಂತ ಸ್ವಸ್ಥರಾಗಿರಬೇಕು ಎಂದು ಭರತ್ ಕಿವಿಮಾತು ಹೇಳಿದ್ದಾರೆ.

    ನಾನು ಇಲ್ಲಿ ಓದುತ್ತಿದ್ದಾಗ ಸಂಸ್ಕೃತ ಮತ್ತು ಕನ್ನಡವನ್ನು ಭಾಷಾ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರಿಂದ ನನಗೆ ಅಲ್ಲಿ ತರಬೇತಿ ವೇಳೆ ಸ್ವಲ್ಪ ಕಷ್ಟವಾಯಿತು. ಅಲ್ಲಿ ಇಂಗ್ಲಿಷ್ ಬಳಕೆ ಇದ್ದರೂ ಬಹಳಷ್ಟನ್ನು ಹಿಂದಿಯಲ್ಲೇ ಹೇಳುತ್ತಿದ್ದರು. ಆರಂಭದಲ್ಲಿ ಕಷ್ಟವಾದರೂ ಆರು ತಿಂಗಳ ಬಳಿಕ ಹೊಂದಿಕೊಂಡೆ. ಅದಾಗ್ಯೂ ತರಬೇತಿಯ ಕೊನೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ ಎಂಬುದಾಗಿ ತಮ್ಮ ಸಾಧನೆಯ ಹಾದಿಯ ಕುರಿತು ವಿವರಿಸಿದ್ದಾರೆ ಭರತ್.

    ಮೈಸೂರು ಯಾದವಗಿರಿ ಶ್ರೀರಾಮಕೃಷ್ಣ ವಿದ್ಯಾಶಾಲೆಯ ಪ್ರಾಂಶುಪಾಲ ಎಸ್.ಬಾಲಾಜಿ ಅವರಿಂದ ಭರತ್ ಸಂದರ್ಶನ.

    ಎಸ್​ಎಸ್​ಬಿ ಸಂದರ್ಶನಲ್ಲಿ ಕರೆಂಟ್ ಅಫೇರ್ಸ್ ಪ್ರಮುಖವಾಗಿ ಇರುತ್ತದೆ. ಹೀಗಾಗಿ ನಾನು ಅದಕ್ಕೆ ತಯಾರಾಗುವ ಸಲುವಾಗಿ ಪ್ರತಿನಿತ್ಯ ಪತ್ರಿಕೆಗಳನ್ನು ಓದುತ್ತಿದ್ದೆ. ಉಳಿದಂತೆ ಇತರ ತಯಾರಿಗಳನ್ನೂ ಮಾಡಿಕೊಳ್ಳುತ್ತಿದ್ದೆ. ಅಲಹಾಬಾದ್​ನಲ್ಲಿ ಎಸ್ಎಸ್​ಬಿ ಸಂದರ್ಶನ ಎದುರಿಸಿದ ನಾನು ಮೊದಲ ಪ್ರಯತ್ನದಲ್ಲೇ ಪಾಸಾದೆ ಎಂದು ಭರತ್ ತಿಳಿಸಿದ್ದಾರೆ.

    ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದರೆ ಅವರಲ್ಲಿ ಅಪಾರ ಮನೋಬಲ ಹಾಗೂ ಉತ್ಕಟ ಬಯಕೆ ಇರಬೇಕು. ಅದರಲ್ಲೂ ಈಗಿನ ಕೊರೊನಾ ಪರಿಸ್ಥಿತಿಯ ಪರಿಣಾಮ ಇನ್ನೂ ಹತ್ತು ವರ್ಷಗಳ ಕಾಲ ಇರುವ ಸಾಧ್ಯತೆ ಇರುವುದರಿಂದ ಅದರಿಂದ ಹೊರಬರಲು ವಿದ್ಯಾರ್ಥಿಗಳು ಪುಟಿದೇಳುವ ಉತ್ಸಾಹ ಹೊಂದಿರಬೇಕು ಎಂಬ ಸಲಹೆಯನ್ನೂ ಭರತ್ ನೀಡಿದ್ದಾರೆ.

    ಚಿತ್ರಕೃಪೆ: ಶ್ರೀರಾಮಕೃಷ್ಣ ವಿದ್ಯಾಶಾಲಾ, ಯಾದವಗಿರಿ, ಮೈಸೂರು

    ಭರತ್ ಅವರ ತಂದೆ ಯೋಗೇಂದ್ರ ಕಸ್ಟಮ್ಸ್ ಆ್ಯಂಡ್ ಎಕ್ಸೈಸ್ ಡಿಪಾರ್ಟ್​ಮೆಂಟ್ ಉದ್ಯೋಗಿಯಾಗಿದ್ದು, ಅವರು ರಾಷ್ಟ್ರಮಟ್ಟದ ಕ್ರೀಡಾಪಟು ಎಂಬುದನ್ನು ಪ್ರಾಂಶುಪಾಲ ಎಸ್. ಬಾಲಾಜಿ ಅವರು ಸಂದರ್ಶನ ವೇಳೆ ಪ್ರಸ್ತಾಪಿಸಿದರು. ದೇಶವನ್ನು ರಕ್ಷಿಸುವ ಕೈಂಕರ್ಯದಲ್ಲಿ ತೊಡಗಿರುವ ನಿಮ್ಮನ್ನು ದೇವರು ರಕ್ಷಿಸಲಿ ಎಂದು ಭರತ್ ಅವರಿಗೆ ಬಾಲಾಜಿ ಅವರು ಶುಭ ಹಾರೈಸಿದ್ದಾರೆ.

    ಸಂಬಂಧಿತ ಸುದ್ದಿ: ಭಳಿರೆ ‘ಬಾಲರ್ಕ’.. ಇದು ಬಲಾಢ್ಯ ಭಾರತೀಯನ ಗರಡಿ!

    ಸಂಬಂಧಿತ ಸುದ್ದಿ: ಕರಾಟೆಯಲ್ಲಿ ಸುಂಟರಗಾಳಿ ಎಬ್ಬಿಸಿದ ಶಶಾಂಕ್​; ಟೊರ್ನಡೊ ಕಿಕ್​ನಲ್ಲಿ ನೊಬೆಲ್ ವರ್ಲ್ಡ್​ ರೆಕಾರ್ಡ್

    ಸಂಬಂಧಿತ ಸುದ್ದಿ: ಮಹಾರಾಷ್ಟ್ರದ ಕ್ರಿಕೆಟ್ ಕ್ಷೇತ್ರದಲ್ಲಿ ‘ಯಶಸ್’ ಸಾಧಿಸುತ್ತಿರುವ ‘ಗಾಣಿಗ ಬ್ರಿಲಿಯಂಟ್’

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!