Thursday, May 2, 2024
spot_img
More

    Latest Posts

    ನಾಗೇಂದ್ರ ಗಾಣಿಗ ನಿರ್ದೇಶನದ ‘ಅಭಿರಾಮಚಂದ್ರ’ ಸಿನಿಮಾ ಟ್ರೇಲರ್ ರಿಲೀಸ್; ಅ. 6ರಂದು ಚಿತ್ರ ಬಿಡುಗಡೆ

    ಬೆಂಗಳೂರು: ನಾಗೇಂದ್ರ ಗಾಣಿಗ ನಿರ್ದೇಶನದ ʼಅಭಿರಾಮಚಂದ್ರʼ ಸಿನಿಮಾ ಟ್ರೇಲರ್‌ ಮೊನ್ನೆಯಷ್ಟೇ ರಿಲೀಸ್‌ ಆಗಿದ್ದು, ಈ ಚಿತ್ರ ಅ. 6ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಬಾಲ್ಯದ ಸ್ನೇಹ, ಪ್ರೀತಿ ಹಾಗೂ ತ್ರಿಕೋನ ಪ್ರೇಮಕಥಾಹಂದರದ ʼಅಭಿರಾಮಚಂದ್ರʼ ಸಿನಿಮಾ ಟ್ರೇಲರನ್ನು ನಟರಾದ ಪ್ರಮೋದ್ ಶೆಟ್ಟಿ ಹಾಗೂ ದೀಕ್ಷಿತ್ ಶೆಟ್ಟಿ ರಿಲೀಸ್ ಮಾಡಿ ಹೊಸಬರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಸಿನಿಮಾ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಕುಂದಾಪುರ ಕನ್ನಡವನ್ನು ಸಿನಿಮಾದಲ್ಲಿ ಬಳಸಲು ಮೀಟರ್ ಬೇಕು. ಆ ಮೀಟರ್ ʼಅಭಿರಾಮಚಂದ್ರʼ ಸಿನಿಮಾದಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಯಾಕೆಂದರೆ ತುಂಬಾ ಜನರಿಗೆ ಆ ಭಾಷೆ ಅರ್ಥವಾಗಲ್ಲ. ತುಂಬಾ ವೇಗವಾಗಿ ಮಾತನಾಡುವುದರಿಂದ ಅದು ಬೇಗ ಅರ್ಥವಾಗುವುದಿಲ್ಲ. ಈ ಟ್ರೇಲರಲ್ಲಿ ಆ ಭಾಷೆ ಪ್ರಾಮಿಸಿಂಗ್ ಆಗಿ ಕಾಣುತ್ತಿದೆ. ಇದು ನನಗೆ ತುಂಬಾ ಇಷ್ಟವಾಯಿತು ಎಂದು ನಟ ಪ್ರಮೋದ್‌ ಶೆಟ್ಟಿ ಹೇಳಿದರು.

    ನಿರ್ದೇಶಕರ ಹಲವಾರು ಗೆಳೆಯರು ಈ ಸಿನಿಮಾದ ಪ್ರೀಮಿಯರ್ ಶೋ ಸ್ಪಾನ್ಸರ್ ಮಾಡುತ್ತಿದ್ದು, ನಾನು ಅವರಿಗೆ ಸಾಥ್ ಕೊಡುತ್ತಿದ್ದೇನೆ. ಹೊಸಬರ ಸಿನಿಮಾಗೆ ನೀವೂ ಬೆಂಬಲ ಕೊಡಿ ಎಂದು ಪ್ರಮೋದ್‌ ಶೆಟ್ಟಿ ಹೇಳಿದರು.

    ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ಈ ಚಿತ್ರವಾಗಲು ಮೊದಲ ಕಾರಣ ನನ್ನ ಅಕ್ಕ, ಮನೆಯವರು. ನಂತರ ಕಿರಣ್, ಅವರ ತಂದೆ. ಅವರೇ ಪ್ರೊಡಕ್ಷನ್ ಶುರು ಮಾಡಿ ಸಿನಿಮಾಗೆ ಬೆಂಬಲವಾಗಿ ನಿಂತಿದ್ದಾರೆ. ಇಡೀ ತಂಡದವರು ನನಗೆ ತುಂಬಾ ಸಪೋರ್ಟ್ ಮಾಡಿದರು. ಬಾಂಧವ್ಯ ಪ್ರೀತಿಗೋಸ್ಕರ ಸಿನಿಮಾ ಮಾಡಿದ್ದೇವೆ. ಸಿನಿಮಾ ಚೆನ್ನಾಗಿ ಬಂದಿದೆ. ಅದ್ಭುತವಲ್ಲದೇ ಹೋದರೂ ನೋಡಿದವರು ಚೆನ್ನಾಗಿಲ್ಲ ಎನ್ನುವುದಿಲ್ಲ. ಇದು ಒಂದೊಳ್ಳೆಯ ಪ್ರಯತ್ನ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಇದು ಮೊದಲ ಸಿನಿಮಾ, ಮೊದಲ ಹೆಜ್ಜೆ, ನಿಮ್ಮ ಆಶೀರ್ವಾದ ಇರಲಿ ಎಂದು ನಿರ್ದೇಶಕ ನಾಗೇಂದ್ರ ಗಾಣಿಗ ಮನವಿ ಮಾಡಿಕೊಂಡರು.

    ಸಂಬಂಧಿತ ಸುದ್ದಿ: ‘ಎಡಗೈಯೇ ಅಪಘಾತಕ್ಕೆ ಕಾರಣ’; ಸಿನಿಮಾ ಪ್ರಚಾರಕ್ಕೆ ‘ವೇಗ’ದ ಶಿರಸ್ತ್ರಾಣ

    ನಟ ರಥ ಕಿರಣ್ ಮಾತನಾಡಿ, ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಅಪ್ಪು ಸರ್. ಆ ನಂತರ ಸುನಿ ಸರ್.. ಅವರ ಬೆಂಬಲ ಇರಲಿಲ್ಲ ಎಂದರೆ ಸಿನಿಮಾ ಆಗುತ್ತಿರಲಿಲ್ಲ. ಈ ಚಿತ್ರದ ಆರಂಭದಿಂದ ಇಲ್ಲಿವರೆಗೂ ಬೆನ್ನೆಲುಬಾಗಿ‌ ನಿಂತವರು ರವಿ ಬಸ್ರೂರ್. ಅವರು ಈ ಚಿತ್ರಕ್ಕೆ ಹಣ ಹಾಕಿದ್ದಾರೆ. ಸಂಗೀತ ಒದಗಿಸಿದ್ದಾರೆ. ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ ಸರ್ ನಮಗೆ ಸಾಥ್ ಕೊಟ್ಟಿದ್ದಾರೆ. ನಾನು ಅಭಿ ಎಂಬ ಪಾತ್ರ ಮಾಡಿದ್ದೇನೆ. ನನ್ನ  ಬಾಲ್ಯದ ಪಾತ್ರವನ್ನು ರವಿ ಬಸ್ರೂರ್ ಅವರ ಮಗ ಮಾಡಿದ್ದಾರೆ. ಅಕ್ಟೋಬರ್ 6ಕ್ಕೆ  ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆ ಎಂದರು.

    ನಟ ಸಿದ್ದು ಮೂಲಿಮನಿ ಮಾತನಾಡಿ, ಅಭಿರಾಮಚಂದ್ರ ಮನಸ್ಸಿಗೆ ತುಂಬಾ ಹತ್ತಿರವಾದ ಸಿನಿಮಾ. ಸಾಕಷ್ಟು ಸಿನಿಮಾ ಮಾಡುತ್ತಿದ್ದೇನೆ. ಆದರೆ ಈ ಚಿತ್ರ ಏನೋ ಗೊತ್ತಿಲ್ಲ, ಅತಿಯಾದ ಪ್ರೀತಿ. ನಾಗೇಂದ್ರ ಅವರ ಕಥೆ ತುಂಬಾ ಚೆನ್ನಾಗಿದೆ. ಈ ಚಿತ್ರದಲ್ಲಿ ರಾಮನಾಗಿ ಪಾತ್ರ ನಿರ್ವಹಿಸಿದ್ದೇನೆ. ಮಂಡ್ಯ ಹುಡುಗ ಬೆಂಗಳೂರಿಗೆ ಬಂದು ಕೆಲಸ ಮಾಡ್ತಾನೆ. ನಿಮ್ಮಲ್ಲಿರುವ ಮೂವರು ನಾವು, ನಿಮಗೆ ಬೇಗ ಕನೆಕ್ಟ್ ಆಗುತ್ತೇವೆ ಎಂದು ತಿಳಿಸಿದರು.

    ಸಂಬಂಧಿತ ಸುದ್ದಿ: ಇಲ್ಲಿದೆ ನೋಡಿ ಸಿನಿಮಾ ಹೀರೋಯಿನ್‌ ಆಗುವ ಅವಕಾಶ!

    ನಾನು ಚಂದ್ರ ಎಂಬ ಪಾತ್ರ ಮಾಡಿದ್ದೇನೆ. ನಾಗೇಂದ್ರ ನಮ್ಮದೂ ʼಕಿನಾರೆʼ ಸಮಯದಿಂದಲೂ ಗೆಳೆತನ. ತುಂಬಾ ಹತ್ತಿರದಿಂದ ನೋಡಿರುವುದರಿಂದ ನನ್ನ ಗುಣಲಕ್ಷಣಗಳ ಪಾತ್ರವನ್ನು ನೀಡಿದ್ದಾರೆ. ಮಜವಾದ ಕ್ಯಾರೆಕ್ಟರ್ ಎಂದು ನಟ ನಾಟ್ಯರಂಗ ಹೇಳಿದರು.

    ಇದು ನನ್ನ ಮೊದಲ ಸಿನಿಮಾ. ನಾನು ಮಂಡ್ಯ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಕಥೆ ಕೇಳಿದಾಗ ತುಂಬಾ ಕನೆಕ್ಟ್ ಆಯಿತು. ಇದು ತ್ರಿಕೋನ ಪ್ರೇಮ ಕಥೆ ಎಂದು ನಾಯಕಿ ಶಿವಾನಿ ರೈ ಹೇಳಿದರು.

    ʼಕಿರಿಕ್‌ ಪಾರ್ಟಿʼ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ನಾಗೇಂದ್ರ ಗಾಣಿಗ ʼಅಭಿರಾಮಚಂದ್ರʼ ಸಿನಿಮಾಕ್ಕೆ ಕಥೆ-ಚಿತ್ರಕಥೆ ಬರೆದು ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ʼಅಭಿರಾಮಚಂದ್ರʼ ಸಿನಿಮಾದಲ್ಲಿ ರಥಕಿರಣ, ಸಿದ್ದು ಮೂಲಿಮನಿ, ನಾಟ್ಯರಂಗ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಶಿವಾನಿ ರೈ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ವೀಣಾ ಸುಂದರ್‌, ಸುಂದರ್‌, ಎಸ್‌. ನಾರಾಯಣ್‌, ಪ್ರಕಾಶ್‌ ತುಮ್ಮಿನಾಡು, ಪವನ್‌ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

    ಎ.ಜಿ.ಎಸ್. ಎಂಟರ್‌ಟೇನ್‌ಮೆಂಟ್‌ ಹಾಗೂ ರವಿ ಬಸ್ರೂರು ಮ್ಯೂಸಿಕ್‌ ಮತ್ತು ಮೂವೀಸ್‌ ಬ್ಯಾನರ್‌ನಡಿ ಎ. ಜಿ. ಸುರೇಶ್‌ ಹಾಗೂ ಮಲ್ಲೇಶ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ:ಪವರ್‌ಲಿಫ್ಟರ್‌ ಆಗಬೇಕೆನ್ನುವವರಿಗೆ ಇಲ್ಲಿದೆ ಭಾರತದ ಬಲಿಷ್ಠ ಪುರುಷನಿಂದಲೇ ತರಬೇತಿ!

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!