Thursday, May 2, 2024
spot_img
More

    Latest Posts

    ಈ ದೇವಸ್ಥಾನದಲ್ಲಿದೆ ಆ ಗಾಣಿಗರ ಕುಲದೇವರು!

    ಬೆಂಗಳೂರು: ಗಾಣಿಗ ಸಮುದಾಯವು ದೇಶದ ವಿವಿಧ ರಾಜ್ಯಗಳಲ್ಲಿ ಒಂದೊಂದು ಹೆಸರಿನಲ್ಲಿ ಗುರುತಿಸಿಕೊಂಡಿರುವಂತೆಯೇ ಒಂದೊಂದು ಗಾಣಿಗ ಸಮುದಾಯಕ್ಕೂ ಪ್ರತ್ಯೇಕ ಕುಲದೇವರು ಇದ್ದಿರಬಹುದು. ಇದೀಗ ನಾವು ಒಂದು ನಿರ್ದಿಷ್ಟ ಗಾಣಿಗ ಸಮುದಾಯದವರ ಕುಲದೇವರ ಕುರಿತು ಇಲ್ಲಿ ಮಾಹಿತಿ ನೀಡುತ್ತಿದ್ದೇವೆ.

    ಕೇರಳದಲ್ಲಿ ವಾಣಿಯ, ವಾಣಿಯನ್‌ ಅಥವಾ ವಾಣಿಯಾರ್‌ ಎಂದು ಮಲಯಾಳಂ ಭಾಷೆಯಲ್ಲಿ ಕರೆಯಲ್ಪಡುವ ಗಾಣಿಗರು, ಅಲ್ಲಿನ ಆಡುಭಾಷೆಯಲ್ಲಿ ಬಾನಿಯಾ ಎಂದೂ ಕರೆಯಲ್ಪಡುತ್ತಿದ್ದಾರೆ. ವಿಶೇಷವೆಂದರೆ ಕೇರಳದ ಈ ಗಾಣಿಗರ ಕುಲದೇವರ ದೇವಸ್ಥಾನವು ಕರ್ನಾಟಕ-ಕೇರಳ ಗಡಿಭಾಗದಲ್ಲಿದೆ.

    ಕಾಸರಗೋಡು ಜಿಲ್ಲೆಯ ಕುಂಬ್ಳೆ ಎಡನಾಡುವಿನ ಪೆರ್ಣೆ ಎಂಬಲ್ಲಿರುವ ಈ ದೇವಾಲಯದ ಹೆಸರು ಮುಚ್ಚಿಲೋಟ್‌ ಶ್ರೀ ಭಗವತಿ ದೇವಸ್ಥಾನ. ಕೇರಳದ ವಾಣಿಯ ಗಾಣಿಗರು ಕುಲದೇವರು ಎಂದು ಆರಾಧಿಸುವ ಈ ದೇವಾಲಯಕ್ಕೆ ಒಂದು ಪೌರಾಣಿಕ ಐತಿಹ್ಯವಿದೆ.

    ಸಂಬಂಧಿತ ಸುದ್ದಿ: ʼಮಠಕ್ಕೆ ಹೋಗುವ ದಾರಿ..ʼ, ಭಕ್ತರು ಇವರಿಗೆ ಆಭಾರಿ…

    ಮುಚ್ಚಿಲೋಟ್ ಭಗವತಿ ದೇವಿಯನ್ನು ಅನ್ನಪೂರ್ಣೇಶ್ವರಿ ಎಂದೂ ಕರೆಯುತ್ತಾರೆ. ಎಲ್ಲಾ ಪಾಂಡಿತ್ಯ-ಸಾಮರ್ಥ್ಯ, ಧೈರ್ಯ ಮತ್ತು ದಯೆಯ ಪರಾಕಾಷ್ಠೆಯ ಪ್ರತಿರೂಪ ಎಂದು ಈ ದೇವಿಯನ್ನು ಆರಾಧಿಸಲಾಗುತ್ತದೆ. ಮುಚ್ಚಿಲೋಟ್ ಭಗವತಿಯ ಗುಣಗಳನ್ನು ಗಡಸುತನದಲ್ಲಿ ವಜ್ರಕ್ಕೂ, ಮೃದುತ್ವದಲ್ಲಿ ಹೂವುಗಳಿಗೆ ಸಮೀಕರಿಸಬಹುದು ಎನ್ನುವ ಪ್ರತೀತಿ ಇದೆ.

    ಮುಚ್ಚಿಲೋಟ್ ಭಗವತಿ ದೇವಿಯ ಹಿನ್ನೆಲೆ..

    ಉತ್ತರ ಕೇರಳದ ತಾಲಿಪರಂಬ ಬಳಿಯ ಪೆರಿಂಚೆಲ್ಲೂರ್ ಗ್ರಾಮದ ರಾಯರಮಂಗಲತ್‌ ಮನ ಎಂಬ ಸಾಂಪ್ರದಾಯಿಕ ಬ್ರಾಹ್ಮಣರ ಮನೆಯಲ್ಲಿ ಅತ್ಯಂತ ಪ್ರತಿಭಾವಂತ ಹುಡುಗಿ ವಾಸಿಸುತ್ತಿದ್ದಳು. ವೇದಗಳ ಕುರಿತ ಅವಳ ಆಳವಾದ ಜ್ಞಾನ ಮತ್ತು ಪಾಂಡಿತ್ಯದ ಬಗ್ಗೆ ಇರುವ ಖ್ಯಾತಿಯು ಸಮಕಾಲೀನ ಸಮಾಜದ ಪುರುಷ ವಿದ್ವಾಂಸರಲ್ಲಿ ಅಸೂಯೆ ಮೂಡಿಸಿತ್ತು. ಹೀಗಾಗಿ ಅವರು ಏನಾದರೂ ಮಾಡಿ ಆಕೆಯ ತೇಜೋವಧೆಗೆ ನಿರ್ಧರಿಸಿದರು.

    ಸಂಬಂಧಿತ ಸುದ್ದಿ: ವಾಣಿಯ ಗಾಣಿಗ ಸಮುದಾಯ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

    ಅದಕ್ಕಾಗಿ ಪೆರಿಂಗೆಲ್ಲೂರ್ ಮೂತ ಗುರುಕ್ಕಲ್ ಎಂಬ ಹಿರಿಯ ಬ್ರಾಹ್ಮಣ ವಿದ್ವಾಂಸ ಮತ್ತು ಅವರ ಶಿಷ್ಯರು ಅವಳನ್ನು “ನಡುವಾಳಿ” ಎಂಬ ವಿದ್ವತ್ ಅಧಿವೇಶನಕ್ಕೆ ಆಹ್ವಾನಿಸಿದರು. ಗುರುಗಳ ಎಲ್ಲಾ ಪ್ರಶ್ನೆಗಳಿಗೆ ಆಕೆ ತಕ್ಕ ಉತ್ತರ ನೀಡಿ ಪಂಡಿತರನ್ನು ಸೋಲಿಸಿದಳು. ಅಲ್ಲದೆ, ಆಕೆ ಅವರಿಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮೂಕರಾದರು. ಇದರ ಪರಿಣಾಮವಾಗಿ ಅವರೆಲ್ಲ ಆಕೆಯ ಕುರಿತು ಇನ್ನಷ್ಟು ಅಸಹನೆ ಹೊಂದಿದರು.

    ಆಕೆಯನ್ನು ಹೇಗಾದರೂ ಸೋಲಿಸಲೇಬೇಕು ಎಂದು ಇನ್ನೂ ಮೂರು ಪ್ರಶ್ನೆಗಳನ್ನು ಕೇಳಿದರು. “ಎಲ್ಲ ದಾನಗಳಲ್ಲಿ ಯಾವುದು ಉತ್ತಮ?”, “ಎಲ್ಲಾ ನೋವುಗಳಿಗೆ ತಾಯಿ ಯಾವುದು?”, “ಅತ್ಯಂತ ಭಾವಪರವಶ ಸ್ಥಿತಿ ಯಾವುದು?” ಎಂಬ ಆ ಪ್ರಶ್ನೆಗಳಿಗೆ ಆಕೆ ಕ್ರಮವಾಗಿ “ಅನ್ನದಾನ”, “ಹೆರಿಗೆ ನೋವು” ಮತ್ತು “ಕಾಮಪ್ರಚೋದಕ ಸ್ಥಿತಿ” ಎಂದು ಉತ್ತರಿಸಿದಳು.

    ಆಕೆ ಸರಿಯಾದ ಉತ್ತರವನ್ನೇ ನೀಡಿದ್ದರೂ, “ಕನ್ಯೆಯಾಗಿರುವ ಈಕೆ ಸ್ವಾನುಭವವಿಲ್ಲದ ಈ ಉತ್ತರಗಳನ್ನು ನೀಡಲು ಸಾಧ್ಯವಿಲ್ಲ” ಎಂದು ತೀರ್ಪು ನೀಡಿದರು. ಅವಳ ಕನ್ಯತ್ವದ ಮೇಲೆ ಅಪವಾದ ಹೊರಿಸಿ, ಆಕೆಯನ್ನು ಗಡೀಪಾರು ಮಾಡಿ ನಿರ್ಬಂಧಗಳನ್ನು ಹೇರಲು ಆಕೆಯ ಪಾಲಕರಿಗೆ ಹೇಳಿದರು. ಪಾಲಿಸದಿದ್ದರೆ ಸಮಾಜ ಇನ್ನೂ ಕಠಿಣ ಕ್ರಮಕ್ಕೆ ಮುಂದಾಗಬಹುದು ಎಂಬ ಭಯದಿಂದ ಪಾಲಕರು ಅದನ್ನು ಪಾಲಿಸಿದರು.

    ಸಂಬಂಧಿತ ಸುದ್ದಿ: ಮತ್ತೆ ಗಾಣಿಗ ಸಮಾಜದ ಉಸ್ತುವಾರಿಯಲ್ಲಿ ವ್ಯಾಸರಾಜ ಮಠ

    ಮುಗ್ಧ ಕನ್ಯೆಯು ಬ್ರಾಹ್ಮಣರ ತೀರ್ಪನ್ನು ಕೇಳಿ ತುಂಬಾ ದುಃಖಿತಳಾಗಿ, ಆ ಆಘಾತವನ್ನು ಸಹಿಸಲಾರದೆ ತಳಿಪರಂಬದ ರಾಜರಾಜೇಶ್ವರಿ ದೇವತೆ, ಪಯ್ಯನ್ನೂರಪ್ಪನ್, ಕರಿವೆಲ್ಲೂರು ಮಹಾದೇವನ್ ಮತ್ತು ರಾಯರಮಂಗಲತ್ ಭಗವತಿಯ ಪಾದಗಳನ್ನು ಪ್ರಾರ್ಥಿಸಿ ಎಲ್ಲಾ ಸಂಕಟಗಳಿಂದ ಮುಕ್ತಳಾಗಲು ಆತ್ಮಾಹುತಿ ಮಾಡಿಕೊಳ್ಳಲು ನಿರ್ಧರಿಸಿದಳು.

    ಆಕೆ ತನ್ನ ದೈವಿಕ ಶಕ್ತಿಯಿಂದ ಅಗ್ನಿಕುಂಡವನ್ನು ಸೃಷ್ಟಿಸಿಕೊಂಡು ಅದಕ್ಕೆ ತನ್ನನ್ನು ಅರ್ಪಿಸಿಕೊಂಡು ಆತ್ಮಾಹುತಿ ಮಾಡಿಕೊಳ್ಳುತ್ತಿದ್ದಾಗ ಅದೇ ದಾರಿಯಲ್ಲಿ ಹೆಂಡ ತುಂಬಿದ ಗಡಿಗೆ ಹಿಡಿದುಕೊಂಡು ಹೋಗುತ್ತಿದ್ದವನ ಬಳಿ, ಅದನ್ನು ಆ ಬೆಂಕಿಯ ಮೇಲೆ ಸುರಿಯುವಂತೆ ಆಕೆ ಕೇಳಿಕೊಳ್ಳುತ್ತಾಳೆ. ಅವನು ಕಟ್ಟಿಗೆ ಹೊರೆಯನ್ನೂ ಹೊತ್ತಿದ್ದ ಎಂಬ ಇನ್ನೊಂದು ಕಥೆಯಿದ್ದು, ಆ ಪ್ರಕಾರ ಆಕೆ ಬೆಂಕಿಯನ್ನು ಹೆಚ್ಚಿಸಲು ಕಟ್ಟಿಗೆಯನ್ನು ಬೆಂಕಿಗೆ ಹಾಕುವಂತೆ ಕೇಳಿದ್ದಳು, ಆದರೆ ಆತ ಆಕೆಯ ಕೋರಿಕೆಯನ್ನು ನಿರಾಕರಿಸಿ ತೆರಳಿದನು ಎನ್ನಲಾಗುತ್ತಿದೆ.

    ಕೆಲವೇ ಕ್ಷಣಗಳಲ್ಲಿ ಅದೇ ಮಾರ್ಗವಾಗಿ ಮುಚ್ಚಿಲೋಟ್‌ ಪದನಾಯರ್‌ (ವಾಣಿಯ/ಗಾಣಿಗ ಸಮಾಜದ ವ್ಯಕ್ತಿ) ಎಣ್ಣೆ ತುಂಬಿದ ಪಾತ್ರೆ ಹೊತ್ತುಕೊಂಡು ಬಂದಿದ್ದನ್ನು ನೋಡಿ, ಆಕೆ ಪಾತ್ರೆಯಲ್ಲಿ ಏನಿದೆಯೋ ಅದನ್ನು ಬೆಂಕಿಗೆ ಸುರಿಯಿರಿ ಎಂದು ಹೇಳಿದ್ದಳು. ಮುಗ್ಧನಾಗಿದ್ದ ಆತ ಮರು ಮಾತನಾಡದೆ ಪಾತ್ರೆಯಲ್ಲಿದ್ದ ಎಣ್ಣೆಯನ್ನು ಸುರಿದ ಪರಿಣಾಮ, ಬೆಂಕಿ ಧಗಧಗಿಸಿ ಆಕೆ ಅದಕ್ಕೆ ಸಂಪೂರ್ಣ ಆಹುತಿಯಾಗಿ ಹೋಗುತ್ತಾಳೆ.

    ಸಂಬಂಧಿತ ಸುದ್ದಿ: ಗಾಣಿಗ ‘ಸಂಘಂ’ ಶರಣಂ ಗಚ್ಛಾಮಿ…

    ಹೀಗೆ ಅಗ್ನಿಗಾಹುತಿಯಾದ ಬ್ರಾಹ್ಮಣ ಬಾಲಕಿಯ ಆತ್ಮ ಕೈಲಾಸಕ್ಕೆ ಸೇರಿದಾಗ, ಶಿವ ಆಕೆಯನ್ನು ತಂದೆಯಂತೆ ಕಂಡು ಆಶೀರ್ವದಿಸಿ ಕೆಲವು ವರಗಳನ್ನು ನೀಡಿ ಮರಳಿ ಭೂಲೋಕಕ್ಕೆ ಕಳುಹಿಸಿಕೊಡುತ್ತಾನೆ. ಪವಿತ್ರ ಖಡ್ಗ, ಕೆಲವು ಆಭರಣ ಮತ್ತು ವರಗಳನ್ನು ನೀಡಿದ ಶಿವ, ಭೂಲೋಕಕ್ಕೆ ಮರಳಿ ಭಕ್ತರ ಸಂಕಟ ನಿವಾರಿಸುವಂತೆ ಸೂಚಿಸುತ್ತಾನೆ. ಹೀಗೆ ಆ ಬಾಲಕಿ ದೇವಿಯಾಗಿ ಭೂಲೋಕಕ್ಕೆ ಮರಳಿದ್ದಳು.

    ಇತ್ತ ಆಕೆ ಕಣ್ಣಾರೆ ದಹಿಸಿಹೋಗಿದ್ದನ್ನು ಕಂಡಿದ್ದ ಮುಚ್ಚಿಲೋಟ್‌ ಪದನಾಯರ್‌, ದುಃಖದಲ್ಲಿ ಮನೆಗೆ ಬಂದು ಖಾಲಿ ಇದ್ದ ತನ್ನ ಎಣ್ಣೆಯ ಪಾತ್ರೆಯನ್ನು ಎಂದಿನಂತೆ ಪೂಜಾ ಕೋಣೆಯಲ್ಲಿ ಇರಿಸುತ್ತಾನೆ.

    ಮತ್ತೊಂದೆಡೆ ಈತನ ಪತ್ನಿ ಬಾವಿಯಿಂದ ನೀರು ಸೇದುತ್ತಿದ್ದಾಗ, ಕೈಲಾಸದಿಂದ ಭಗವತಿಯಾಗಿ ಅವತಾರವೆತ್ತಿ ಮರಳಿದ್ದ ಬ್ರಾಹ್ಮಣ ಕನ್ಯೆಯು ಬಾವಿಯೊಳಗೆ ದಿವ್ಯಪ್ರಭೆಯ ರೀತಿ ಕಾಣಿಸುತ್ತಾಳೆ. ಇದರಿಂದ ಚಕಿತಳಾದ ಆ ಮಹಿಳೆ ಈ ವಿಷಯವನ್ನು ಪತಿಗೆ ತಿಳಿಸುತ್ತಾಳೆ.

    ಆತ ಆ ಬಗ್ಗೆ ಜ್ಯೋತಿಷಿಗಳ ಬಳಿಗೆ ಹೋಗಿ ವಿಚಾರಿಸಿದಾಗ, ಕನ್ಯೆಯ ಆತ್ಮವನ್ನು ಭಗವತಿ ದೇವತೆಯ ರೂಪದಲ್ಲಿ ಶಿವನು ಹಿಂದಿರುಗಿಸಿದ್ದಾನೆ ಮತ್ತು ಯೋಗಕ್ಷೇಮಕ್ಕಾಗಿ ನೀನು ಆ ದೇವಿಯನ್ನು ಪೂಜಿಸಬೇಕೆಂದು ಜ್ಯೋತಿಷಿ ಹೇಳಿದ್ದರು. ಮನೆಗೆ ಮರಳಿದ ಗಾಣಿಗ ಸಮುದಾಯದ ಈ ವ್ಯಕ್ತಿ ತನ್ನ ಪೂಜಾ ಕೋಣೆಯಲ್ಲಿ ಈ ಭಗವತಿಯನ್ನು ಕುಲದೇವರು ಎಂಬಂತೆ ಪೂಜಿಸಲಾರಂಭಿಸುತ್ತಾನೆ.

    ನಂತರ ವಾಣಿಯ ಸಮುದಾಯದವರು ರಾಯರಮಂಗಲ ಭಗವತಿ ದೇವಸ್ಥಾನಕ್ಕೆ “ತುತ್ತಿಕ” (ತೈಲದ ಪಾತ್ರೆ) ತುಂಬಿದ ಎಣ್ಣೆಯನ್ನು ದೇವಿಗೆ ಕಾಣಿಕೆಯಾಗಿ ತೆಗೆದುಕೊಂಡು ಬಂದು ದೇವಿಯ ಮುಂದೆ ಕೈಮುಗಿದು ನಿಂತರು. ದೇವಿಯು ವಾಣಿಯನನ್ನು ಗುರುತಿಸಿ, ಅವನ ಖಾಲಿಯಾದ ತುತ್ತಿಕವನ್ನು ಪ್ರವೇಶಿಸಿದಳು. ಪಾತ್ರೆ ಖಾಲಿಯಾಗಿದ್ದರೂ ಅದು ವಾಣಿಯನಿಗೆ ಭಾರವೆನಿಸಿತು. ಪಾತ್ರೆಯ ಅಂಚಿನವರೆಗೂ ತುಂಬಿರುವುದನ್ನು ಗಮನಿಸಿದ ಆತ ನಂತರ ಮನೆಗೆ ಬಂದು ಅದನ್ನು ಪೂಜಾಕೋಣೆಯಲ್ಲಿ ಇರಿಸುತ್ತಾನೆ.

    ಹೀಗೆ ಭಗವತಿ ದೇವಿಯು ಎಣ್ಣೆ ಪಾತ್ರೆಯಲ್ಲಿ ಕುಳಿತು ಕರಿವೆಲ್ಲೂರಿಗೆ ಬಂದಿದ್ದಾಳೆ ಎಂದು ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ. ಮುಚ್ಚಿಲೋಟ್ ಭಗವತಿಗೆ ದೇವಾಲಯ ನಿರ್ಮಿಸಲು ದೈವ ನಿರ್ದೇಶನವಿದೆ ಎಂದು ತಿಳಿಸಿದರು. ಭಕ್ತ ಪದನಾಯರ್ ಕರಿವೆಲ್ಲೂರಿನಲ್ಲಿ ಮುಚ್ಚಿಲೋಟ್ ಭಗವತಿ ದೇವಸ್ಥಾನ ನಿರ್ಮಿಸಲು ನಿರ್ಧರಿಸಿದರು. ಪಣಕ್ಕಸ್ಸೆರಿಲ್ ನಂಬಿ ಎಂಬ ವ್ಯಕ್ತಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ನೀಡಿದ್ದರು. ಅಲ್ಲಿ ದೇವಾಲಯ ನಿರ್ಮಿಸಲಾಯಿತು. ಇದು ಮೊದಲ ಮುಚ್ಚಿಲೋಟ್ ಭಗವತಿ ದೇವಸ್ಥಾನವಾದ್ದರಿಂದ ಇದನ್ನು “ಆದಿ ಕರಿವೆಲ್ಲೂರ್” (ಮೊದಲ ಕರಿವೆಲ್ಲೂರು) ಎಂದು ಕರೆಯಲಾಗುತ್ತದೆ. 

    ಹೀಗೆ ಕೇರಳದ ವಾಣಿಯ ಅಥವಾ ಗಾಣಿಗ ಸಮುದಾಯದ ಕುಲದೇವತೆಯಾದ ಮುಚ್ಚಿಲೋಟ್ ಭಗವತಿಯು ಕಾಸರಗೋಡು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಕಣ್ಣೂರು ಜಿಲ್ಲೆಯ ದಕ್ಷಿಣದ ತುದಿಯಲ್ಲಿರುವ ಕರಿವೆಲ್ಲೂರು ಮುಚ್ಚಿಲೋಟ್ ಭಗವತಿ ದೇವಸ್ಥಾನದಲ್ಲಿ ನೆಲೆಯಾಗುತ್ತಾಳೆ.

    ಈಗಲೂ ದೇವಸ್ಥಾನಕ್ಕೆ ಸಂಬಂಧಿಸಿದ ಮನೆಯಲ್ಲಿ (ಪಂಡರ ಪುರ) “ಮುಚ್ಚಿಲೋಟ್ ಪದನಾಯರ್” ತನ್ನ ದೈವಿಕ ತೈಲಪಾತ್ರೆ ಅಥವಾ “ತುತ್ತಿಕ”ವನ್ನು ಇಟ್ಟ ಸ್ಥಳವನ್ನು ಪವಿತ್ರ ಸ್ಥಳವೆಂದು ಪೂಜಿಸಲಾಗುತ್ತಿದೆ. ಮುಚ್ಚಿಲೋಟ್ ಭಗವತಿಯು ಮುಚ್ಚಿಲೋಟ್ ಪದನಾಯರ್‌ನ ಪತ್ನಿಗೆ ದಿವ್ಯಪ್ರಭೆಯ ರೂಪದಲ್ಲಿ ಕಾಣಿಸಿದ ಪವಿತ್ರ ಬಾವಿ (ಮಣಿ ಕಿನಾರ್) ಸಹ ಕರಿವೆಲ್ಲೂರು ಮುಚ್ಚಿಲೋಟ್ ಭಗವತಿ ದೇವಸ್ಥಾನದ ಬಳಿ ಇದೆ. ಇದನ್ನು ಕೂಡ ಭಕ್ತಿಯಿಂದ ಪೂಜಿಸಲಾಗುತ್ತಿದೆ ಎಂದು ಇಲ್ಲಿನ ಐತಿಹ್ಯದಲ್ಲಿ ವಿವರಿಸಲಾಗಿದೆ.

    (ಚಿತ್ರ-ಮಾಹಿತಿ ಕೃಪೆ: www.pernekshetra.com )

    ಸಂಬಂಧಿತ ಸುದ್ದಿ: ದಿನದ ಶುಭಾಶಯ ಎಂಬ ಹೊಸ ಅವಕಾಶ: ಮೊದಲ 25 ಮಂದಿಗೆ ಶುಲ್ಕದಲ್ಲಿ ಶೇ. 50 ರಿಯಾಯಿತಿ

    ಸಂಬಂಧಿತ ಸುದ್ದಿ: ಅಯೋಧ್ಯೆ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಚಿತ್ರಗಿ ಮಠದಲ್ಲಿ 1008 ಶ್ರೀರಾಮ ತಾರಕ ಮಂತ್ರ ಹವನ

    ಸಂಬಂಧಿತ ಸುದ್ದಿ: ಪುರಾಣಪ್ರಸಿದ್ಧ ಗೋಕರ್ಣದಲ್ಲಿ ಗಾಣಿಗರಿಂದ ನಡೆಯಿತು ಕಾರ್ತಿಕ ಮಾಸದ ಪ್ರಥಮ ಪೂಜೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!