Thursday, May 2, 2024
spot_img
More
    Home Blog

    ಈ ದೇವಸ್ಥಾನದಲ್ಲಿದೆ ಆ ಗಾಣಿಗರ ಕುಲದೇವರು!

    0

    ಬೆಂಗಳೂರು: ಗಾಣಿಗ ಸಮುದಾಯವು ದೇಶದ ವಿವಿಧ ರಾಜ್ಯಗಳಲ್ಲಿ ಒಂದೊಂದು ಹೆಸರಿನಲ್ಲಿ ಗುರುತಿಸಿಕೊಂಡಿರುವಂತೆಯೇ ಒಂದೊಂದು ಗಾಣಿಗ ಸಮುದಾಯಕ್ಕೂ ಪ್ರತ್ಯೇಕ ಕುಲದೇವರು ಇದ್ದಿರಬಹುದು. ಇದೀಗ ನಾವು ಒಂದು ನಿರ್ದಿಷ್ಟ ಗಾಣಿಗ ಸಮುದಾಯದವರ ಕುಲದೇವರ ಕುರಿತು ಇಲ್ಲಿ ಮಾಹಿತಿ ನೀಡುತ್ತಿದ್ದೇವೆ.

    ಕೇರಳದಲ್ಲಿ ವಾಣಿಯ, ವಾಣಿಯನ್‌ ಅಥವಾ ವಾಣಿಯಾರ್‌ ಎಂದು ಮಲಯಾಳಂ ಭಾಷೆಯಲ್ಲಿ ಕರೆಯಲ್ಪಡುವ ಗಾಣಿಗರು, ಅಲ್ಲಿನ ಆಡುಭಾಷೆಯಲ್ಲಿ ಬಾನಿಯಾ ಎಂದೂ ಕರೆಯಲ್ಪಡುತ್ತಿದ್ದಾರೆ. ವಿಶೇಷವೆಂದರೆ ಕೇರಳದ ಈ ಗಾಣಿಗರ ಕುಲದೇವರ ದೇವಸ್ಥಾನವು ಕರ್ನಾಟಕ-ಕೇರಳ ಗಡಿಭಾಗದಲ್ಲಿದೆ.

    ಕಾಸರಗೋಡು ಜಿಲ್ಲೆಯ ಕುಂಬ್ಳೆ ಎಡನಾಡುವಿನ ಪೆರ್ಣೆ ಎಂಬಲ್ಲಿರುವ ಈ ದೇವಾಲಯದ ಹೆಸರು ಮುಚ್ಚಿಲೋಟ್‌ ಶ್ರೀ ಭಗವತಿ ದೇವಸ್ಥಾನ. ಕೇರಳದ ವಾಣಿಯ ಗಾಣಿಗರು ಕುಲದೇವರು ಎಂದು ಆರಾಧಿಸುವ ಈ ದೇವಾಲಯಕ್ಕೆ ಒಂದು ಪೌರಾಣಿಕ ಐತಿಹ್ಯವಿದೆ.

    ಸಂಬಂಧಿತ ಸುದ್ದಿ: ʼಮಠಕ್ಕೆ ಹೋಗುವ ದಾರಿ..ʼ, ಭಕ್ತರು ಇವರಿಗೆ ಆಭಾರಿ…

    ಮುಚ್ಚಿಲೋಟ್ ಭಗವತಿ ದೇವಿಯನ್ನು ಅನ್ನಪೂರ್ಣೇಶ್ವರಿ ಎಂದೂ ಕರೆಯುತ್ತಾರೆ. ಎಲ್ಲಾ ಪಾಂಡಿತ್ಯ-ಸಾಮರ್ಥ್ಯ, ಧೈರ್ಯ ಮತ್ತು ದಯೆಯ ಪರಾಕಾಷ್ಠೆಯ ಪ್ರತಿರೂಪ ಎಂದು ಈ ದೇವಿಯನ್ನು ಆರಾಧಿಸಲಾಗುತ್ತದೆ. ಮುಚ್ಚಿಲೋಟ್ ಭಗವತಿಯ ಗುಣಗಳನ್ನು ಗಡಸುತನದಲ್ಲಿ ವಜ್ರಕ್ಕೂ, ಮೃದುತ್ವದಲ್ಲಿ ಹೂವುಗಳಿಗೆ ಸಮೀಕರಿಸಬಹುದು ಎನ್ನುವ ಪ್ರತೀತಿ ಇದೆ.

    ಮುಚ್ಚಿಲೋಟ್ ಭಗವತಿ ದೇವಿಯ ಹಿನ್ನೆಲೆ..

    ಉತ್ತರ ಕೇರಳದ ತಾಲಿಪರಂಬ ಬಳಿಯ ಪೆರಿಂಚೆಲ್ಲೂರ್ ಗ್ರಾಮದ ರಾಯರಮಂಗಲತ್‌ ಮನ ಎಂಬ ಸಾಂಪ್ರದಾಯಿಕ ಬ್ರಾಹ್ಮಣರ ಮನೆಯಲ್ಲಿ ಅತ್ಯಂತ ಪ್ರತಿಭಾವಂತ ಹುಡುಗಿ ವಾಸಿಸುತ್ತಿದ್ದಳು. ವೇದಗಳ ಕುರಿತ ಅವಳ ಆಳವಾದ ಜ್ಞಾನ ಮತ್ತು ಪಾಂಡಿತ್ಯದ ಬಗ್ಗೆ ಇರುವ ಖ್ಯಾತಿಯು ಸಮಕಾಲೀನ ಸಮಾಜದ ಪುರುಷ ವಿದ್ವಾಂಸರಲ್ಲಿ ಅಸೂಯೆ ಮೂಡಿಸಿತ್ತು. ಹೀಗಾಗಿ ಅವರು ಏನಾದರೂ ಮಾಡಿ ಆಕೆಯ ತೇಜೋವಧೆಗೆ ನಿರ್ಧರಿಸಿದರು.

    ಸಂಬಂಧಿತ ಸುದ್ದಿ: ವಾಣಿಯ ಗಾಣಿಗ ಸಮುದಾಯ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

    ಅದಕ್ಕಾಗಿ ಪೆರಿಂಗೆಲ್ಲೂರ್ ಮೂತ ಗುರುಕ್ಕಲ್ ಎಂಬ ಹಿರಿಯ ಬ್ರಾಹ್ಮಣ ವಿದ್ವಾಂಸ ಮತ್ತು ಅವರ ಶಿಷ್ಯರು ಅವಳನ್ನು “ನಡುವಾಳಿ” ಎಂಬ ವಿದ್ವತ್ ಅಧಿವೇಶನಕ್ಕೆ ಆಹ್ವಾನಿಸಿದರು. ಗುರುಗಳ ಎಲ್ಲಾ ಪ್ರಶ್ನೆಗಳಿಗೆ ಆಕೆ ತಕ್ಕ ಉತ್ತರ ನೀಡಿ ಪಂಡಿತರನ್ನು ಸೋಲಿಸಿದಳು. ಅಲ್ಲದೆ, ಆಕೆ ಅವರಿಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮೂಕರಾದರು. ಇದರ ಪರಿಣಾಮವಾಗಿ ಅವರೆಲ್ಲ ಆಕೆಯ ಕುರಿತು ಇನ್ನಷ್ಟು ಅಸಹನೆ ಹೊಂದಿದರು.

    ಆಕೆಯನ್ನು ಹೇಗಾದರೂ ಸೋಲಿಸಲೇಬೇಕು ಎಂದು ಇನ್ನೂ ಮೂರು ಪ್ರಶ್ನೆಗಳನ್ನು ಕೇಳಿದರು. “ಎಲ್ಲ ದಾನಗಳಲ್ಲಿ ಯಾವುದು ಉತ್ತಮ?”, “ಎಲ್ಲಾ ನೋವುಗಳಿಗೆ ತಾಯಿ ಯಾವುದು?”, “ಅತ್ಯಂತ ಭಾವಪರವಶ ಸ್ಥಿತಿ ಯಾವುದು?” ಎಂಬ ಆ ಪ್ರಶ್ನೆಗಳಿಗೆ ಆಕೆ ಕ್ರಮವಾಗಿ “ಅನ್ನದಾನ”, “ಹೆರಿಗೆ ನೋವು” ಮತ್ತು “ಕಾಮಪ್ರಚೋದಕ ಸ್ಥಿತಿ” ಎಂದು ಉತ್ತರಿಸಿದಳು.

    ಆಕೆ ಸರಿಯಾದ ಉತ್ತರವನ್ನೇ ನೀಡಿದ್ದರೂ, “ಕನ್ಯೆಯಾಗಿರುವ ಈಕೆ ಸ್ವಾನುಭವವಿಲ್ಲದ ಈ ಉತ್ತರಗಳನ್ನು ನೀಡಲು ಸಾಧ್ಯವಿಲ್ಲ” ಎಂದು ತೀರ್ಪು ನೀಡಿದರು. ಅವಳ ಕನ್ಯತ್ವದ ಮೇಲೆ ಅಪವಾದ ಹೊರಿಸಿ, ಆಕೆಯನ್ನು ಗಡೀಪಾರು ಮಾಡಿ ನಿರ್ಬಂಧಗಳನ್ನು ಹೇರಲು ಆಕೆಯ ಪಾಲಕರಿಗೆ ಹೇಳಿದರು. ಪಾಲಿಸದಿದ್ದರೆ ಸಮಾಜ ಇನ್ನೂ ಕಠಿಣ ಕ್ರಮಕ್ಕೆ ಮುಂದಾಗಬಹುದು ಎಂಬ ಭಯದಿಂದ ಪಾಲಕರು ಅದನ್ನು ಪಾಲಿಸಿದರು.

    ಸಂಬಂಧಿತ ಸುದ್ದಿ: ಮತ್ತೆ ಗಾಣಿಗ ಸಮಾಜದ ಉಸ್ತುವಾರಿಯಲ್ಲಿ ವ್ಯಾಸರಾಜ ಮಠ

    ಮುಗ್ಧ ಕನ್ಯೆಯು ಬ್ರಾಹ್ಮಣರ ತೀರ್ಪನ್ನು ಕೇಳಿ ತುಂಬಾ ದುಃಖಿತಳಾಗಿ, ಆ ಆಘಾತವನ್ನು ಸಹಿಸಲಾರದೆ ತಳಿಪರಂಬದ ರಾಜರಾಜೇಶ್ವರಿ ದೇವತೆ, ಪಯ್ಯನ್ನೂರಪ್ಪನ್, ಕರಿವೆಲ್ಲೂರು ಮಹಾದೇವನ್ ಮತ್ತು ರಾಯರಮಂಗಲತ್ ಭಗವತಿಯ ಪಾದಗಳನ್ನು ಪ್ರಾರ್ಥಿಸಿ ಎಲ್ಲಾ ಸಂಕಟಗಳಿಂದ ಮುಕ್ತಳಾಗಲು ಆತ್ಮಾಹುತಿ ಮಾಡಿಕೊಳ್ಳಲು ನಿರ್ಧರಿಸಿದಳು.

    ಆಕೆ ತನ್ನ ದೈವಿಕ ಶಕ್ತಿಯಿಂದ ಅಗ್ನಿಕುಂಡವನ್ನು ಸೃಷ್ಟಿಸಿಕೊಂಡು ಅದಕ್ಕೆ ತನ್ನನ್ನು ಅರ್ಪಿಸಿಕೊಂಡು ಆತ್ಮಾಹುತಿ ಮಾಡಿಕೊಳ್ಳುತ್ತಿದ್ದಾಗ ಅದೇ ದಾರಿಯಲ್ಲಿ ಹೆಂಡ ತುಂಬಿದ ಗಡಿಗೆ ಹಿಡಿದುಕೊಂಡು ಹೋಗುತ್ತಿದ್ದವನ ಬಳಿ, ಅದನ್ನು ಆ ಬೆಂಕಿಯ ಮೇಲೆ ಸುರಿಯುವಂತೆ ಆಕೆ ಕೇಳಿಕೊಳ್ಳುತ್ತಾಳೆ. ಅವನು ಕಟ್ಟಿಗೆ ಹೊರೆಯನ್ನೂ ಹೊತ್ತಿದ್ದ ಎಂಬ ಇನ್ನೊಂದು ಕಥೆಯಿದ್ದು, ಆ ಪ್ರಕಾರ ಆಕೆ ಬೆಂಕಿಯನ್ನು ಹೆಚ್ಚಿಸಲು ಕಟ್ಟಿಗೆಯನ್ನು ಬೆಂಕಿಗೆ ಹಾಕುವಂತೆ ಕೇಳಿದ್ದಳು, ಆದರೆ ಆತ ಆಕೆಯ ಕೋರಿಕೆಯನ್ನು ನಿರಾಕರಿಸಿ ತೆರಳಿದನು ಎನ್ನಲಾಗುತ್ತಿದೆ.

    ಕೆಲವೇ ಕ್ಷಣಗಳಲ್ಲಿ ಅದೇ ಮಾರ್ಗವಾಗಿ ಮುಚ್ಚಿಲೋಟ್‌ ಪದನಾಯರ್‌ (ವಾಣಿಯ/ಗಾಣಿಗ ಸಮಾಜದ ವ್ಯಕ್ತಿ) ಎಣ್ಣೆ ತುಂಬಿದ ಪಾತ್ರೆ ಹೊತ್ತುಕೊಂಡು ಬಂದಿದ್ದನ್ನು ನೋಡಿ, ಆಕೆ ಪಾತ್ರೆಯಲ್ಲಿ ಏನಿದೆಯೋ ಅದನ್ನು ಬೆಂಕಿಗೆ ಸುರಿಯಿರಿ ಎಂದು ಹೇಳಿದ್ದಳು. ಮುಗ್ಧನಾಗಿದ್ದ ಆತ ಮರು ಮಾತನಾಡದೆ ಪಾತ್ರೆಯಲ್ಲಿದ್ದ ಎಣ್ಣೆಯನ್ನು ಸುರಿದ ಪರಿಣಾಮ, ಬೆಂಕಿ ಧಗಧಗಿಸಿ ಆಕೆ ಅದಕ್ಕೆ ಸಂಪೂರ್ಣ ಆಹುತಿಯಾಗಿ ಹೋಗುತ್ತಾಳೆ.

    ಸಂಬಂಧಿತ ಸುದ್ದಿ: ಗಾಣಿಗ ‘ಸಂಘಂ’ ಶರಣಂ ಗಚ್ಛಾಮಿ…

    ಹೀಗೆ ಅಗ್ನಿಗಾಹುತಿಯಾದ ಬ್ರಾಹ್ಮಣ ಬಾಲಕಿಯ ಆತ್ಮ ಕೈಲಾಸಕ್ಕೆ ಸೇರಿದಾಗ, ಶಿವ ಆಕೆಯನ್ನು ತಂದೆಯಂತೆ ಕಂಡು ಆಶೀರ್ವದಿಸಿ ಕೆಲವು ವರಗಳನ್ನು ನೀಡಿ ಮರಳಿ ಭೂಲೋಕಕ್ಕೆ ಕಳುಹಿಸಿಕೊಡುತ್ತಾನೆ. ಪವಿತ್ರ ಖಡ್ಗ, ಕೆಲವು ಆಭರಣ ಮತ್ತು ವರಗಳನ್ನು ನೀಡಿದ ಶಿವ, ಭೂಲೋಕಕ್ಕೆ ಮರಳಿ ಭಕ್ತರ ಸಂಕಟ ನಿವಾರಿಸುವಂತೆ ಸೂಚಿಸುತ್ತಾನೆ. ಹೀಗೆ ಆ ಬಾಲಕಿ ದೇವಿಯಾಗಿ ಭೂಲೋಕಕ್ಕೆ ಮರಳಿದ್ದಳು.

    ಇತ್ತ ಆಕೆ ಕಣ್ಣಾರೆ ದಹಿಸಿಹೋಗಿದ್ದನ್ನು ಕಂಡಿದ್ದ ಮುಚ್ಚಿಲೋಟ್‌ ಪದನಾಯರ್‌, ದುಃಖದಲ್ಲಿ ಮನೆಗೆ ಬಂದು ಖಾಲಿ ಇದ್ದ ತನ್ನ ಎಣ್ಣೆಯ ಪಾತ್ರೆಯನ್ನು ಎಂದಿನಂತೆ ಪೂಜಾ ಕೋಣೆಯಲ್ಲಿ ಇರಿಸುತ್ತಾನೆ.

    ಮತ್ತೊಂದೆಡೆ ಈತನ ಪತ್ನಿ ಬಾವಿಯಿಂದ ನೀರು ಸೇದುತ್ತಿದ್ದಾಗ, ಕೈಲಾಸದಿಂದ ಭಗವತಿಯಾಗಿ ಅವತಾರವೆತ್ತಿ ಮರಳಿದ್ದ ಬ್ರಾಹ್ಮಣ ಕನ್ಯೆಯು ಬಾವಿಯೊಳಗೆ ದಿವ್ಯಪ್ರಭೆಯ ರೀತಿ ಕಾಣಿಸುತ್ತಾಳೆ. ಇದರಿಂದ ಚಕಿತಳಾದ ಆ ಮಹಿಳೆ ಈ ವಿಷಯವನ್ನು ಪತಿಗೆ ತಿಳಿಸುತ್ತಾಳೆ.

    ಆತ ಆ ಬಗ್ಗೆ ಜ್ಯೋತಿಷಿಗಳ ಬಳಿಗೆ ಹೋಗಿ ವಿಚಾರಿಸಿದಾಗ, ಕನ್ಯೆಯ ಆತ್ಮವನ್ನು ಭಗವತಿ ದೇವತೆಯ ರೂಪದಲ್ಲಿ ಶಿವನು ಹಿಂದಿರುಗಿಸಿದ್ದಾನೆ ಮತ್ತು ಯೋಗಕ್ಷೇಮಕ್ಕಾಗಿ ನೀನು ಆ ದೇವಿಯನ್ನು ಪೂಜಿಸಬೇಕೆಂದು ಜ್ಯೋತಿಷಿ ಹೇಳಿದ್ದರು. ಮನೆಗೆ ಮರಳಿದ ಗಾಣಿಗ ಸಮುದಾಯದ ಈ ವ್ಯಕ್ತಿ ತನ್ನ ಪೂಜಾ ಕೋಣೆಯಲ್ಲಿ ಈ ಭಗವತಿಯನ್ನು ಕುಲದೇವರು ಎಂಬಂತೆ ಪೂಜಿಸಲಾರಂಭಿಸುತ್ತಾನೆ.

    ನಂತರ ವಾಣಿಯ ಸಮುದಾಯದವರು ರಾಯರಮಂಗಲ ಭಗವತಿ ದೇವಸ್ಥಾನಕ್ಕೆ “ತುತ್ತಿಕ” (ತೈಲದ ಪಾತ್ರೆ) ತುಂಬಿದ ಎಣ್ಣೆಯನ್ನು ದೇವಿಗೆ ಕಾಣಿಕೆಯಾಗಿ ತೆಗೆದುಕೊಂಡು ಬಂದು ದೇವಿಯ ಮುಂದೆ ಕೈಮುಗಿದು ನಿಂತರು. ದೇವಿಯು ವಾಣಿಯನನ್ನು ಗುರುತಿಸಿ, ಅವನ ಖಾಲಿಯಾದ ತುತ್ತಿಕವನ್ನು ಪ್ರವೇಶಿಸಿದಳು. ಪಾತ್ರೆ ಖಾಲಿಯಾಗಿದ್ದರೂ ಅದು ವಾಣಿಯನಿಗೆ ಭಾರವೆನಿಸಿತು. ಪಾತ್ರೆಯ ಅಂಚಿನವರೆಗೂ ತುಂಬಿರುವುದನ್ನು ಗಮನಿಸಿದ ಆತ ನಂತರ ಮನೆಗೆ ಬಂದು ಅದನ್ನು ಪೂಜಾಕೋಣೆಯಲ್ಲಿ ಇರಿಸುತ್ತಾನೆ.

    ಹೀಗೆ ಭಗವತಿ ದೇವಿಯು ಎಣ್ಣೆ ಪಾತ್ರೆಯಲ್ಲಿ ಕುಳಿತು ಕರಿವೆಲ್ಲೂರಿಗೆ ಬಂದಿದ್ದಾಳೆ ಎಂದು ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ. ಮುಚ್ಚಿಲೋಟ್ ಭಗವತಿಗೆ ದೇವಾಲಯ ನಿರ್ಮಿಸಲು ದೈವ ನಿರ್ದೇಶನವಿದೆ ಎಂದು ತಿಳಿಸಿದರು. ಭಕ್ತ ಪದನಾಯರ್ ಕರಿವೆಲ್ಲೂರಿನಲ್ಲಿ ಮುಚ್ಚಿಲೋಟ್ ಭಗವತಿ ದೇವಸ್ಥಾನ ನಿರ್ಮಿಸಲು ನಿರ್ಧರಿಸಿದರು. ಪಣಕ್ಕಸ್ಸೆರಿಲ್ ನಂಬಿ ಎಂಬ ವ್ಯಕ್ತಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ನೀಡಿದ್ದರು. ಅಲ್ಲಿ ದೇವಾಲಯ ನಿರ್ಮಿಸಲಾಯಿತು. ಇದು ಮೊದಲ ಮುಚ್ಚಿಲೋಟ್ ಭಗವತಿ ದೇವಸ್ಥಾನವಾದ್ದರಿಂದ ಇದನ್ನು “ಆದಿ ಕರಿವೆಲ್ಲೂರ್” (ಮೊದಲ ಕರಿವೆಲ್ಲೂರು) ಎಂದು ಕರೆಯಲಾಗುತ್ತದೆ. 

    ಹೀಗೆ ಕೇರಳದ ವಾಣಿಯ ಅಥವಾ ಗಾಣಿಗ ಸಮುದಾಯದ ಕುಲದೇವತೆಯಾದ ಮುಚ್ಚಿಲೋಟ್ ಭಗವತಿಯು ಕಾಸರಗೋಡು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಕಣ್ಣೂರು ಜಿಲ್ಲೆಯ ದಕ್ಷಿಣದ ತುದಿಯಲ್ಲಿರುವ ಕರಿವೆಲ್ಲೂರು ಮುಚ್ಚಿಲೋಟ್ ಭಗವತಿ ದೇವಸ್ಥಾನದಲ್ಲಿ ನೆಲೆಯಾಗುತ್ತಾಳೆ.

    ಈಗಲೂ ದೇವಸ್ಥಾನಕ್ಕೆ ಸಂಬಂಧಿಸಿದ ಮನೆಯಲ್ಲಿ (ಪಂಡರ ಪುರ) “ಮುಚ್ಚಿಲೋಟ್ ಪದನಾಯರ್” ತನ್ನ ದೈವಿಕ ತೈಲಪಾತ್ರೆ ಅಥವಾ “ತುತ್ತಿಕ”ವನ್ನು ಇಟ್ಟ ಸ್ಥಳವನ್ನು ಪವಿತ್ರ ಸ್ಥಳವೆಂದು ಪೂಜಿಸಲಾಗುತ್ತಿದೆ. ಮುಚ್ಚಿಲೋಟ್ ಭಗವತಿಯು ಮುಚ್ಚಿಲೋಟ್ ಪದನಾಯರ್‌ನ ಪತ್ನಿಗೆ ದಿವ್ಯಪ್ರಭೆಯ ರೂಪದಲ್ಲಿ ಕಾಣಿಸಿದ ಪವಿತ್ರ ಬಾವಿ (ಮಣಿ ಕಿನಾರ್) ಸಹ ಕರಿವೆಲ್ಲೂರು ಮುಚ್ಚಿಲೋಟ್ ಭಗವತಿ ದೇವಸ್ಥಾನದ ಬಳಿ ಇದೆ. ಇದನ್ನು ಕೂಡ ಭಕ್ತಿಯಿಂದ ಪೂಜಿಸಲಾಗುತ್ತಿದೆ ಎಂದು ಇಲ್ಲಿನ ಐತಿಹ್ಯದಲ್ಲಿ ವಿವರಿಸಲಾಗಿದೆ.

    (ಚಿತ್ರ-ಮಾಹಿತಿ ಕೃಪೆ: www.pernekshetra.com )

    ಸಂಬಂಧಿತ ಸುದ್ದಿ: ದಿನದ ಶುಭಾಶಯ ಎಂಬ ಹೊಸ ಅವಕಾಶ: ಮೊದಲ 25 ಮಂದಿಗೆ ಶುಲ್ಕದಲ್ಲಿ ಶೇ. 50 ರಿಯಾಯಿತಿ

    ಸಂಬಂಧಿತ ಸುದ್ದಿ: ಅಯೋಧ್ಯೆ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಚಿತ್ರಗಿ ಮಠದಲ್ಲಿ 1008 ಶ್ರೀರಾಮ ತಾರಕ ಮಂತ್ರ ಹವನ

    ಸಂಬಂಧಿತ ಸುದ್ದಿ: ಪುರಾಣಪ್ರಸಿದ್ಧ ಗೋಕರ್ಣದಲ್ಲಿ ಗಾಣಿಗರಿಂದ ನಡೆಯಿತು ಕಾರ್ತಿಕ ಮಾಸದ ಪ್ರಥಮ ಪೂಜೆ

    ಎಸ್‌ಜಿಇಸಿಟಿ-ತ್ರಿಶೂಲ ಟ್ರಸ್ಟ್‌ ಸಹಯೋಗದಲ್ಲಿ ವಿಚಾರಸಂಕಿರಣ; ಏಳು ಹೊಲಿಗೆಯಂತ್ರ ದಾನ

    0

    ಬೆಂಗಳೂರು: ಶ್ರೀಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟೇಬಲ್‌ ಟ್ರಸ್ಟ್‌ ತನ್ನ ಎಸ್‌ಜಿಇಸಿಟಿ ಅಕಾಡೆಮಿ ಮೂಲಕ ತ್ರಿಶೂಲ ಟ್ರಸ್ಟ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಕೌಶಲಾಭಿವೃದ್ಧಿ ಮೂಲಕ ಮಹಿಳಾ ಸಬಲೀಕರಣ” ಎಂಬ ವಿಚಾರಸಂಕಿರಣ ಜ.13ರಂದು ರಾಜಧಾನಿ ಬೆಂಗಳೂರಿನಲ್ಲಿ ನಡೆಯಿತು.

    ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ಎಸ್‌ಜಿಇಸಿಟಿ ಕಚೇರಿಯಲ್ಲಿ ಜ.13ರ ಶನಿವಾರ ಬೆಳಗ್ಗೆ 11ಕ್ಕೆ ಮ್ಯಾನೇಜಿಂಗ್‌ ಟ್ರಸ್ಟೀ ಬಿ.ಕೆ.ಬಸವರಾಜ್‌ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. “ಕೌಶಲಾಭಿವೃದ್ಧಿ ಮೂಲಕ ಮಹಿಳಾ ಸಬಲೀಕರಣ ಹಾಗೂ ಮಹಿಳೆಯರ ಆರೋಗ್ಯ: ಸಮಸ್ಯೆ ಮತ್ತು ಪರಿಹಾರಗಳು” ಎಂಬ ವಿಷಯವಾಗಿ ವಿಚಾರಸಂಕಿರಣ ನಡೆಯಿತು.

    ಉದ್ಘಾಟನಾ ಭಾಷಣ ಮಾಡಿದ ಬಿ.ಕೆ.ಬಸವರಾಜ್‌, ಮಹಿಳೆಯರು ಕೌಶಲಾಭಿವೃದ್ಧಿ ಅವಕಾಶಗಳನ್ನು ಬಳಸಿಕೊಂಡು ಸ್ವಾವಲಂಬಿಗಳಾಗುವ ಮೂಲಕ ಆರ್ಥಿಕವಾಗಿಯೂ ಸಬಲರಾಗಬೇಕು ಎಂದು ಹೇಳಿದರು.

    ಮಹಿಳೆಯರ ಸಮಸ್ಯೆಗಳು, ಸ್ತ್ರೀಯರ ಆರೋಗ್ಯ ಸಮಸ್ಯೆ ಮತ್ತು ಅವುಗಳ ಪರಿಹಾರಗಳ ಕುರಿತು ತ್ರಿಶೂಲ ಟ್ರಸ್ಟ್‌ ಕಾರ್ಯದರ್ಶಿ ಶುಭಾ ಬಸವರಾಜ್‌ ಮಾತನಾಡಿದರು. ಅಲ್ಲದೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಮನೆಯಲ್ಲೇ ಪರಿಹರಿಸಿಕೊಳ್ಳುವ ಬಗ್ಗೆಯೂ ಮಾಹಿತಿ ನೀಡಿದರು.

    ದೇವನಹಳ್ಳಿ ಪುರಸಭೆ ಅಧ್ಯಕ್ಷೆ ರೇಖಾ ವೇಣುಗೋಪಾಲ್‌ ಮುಖ್ಯ ಅತಿಥಿಯಾಗಿ ಆಗಮಿಸಿದ್ದು, ಟೈಲರಿಂಗ್‌, ಬ್ಯೂಟಿಷಿಯನ್‌, ಕಂಪ್ಯೂಟರ್‌ ತರಬೇತಿಗಳನ್ನು ಪಡೆದು ಹೇಗೆ ಸ್ವ-ಉದ್ಯೋಗ ಕಂಡುಕೊಂಡು ಜೀವನೋಪಾಯ ಮಾಡಿಕೊಳ್ಳಬಹುದು ಎನ್ನುವ ಕುರಿತು ಕಿವಿಮಾತು ಹೇಳಿದರು. ಅಲ್ಲದೆ ಸಂಸ್ಥೆಗೆ ಏಳು ಹೊಲಿಗೆಯಂತ್ರಗಳನ್ನು ದಾನವಾಗಿ ನೀಡಿದರು. ಕಂಪ್ಯೂಟರ್‌ ಕೋರ್ಸ್‌ ಪೂರ್ಣಗೊಳಿಸಿದ 15 ಮಂದಿಗೆ ಪ್ರಮಾಣಪತ್ರ ವಿತರಿಸಿದರು.

    ಇದೇ ವೇಳೆ ಮಹಿಳೆಯರಿಗೆ ಮೆನ್‌ಸ್ಟ್ರುವಲ್‌ ಕಪ್‌ ವಿತರಣೆ ಕೂಡ ಮಾಡಲಾಯಿತು. ತ್ರಿಶೂಲ ಟ್ರಸ್ಟ್‌ ಅಧ್ಯಕ್ಷ ಬಿ.ಸಿ.ರಾಜಶೇಖರ್‌, ಕಾರ್ಯದರ್ಶಿ ಶುಭಾ ಬಸವರಾಜ್‌, ಎಸ್‌ಜಿಇಸಿಟಿ ಸಂಸ್ಥಾಪಕ ಟ್ರಸ್ಟೀ ಆರ್.ನಾಗರಾಜ್‌ ಶೆಟ್ಟಿ ಉಪಸ್ಥಿತರಿದ್ದರು.

    ಸಂಬಂಧಿತ ಸುದ್ದಿ: ದಿನದ ಶುಭಾಶಯ ಎಂಬ ಹೊಸ ಅವಕಾಶ: ಮೊದಲ 25 ಮಂದಿಗೆ ಶುಲ್ಕದಲ್ಲಿ ಶೇ. 50 ರಿಯಾಯಿತಿ

    ಸಂಬಂಧಿತ ಸುದ್ದಿ: ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗರನ್ನೂ ಸೇರಿಸುವಂತೆ ಪ್ರಧಾನಿ ಮೋದಿಗೆ ಮನವಿ

    ಸಂಬಂಧಿತ ಸುದ್ದಿ: ರಾಯಚೂರಿನಲ್ಲಿ ಜ. 21ರಂದು ಗಾಣಿಗರ ವಧು-ವರರ ರಾಜ್ಯಮಟ್ಟದ ಸಮಾವೇಶ


     

    ರಾಯಚೂರಿನಲ್ಲಿ ಜ. 21ರಂದು ಗಾಣಿಗರ ವಧು-ವರರ ರಾಜ್ಯಮಟ್ಟದ ಸಮಾವೇಶ

    0

    ಬೆಂಗಳೂರು: ಗಾಣಿಗ ಸಮುದಾಯದವರ ನಡುವಿನ ಸಂಬಂಧ ಬೆಸೆಯುವ  ನಿಟ್ಟಿನಲ್ಲಿ ಗಾಣಿಗರ ವಧು-ವರರ ರಾಜ್ಯ ಸಮಾವೇಶವನ್ನು ಇದೇ ಜನವರಿಯ 21ರಂದು ರಾಯಚೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

    ರಾಯಚೂರು ಜಿಲ್ಲೆಯ ಆಶಾಪುರ ರಸ್ತೆಯ ಎಸ್‌ಆರ್‌ಕೆ ಕಲ್ಯಾಣಮಂಟಪದಲ್ಲಿ ಈ ವಧು-ವರರ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಅರ್ಹ ಹಾಗೂ ಆಸಕ್ತರನ್ನು ಆಹ್ವಾನಿಸಲಾಗಿದೆ.

    ಈ ಕಾರ್ಯಕ್ರಮವನ್ನು ವನಶ್ರೀ ಮಠದ ಶ್ರೀಡಾ.ಜಯಬಸವಕುಮಾರ ಸ್ವಾಮೀಜಿ, ಶ್ರೀಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಗಾಣಿಗ ಸಮಾಜದ ಮಾಜಿ ಕಾರ್ಯಾಧ್ಯಕ್ಷ ಅಮರಗುಂಡಪ್ಪ ಮೇಟಿ ಆಗಮಿಸಲಿದ್ದು, ರಾಯಚೂರು ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ಚನ್ನಪ್ಪ ಸಜ್ಜನ್‌ ಅಧ್ಯಕ್ಷತೆ ವಹಿಸಲಿದ್ದಾರೆ.

    ವಿವರಗಳಿಗಾಗಿ ಇವರನ್ನು ಸಂಪರ್ಕಿಸಿ

    • ಚನ್ನಪ್ಪ ಸಜ್ಜನ: 9731046016
    • ಅಣ್ಣಾರಾವ್ ಪಾಟೀಲ್: 9845641258
    • ಪಂಪನ್ನ ಹೊಕ್ರಾನಿ: 8618708623
    • ಉಮಾಶಂಕರ್ ಸಜ್ಜನ್: 9844081594
    • ಚಂದ್ರಶೇಖರ್ ಸಜ್ಜನ್ ಕಲ್ಮಳಿ: 9448757533
    • ವಿಜಯ ಕುಮಾರ್ ಸಜ್ಜನ್: 9845275118

    ಸಂಬಂಧಿತ ಸುದ್ದಿ: ದಿನದ ಶುಭಾಶಯ ಎಂಬ ಹೊಸ ಅವಕಾಶ: ಮೊದಲ 25 ಮಂದಿಗೆ ಶುಲ್ಕದಲ್ಲಿ ಶೇ. 50 ರಿಯಾಯಿತಿ

    ಸಂಬಂಧಿತ ಸುದ್ದಿ: ಸಮುದಾಯದ ಬೇಡಿಕೆಗಳನ್ನು ಈಡೇರಿಸುವಂತೆ ಗಾಣಿಗರ ಸಂಘದಿಂದ ಮತ್ತೆ ಸಿಎಂ ಭೇಟಿ

    ಸಂಬಂಧಿತ ಸುದ್ದಿ: ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗರನ್ನೂ ಸೇರಿಸುವಂತೆ ಪ್ರಧಾನಿ ಮೋದಿಗೆ ಮನವಿ

    ಸಮುದಾಯದ ಬೇಡಿಕೆಗಳನ್ನು ಈಡೇರಿಸುವಂತೆ ಗಾಣಿಗರ ಸಂಘದಿಂದ ಮತ್ತೆ ಸಿಎಂ ಭೇಟಿ

    0

    ಬೆಂಗಳೂರು: ಗಾಣಿಗ ಸಮುದಾಯದ ಬೇಡಿಕೆಗಳನ್ನು ಈಡೇರಿಸುವಂತೆ ಅಖಿಲ ಕರ್ನಾಟಕ ಗಾಣಿಗರ ಸಂಘ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದೆ.

    ವಿಧಾನಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಅವರೊಂದಿಗೆ ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ ಎಂ.ಆರ್.ರಾಜಶೇಖರ್‌ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಲಿಖಿತ ಮನವಿ ಸಲ್ಲಿಸಿದರು.

    ಅಖಿಲ ಕರ್ನಾಟಕ ಗಾಣಿಗರ ಸಂಘ ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಗಾಣಿಗರ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿ ನೀಡಿದ್ದ ಆಶ್ವಾಸನೆಗಳನ್ನು ನೆನಪಿಸಿ ಅವುಗಳನ್ನು ಈಡೇರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ರಾಜಶೇಖರ್‌ ತಿಳಿಸಿದ್ದಾರೆ.

    ಅದರಲ್ಲೂ ಗಾಣಿಗರ ಸಮಾವೇಶದಲ್ಲಿ ನೀಡಿದ್ದ ಆಶ್ವಾಸನೆಗಳನ್ನು, ಪ್ರಮುಖವಾಗಿ ಗಾಣಿಗ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರು ಪದಾಧಿಕಾರಿಗಳ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತೊಮ್ಮೆ ಕೋರಿಕೊಳ್ಳಲಾಯಿತು ಎಂದು ಅವರು ತಿಳಿಸಿದ್ದಾರೆ.  

    ಸಂಬಂಧಿತ ಸುದ್ದಿ: ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ‌ ಸ್ಥಾಪನೆ; ಕೊನೆಗೂ ಈಡೇರಿತು ಬಹುಕಾಲದ ಪ್ರಾರ್ಥನೆ

    ಅಖಿಲ ಕರ್ನಾಟಕ ಗಾಣಿಗರ ಸಂಘ ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರಿನ ಅಲಹಳ್ಳಿ ಅಂಜನಾಪುರದಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಸಮಾರಂಭ ಮತ್ತು ಗಾಣಿಗ ಜನಾಂಗದ ಸಮಾವೇಶ, ನೂತನ  ಕಟ್ಟಡ ಬ್ಲಾಕ್-1 ಉದ್ಘಾಟನೆ ಹಾಗೂ ಬ್ಲಾಕ್ -2 ಕಟ್ಟಡ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಿದ್ದರು.

    ಸಂಬಂಧಿತ ಸುದ್ದಿ: ದಿನದ ಶುಭಾಶಯ ಎಂಬ ಹೊಸ ಅವಕಾಶ: ಮೊದಲ 25 ಮಂದಿಗೆ ಶುಲ್ಕದಲ್ಲಿ ಶೇ. 50 ರಿಯಾಯಿತಿ

    ಸಂಬಂಧಿತ ಸುದ್ದಿ: ಸಾಮಾಜಿಕ ನ್ಯಾಯ ಕುರಿತು ರಾಜಿ ಇಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ

    ಸಂಬಂಧಿತ ಸುದ್ದಿ: ಅಖಿಲ ಕರ್ನಾಟಕ ಗಾಣಿಗರ ಸಂಘದ ಕೇಂದ್ರ ಕಚೇರಿಗೆ ಮಾಜಿ ಸಭಾಪತಿ ವಿ.ಆರ್‌. ಸುದರ್ಶನ್‌ ಭೇಟಿ

    ಸಂಕ್ರಾಂತಿಗೆ ಮೊದಲ ನೋಟ ಬೀರಿದ ದೇವನಾಂಪ್ರಿಯ: ಭರತ್‌ ನಾವುಂದ ನಿರ್ದೇಶನದ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌

    0

    ಬೆಂಗಳೂರು: ಮಕರ ಸಂಕ್ರಾಂತಿಗೆ ಈ ʼದೇವನಾಂಪ್ರಿಯʼ ಮೊದಲ ನೋಟ ಬೀರಿದ್ದಾನೆ. ಅರ್ಥಾತ್‌, ಭರತ್‌ ನಾವುಂದ ನಿರ್ದೇಶನದ ಮೂರನೇ ಸಿನಿಮಾ ʼದೇವನಾಂಪ್ರಿಯʼದ ಫಸ್ಟ್‌ ಲುಕ್‌ ಮಕರ ಸಂಕ್ರಮಣದಂದು ಬಿಡುಗಡೆ ಆಗಿದೆ.

    ಈ ಸಿನಿಮಾದ ಮೂಲಕ ‘ಜೋಡಿಹಕ್ಕಿ’ ಧಾರಾವಾಹಿ ಖ್ಯಾತಿಯ ನಟ ತಾಂಡವ್ ರಾಮ್ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ʼಅಡಚಣೆಗಾಗಿ ಕ್ಷಮಿಸಿʼ ಮತ್ತು ʼಮುಗಿಲ್ ಪೇಟೆʼ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಭರತ್ ಎಸ್. ನಾವುಂದ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

    ʼದೇವನಾಂಪ್ರಿಯʼ ಅಂದರೆ ʼದೇವತೆಗಳಿಗೆ ಪ್ರಿಯನಾದವನುʼ ಎಂದರ್ಥ. ಕಿಚ್ಚು ಹಾಯಿಸುತ್ತಿರುವ ನಾಯಕ, ವೀರಭದ್ರ ಸ್ವಾಮಿ, ನಾಯಕನ ಬೆನ್ನಹಿಂದೆ ಮಹಿಳೆಯ ಆಕೃತಿ, ಎರಡು ಗ್ರಾಮಗಳು.. ಹೀಗೆ ನಾನಾ ವಿಷಯಗಳು ಫಸ್ಟ್‌ ಲುಕ್‌ನಲ್ಲಿದ್ದು ಕುತೂಹಲ ಮೂಡಿಸಿದೆ.

    ಕೌಟುಂಬಿಕ ಸೇಡಿನ ಕಥಾಹಂದರ ಹೊಂದಿರುವ ‘ದೇವನಾಂಪ್ರಿಯʼ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಹುತಾರಾಗಣದೊಂದಿಗೆ ನಿರ್ಮಾಣವಾಗಲಿದೆ. ಎ ಕ್ಯೂಬ್ ಫಿಲಮ್ಸ್‌ ಸಂಸ್ಥೆಯ ಅಡಿಯಲ್ಲಿ ಈ ಚಿತ್ರ ಮೂಡಿ ಬರಲಿದೆ. ಮುಂದಿನ ವಾರದಿಂದ ‘ದೇವನಾಂಪ್ರಿಯ’ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.

    ಸಂಬಂಧಿತ ಸುದ್ದಿ: ದಿನದ ಶುಭಾಶಯ ಎಂಬ ಹೊಸ ಅವಕಾಶ: ಮೊದಲ 25 ಮಂದಿಗೆ ಶುಲ್ಕದಲ್ಲಿ ಶೇ. 50 ರಿಯಾಯಿತಿ

    ಸಂಬಂಧಿತ ಸುದ್ದಿ: ಬೇವು-ಬೆಲ್ಲದ ಜೊತೆ ಮನ(ನು)ರಂಜಿಸಿದ ಟೀಸರ್

    ಸಂಬಂಧಿತ ಸುದ್ದಿ:‘ಎಡಗೈ’ಗೆ ಹಣ ಹಾಕಿದ ಗುರುದತ್ ಗಾಣಿಗ; ‘ಅಪಘಾತ’ಕ್ಕೆ ಕಾರಣವನ್ನೂ ಬಿಚ್ಚಿಟ್ಟರು..

    ದಿನದ ಶುಭಾಶಯ ಎಂಬ ಹೊಸ ಅವಕಾಶ: ಮೊದಲ 25 ಮಂದಿಗೆ ಶುಲ್ಕದಲ್ಲಿ ಶೇ. 50 ರಿಯಾಯಿತಿ

    0

    ಬೆಂಗಳೂರು: ಸಮಸ್ತ ಗಾಣಿಗ ಸಮುದಾಯಕ್ಕೆ ಒಂದು ಸಮಗ್ರ ಹಾಗೂ ಜಾಗತಿಕ ವೇದಿಕೆಯನ್ನು ಕಲ್ಪಿಸಬೇಕು ಎಂಬ ಮಹತ್ವದ ಕನಸಿನೊಂದಿಗೆ ಆರಂಭವಾಗಿದ್ದೇ ಗ್ಲೋಬಲ್‌ ಗಾಣಿಗ.ಕಾಮ್.‌ ಈ ಅಂತರಜಾಲ ತಾಣ ಆರಂಭವಾಗಿ ಮೂರು ವರ್ಷಗಳು ಪೂರ್ಣಗೊಂಡಿವೆ.

    ಜಗತ್ತಿನಾದ್ಯಂತ ಇರುವ ಗಾಣಿಗ ಸಮುದಾಯದವರನ್ನು ಒಂದೇ ವೇದಿಕೆಯಡಿ ತಂದು ಸಮಾಜವನ್ನು ಸಂಘಟಿತವಾಗಿಸಬೇಕು ಎಂಬ ಉದ್ದೇಶದದಿಂದ ಆರಂಭಗೊಂಡಿರುವ ಈ ತಾಣ ಆ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಸಾಕಷ್ಟು ಕೆಲಸಗಳನ್ನು ಮಾಡಿದೆ.

    ಗಾಣದಿಂದ ಎಣ್ಣೆ ತೆಗೆಯುವುದು ಕುಲಕಸುಬಾಗಿದ್ದರಿಂದ ನಮ್ಮ ಜನಾಂಗವು ಗಾಣಿಗ ಎಂದು ಕರೆಯಲ್ಪಡುತ್ತಿದೆ. ಆದರೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಗಾಣಿಗರು ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಿದ್ದಾರೆ. ಆ ಪೈಕಿ ಮೋದಿ, ತೇಲಿ, ಸಾಹು, ಗಾಂಡ್ಲ, ವಣಿಯರ್‌.. ಹೀಗೆ ನಮ್ಮ ಸಮುದಾಯಕ್ಕೆ ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರಿದೆ. ಕರ್ನಾಟಕದಲ್ಲೇ ಗಾಣಿಗರಲ್ಲಿ ಸೋಮಕ್ಷತ್ರಿಯ, ಜ್ಯೋತಿನಗರ, ಜ್ಯೋತಿಫಣ, ಸಫಲಿಗ, ಸಜ್ಜನ್‌ ಎಂಬಿತ್ಯಾದಿ ಬೇರೆ ಬೇರೆ ಪಂಗಡಗಳೂ ಇವೆ.

    ಹೀಗಾಗಿ ಪ್ರಪಂಚದಾದ್ಯಂತ ಇರುವ ಈ ಎಲ್ಲ ಗಾಣಿಗರನ್ನು ಜಾಗತಿಕವಾಗಿ ಒಂದೇ ವೇದಿಕೆಯಲ್ಲಿ ತರಬೇಕು, ಗಾಣಿಗ ಸಮಾಜಕ್ಕೆ ಒಂದು ಪ್ರಬಲವಾದ ಮಾಧ್ಯಮ ಶಕ್ತಿಯನ್ನು ಕೊಡಬೇಕು, ಆ ಮೂಲಕ ಸಮಾಜವನ್ನು ಸಮರ್ಥವಾಗಿ ಸಂಘಟಿಸಲು ಪ್ರಮುಖ ಕೊಂಡಿಯಾಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಗ್ಲೋಬಲ್‌ ಗಾಣಿಗ.ಕಾಂ ಎಂಬ ಈ ಅಂತರಜಾಲ ತಾಣವನ್ನು ಹುಟ್ಟುಹಾಕಲಾಗಿದೆ.

    ಇಷ್ಟು ದಿನ ಬರೀ ಸುದ್ದಿಗೆ ಸೀಮಿತವಾಗಿದ್ದ ಈ ತಾಣ ಇನ್ನು ಮುಂದೆ ಸಮಾಜದವರ ಸಂತೋಷ ಹಂಚಿಕೊಳ್ಳಲಿಕ್ಕೂ ವೇದಿಕೆ ಒದಗಿಸಲಿದೆ. ಸಮಾಜಬಾಂಧವರು ತಮ್ಮ ಪ್ರೀತಿಪಾತ್ರರ ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಶುಭ ಸಮಾರಂಭ, ಯಶಸ್ಸು-ಸಾಧನೆ ಇತ್ಯಾದಿ ಕುರಿತು ಗ್ಲೋಬಲ್‌ ಗಾಣಿಗದಲ್ಲಿ ಜಾಹೀರಾತು ನೀಡುವ ಮೂಲಕ ಶುಭಾಶಯಗಳನ್ನು ಕೋರಬಹುದು.

    ʼದಿನದ ಶುಭಾಶಯʼ ಎಂಬ ಹೊಸ ಕಲ್ಪನೆಯೊಂದಿಗೆ ಈ ವಿಶೇಷ ಜಾಹೀರಾತು ಅವಕಾಶವನ್ನು ಮಕರ ಸಂಕ್ರಮಣ ದಿನವಾದ ಈ ಜ.15ರಂದು ಆರಂಭಿಸಲಾಗಿದೆ. ಉದಾಹರಣೆಗೆ.. ಜ. 18ರಂದು ಸಮಾಜಬಾಂಧವರ ಪ್ರೀತಿಪಾತ್ರರಾದ ಯಾರದ್ದಾದರೂ ಜನ್ಮದಿನವಿದ್ದರೆ ಅಂದೇ ಗ್ಲೋಬಲ್‌ ಗಾಣಿಗದಲ್ಲಿ ಪ್ರಕಟವಾಗುವ ರೀತಿಯಲ್ಲಿ ಜನ್ಮದಿನದ ಶುಭಾಶಯದ ಜಾಹೀರಾತು ನೀಡಬಹುದು. ಅದನ್ನು ಗ್ಲೋಬಲ್‌ ಗಾಣಿಗ ತಾಣದಲ್ಲಿ ಪ್ರಕಟಿಸುವ ಜೊತೆಗೆ ಗ್ಲೋಬಲ್‌ ಗಾಣಿಗದ ಎಲ್ಲ ಸೋಷಿಯಲ್‌ ಮೀಡಿಯಾದಲ್ಲಿ ಕೂಡ ಪೋಸ್ಟ್‌ ಮಾಡಲಾಗುತ್ತದೆ. ಈ ಮೂಲಕ ಸಮಾಜಬಾಂಧವರು ತಮ್ಮ ಪ್ರೀತಿಪಾತ್ರರ ವಿಶೇಷ ದಿನಗಳನ್ನು ಸ್ಮರಣೀಯ ಹಾಗೂ ಸಂತಸಮಯ ಆಗಿಸಬಹುದು.

    ಇದು ಜಾಹೀರಾತು ಆಗಿರುವುದರಿಂದ ಇಂಥದ್ದೊಂದು ಶುಭಾಶಯ ಕೋರುವ ಆಸಕ್ತ ಸಮಾಜಬಾಂಧವರು ಇದಕ್ಕಾಗಿ ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ. ಈ ಮೂಲಕ ಅವರು ತಮ್ಮ ಸಮಾಜದ ಏಕೈಕ ಹಾಗೂ ಪ್ರಪ್ರಥಮ ಸಮಗ್ರ ತಾಣವಾದ ಗ್ಲೋಬಲ್‌ ಗಾಣಿಗಕ್ಕೂ ಆರ್ಥಿಕ ಶಕ್ತಿ ತುಂಬಿದಂತಾಗುತ್ತದೆ. ಇದರಿಂದ ಗ್ಲೋಬಲ್‌ ಗಾಣಿಗ ಟೀಮ್‌ ಕೂಡ ಸಮಾಜದ ಅಭ್ಯುದಯಕ್ಕೆ ಸಂಬಂಧಿತ ಇನ್ನೂ ಅನೇಕ ಕಲ್ಪನೆಗಳನ್ನು ಸಾಕಾರಗೊಳಿಸಲು ಸಾಧ್ಯವಾಗುತ್ತದೆ.

    ಬನ್ನಿ.. ನಿಮ್ಮ ಪ್ರೀತಿಪಾತ್ರರ ವಿಶೇಷ ದಿನಕ್ಕಾಗಿ ಗ್ಲೋಬಲ್‌ ಗಾಣಿಗದಲ್ಲಿ ಜಾಹೀರಾತು ನೀಡಿ ಶುಭಾಶಯ ಕೋರುವ ಮೂಲಕ ಅವರ ದಿನವನ್ನು ಇನ್ನಷ್ಟು ವಿಶೇಷವಾಗಿಸಿ, ಅವರ ಸಂತೋಷ-ಸಂಭ್ರಮವನ್ನು ಹೆಚ್ಚಿಸಿ, ಸ್ಮರಣೀಯಗೊಳಿಸಿ.

    ದಿನದ ಶುಭಾಶಯ ಜಾಹೀರಾತಿನ ಮಾದರಿ

    ಜಾಹೀರಾತು ನಿಬಂಧನೆಗಳು

    • ಜಾಹೀರಾತು ನೀಡುವವರು ಜಾಹೀರಾತು ಪ್ರಕಟವಾಗಬೇಕಾದ ದಿನಾಂಕಕ್ಕೆ ಮೂರು ದಿನ (72 ಗಂಟೆ) ಮೊದಲೇ ಸಂಬಂಧಿತ ಫೋಟೋ-ವಿವರ ಕಳುಹಿಸಿಕೊಡಬೇಕು.
    • ಜಾಹೀರಾತು ಕೋರಿಕೆಯನ್ನು ಸೂಕ್ತ ಫೋಟೋ-ವಿವರಗಳ ಜೊತೆಗೆ [email protected] ಐಡಿಗೆ ಇ-ಮೇಲ್‌ ಮಾಡಬೇಕು. ಇ-ಮೇಲ್‌ ಕಳಿಸಿದವರ ಮೊಬೈಲ್‌ ಫೋನ್‌ ನಂಬರ್‌ ಅದರಲ್ಲಿ ಕಡ್ಡಾಯವಾಗಿ ನಮೂದಿಸಿರಬೇಕು.
    • ಯಾರ ಹೆಸರಿನಲ್ಲಿ, ಯಾವ ಉದ್ದೇಶಕ್ಕೆ, ಯಾರಿಂದ ಶುಭಾಶಯ ಹಾಗೂ ಸಂಬಂಧಿತ ಜಾಹೀರಾತು ಯಾವ ದಿನ ಪ್ರಕಟವಾಗಬೇಕು ಎನ್ನುವುದನ್ನು ಇ-ಮೇಲ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರಬೇಕು.
    • ಜಾಹೀರಾತು ಪ್ರಕಟವಾಗಬೇಕಾದ ನಿಗದಿತ ದಿನಾಂಕದಂದು ಬೆಳಗ್ಗೆ 8 ಗಂಟೆಗೆ ಅದು ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಆಗುತ್ತದೆ. ಜೊತೆಗೆ ಗ್ಲೋಬಲ್‌ ಗಾಣಿಗದ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಎಕ್ಸ್‌, ಕೂ, ಟೆಲಿಗ್ರಾಂ-ವಾಟ್ಸ್ಯಾಪ್‌ ಚಾನೆಲ್‌ಗಳಲ್ಲೂ ಪೋಸ್ಟ್‌ ಮಾಡಲಾಗುತ್ತದೆ.
    • ಜಾಹೀರಾತು ಶುಲ್ಕವಾದ 2 ಸಾವಿರ ರೂ. ಮುಂಚಿತವಾಗಿ ಪಾವತಿಸಬೇಕು. ಹಣ ಪಾವತಿಸಬೇಕಾದ ಖಾತೆಯ ವಿವರ ಜಾಹೀರಾತು ಕೋರಿಕೆಯ ಇ-ಮೇಲ್‌ಗೆ ರಿಪ್ಲೈನಲ್ಲಿ ತಿಳಿಸಲಾಗುವುದು. ಶುಲ್ಕ ಪಾವತಿಸಿದ ಬಳಿಕವಷ್ಟೇ ಜಾಹೀರಾತು ಬುಕಿಂಗ್‌ ಖಚಿತವಾಗಲಿದೆ.
    • ಜಾಹೀರಾತಿಗಾಗಿ ಒಮ್ಮೆ ಬುಕ್‌ ಮಾಡಿದ ನಂತರ ಕಾರಣಾಂತರಗಳಿಂದ ಅದನ್ನು ರದ್ದು ಮಾಡುವುದಿದ್ದರೆ ಜಾಹೀರಾತು ಪ್ರಕಟವಾಗಬೇಕಾದ ದಿನಾಂಕದ ಬೆಳಗಿನ 8 ಗಂಟೆಗೆ ಸರಿಯಾಗಿ 48 ಗಂಟೆಗಳ ಮೊದಲು ತಿಳಿಸಬೇಕಾಗುತ್ತದೆ. ಆಗ ಜಾಹೀರಾತು ರದ್ದುಗೊಳಿಸಿ, ಶುಲ್ಕದ ಶೇ.50 ಭಾಗದ ಮೊತ್ತವನ್ನು ಹಣ ಪಾವತಿಸಿದ್ದ ಖಾತೆಗೇ ಮರಳಿಸಲಾಗುವುದು. 48 ಗಂಟೆಗಳ ಮೊದಲೇ ತಿಳಿಸದೆ ರದ್ದು ಮಾಡಬೇಕು ಎಂದರೆ ಶುಲ್ಕದ ಮೊತ್ತದಲ್ಲಿ ಯಾವುದೇ ಹಿಂಪಾವತಿ ಇರುವುದಿಲ್ಲ.
    • ಯಾವುದೇ ಜಾಹೀರಾತು ಪ್ರಕಟಿಸುವ ಅಥವಾ ಪ್ರಕಟಿಸದಿರುವ ಹಕ್ಕು ಗ್ಲೋಬಲ್‌ ಗಾಣಿಗದ ವಿವೇಚನೆಗೆ ಒಳಪಟ್ಟಿರುತ್ತದೆ.

    ಮೊದಲ 25 ಮಂದಿಗೆ ಶೇ.50 ರಿಯಾಯಿತಿ

    ಮಕರ ಸಂಕ್ರಮಣ ಹಾಗೂ ಆರಂಭಿಕ ಕೊಡುಗೆಯಾಗಿ “ದಿನದ ಶುಭಾಶಯ” ಎಂಬ ಈ ಜಾಹೀರಾತಿಗೆ ಹೆಸರು ನೋಂದಾಯಿಸಿಕೊಳ್ಳುವ ಮೊದಲ 25 ಮಂದಿಗೆ ಜಾಹೀರಾತು ಶುಲ್ಕದಲ್ಲಿ ಶೇ.50 ರಿಯಾಯಿತಿ ನೀಡಲಾಗುವುದು. ಹೀಗೆ ನೋಂದಾಯಿಸಿಕೊಂಡವರಿಗೆ ಜಾಹೀರಾತು ನೀಡಲು ಬುಕಿಂಗ್‌ ಖಚಿತವಾದ ದಿನದಿಂದ 3 ತಿಂಗಳ (90 ದಿನ) ವರೆಗೆ ಕಾಲಾವಕಾಶ ಇರುತ್ತದೆ. ಅಷ್ಟರೊಳಗೆ ಜಾಹೀರಾತು ನೀಡದಿದ್ದರೆ ಬುಕಿಂಗ್‌ ರದ್ದಾಗುತ್ತದೆ ಹಾಗೂ ಶುಲ್ಕ ಹಿಂಪಾವತಿ ಇರುವುದಿಲ್ಲ.

    ಶೇ. 50 ರಿಯಾಯಿತಿ ಪಡೆಯಲು ಆಸಕ್ತಿ ಇರುವವರು ತಮ್ಮ ಹೆಸರು, ಮೊಬೈಲ್‌ಫೋನ್‌ ನಂಬರ್‌, ಜಾಹೀರಾತು ವಿವರ, ಪ್ರಕಟವಾಗಬೇಕಾದ ದಿನಾಂಕದ ಮಾಹಿತಿ [email protected] ಗೆ ಆದಷ್ಟೂ ಬೇಗ ಇ-ಮೇಲ್‌ ಮಾಡಬೇಕು. ಈ ಮೇಲ್‌ಗೆ ಪ್ರತಿಯಾಗಿ ಕಳಿಸುವ ರಿಪ್ಲೈ ಮೆಸೇಜ್‌ನಲ್ಲಿ 25 ಮಂದಿಯಲ್ಲಿ ನೀವು ಎಷ್ಟನೆಯವರು ಎಂಬ ಮಾಹಿತಿ ತಿಳಿಸಲಾಗುವುದು. ಬಳಿಕ ತಾವು 24 ಗಂಟೆಯೊಳಗೆ ಶೇ. 50 ಶುಲ್ಕ (1000 ರೂ.) ನಾವು ಸೂಚಿಸಿದ ಖಾತೆಗೆ ಜಮಾ ಮಾಡಿ ಅದರ ರಶೀದಿ ಇ-ಮೇಲ್‌ ಮಾಡಬೇಕು. ಅದಕ್ಕೆ ಪ್ರತಿಯಾಗಿ ಇನ್ನೊಂದು ಕನ್‌ಫರ್ಮೇಷನ್‌ ಇ-ಮೇಲ್‌ ಕಳಿಸಲಿದ್ದು, ಅದನ್ನು ಕಳಿಸಿದ ದಿನದಿಂದ 90 ದಿನಗಳ ಒಳಗೆ ನೀವು ಸೂಚಿಸಿದ ಯಾವುದಾದರೂ ಒಂದು ದಿನದಂದು ಜಾಹೀರಾತು ಪ್ರಕಟಿಸಲಾಗುವುದು. ಬುಕಿಂಗ್‌-ಕನ್‌ಫರ್ಮೇಷನ್‌ ಸೇರಿದಂತೆ ಜಾಹೀರಾತು ಕುರಿತ ಎಲ್ಲ ವಹಿವಾಟು [email protected] ಐಡಿಯೊಂದಿಗಿನ ಇ-ಮೇಲ್‌ ಮೂಲಕವೇ ನಡೆಯಲಿದೆ. ಹೆಚ್ಚಿನ ಮಾಹಿತಿ-ವಿವರಗಳಿಗೆ 94492 38494ಗೆ ವಾಟ್ಸ್ಯಾಪ್‌ ಮೆಸೇಜ್‌ ಮಾಡಿದರೆ ತಿಳಿಸಲಾಗುವುದು. ಈ ಕೊಡುಗೆ ಜನವರಿ 31ರ ರಾತ್ರಿ 12ಕ್ಕೆ ಕೊನೆಯಾಗಲಿದೆ.

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ:ಸಾಮಾಜಿಕ ನ್ಯಾಯ ಕುರಿತು ರಾಜಿ ಇಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ

    ಸಂಬಂಧಿತ ಸುದ್ದಿ: ಪಂಚರಾಜ್ಯ ಚುನಾವಣೆ: ಛತ್ತೀಸ್‌ಗಢದಲ್ಲಿ 12 ಗಾಣಿಗ ಅಭ್ಯರ್ಥಿಗಳಿಗೆ ವಿಜಯ; ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಗೆಲುವು

    ಗಾಣಿಗ ಮಹಾಸಭಾದಿಂದ ನೂತನ ಕ್ಯಾಲೆಂಡರ್‌ ಬಿಡುಗಡೆ

    0

    ಬೆಂಗಳೂರು: ಗಾಣಿಗ ಮಹಾಸಭಾ (ರಿ.) 2024ನೇ ಸಾಲಿನ ನೂತನ ಕ್ಯಾಲೆಂಡರ್‌ ಬಿಡುಗಡೆ ಮಾಡಿದೆ. ಮೈಸೂರಿನ ಪತ್ರಕರ್ತರ ಭವನದಲ್ಲಿ ಜ. 12ರಂದು ಈ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಗಿದೆ.

    ಪ್ರದೇಶ ಕಾಂಗ್ರೆಸ್ ಸಮಿತಿಯ ಎಸ್‌ಸಿ ಘಟಕದ ಅಧ್ಯಕ್ಷ ಧರ್ಮಸೇನ ಅವರು ಕ್ಯಾಲೆಂಡರ್‌ ಬಿಡುಗಡೆ ಮಾಡಿದರು. ಈ  ಸಮಾರಂಭದ ಅಧ್ಯಕ್ಷತೆಯನ್ನು ಡಾ.ಕೆ.ವಿಜಯಕುಮಾರ್ (ರೈಲ್ವೆ) ವಹಿಸಿದ್ದರು.

    ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕ ಎ.ಸಿ. ಪೂರ್ಣಚಂದ್ರ, ಸಮಶ್ರೀ ಎಜುಕೇಷನಲ್‌ ಆ್ಯಂಡ್ ಕಲ್ಚರ್‌ ಟ್ರಸ್ಟ್‌ ಅಧ್ಯಕ್ಷೆ ಸಿ.ಕೆ.ಸುಮಾ, ನಾಯಕ ಸಮಾಜದ ಅಧ್ಯಕ್ಷ ನಾಗಲಿನಪ್ಪ ಭಾಗವಹಿಸಿದ್ದರು.

    ಗಾಣಿಗ ಸಮಾಜದ ಮುಖಂಡರಾದ ಕೆ.ಆರ್. ಕ್ಷೇತ್ರದ ರಾಜಶೇಖರ್, ನಾರಾಯಣ್, ಗಜೇಂದ್ರ (ರೈಲ್ವೆ), ಪುಟ್ಟಸ್ವಾಮಿ, ರವಿ, ಪುರುಷೋತ್ತಮ್, ಹೆಬ್ಬೆ ಮಹೇಶ್, ಕಾರ್ಯದರ್ಶಿ ಮಹಾದೇವ್ ಗಾಣಿಗ, ರವಿಚಂದ್ರ, ಅನಿತಾ ಕುಮಾರಿ ಉಪಸ್ಥಿತರಿದ್ದರು.

    ಸಂಬಂಧಿತ ಸುದ್ದಿ: ಗಾಣಿಗ ಹಿತೈಷಿಗಳ ಬಳಗದ ಕ್ಯಾಲೆಂಡರ್‌ ಬಿಡುಗಡೆ

    ಸಂಬಂಧಿತ ಸುದ್ದಿ: ಕರ್ನಾಟಕ ಜಾನಪದ ಪರಿಷತ್‌ ಕಲಬುರಗಿ ಘಟಕದಿಂದ ಸಚಿವರಿಗೆ ಮನವಿ         

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಅಯೋಧ್ಯೆ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಚಿತ್ರಗಿ ಮಠದಲ್ಲಿ 1008 ಶ್ರೀರಾಮ ತಾರಕ ಮಂತ್ರ ಹವನ

    0

    ಬೆಂಗಳೂರು: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಜ.22ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಆ ದಿನಕ್ಕಾಗಿ ದೇಶದ ಅಸಂಖ್ಯಾತ ಭಕ್ತರು ಉತ್ಸುಕತೆಯಿಂದ ಕಾಯುತ್ತಿದ್ದಾರೆ.

    ಅಂದು ದೇಶಾದ್ಯಂತ ಹಬ್ಬದ ವಾತಾವರಣ ಇರಲಿದ್ದು, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿವೆ. ಅದೇ ರೀತಿ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಚಿತ್ರಗಿಯ ಶ್ರೀರಾಮಚಂದ್ರ ದೇವರು ಮಠದಲ್ಲಿಯೂ ವಿಶೇಷ ಪೂಜೆ ಜರುಗಲಿದೆ.

    ಅಯೋಧ್ಯೆಯಲ್ಲಿ ಜ. 22ರಂದು ಪ್ರಾಣ ಪ್ರತಿಷ್ಠಾಪನೆ ನಡೆಯುವ ಸಂದರ್ಭದಲ್ಲೇ ಚಿತ್ರಗಿ ಮಠದ ಶ್ರೀ ರಾಮಚಂದ್ರ ದೇವಸ್ಥಾನದ ಭಕ್ತರೆಲ್ಲ ಸೇರಿ ವೇದಮೂರ್ತಿ ವಿನಾಯಕ ಜೋಶಿ ಅವರ ನೇತೃತ್ವದಲ್ಲಿ 1008 ಶ್ರೀ ರಾಮ ತಾರಕ ಮಂತ್ರ ಹವನ ನಡೆಸಲಿದ್ದಾರೆ.

    ಅಲ್ಲದೆ ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾಪನಾ ಸಮಯವಾದ ಮಧ್ಯಾಹ್ನ 12 ಗಂಟೆ 30 ನಿಮಿಷಕ್ಕೆ ಸರಿಯಾಗಿ ಶಂಖನಾದದೊಂದಿಗೆ ಮಹಾಮಂಗಳಾರತಿ ನಡೆಸಿ ವಿಶೇಷ ಪೂಜೆ ನೆರವೇರಿಸಲಿದ್ದಾರೆ. ಈ ಪೂಜಾ ಕಾರ್ಯಕ್ರಮದ ಬಳಿಕ ಪ್ರಸಾದ ಭೋಜನ ವ್ಯವಸ್ಥೆ ಕೂಡ ಇರಲಿದೆ.

    ನಂತರ ಸಂಧ್ಯಾ ಸಮಯದಲ್ಲಿ ಹಣತೆಯಲ್ಲಿ ದೀಪಗಳನ್ನು ಹಚ್ಚುವುದು ಹಾಗೂ ಭಜನಾ ಕಾರ್ಯಕ್ರಮ ಕೂಡ ಇರಲಿದ್ದು, ಭಕ್ತರು ಇದರಲ್ಲಿಯೂ ಭಾಗವಹಿಸಬೇಕಾಗಿ ವಿನಂತಿ ಮಾಡಿಕೊಳ್ಳಲಾಗಿದೆ.  ಈ ವಿಶೇಷ ಪೂಜೆ ಪ್ರಯುಕ್ತ ಭಕ್ತರು ಸೇವಾರ್ಥವಾಗಿ ದೀಪದ ಎಣ್ಣೆ ಹಾಗೂ ದೇಣಿಗೆ ನೀಡಬಹುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

    ಸಂಬಂಧಿತ ಸುದ್ದಿ: ಶ್ರೀವೇಣುಗೋಪಾಲಕಷ್ಣ ಸನ್ನಿಧಿಯಲ್ಲಿ ಅದ್ಧೂರಿ ದೀಪೋತ್ಸವ; ಹಾರಾಡಿ ರಾಮ ಗಾಣಿಗ ಪ್ರಶಸ್ತಿ ಪ್ರದಾನ

    ಸಂಬಂಧಿತ ಸುದ್ದಿ: ಪುರಾತನ ಚಿತ್ರಗಿ ಶ್ರೀ ರಾಮಚಂದ್ರ ಮಠದಲ್ಲಿ ಶನಿವಾರ ದೀಪೋತ್ಸವ

    ಸಂಬಂಧಿತ ಸುದ್ದಿ: ಗೋಕರ್ಣ ದೇವಸ್ಥಾನದಲ್ಲಿ ಗಾಣಿಗ ಸಮಾಜದವರಿಂದ ಪ್ರಪ್ರಥಮ ಕಾರ್ತಿಕ ಪೂಜೆ

    ಉಳಿಯ ಶ್ರೀ ಧರ್ಮರಸರ ಕ್ಷೇತ್ರಕ್ಕೆ ಗಾಣಿಗ ಸಮಾಜದಿಂದ 64 ಸಾವಿರ ರೂ. ದೇಣಿಗೆ

    0

    ಬೆಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲದ ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಬ್ರಹ್ಮಕಲಶೋತ್ಸವಕ್ಕೆ ಮಿಜಾರು- ಎಡಪದವು ಗಾಣಿಗರ ಯಾನೆ ಸಫಲಿಗರ ಸೇವಾ ಸಂಘದ ವ್ಯಾಪ್ತಿಯ ಸಮಾಜಬಾಂಧವರು ಧನಸಹಾಯ ಮಾಡಿದ್ದಾರೆ.

    ಈ ಸಂಘದ ವ್ಯಾಪ್ತಿಯ ಸಮಾಜದ ಮನೆಯವರಿಂದ 64,377 ರೂಪಾಯಿ ಸಂಗ್ರಹವಾಗಿದ್ದು, ಅದನ್ನು ಸಂಘದ ಅಧ್ಯಕ್ಷ ಭಾಸ್ಕರ್ ಎಸ್. ಎಡಪದವು, ಜೊತೆ ಕಾರ್ಯದರ್ಶಿ ಎಂ. ಪ್ರಸಾದ್ ಕುಮಾರ್ ಹಾಗೂ ಅವರ ಪತ್ನಿ ಪ್ರಮೀಳಾ ಅವರ ಮುಖಾಂತರ ದೇವಸ್ಥಾನಕ್ಕೆ ನೀಡಲಾಯಿತು.

    ಭಾಸ್ಕರ್‌, ಪ್ರಸಾದ್‌, ಪ್ರಮೀಳಾ ಅವರು ಈ ಮೊತ್ತವನ್ನು ಧರ್ಮರಸರ ಕ್ಷೇತ್ರದ ಹೊರೆ ಕಾಣಿಕೆ ಸಮಿತಿ ಅಧ್ಯಕ್ಷ ಎಂ. ರಾಮದಾಸ್ ಸೋಮೇಶ್ವರ, ವ್ಯವಸ್ಥಾಪನಾ ಸಮಿತಿಯ  ಯು. ರಮೇಶ್ ಅವರಿಗೆ ಹಸ್ತಾಂತರಿಸುವ ಮೂಲಕ ಶ್ರೀಕ್ಷೇತ್ರಕ್ಕೆ ನೀಡಿದರು.

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ:ಗಾಣಿಗ ಸಮಾಜದ ಕುರಿತು ಸಂಶೋಧನಾ ಪ್ರಬಂಧ; ಮೇಘನಾಗೆ ಡಾಕ್ಟರೇಟ್‌ ಪದವಿ

    ಸಂಬಂಧಿತ ಸುದ್ದಿ:ಶ್ರೀಜ್ಯೋತಿ ಸಮುದಾಯ ಭವನ ಜೀರ್ಣೋದ್ಧಾರಕ್ಕೆ 10 ಲಕ್ಷ ರೂಪಾಯಿ ಧನಸಹಾಯ

    ಶ್ರೀಜ್ಯೋತಿ ಸಮುದಾಯ ಭವನ ಜೀರ್ಣೋದ್ಧಾರಕ್ಕೆ 10 ಲಕ್ಷ ರೂಪಾಯಿ ಧನಸಹಾಯ

    0

    ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿನ ಶ್ರೀಜ್ಯೋತಿ ಸಮುದಾಯ ಭವನ ಜೀರ್ಣೋದ್ಧಾರಕ್ಕೆ ಹತ್ತು ಲಕ್ಷ ರೂಪಾಯಿ ಧನಸಹಾಯ ದೇಣಿಗೆಯಾಗಿ ಬಂದಿದೆ.

    ಮುಧೋಳ ತಾಲೂಕು ಗಾಣಿಗ ಸಮಾಜ ಸೇಮಾಭಿವೃದ್ಧಿ ಸಂಘದ ವತಿಯಿಂದ ಮುಧೋಳ ಮಹಾನಗರದಲ್ಲಿ ಶ್ರೀಜ್ಯೋತಿ ಸಮುದಾಯ ಭವನದ ಜೀರ್ಣೋದ್ಧಾರ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

    ಈ ಜೀರ್ಣೋದ್ಧಾರ ಕಾರ್ಯಕ್ಕೆ ಮುಧೋಳದ ಕಲ್ಲಪ್ಪ ಶಂಕ್ರಪ್ಪ ಗಡ್ಡಿ ಅವರು ಐದು ಲಕ್ಷ ರೂ. ಹಾಗೂ ಅಶೋಕ ಶಂಕ್ರಪ್ಪ ಗಡ್ಡಿ ಅವರು ಐದು ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಹೀಗೆ ಮುಧೋಳದ ಗಡ್ಡಿ ಪರಿವಾರದ ಈ ಎರಡು ಕುಟುಂಬದವರಿಂದ ಹತ್ತು ಲಕ್ಷ ರೂ. ಧನಸಹಾಯ ಬಂದಿದೆ.

    ಶ್ರೀಜ್ಯೋತಿ ಸಮುದಾಯ ಭವನ ಜೀರ್ಣೋದ್ಧಾರ ಕುರಿತ ಈ ಧನಸಹಾಯವನ್ನು ಈ ಕುಟುಂಬದವರು ಇತ್ತೀಚೆಗೆ ಚೆಕ್‌ ಮೂಲಕ ಹಸ್ತಾಂತರಿಸಿದರು. ಗಡ್ಡಿ ಪರಿವಾರದ ಈ ಎರಡು ಕುಟುಂಬಕ್ಕೆ  ಮುಧೋಳ ತಾಲೂಕಿನ ಗಾಣಿಗ ಸಮಾಜದ ಪರವಾಗಿ ಸಂಘವು ಕೃತಜ್ಞತೆಗಳನ್ನು ಸಲ್ಲಿಸಿದೆ.

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ:ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗರನ್ನೂ ಸೇರಿಸುವಂತೆ ಪ್ರಧಾನಿ ಮೋದಿಗೆ ಮನವಿ

    ಸಂಬಂಧಿತ ಸುದ್ದಿ: ಪಂಚರಾಜ್ಯ ಚುನಾವಣೆ: ಛತ್ತೀಸ್‌ಗಢದಲ್ಲಿ 12 ಗಾಣಿಗ ಅಭ್ಯರ್ಥಿಗಳಿಗೆ ವಿಜಯ; ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಗೆಲುವು

    error: Content is protected !!