Thursday, May 2, 2024
spot_img
More

    Latest Posts

    ಸುಮ್ಮನೆ ಚಿಂತೆ ಏಕೆ..? ಚಿಂತನೆಗಳಿದ್ದರೆ ಹೇಳಿ…

    ಬೆಂಗಳೂರು: ‘ಛೇ.. ಬೇರೆ ಸಮಾಜಗಳು ಹೇಗಿವೆ? ನೋಡಿ ನಮ್ದು.. ಒಗ್ಗಟ್ಟೇ ಇಲ್ಲ..’ ಇಂಥ ಮಾತುಗಳು ಸಮಾಜದವರು ಸೇರಿದಾಗ ಕೆಲವರ ಮಧ್ಯೆಯಾದರೂ ಚರ್ಚೆ ಆಗಿರುತ್ತವೆ. ನಿಜ.. ಗಾಣಿಗ ಸಮಾಜದವರೆಲ್ಲ ಸಂಘಟಿತರಾದರೆ, ನಮ್ಮಲ್ಲಿನ ಒಳಪಂಗಡಗಳವರು ಅವರವರ ಮಿತಿಯಲ್ಲಿ ಪರಸ್ಪರ ಪೂರಕವಾಗಿ ನಡೆದುಕೊಂಡರೆ ಖಂಡಿತ ಒಂದು ಪ್ರಬಲ ಸಮಾಜವಾಗಿ ಹೊರಹೊಮ್ಮಲು ಸಾಧ್ಯವಿದೆ.

    ಸಮಾಜ ಹಾಗೆ ಶಕ್ತಿಶಾಲಿ ಆಗಬೇಕಿದ್ದರೆ, ‘ನಾವು ಹಾಗಿಲ್ಲ, ಹೀಗಿಲ್ಲ..’ ಎಂದು ಚಿಂತೆ ಮಾಡುತ್ತ, ಕೊರಗುತ್ತ ಕುಳಿತುಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ. ಸದ್ಯ ಅಗತ್ಯವಿರುವುದು ಚಿಂತೆ ಅಲ್ಲ, ಚಿಂತನೆಗಳು. ನಿಮ್ಮಲ್ಲಿ ಸಮಾಜದ ಒಳಿತಿಗಾಗಿ ಅದ್ಭುತವಾದ ಚಿಂತನೆಗಳು ಇವೆಯೇ? ಸಮಾಜದ ಸಂಘಟನೆಗೆ ಒಳ್ಳೆಯ ಯೋಚನೆಗಳು ಇವೆಯೇ? ಇದ್ದರೂ ಅದನ್ನು ಎಲ್ಲಿ ಹೇಳುವುದು ಎಂಬ ಚಿಂತೆಯಲ್ಲಿದ್ದೀರಾ? ಹಾಗಿದ್ದರೆ ‘ಗ್ಲೋಬಲ್ ಗಾಣಿಗ’ ನಿಮಗೆ ವೇದಿಕೆ ಒದಗಿಸುತ್ತದೆ.

    ನೀವು ಮಾಡಬೇಕಾದ್ದು ಇಷ್ಟೇ.. ಸಮಾಜದ ಒಳಿತಿಗಾಗಿ ನಿಮ್ಮಲ್ಲಿರುವ ಚಿಂತನೆಗಳನ್ನು ಟೈಪ್ ಮಾಡಿ ನಮಗೆ ಕಳುಹಿಸಿದರೆ ಸಾಕು. ಆ ಪೈಕಿ ಆಯ್ದ ಬರಹಗಳನ್ನು ‘ಗ್ಲೋಬಲ್ ಗಾಣಿಗ’ದಲ್ಲಿ ಪ್ರಕಟಿಸಲಾಗುತ್ತದೆ.

    ಚಿಂತನೆಗಳನ್ನು ಕಳುಹಿಸುವವರು ಗಮನಿಸಬೇಕಾದ ಅಂಶಗಳು.

    – ನಿಮ್ಮ ಚಿಂತನೆಗಳು ಸಮಾಜಕ್ಕೆ ಸಂಬಂಧಪಟ್ಟಿದ್ದಾಗಿರಲೇಬೇಕು. ಅದರಲ್ಲೂ ಅದರಿಂದ ಸಮಾಜಕ್ಕೆ ಹೊಸ ಯೋಚನೆ, ಹೊಸ ದಾರಿ ಅಥವಾ ಹೊಸತನ ಸಿಗುವಂಥದ್ದಾಗಿದ್ದರೆ ಅತ್ಯುತ್ತಮ.

    – ಗಾಣಿಗ ಸಮಾಜದ ಯಾವುದೇ ಪಂಗಡದವರೂ ತಮ್ಮ ಚಿಂತನೆಗಳನ್ನು ಕಳುಹಿಸಬಹುದು. ಆದರೆ ಯಾರ ಚಿಂತನೆಯೂ ಅವರದೇ ಪಂಗಡ ಅಥವಾ ಗಾಣಿಗ ಸಮಾಜದ ಇತರ ಪಂಗಡಗಳ ಭಾವನೆಗೆ ನೋವು ಉಂಟು ಮಾಡುವಂಥ ವಿಚಾರಗಳನ್ನು ಹೊಂದಿರಬಾರದು.

    – ಯಾವುದೇ ವ್ಯಕ್ತಿ, ಸಂಘಟನೆ, ಸಂಸ್ಥೆ ಅಥವಾ ಪಕ್ಷಕ್ಕೆ ಅವಹೇಳನ ಮಾಡುವಂಥ ವಿಷಯಗಳು ಇರಬಾರದು. ಇನ್ನೊಬ್ಬರ ವೈಯಕ್ತಿಕ ವಿಷಯಕ್ಕೆ ಸಂಬಂಧಿತ ಋಣಾತ್ಮಕ ಪ್ರಸ್ತಾಪಗಳು ಇರಬಾರದು.

    – ಚಿಂತನೆಗಳನ್ನು ಕಳುಹಿಸುವವರು ತಮ್ಮ ಹೆಸರು, ವಿಳಾಸ, ಮೊಬೈಲ್ ಫೋನ್ ನಂಬರ್ ಕಡ್ಡಾಯವಾಗಿ ನಮೂದಿಸಿರಬೇಕು. ಅಲ್ಲದೆ ವೃತ್ತಿ/ಉದ್ಯಮ, ಶೈಕ್ಷಣಿಕ ವಿದ್ಯಾರ್ಹತೆ ಕುರಿತ ಮಾಹಿತಿ ಜೊತೆಗೆ ತಮ್ಮದೊಂದು ಫೋಟೋ ಕೂಡ ಕಳುಹಿಸಿದರೆ ಉತ್ತಮ.

    – ಬರಹ ಕನಿಷ್ಠ 300 ಪದಗಳಷ್ಟಾದರೂ ಇರಬೇಕು. ತಮ್ಮ ವಿಚಾರಗಳನ್ನು ಯೂನಿಕೋಡ್ ಮೂಲಕ ಟೈಪ್ ಮಾಡಿರಬೇಕು. ಬರಹ ಅಥವಾ ನುಡಿ ಮೂಲಕ ಟೈಪ್ ಮಾಡಿದ್ದಾದರೂ ಪರವಾಗಿಲ್ಲ. ಒಟ್ಟಿನಲ್ಲಿ ಟೈಪ್ ಮಾಡಿರಬೇಕಾದ್ದು ಕಡ್ಡಾಯ. ಚಿಂತನೆಗೆ ಪೂರಕ ಫೋಟೋಗಳಿದ್ದರೆ ಅವುಗಳನ್ನು ಅಟ್ಯಾಚ್ ಮಾಡಿದರೆ ಅನುಕೂಲ. ಬರಹವನ್ನು ‘ಗ್ಲೋಬಲ್ ಗಾಣಿಗ’ಕ್ಕೆ ಕಡ್ಡಾಯವಾಗಿ ಇ-ಮೇಲ್ ಮೂಲಕವೇ ಕಳುಹಿಸಬೇಕು. ವಾಟ್ಸ್ಯಾಪ್ ಅಥವಾ ಟೆಲಿಗ್ರಾಂ ಇತ್ಯಾದಿ ಮೂಲಕ ಕಳುಹಿಸಿದರೆ ಪರಿಗಣಿಸಲಾಗುವುದಿಲ್ಲ.

    – ಅಂತಿಮವಾಗಿ ಬರಹವನ್ನು ಪ್ರಕಟಿಸುವ ಅಥವಾ ಪ್ರಕಟಿಸದೇ ಇರುವ ಹಕ್ಕು ‘ಗ್ಲೋಬಲ್ ಗಾಣಿಗ’ದ್ದೇ ಆಗಿರುತ್ತದೆ.

    ಅಯ್ಯೋ.. ನಮ್ಮಲ್ಲಿ ಅಂಥ ಚಿಂತನೆಗಳೇನೂ ಇಲ್ಲ ಎಂಬ ಅನಿಸಿಕೆ ಇನ್ನು ಕೆಲವರದ್ದಾಗಿರಬಹುದು. ಅಂಥವರು ಆ ಬಗ್ಗೆ ಚಿಂತೆ ಮಾಡುವುದು ಬೇಡ. ಅವರು ಗ್ಲೋಬಲ್ ಗಾಣಿಗದ ಮೇಲೊಂದು ಕಣ್ಣಿಟ್ಟಿದ್ದರೆ ಸಾಕು. ಆಗಾಗ ಇಲ್ಲಿ ಪ್ರಕಟವಾಗುವ  ಚಿಂತನಾಪ್ರಚೋದಕ ವಿಚಾರಗಳನ್ನು ಓದುತ್ತಿರಿ. ಕೆಲವೇ ತಿಂಗಳಲ್ಲಿ ನಿಮ್ಮಲ್ಲೊಂದು ಚಿಂತನೆ ಖಂಡಿತ ಮೂಡುತ್ತದೆ. ಸಮಾಜದಲ್ಲಿ ಚಿಂತಿಸುವವರಿಗಿಂತ ಚಿಂತಕರನ್ನು ಹೆಚ್ಚಾಗಿಸುವ ಚಿಂತನೆ ಗ್ಲೋಬಲ್ ಗಾಣಿಗದ್ದು. ನೋಡಿ.. ಚಿಂತನೆ ಮಾಡಿ.. ಒಳ್ಳೆಯ ಚಿಂತನೆ ಕೂಡ ಸಮಾಜ ಸೇವೆಯೇ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!