Thursday, May 2, 2024
spot_img
More

    Latest Posts

    ಬೆಳೆಯೋಕೇ ಬಿಡಲ್ಲ, ಎಲ್ಲರೂ ತುಳಿಯೋರೇ; ದೇವರೂ ತುಳಿದರೆ…

    ಬೆಂಗಳೂರು: ‘ಬೆಳೆಯೋಕೇ ಬಿಡಲ್ಲ, ಎಲ್ಲರೂ ತುಳಿಯೋರೇ..’ ಇದೊಂದು ಮಾತನ್ನು ಹಲವರು ಒಂದಲ್ಲ ಒಂದು ಸಲ ಹೇಳಿರುತ್ತಾರೆ. ಏಕೆಂದರೆ ಈಗಿನ ಜಗತ್ತೇ ಹಾಗಿದೆ. ಯಾರಾದರೂ ಮುಂದೆ ಹೋಗುತ್ತಿದ್ದಾರೆ, ಎತ್ತರಕ್ಕೆ ಏರುತ್ತಿದ್ದಾರೆ ಎಂದರೆ ಪ್ರೋತ್ಸಾಹಿಸುವವರ ಕೊರತೆ ದೊಡ್ಡದಿದೆ. ಅದಾದರೂ ಪರವಾಗಿಲ್ಲ.. ಆದರೆ ಕೆಲವರು ಪ್ರೋತ್ಸಾಹಿಸುವುದು ಬಿಡಿ, ಮುಂದೆ ಹೋಗದಂತೆ, ಎತ್ತರಕ್ಕೆ ಏರದಂತೆ ತುಳಿಯಲು ಪ್ರಯತ್ನಿಸುತ್ತಿರುತ್ತಾರೆ. ಹಾಗೆ ಯಾರಾದರೂ ತುಳಿದ ಮಾತ್ರಕ್ಕೆ ಅಥವಾ ತುಳಿಯಲು ಯತ್ನಿಸಿದ ಮಾತ್ರಕ್ಕೆ ನಮ್ಮ ಕಥೆ ಮುಗಿಯಿತು ಎಂದು ಅಧೀರರಾಗಬೇಕಿಲ್ಲ. ತುಳಿದರು ಎಂದು ಬೇಸರ ಪಡಬಾರದು, ಏಕೆಂದರೆ ನಾವು ಫುಟ್ ಬಾಲ್ ಆದಾಗಲೇ ಗೋಲ್ ತಲುಪಲು ಸಾಧ್ಯ. ತುಳಿದ ಮಾತ್ರಕ್ಕೆ ನಾವು ಅವರ ತುಳಿತಕ್ಕೆ ಬಲಿ ಆಗುತ್ತೇವೆ ಎಂದು ಭಯ ಪಡಬಾರದು, ಅದು ನಮಗೆ ಬಲಿ ಚಕ್ರವರ್ತಿ ಆಗಲು ಸಿಕ್ಕ ಅವಕಾಶವೂ ಇರಬಹುದು.

    ಸಂತ: ಬೆಳೆಯೋಕೇ ಬಿಡಲ್ಲ, ಎಲ್ಲರೂ ತುಳಿಯೋರೇ…

    ಕಾಂತ: ಅದು ಮಾನವಸಹಜ ಗುಣ, ನಾನು ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ.

    ಸಂತ: ನಿಜ, ಆದರೆ ನಾನು ತಲೆಕೆಡಿಸಿಕೊಳ್ಳಲೇಬೇಕಾಗಿದೆ.

    ಕಾಂತ: ಯಾಕೆ?

    ಸಂತ: ಯಾಕಂದ್ರೆ, ನನ್ನನ್ನು ದೇವರೂ ತುಳಿಯುತ್ತಿದ್ದಾನೆ.

    ಕಾಂತ: ಅಯ್ಯೋ ಹುಚ್ಚ.. ದೇವರು ತುಳಿದರೆ ಯಾರಾದರೂ ತಲೆ ಕೆಡಿಸಿಕೊಳ್ಳುತ್ತಾರೇನೋ?

    ಸಂತ: ಮತ್ತೇನು ಮಾಡ್ತಾರೆ?

    ಕಾಂತ: ನೋಡು.. ದೇವರೇ ತುಳಿಯುತ್ತಾನೆ ಎಂದೆನಿಸಿದರೆ ನಿಶ್ಚಿಂತರಾಗಿ ನಾವೇ ತಲೆಕೊಟ್ಟು ಬಿಡಬೇಕು.

    ಸಂತ: ಇದೇನು ಹೀಗೆನ್ನುತ್ತಿದ್ದಿ!? ತುಳಿಯಲು ಹೊರಟ ದೇವರಿಗೆ ತಲೆಯನ್ನೇ ಕೊಟ್ಟುಬಿಟ್ಟರೆ ಅದು ಉಳಿದೀತಾ?!

    ಕಾಂತ: ನಿನಗೆ ಪುರಾಣ ಗೊತ್ತಲ್ವ..?

    ಸಂತ: ಹೌದು.. ಸ್ವಲ್ಪ ಸ್ವಲ್ಪ..

    ಕಾಂತ: ವಿಷ್ಣು ವಾಮನನಾಗಿ ಬಂದಿದ್ದು ಗೊತ್ತಾ?

    ಸಂತ: ಹೌದು.. ಮೂರನೇ ಹೆಜ್ಜೆ ಎಲ್ಲಿಡಲಿ ಎಂದಾಗ ಬಲಿ ಚಕ್ರವರ್ತಿ ಅವನಿಗೇ ತಲೆಯನ್ನು ಕೊಟ್ಟುಬಿಟ್ಟಿದ್ದ.

    ಕಾಂತ: ಆಮೇಲೇನಾಯಿತು ಹೇಳು..

    ಸಂತ: ಬಲಿ ಈಗಿಲ್ಲದಿದ್ದರೂ ಬಲಿಪಾಡ್ಯಮಿ ಆಚರಿಸಿ ದೇವರಂತೆ ಪೂಜಿಸುತ್ತಿದ್ದೇವೆ.

    ಕಾಂತ: ನಿಂಗೆ ಅಹಲ್ಯೆ ಕಥೆ ಗೊತ್ತಲ್ವಾ?

    ಸಂತ: ಹೌದು.. ಕಲ್ಲಾಗಿದ್ದ ಅವಳು ರಾಮನ ಪಾದಸ್ಪರ್ಶದಿಂದ ಶಾಪಮುಕ್ತಳಾದಳು.

    ಕಾಂತ: ಅಲ್ವಾ ಮತ್ತೆ.. ಅಂದು ಅವರು ದೇವರು ತುಳಿಯುತ್ತಾನೆ ಎಂದು ಅಂದುಕೊಂಡಿದ್ದರೆ ಬಲಿ ಪಾಡ್ಯಮಿ ಹಿಂದಿನ ಅಮಾವಾಸ್ಯೆ ಅದೆಷ್ಟು ಕರಾಳವೆನಿಸಿರುತ್ತಿತ್ತು, ಅಲ್ವಾ? ಕಲ್ಲಾದ ಅಹಲ್ಯೆಯೂ ಅದೆಷ್ಟು ನೊಂದುಕೊಳ್ಳುತ್ತಲೇ ಇರುತ್ತಿದ್ದಳಲ್ವಾ?

    ಸಂತ: ಹೌದು.. ಬಹುಶಃ ಬಲಿ ಚಕ್ರವರ್ತಿಯನ್ನು ಈಗ ನಾವ್ಯಾರೂ ನೆನಪಿಸಿಕೊಳ್ಳುತ್ತಿರಲಿಲ್ಲ, ಅಂಥವನೊಬ್ಬ ಇದ್ದ ಎಂಬುದೇ ನಮಗೆ ಗೊತ್ತಿರುತ್ತಿರಲಿಲ್ವೇನೋ!? ಇನ್ನು ಆ ಅಹಲ್ಯೆ ಬಹುಶಃ ಇನ್ನೂ ಕಲ್ಲಾಗಿಯೇ ಇರುತ್ತಿದ್ದಳೇನೋ!?

    ಕಾಂತ: ಈಗ ಸಮಾಧಾನ ಆಯ್ತಾ?

    ಸಂತ: ಹ್ಞೂ.. ಸ್ವಲ್ಪ.

    ಕಾಂತ: ಇನ್ನೂ ಒಂದು ಉದಾಹರಣೆ ಹೇಳ್ತೇನೆ ಕೇಳು. ನಿನಗೆ ಪೂರ್ತಿ ಸಮಾಧಾನವಾಗಬಹುದು‌.

    ಸಂತ: ಪ್ಲೀಸ್ ಹೇಳು..

    ಕಾಂತ: ನೋಡು.. ಎಷ್ಟೋ ಸಲ ಬದುಕಿನ ಹೋರಾಟದಲ್ಲಿ ನಾವು ದೈಹಿಕವಾಗಿ ಮಾನಸಿಕವಾಗಿ ಕುಸಿದುಬಿಟ್ಟಿರುತ್ತೇವೆ. ಎಷ್ಟರಮಟ್ಟಿಗೆ ಎಂದರೆ ದೇವರೂ ನಮ್ಮನ್ನು ತುಳಿಯುತ್ತಿದ್ದಾನೆ ಅನಿಸಿಬಿಡುತ್ತದೆ. ಅಂಥ ಸಂದರ್ಭಗಳಲ್ಲಿ ನಮ್ಮನ್ನು ನಾವು ಹೇಗೆ ಸಂಭಾಳಿಸಿಕೊಳ್ಳಬೇಕು ಎಂಬುದಕ್ಕೆ ಕುರುಕ್ಷೇತ್ರದ ಸನ್ನಿವೇಶವೊಂದನ್ನು ಉದಾಹರಿಸುತ್ತೇನೆ ಕೇಳು. ನಾವು ಬದುಕಿನ ಹೋರಾಟದಲ್ಲಿ ಕುಸಿದಾಕ್ಷಣ ಅಷ್ಟಕ್ಕೇ ಅಂಜಬಾರದು. ಕುರುಕ್ಷೇತ್ರದಲ್ಲಿ ಹೋರಾಡುವಾಗ ಅರ್ಜುನನಿಗೂ ಹಾಗೇ ಆಗಿತ್ತು. ಎದುರಾಳಿ ಕರ್ಣ ಬಿಟ್ಟ ಬ್ರಹ್ಮಾಸ್ತ್ರವನ್ನು ಎದುರಿಸಬೇಕು ಎನ್ನುತ್ತಿರುವಾಗಲೇ ಅರ್ಜುನ ನಿಂತಿದ್ದ ಜಾಗವೇ ಧಸಕ್ ಎಂದು ಕುಸಿದಿತ್ತು. ಹಾಗಾಗಲಿ ಎಂದೇ ಅರ್ಜುನನಿದ್ದ ರಥವನ್ನು ಅಂದು ಸಾರಥಿಯಾಗಿದ್ದ ಕೃಷ್ಣ ತುಳಿದು ಕುಸಿಯುವಂತೆ ಮಾಡಿದ್ದ, ಇಲ್ಲದಿದ್ದರೆ ಆ ಅಸ್ತ್ರ ಅರ್ಜುನನ ಕಿರೀಟದ ಬದಲು ಶಿರವನ್ನೇ ಉರುಳಿಸಿಬಿಟ್ಟಿರುತ್ತಿತ್ತು. ನಾವೂ ಅಷ್ಟೇ… ಒಮ್ಮೊಮ್ಮೆ ಮಾನಸಿಕವಾಗಿ ತೀರಾ ಕುಸಿದಾಗ ಬೇಸರದಿಂದ ಕುಗ್ಗಿಹೋಗಬಾರದು. ದೇವರೇ ತುಳಿದ ಎನಿಸಿದರೂ ಅದು ನಮ್ಮ ತಲೆ ಉಳಿಸುವುದಕ್ಕಾಗಿಯೇ ಅಂತ ಅಂದುಕೊಳ್ಳಬೇಕು. ಒಮ್ಮೆ ಹಾಗಂದುಕೊಂಡು ನೋಡು, ನಿನ್ನಲ್ಲೊಂದು ಚೈತನ್ಯ ಮೂಡುತ್ತದೆ.

    (ಬರಹ ಕೃಪೆ: ರವಿಕಾಂತ ಕುಂದಾಪುರ)

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!