Thursday, May 2, 2024
spot_img
More

    Latest Posts

    ಇಂದಿನ ನ್ಯಾಷನಲ್ ಕಾಲೇಜನ್ನು ಆರಂಭಿಸಿದ್ದು ಅಂದಿನ ದೊಡ್ಡಣ್ಣ ಶೆಟ್ಟರೇ..

    ಜನೋಪಕಾರಿ ಶ್ರೀದೊಡ್ಡಣ್ಣ ಶೆಟ್ಟಿ ಅವರು ಗಾಣಿಗ ಸಮುದಾಯದ ಧೀಮಂತ ವ್ಯಕ್ತಿ. ಅವರು ಜನೋಪಕಾರಿ ಎನಿಸಿಕೊಂಡಿದ್ದು, ಬಳಿಕ ಸರ್ವಸಂಗ ಪರಿತ್ಯಾಗಿಯಾಗಿ ಶ್ರೀದೊಡ್ಡಣ್ಣ ಸ್ವಾಮಿ ಎಂದಾಗಿದ್ದು ಸೇರಿ ಅವರ ಬದುಕಿನ ಮಹತ್ವದ ಘಟ್ಟಗಳನ್ನು ಇಲ್ಲಿ ಪರಿಚಯಿಸಲಾಗಿದೆ. ಇಂದು ಅವರ 182ನೇ ಜಯಂತ್ಯುತ್ಸವ, ತನ್ನಿಮಿತ್ತ ಈ ಬರಹದ ಮೂಲಕ ಅವರನ್ನು ಇಲ್ಲಿ ಮತ್ತೊಮ್ಮೆ ಸ್ಮರಿಸಿಕೊಳ್ಳಲಾಗುತ್ತಿದೆ.

    ಬೆಂಗಳೂರು: ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟಿ ಅವರು 1840ರ ಫೆ. 3ರಂದು ‘ಜ್ಯೋತಿನಗರ ವೈಶ್ಯ ಗಾಣಿಗ’ ಸಮುದಾಯದ ನಂಜುಂಡಪ್ಪ ಮತ್ತು ಸಿದ್ದಮ್ಮ ದಂಪತಿಗೆ ಎರಡನೆಯ ಮಗನಾಗಿ ಜನಿಸಿದರು. ಕೂಲಿಮಠದಲ್ಲಿ ವಿದ್ಯಾಭ್ಯಾಸ ಮುಗಿಸಿ ತಂದೆ ಹಾಗೂ ಅಣ್ಣ ಅಣ್ಣಯ್ಯಪ್ಪನವರಿಗೆ ತಮ್ಮ ಕುಲಕಸುಬಾದ ಕಲ್ಲಿನ ಗಾಣದಿಂದ ತಯಾರಿಸಲ್ಪಡುವ ಎಣ್ಣೆ ವ್ಯಾಪಾರದಲ್ಲಿ ತೊಡಗಿಸಿಕೊಂಡರು.

    ದಾನ-ಧರ್ಮ ಎಂಬುದು ಜನೋಪಕಾರಿ ದೊಡ್ಡಣ್ಣ ಶೆಟ್ಟಿ ಅವರಿಗೆ ತಂದೆ ಹಾಗೂ ಅಣ್ಣನವರಿಂದ ಬಂದ ಬಳುವಳಿಯಾಗಿತ್ತು. ಅವರು ಚಿಕ್ಕ ವಯಸ್ಸಿನಿಂದಲೂ ದಾನ-ಧರ್ಮ ಹಾಗೂ ದೈವೀ ಕಾರ್ಯಗಳನ್ನು ಮಾಡುತ್ತ ಬಂದರು. ತಂದೆ-ತಾಯಿ ಅನಾರೋಗ್ಯದಿಂದ ಕಾಲವಾದ ನಂತರ ಅಣ್ಣ ಮತ್ತು ಅತ್ತಿಗೆಯ ಪ್ರೀತಿ ಪ್ರೋತ್ಸಾಹದಲ್ಲಿ ಬೆಳೆಯುತ್ತಿದ್ದ ದೊಡ್ಡಣ್ಣ ಶೆಟ್ಟರಿಗೆ ಮತ್ತೊಂದು ಆಘಾತ ಕಾದಿತ್ತು. ಅದೇನೆಂದರೆ ಮೊದಲು ಅತ್ತಿಗೆ, ನಂತರ ಅಣ್ಣನ ನಿಧನ.

    ದೊಡ್ಡಣ್ಣ ಶೆಟ್ಟರ ವೈವಾಹಿಕ ಜೀವನ ಕೂಡ ಸುಖಮಯವಾಗಿರಲಿಲ್ಲ, ಸಂತಾನಪೇಕ್ಷೆಯಿಂದ ಅವರು ಒಬ್ಬ ಪತ್ನಿ ಸತ್ತ ಮೇಲೆ ಮತ್ತೊಬ್ಬರಂತೆ ನಾಲ್ಕು ಬಾರಿ ವಿವಾಹವಾಗಿದ್ದರು. ಶ್ರೀ ದೊಡ್ಡಣ್ಣ ಶೆಟ್ಟರಿಗೆ ಒಟ್ಟು ನಾಲ್ಕು ಜನ ಪುತ್ರಿಯರು ಹಾಗೂ ಇಬ್ಬರು ಪುತ್ರರೆಂದು ತಿಳಿದು ಬರುತ್ತದೆ. ಎಲ್ಲ ಮಕ್ಕಳಿಗೂ ಮದುವೆ ಮಾಡಿರುತ್ತಾರೆ, ಅದರಲ್ಲಿ ಒಬ್ಬ ಮಗಳನ್ನು ಜೆ.ಬಿ.ಕೆಂಪಣ್ಣ ಶೆಟ್ಟರಿಗೆ ಕೊಟ್ಟು ವಿವಾಹ ಮಾಡಿರುತ್ತಾರೆ.

    ದೊಡ್ಡಣ್ಣ ಶೆಟ್ಟಿರವರು ಮಹಾ ದೈವಭಕ್ತರಾಗಿದ್ದರು. ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಬಳಿ ಇರುವ ತಮ್ಮ ಕುಲದೇವರಾದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ದೇವಾಲಯವನ್ನು ಅಂದಿನ ದಿನದಲ್ಲೇ ಸುಮಾರು 12 ಸಾವಿರ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿಸಿದರು. ಗಾಣಿಗರ ಪೇಟೆಯಲ್ಲಿ ‘ರತಿ ಮನ್ಮಥ’ ಹಬ್ಬಕ್ಕಾಗಿ ಮನಸಿಜ ಮಂದಿರ ಕಟ್ಟಿಸಿದರು. ತಾವೇ ಸ್ವತಃ ಕಾಶಿಯಿಂದ ಲಿಂಗವನ್ನು ತಂದು ಜ್ಯೋತಿನಗರೇಶ್ವರ ಎಂಬ ದೇವಾಲಯದಲ್ಲಿ ಪ್ರತಿಷ್ಠಾಪಿಸಿದರು.

    ಕೋಟೆ ಆಂಜನೇಯ ಸ್ವಾಮಿ, ಕೋಟೆ ವೆಂಕಟರಮಣ ಸ್ವಾಮಿ, ಚನ್ನಕೇಶವ ಸ್ವಾಮಿ, ಬಳೇಪೇಟೆ ಲಕ್ಷ್ಮೀನರಸಿಂಹ ಸ್ವಾಮಿ, ವಸಂತಪುರದ ವಸಂತ ವಲ್ಲಭರಾಯ ಸ್ವಾಮಿ ಮತ್ತು ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿಯ ದೇವಾಲಯಗಳಲ್ಲಿ ಆಯಾ ಕ್ಷೇತ್ರದ ಬ್ರಹ್ಮೋತ್ಸವ ಸಂದರ್ಭದಲ್ಲಿ ಕಲ್ಯಾಣೋತ್ಸವ ಏರ್ಪಡಿಸಿ ಅನ್ನ ಸಂತರ್ಪಣೆ ಮಾಡಿಸುತ್ತಿದ್ದರು. ಈ ಸಂದರ್ಭದಲ್ಲೇ ಅವರ ಪತ್ನಿ ಕಾಲವಾದರು. ಇಷ್ಟಾದರೂ ದೊಡ್ಡಣ್ಣ ಶೆಟ್ಟರು ಧೃತಿಗೆಡಲಿಲ್ಲ. ಎಂದಿನಂತೆಯೇ ತಮ್ಮ ದಾನ-ಧರ್ಮಗಳನ್ನು ಸರಾಗವಾಗಿ ಮಾಡುತ್ತಲೇ ಇದ್ದರು.

    ಬೆಂಗಳೂರಿನಲ್ಲಿ ಮೊದಲ ಬಾರಿಗೆ 1898ರಲ್ಲಿ ಪ್ಲೇಗ್​ ಎಂಬ ಮಹಾ ವ್ಯಾಧಿ ಬಂದಿತ್ತು. ವೈದ್ಯಕೀಯ ಸೌಲಭ್ಯಗಳು ಅಷ್ಟಾಗಿ ಇರದಿದ್ದ ಕಾರಣ ಅನಾಹುತ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸಿತ್ತು. ಆ ಭಯಾನಕ ವ್ಯಾಧಿಗೆ ದೊಡ್ಡಣ್ಣ ಶೆಟ್ಟರ ಮೊದಲನೆಯ ಮಗನಾದ ಲಕ್ಷ್ಮೀನಾರಾಯಣ ಸಾವಿಗೀಡಾದನು. ದೊಡ್ಡಣ್ಣ ಶೆಟ್ಟರು ಮಗನ ಸಾವಿನಿಂದ ನೊಂದರೂ ಸಮಚಿತ್ತ ಕಳೆದುಕೊಳ್ಳಲಿಲ್ಲ. ಸಹಮಾನವರ ಸೇವೆಯೇ ಪರಮಾತ್ಮನ ಸೇವೆ ಎಂದೆಣಿಸಿ ಪ್ಲೇಗ್ ಉಪದ್ರವದ ಕ್ರೂರ ದವಡೆಯಲ್ಲಿ ಸಿಲುಕಿದ್ದ ಕುಲಬಾಂಧವರ ನೆರವಿಗೆ ಧಾವಿಸಿದರು, ಹೊಸಕೋಟೆಯ ವೆಂಕಟಾಪುರದಲ್ಲಿ ನೂರಾರು ಗುಡಿಸಲುಗಳನ್ನು ನಿರ್ಮಿಸಿ ಕೊಟ್ಟು 2 ವರ್ಷಗಳ ಕಾಲ ಅವರೆಲ್ಲರನ್ನೂ ಪೋಷಿಸಿ ಆಪತ್ಬಾಂಧವ ಎನಿಸಿಕೊಂಡರು. ಬೆಂಗಳೂರಿನ ರೈಲ್ವೇ ನಿಲ್ದಾಣದ ಸನಿಹ ಶ್ರೀ ದೊಡ್ಡಣ್ಣ ಶೆಟ್ಟರಿಗೆ ಸೇರಿದ ತುಳಸಿ ತೋಟವೊಂದಿತ್ತು. ಅದರ ಒಂದು ಭಾಗವನ್ನು ಬುದ್ಧವಿಹಾರಕ್ಕೆ ದಾನ ಮಾಡಿದರು.

    ಶ್ರೀ ದೊಡ್ಡಣ್ಣ ಶೆಟ್ಟರು ಪಂಚೆ, ಸೀರೆ, ಅಂಗಿ, ವಸ್ತ್ರ ಮುಂತಾದವುಗಳನ್ನು ತಮ್ಮ ಅಳಿಯ ಜೆ.ಬಿ.ಕೆಂಪಣ್ಣ ಶೆಟ್ಟರ ಅಂಗಡಿಯಲ್ಲಿ ಖರೀದಿಸಿ ಜಾತ್ರೆ-ಪರಿಷೆ ಮುಂತಾದ ಜನಸಂದಣಿಯ ಕ್ಷೇತ್ರಗಳಲ್ಲಿ ಸೇರುವ ವಿಕಲಚೇತನರಿಗೆ ದಾನ ಮಾಡುತ್ತಿದ್ದರು.
    ಬೆಂಗಳೂರಿನ ಪಾದಚಾರಿ ರಸ್ತೆಯ ಮೇಲೆ ಮಲಗುತ್ತಿದ್ದ ಭಿಕ್ಷುಕರಿಗೂ, ಚಿಕ್ಕ ಲಾಲ್​ಬಾಗ್​ ಎಂದು ಹೆಸರಾಗಿದ್ದ ತುಳಸೀ ತೋಟದ ದಿವಾನ್ ಪೂರ್ಣಯ್ಯನವರ ಧರ್ಮಛತ್ರದ ಆವರಣದಲ್ಲಿ ಆಶ್ರಯ ಪಡೆಯುತ್ತಿದ್ದ ಸಾಧು ಸಂತರಿಗೂ ಕಂಬಳಿ-ಶಾಲುಗಳನ್ನು ಯಾರಿಗೂ ಕಾಣದಂತೆ ರಾತ್ರಿಯ ಹೊತ್ತು ಹೊದಿಸಿ ಹೊರಟುಹೋಗುತ್ತಿದ್ದರು. ಬಲಗೈ ನೀಡಿದ್ದನ್ನು ಎಡಗೈ ಕಾಣಬಾರದೆಂಬ ನಿಯಮ ಅನುಸರಿಸುತ್ತಿದ್ದರು. ಶ್ರೀಯುತರು ಮಾಡಿದ ಎಷ್ಟೋ ಗುಪ್ತದಾನದ ವಿವರಗಳು ಎಲ್ಲೂ ದಾಖಲಾಗಿಲ್ಲದ ಕಾರಣ ನಮಗೆ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ.

    “ಇಟ್ಟದ್ದು ಕೊಳೆಯುತ್ತದೆ, ಕೊಟ್ಟದ್ದು ಬೆಳೆಯುತ್ತದೆ” ಎಂಬುದನ್ನು ಶ್ರೀಯುತರು ಪಾಲಿಸುತ್ತಿದ್ದರು. ದೊಡ್ಡಣ್ಣ ಶೆಟ್ಟರು ಒಬ್ಬ ಮಹಾದಾನಿ, ಅವರು ಪರೋಪಕಾರ ಕಾರ್ಯದಲ್ಲಿ ನಿರತರಾಗಿರುವಾಗಲೇ ಏನಾದರೂ ಚಿರಸ್ಥಾಯಿಯಾಗಿ ಉಳಿಯಬಲ್ಲ ಧರ್ಮಕಾರ್ಯವೊಂದನ್ನು ಮಾಡುವ ಮೂಲಕ ಸಮಾಜದ ಋಣ ತೀರಿಸಬೇಕೆಂಬ ಮಹಾಸಂಕಲ್ಪ ಮಾಡಿದರು. ತಾವು ಗಳಿಸಿದ ಹಣವನ್ನು ಹೇಗೆ ವಿನಿಯೋಗಿಸಿದರೆ ಸಮಾಜದ ಉನ್ನತಿಗೆ ಕಾರಣವಾಗುತ್ತದೆ ಎಂದು ಯೋಚಿಸುತ್ತಿದ್ದರು. ಆಗ ಅವರಿಗೆ ಅನ್ನ ದಾಸೋಹಕ್ಕಿಂತಲೂ ಜ್ಞಾನ ದಾಸೋಹ ಮಿಗಿಲಾದುದು ಎಂಬುವುದು ತಿಳಿಯಿತು.

    ಶ್ರೀಯುತರು ಕೈಗೊಂಡ ನಿರ್ಧಾರದ ಮಹತ್ವ ನಮಗೆ ಅರ್ಥವಾಗದಿರಬಹುದು. ಅದರಲ್ಲೂ ಅವರ ಇನ್ನೊಬ್ಬ ಮಗ ಜೀವಂತವಾಗಿರುವಾಗಲೇ ತಮ್ಮ ಸಕಲ ಸಂಪತ್ತನ್ನು ಸಾರ್ವಜನಿಕರ ಕಲ್ಯಾಣ ಸಾಧನೆಯ ಸಲುವಾಗಿ ವಿದ್ಯಾಪ್ರಸಾರಕ್ಕೆ ದತ್ತಿಯಾಗಿ ನೀಡುವ ಆ ಧೀರ ನಿರ್ಧಾರ ಎಲ್ಲರಿಗೂ ಸಾಧ್ಯವೇ? ಇಪ್ಪತ್ತನೆಯ ಶತಮಾನದ ಆದಿಭಾಗದ ದಾನಿಗಳಲ್ಲಿ ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರಿಗೆ ಅಗ್ರವೀಳ್ಯ ಸಲ್ಲುತ್ತದೆ. ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಮುಂಭಾಗದಲ್ಲಿ ಧರ್ಮಪಾಠ ಶಾಲೆ ಕಾಮಗಾರಿ ನಡೆಯುತ್ತಿದ್ದಾಗಲೆ ಶ್ರೀ ದೊಡ್ಡಣ್ಣ ಶೆಟ್ಟರ ಉಳಿದಿದ್ದ ಒಬ್ಬ ಮಗನೂ ದೈವಾಧೀನನಾದ. ಈ ದೊಡ್ಡ ಆಘಾತದಿಂದ ಬಹುಬೇಗ ಹೊರಬಂದು 1905ರಲ್ಲಿ ಧರ್ಮಶಾಲೆಯ ಕಾಮಗಾರಿ ಪೂರ್ಣಗೊಳಿಸಿದರು. ಅಂದಿನ ಅರಸರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು 1906ರ ಮಾರ್ಚ್​ 10ರಂದು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಧರ್ಮಪಾಠ ಶಾಲೆಯನ್ನು ಉದ್ಘಾಟಿಸಿದರು.

    ಈ ಶಾಲೆಯು ಪಾಠದ ಜೊತೆ ಅನೇಕ ಉಪಯುಕ್ತ ಕೈ ಕಸುಬುಗಳ ತರಬೇತಿ ಸಹ ನೀಡುವುದನ್ನು ಮನಗಂಡ ಮಹಾರಾಜರು ಬಹಳ ಸಂತೋಷ ಪಟ್ಟರು. ಈ ವಿದ್ಯಾಸಂಸ್ಥೆಯ ಪ್ರಯೋಜನವನ್ನು ಇತರ ಜನಾಂಗದವರಂತೆ ಜ್ಯೋತಿನಗರ ವೈಶ್ಯ ಗಾಣಿಗ ಜನಾಂಗದ ಮಕ್ಕಳು ಸಹ ಪಡೆಯಬೇಕೆಂದು ಆಶಿಸಿದರು. ಗ್ರಾಮಾಂತರ ಪ್ರದೇಶಗಳಲ್ಲಿ ವಾಸವಾಗಿದ್ದ ಕುಲಬಾಂಧವರಲ್ಲಿ ಬಹುತೇಕರಲ್ಲಿ ಬಡತನವಿದ್ದ ಕಾರಣ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತ ಶ್ರೀಯುತರು ಅಂಥ ಮಕ್ಕಳಿಗಾಗಿಯೇ ‘ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಆಶ್ರಮ’ವನ್ನು ಸ್ಥಾಪಿಸಿದರು. (ಈ ಸದವಕಾಶವನ್ನು ಸದುಪಯೋಗಪಡಿಸಿಕೊಂಡ ಲಕ್ಷಾಂತರ ವಿದ್ಯಾರ್ಥಿಗಳು ಅಪ್ರತಿಮ ಪ್ರತಿಭೆಗಳಾಗಿ ಇಂದಿಗೂ ಜಗತ್ತಿನ ನಾನಾ ಭಾಗಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರ ದೂರ ದೃಷ್ಟಿಯಿಂದಲೇ ಸಾಧ್ಯವಾಗಿದ್ದೆಂದರೆ ತಪ್ಪಾಗಲಾರದು.)

    ಆಶ್ರಮದ ಬಾಲಕರ ಪೋಷಣೆಯ ಹೊಣೆಯನ್ನು ಸ್ವತಃ ತಾವೇ ಹೊತ್ತರು. ಆ ಮಕ್ಕಳನ್ನು ತಮ್ಮ ಮಕ್ಕಳಂತೆ ಸಾಕಿ ಸಲುಹಿದರು. ತಮ್ಮ ಧರ್ಮಸಂಸ್ಥೆಯ ಅಂಗಗಳಲೆಲ್ಲ ಅತ್ಯಂತ ಪ್ರಿಯವಾದುದು ಈ ಆಶ್ರಮ, ಇದು ಅವರ ಹೃದಯಭಾಗದಂತಿತ್ತು. ಹಬ್ಬಗಳು ಬಂದಾಗ ಅದರಲ್ಲೂ ವಿಶೇಷವಾಗಿ ಯುಗಾದಿ, ಗಣಪತಿಯ ಹಬ್ಬ, ರಾಮನವಮಿ, ದಸರಾ, ದೀಪಾವಳಿಯ ಹಬ್ಬಗಳಲ್ಲಿ ಆಯಾ ಸಂದರ್ಭಕ್ಕೆ ತಕ್ಕ ಸಿಹಿ ಭಕ್ಷ್ಯಗಳನ್ನು ಮಾಡಿಸುತ್ತಿದ್ದರು. ಆಗ ಯಜಮಾನರು ಬಾಲಕರ ಜೊತೆ ಊಟಕ್ಕೆ ಕೂರುತ್ತಿರಲಿಲ್ಲ, ಬಾಲಕರಿಗೆಲ್ಲ ತಾವೇ ಊಟ ಬಡಿಸಿ ಎಲ್ಲರೂ ತೃಪ್ತಿ ಹೊಂದಿದ ಮೇಲೆ ತಾವು ಊಟ ಮಾಡುತ್ತಿದ್ದರು. ಎಲ್ಲರಿಗೂ ಹೊಸ ಬಟ್ಟೆಗಳನ್ನು ಕೊಡಿಸುತ್ತಿದ್ದರು. ಪ್ರತಿ ಭಾನುವಾರ ಎಲ್ಲ ಬಾಲಕರಿಗೂ ಸ್ವತಃ ತಾವೇ ಅಭ್ಯಂಜನ ಸ್ನಾನ ಮಾಡಿಸುತ್ತಿದ್ದರು.

    ಶ್ರೀ ದೊಡ್ಡಣ್ಣ ಶೆಟ್ಟರ ಗುಪ್ತದಾನದ ವೈಖರಿ ಬಹುಕಾಲ ಗುಪ್ತವಾಗಿ ಉಳಿಯಲಿಲ್ಲ. ಮೈಸೂರು ಸಂಸ್ಥಾನದ ಎಲ್ಲೆಡೆ ಅವರ ಕೀರ್ತಿ ಪರಿಮಳ ತನ್ನ ಸುವಾಸನೆಯನ್ನು ಹರಡಿತು, ಅದು ಅಂದಿನ ಪ್ರಭುಗಳಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೂ ಮುಟ್ಟಿತು. (ಶ್ರೀ ದೊಡ್ಡಣ್ಣ ಶೆಟ್ಟರು ಸಂಸ್ಥಾಪಿಸಿದ್ದ ಸಂಸ್ಥಾನದ ಪ್ರಪ್ರಥಮ ವೃತ್ತಿಶಿಕ್ಷಣ ಸಹಿತವಾದ ಉಚಿತ ಪಾಠಶಾಲೆಯನ್ನು ಸ್ವತಃ ಪ್ರಭುಗಳೇ ಉದ್ಘಾಟಿಸಿದ್ದರಲ್ಲವೇ??) 1907ರ ಅ.18ರ ಶುಕ್ರವಾರದಂದು ದಸರಾ ದರ್ಬಾರಿನಲ್ಲಿ “ಜನೋಪಕಾರಿ” ಎಂಬ ಬಿರುದನ್ನು, ಗಂಡಭೇರುಂಡದ ಚಿನ್ನದ ಪದಕವನ್ನು ಇನ್ನಿತರ ರಾಜಮರ್ಯಾದೆಯಿಂದ ದಯಪಾಲಿಸಿ ಗೌರವಿಸಿದರು.

    ಶ್ರೀಯುತರು ಎಂದೂ ತಮಗಾಗಿ ಏನೂ ಪ್ರಭುಗಳಿಂದ ಬಯಸುತ್ತಿರಲಿಲ್ಲ. ಬದಲಾಗಿ ಜನಾಂಗದವರ ಗಾಣಗಳಿಗೆ ಪುರಸಭೆ ಮತ್ತು ಗ್ರಾಮ ಪಂಚಾಯ್ತಿಗಳು ವಸೂಲು ಮಾಡುತ್ತಿದ್ದ ಕಂದಾಯವನ್ನು ಪ್ರಭುಗಳಲ್ಲಿ ವಿನಂತಿಸಿಕೊಂಡು, ತೆಗೆಸುತ್ತಿದ್ದರು.
    ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಶಿಕ್ಷಣ ಕ್ಷೇತ್ರದ ಅತ್ಯಂತ ಪ್ರಗತಿಪರ ಪ್ರಯೋಗಗಳನ್ನು ನಡೆಸಿದ ಮೊದಲಿಗರಲ್ಲಿ ಶ್ರೀಯುತರಿಗೆ ಒಂದು ಪ್ರಮುಖ ಸ್ಥಾನ ಮೀಸಲಾಗಿದೆ.

    ಶಾಲಾ ಶಿಕ್ಷಣ ಉಚಿತವಾದುದರಿಂದ ಅತ್ಯಂತ ಹಿಂದುಳಿದ ಬಡಕುಟುಂಬಗಳ ಮಕ್ಕಳನ್ನು ಮಾತ್ರ ಸೇರಿಸಿಕೊಳ್ಳಲಾಗುತ್ತಿತ್ತು. ಆದರೆ ಎಲ್ಲ ಧರ್ಮಗಳ ಮತ್ತು ಎಲ್ಲ ಕೋಮಿನ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿತ್ತು. ಒಂದು ಸಲ ಶ್ರೀಯುತರು ತಮ್ಮೊಡನೆಯೆ ಇದ್ದ ತಮ್ಮ ಅಣ್ಣನ ಮಗಳು ಶ್ರೀಮತಿ ನಂಜಮ್ಮನವರನ್ನು ಕರೆದು “ಅಮ್ಮ ನಿನಗೆಷ್ಟು ಜನ ಮಕ್ಕಳು” ಎಂದು ಪ್ರಶ್ನಿಸಿದರು, ಗಲಿಬಿಲಿಗೊಂಡ ನಂಜಮ್ಮನವರು ”ಏನಪ್ಪಾ ಇಂಥ ಪ್ರಶ್ನೆ ಕೇಳ್ದೆ! ನನಗೊಬ್ಬಳೇ ಮಗಳು ಕೃಷ್ಣಮ್ಮ ಎನ್ನುವ ವಿಚಾರ ನಿಮಗೇನು ಗೊತ್ತಿಲ್ಲದ ಸಂಗತಿಯೇ” ಎಂದು ಉತ್ತರಿಸಿದರು. ಈ ಉತ್ತರದಿಂದ ಬೇಸರಗೊಂಡ ಯಜಮಾನರು “ಏನಮ್ಮಾ! ತಂದೆ ತಾಯಂದಿರನ್ನು ಬಿಟ್ಟು ಬಂದು, ನಮ್ಮನ್ನೇ ನಂಬಿಕೊಂಡಿರುವ ಈ ಆಶ್ರಮದ ಮಕ್ಕಳೆಲ್ಲರೂ ನನ್ನ ಮಕ್ಕಳು ಎಂದು ನಿನ್ನ ಬಾಯಿಂದ ಬರಲಿಲ್ಲವಲ್ಲ” ಎಂದು ಬೇಸರ ವ್ಯಕ್ತ ಪಡಿಸಿದರು. ಪಾಪ! ನಂಜಮ್ಮನವರು ಸಮೀಪದ ಬಂಧುವಾದರು ಶ್ರೀ ದೊಡ್ಡಣ್ಣ ಶೆಟ್ಡರ ಎತ್ತರಕ್ಕೆ ಏರಲು ಸಾಧ್ಯವೇ??

    ಗಾಣದ ಉದ್ಯಮ ಭಾರಿ ಯಂತ್ರಗಳೊಡನೆ ಸ್ಪರ್ಧಿಸಲಾಗದೆ ಸೋತು ಹೋಯಿತು, ಹೀಗಾಗಿ ಆಶ್ರಮದಲ್ಲಿ ಆಶ್ರಯ ಕೋರುವವರ ಸಂಖ್ಯೆಯು ಹೆಚ್ಚುತ್ತಾ ಹೋಯಿತು. ಆದರೆ ಸಂಪನ್ಮೂಲಗಳ ಕೊರತೆಯಿಂದಾಗಿ ಎಲ್ಗರಿಗೂ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ದಾನಿಗಳ ಸಂಪತ್ತು ಅಕ್ಷಯಪಾತ್ರೆ ಅಲ್ಲ ಅದಕ್ಕೆ ತನ್ನದೆ ಆದ ಇತಮಿತಿಗಳಿದ್ದವು ಆದ್ದರಿಂದ ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರ ಅಳಿಯನಾದ ಶ್ರೀ ಜೆ.ಬಿ.ಕೆಂಪಣ್ಣಶೆಟ್ಟರು ಕೆಲವು ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಂಡರು.

    1909ನೇ ಇಸವಿಯಲ್ಲಿ ಬೆಂಗಳೂರು ನಗರ ಮನಿಸಿಪಾಲಿಟಿಯವರು ರಾತ್ರೋ ರಾತ್ರಿ ಶ್ರೀ ಲ.ನ.ಧರ್ಮ ಸಂಸ್ಥೆಯ ಗೋಡೆಯನ್ನು ದೊಡ್ಡಣ್ಣ ಶೆಟ್ಟರ ಗಮನಕ್ಕೆ ತರದೆ ಹೊಡೆಸಿಹಾಕಿದ್ದರು. ಈ ಕಾರಣಕ್ಕೆ ಮನನೊಂದು ಶ್ರೀಯುತರು ಈ ಅಧರ್ಮ ರಾಜ್ಯದಲ್ಲಿ ನಾನಿರುವುದಿಲ್ಲ ಎಂದು ಯಾರಿಗೂ ಹೇಳದೆ ಕಾಶಿಗೆ ಹೊರಟು ಹೋದರು. ಈ ಸುದ್ದಿ ಕಾಡ್ಗಿಚ್ಚಿನಂತೆ ಇಡೀ ಮೈಸೂರು ರಾಜ್ಯದೆಲ್ಲೆಡೆ ಹರಡಿತು.


    ಮಹಾರಾಜರೇ ಸ್ವತಃ ಸ್ಥಳ ಪರಿಶೀಲನೆಗೆ ಬಂದಿದ್ದರಿಂದ, ದಿವಾನರಾದ ಶ್ರೀ ವಿ.ಪಿ. ಮಾಧವರಾಯರು, ಪ್ರಭುಗಳಿಗೆ ತಮ್ಮ ಮೇಲೆ ವಿಶ್ವಾಸದ ಕೊರತೆಯಿದೆ ಎಂದು ಭಾವಿಸಿ ರಾಜೀನಾಮೆ ನೀಡಿದರು. ಪ್ರಭುಗಳು ತಮ್ಮ ವಿಶೇಷ ಸಿಬ್ಬಂದಿಯನ್ನು ಕಳುಹಿಸಿ ಶ್ರೀ ದೊಡ್ಡಣ್ಣ ಶೆಟ್ಟರನ್ನು ಹುಡುಕಿಸಿ ಅರಮನೆಗೆ ಕರೆಸಿದರು. ಮಹಾರಾಜರು ದೊಡ್ಡಣ್ಣ ಶೆಟ್ಟರನ್ನು ಸಮಾಧಾನಪಡಿಸಿ ಶ್ರೀಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಹಿಂದೆ ತಮಗೆ ಬೇಕಾದಷ್ಟು ನಿವೇಶನವನ್ನು ತಗೆದುಕೊಳ್ಳುವಂತೆ ಅಪ್ಪಣೆ ಹೊರಡಿಸಿದರು.

    ಹೀಗೆ ಮಹಾರಾಜರಿಂದ ಪಡೆದ ನಿವೇಶನದಲ್ಲಿ 1915ನೇ ಇಸವಿಯಲ್ಲಿ ಔದ್ಯೋಗಿಕ ಶಿಕ್ಷಣಕ್ಕಾಗಿ “ಶ್ರೀ ಲಕ್ಷ್ಮೀನರಸಿಂಹ ಧರ್ಮಪಾಠ ಶಾಲೆ” ಎಂಬ ಎರಡನೆಯ ಕಟ್ಟಡವನ್ನು ನಿರ್ಮಿಸಿದರು. ಈ ಕಟ್ಟಡದಲ್ಲಿಯೇ ಈಗ ಪ್ರೌಢಶಾಲೆ, ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಪಾಲಿಟೆಕ್ನಿಕ್ ಮತ್ತು ಧರ್ಮ ಸಂಸ್ಥೆಯ ಆಡಳಿತ ಕಚೇರಿ ಮುಂತಾದವು ಕೆಲಸ ಮಾಡುತ್ತಿವೆ.

    ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಲಭಾಗದಲ್ಲಿ ಅಂಗಡಿಗಳನ್ನು ಕಟ್ಟಿಸಿ ಬರುವ ಬಾಡಿಗೆಯಿಂದ ಕಟ್ಟಡ, ಪ್ರಯೋಗಾಲಯ, ಪುಸ್ತಕ ಭಂಡಾರ ಮುಂತಾದ ಸೌಲಭ್ಯಗಳನ್ನು ಪ್ರೌಢಶಾಲೆಗಾಗಿ ಯೋಜನೆ ಮಾಡಿದರು. ಈ ಮಧ್ಯೆ ಪ್ರೌಢಶಾಲೆಯ ವಿದ್ಯಾಭ್ಯಾಸಕ್ಕೆ ಒಂದು ವ್ಯವಸ್ಥೆ ಮಾಡಲಾಯಿತು.

    1917ರ ಏ.23ರಂದು ಶ್ರೀ ಲ.ನ.ಧರ್ಮಸಂಸ್ಥೆಯ ಆಡಳಿತವನ್ನು ಥಿಯಾಸಾಫಿಕಲ್ ಶಿಕ್ಷಣ ಟ್ರಸ್ಟ್‌ಗೆ ವಹಿಸಿಕೊಡಲಾಯಿತು. ಆಗ ಐರ್ಲೆಂಡ್ ದೇಶದ ಶ್ರೀಮತಿ ಅನಿಬೆಸೆಂಟ್ ಅವರು ಅಖಿಲ ಭಾರತ ಥಿಯಾಸಾಫಿಕಲ್ ಸೊಸೈಟಿಯ ಅಧ್ಯಕ್ಷೆ ಆಗಿದ್ದರು. ನ್ಯಾಯಾಧೀಶ ಶ್ರೀ ಕೆ.ಎಸ್.ಚಂದ್ರಶೇಖರ್ ಅಯ್ಯರ್ ಅವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಸಮಿತಿಯೊಂದನ್ನು ರಚಿಸಲಾಯಿತು.

    1917ನೇ ಇಸವಿಯ ಜೂನ್ ತಿಂಗಳಲ್ಲಿ ಶ್ರೀ ಲಕ್ಷ್ಮೀನರಸಿಂಹ ಧರ್ಮಸಂಸ್ಥೆಯ ದೇಶೀಯ ಪ್ರೌಢಶಾಲೆ (ಎಸ್​ಎಲ್​​ಎನ್​ ನ್ಯಾಷನಲ್ ಹೈಸ್ಕೂಲ್​) ಪ್ರಾರಂಭವಾಯಿತು. ಆದರೆ ಈ ಪ್ರೌಢಶಾಲೆ ಬಹಳ ಕಾಲದವರೆಗೆ ಶ್ರೀ ಲ.ನ.ಧರ್ಮಸಂಸ್ಥೆಯ ಆಶ್ರಯದಲ್ಲಿ ಕಾರಣಾಂತರಗಳಿಂದ ಮುಂದುವರಿಯಲಿಲ್ಲ. ಮೊದಲು ಚಾಮರಾಜಪೇಟೆಗೆ, ಆ ನಂತರ ಬಸವನಗುಡಿಗೆ ಅದು ಸ್ಥಳಾಂತರಗೊಂಡಿತು. ಅದೇ ಈಗಿರುವ ಸುಪ್ರಸಿದ್ಧ ಬಸವನಗುಡಿ ನ್ಯಾಷನಲ್​ ಹೈಸ್ಕೂಲ್. ಈ ವಿಷಯ ಆ ಶಾಲೆಯ ಪರಿಚಯ ಪತ್ರದಲ್ಲಿ ಇಂದಿಗೂ ನಮೂದಿಸಲ್ಪಡುತ್ತಿದೆ.

    ಶ್ರೀ ಜನೋಪಕಾರಿ ದೊಡ್ಡಣ್ಣ ಶೆಟ್ಟರ ಸಮಯಪ್ರಜ್ಞೆ ಹಾಗೂ ಪರಿಶ್ರಮದ ಫಲವಾಗಿ ಥಿಯಾಸಾಫಿಕಲ್ ಸೊಸೈಟಿಯ ವಶಕ್ಕೆ ನೀಡಿದ್ದ ಶ್ರೀ ಲ.ನ.ಧರ್ಮಸಂಸ್ಥೆಯ ಆಡಳಿತವನ್ನು 1918ರ ನ.19ರಂದು ಟ್ರಸ್ಟ್ ಡೀಡ್ ಮುಖಾಂತರ ಪುನಃ ತಮ್ಮ ವಶಕ್ಕೆ ಪಡೆದುಕೊಳ್ಳಲಾಯಿತು. ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರು ಶ್ರೀ ಲ.ನ.ಧರ್ಮಸಂಸ್ಥೆಯನ್ನು ತಮ್ಮ ಹೃದಯಕ್ಕೆ ಅಪ್ಪಿ ಹಿಡಿದಿದ್ದರು. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ತಮ್ಮ ಸಂಪತ್ತನ್ನೆಲ್ಲ ತ್ಯಾಗ ಮಾಡಿದರು. ಜೀವನದ ಸಮಸ್ತ ಸುಖ-ಸಂತೋಷಗಳನ್ನೂ ತ್ಯಜಿಸಿದರು ಹಾಗೂ ತಮ್ಮನ್ನು ಸೇವೆಗಾಗಿಯೇ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.

    1920 ಜೂ.23ರಂದು ದೂರದೃಷ್ಟಿ ಪ್ರೇರಿತರಾಗಿ ಯಜಮಾನರು ತಮ್ಮ ನಿಕಟವರ್ತಿ ಶ್ರೀ ಮುನಿಶಾಮಶೆಟ್ಟರು, ವೆಂಕಟಪತಪ್ಪನವರು ಮತ್ತು ತಮ್ಮನ್ನೂ ಒಳಗೊಂಡಂತೆ ಆರು ಸದಸ್ಯರನ್ನೊಳಗೊಂಡ ಒಂದು ಟ್ರಸ್ಟ್ ಬೋರ್ಡ್ ರಚನೆ ಮಾಡುತ್ತಾರೆ. ತಮ್ಮಲ್ಲಿದ್ದ ನಗದು ಹಣ, ತಮಗೆ ಬರಬೇಕಾಗಿದ್ದ ಹಣ, ಕಂಟೋನ್ಮೆಂಟಿನ ಮನೆ-ಅಂಗಡಿ, ತುಳಸೀ ತೋಟ ಮತ್ತು ಶ್ರೀ ಲ.ನ.ಧರ್ಮಸಂಸ್ಥೆಯನ್ನು ಒಳಗೊಂಡಂತೆ ಸಮಸ್ತ ಆಸ್ತಿಯನ್ನೂ ರಿಜಿಸ್ಟರ್ಡ್ ಡೀಡ್ ಮೂಲಕ ಈ ಟ್ರಸ್ಟ್ ಬೋರ್ಡಿಗೆ ವಹಿಸಿದರು.

    ಶ್ರೀಯುತರು 1920ರಲ್ಲಿ ಮೂರನೆ ಸಲ ಕಾಶಿಯಾತ್ರೆಗೆಂದು ಹೊರಟರು. ಮಾರ್ಗಮಧ್ಯದಲ್ಲಿ ಪುರಿಜಗನ್ನಾಥನ ಪುಣ್ಯ ಕ್ಷೇತ್ರದಲ್ಲಿ ತಂಗಿದ್ದಾಗ ವಿಚಿತ್ರ ಘಟನೆಯೊಂದು ನಡೆಯಿತು. ಅದೇನೆಂದರೆ.. ಅಲ್ಲಿ ಕಾಡಿನಿಂದ ಒಬ್ಬ ಮುದಿ ವ್ಯಕ್ತಿ ಸೌದೆ ಹೊತ್ತು ತರುತ್ತಿದ್ದುದನ್ನು ಕಂಡರು. ಆ ವ್ಯಕ್ತಿ ಸ್ವಾಮಿ ತಾವು ಎಲ್ಲಿಗೆ ಹೊರಟ್ಟಿದ್ದೀರಿ? ಎಂದು ಪ್ರಶ್ನಿಸಿದಾಗ ಕಾಶಿಗೆ ಹೊರಟ್ಟಿದ್ದೇನೆಂದು ಶ್ರೀ ದೊಡ್ಡಣ್ಣ ಶೆಟ್ಟರು ಹೇಳಿದರು. ತಮ್ಮ ಹೃದಯದಲ್ಲೇ ಕಾಶಿಯನ್ನು ಇಟ್ಟುಕೊಂಡು ತಾವೇಕೆ ಇಲ್ಲಿಗೆ ಬಂದಿರಿ?” ಎಂದು ಆ ಅಪರಿಚಿತ ವ್ಯಕ್ತಿ ಹೇಳಿದರು. ಶ್ರೀ ದೊಡ್ಡಣ್ಣ ಶೆಟ್ಟರ ಮನಸ್ಸಿನಲ್ಲಿ ತಳಮಳವಾಯಿತು. ಕೊನೆಗೆ ತಾವು ಎಲ್ಲಿ ಸೇವೆ ಮಾಡುತ್ತಿದ್ದರೋ ಅದೇ ಕಾಶಿ ಎಂಬ ಸತ್ಯವನ್ನರಿತು ಬೆಂಗಳೂರಿಗೆ ವಾಪಸಾದರು.

    ಪುರಿಯಿಂದ ಹಿಂದಿರುಗಿದ ಮೇಲೆ ದೇಹಾರೋಗ್ಯ ಅಷ್ಟೇನೂ ಚೆನ್ನಾಗಿರಲಿಲ್ಲ, ತಮ್ಮ ಜನಸೇವಾಕಾರ್ಯ ಪೂರ್ಣಗೊಂಡಂತ ಅನಿಸುತ್ತಿತ್ತು. 1920ರ ಏ.17ರಂದು ಬ್ರಹ್ಮವಿದ್ಯಾಶ್ರಮದ ಗುರುಗಳಾದ ಶ್ರೀ ಮುನಿಸ್ವಾಮಿ ಆರ್ಯ ಅವರಿಂದ ಸನ್ಯಾಸ ದೀಕ್ಷೆ ಪಡೆದರು. ಅಂದಿನಿಂದ ಶ್ರೀ ದೊಡ್ಡಣ್ಣ ಶೆಟ್ಟರು ಸಾಹುಕಾರ್, ಯಜಮಾನ್, ಜನೋಪಕಾರಿ ಮುಂತಾದ ಎಲ್ಲ ಉಪಾಧಿಗಳಿಂದ ಮುಕ್ತರಾಗಿ ಸರ್ವಸಂಗಪರಿತ್ಯಾಗದ ಸಂಕೇತವಾದ ಕಾವಿಯನ್ನು ಧರಿಸಿ ಶ್ರೀ ಶ್ರೀ ಶ್ರೀ ದೊಡ್ಡಣ್ಣಸ್ವಾಮಿಗಳಾದರು. ಕೆಲವು ದಿನಗಳವರೆಗೆ ತಮ್ಮ ಗುರುಗಳ ಪಾದದಡಿಯಲ್ಲೇ ಸಾಧನೆ ಮಾಡಿ, ಅದನ್ನು ಮುಂದುವರಿಸಲು ಶ್ರೀ ಲಕ್ಷ್ಮೀನರಸಿಂಹ ಆಶ್ರಮಕ್ಕೆ ಹಿಂದಿರುಗಿದರು.
    ಸದಾ ಆಧ್ಯಾತ್ಮ ಚಿಂತನೆಯಲ್ಲಿಯೇ ಮಗ್ನರಾಗಿದ್ದ ಶ್ರೀ ದೊಡ್ಡಣ್ಣ ಸ್ವಾಮಿಗಳು 1921ರ ಆ. 5ರಂದು ಸ್ವರ್ಗಸ್ಥರಾದರು.

    ಬರಹ ಕೃಪೆ: ಪ್ರೊಫೆಸರ್ ವಿ.ಕೃಷ್ಣಶೆಟ್ಟಿ

    ಸಂಬಂಧಿತ ಸುದ್ದಿ: ಥಾಣೆ ಭಾರತ್‌ ಕೋ-ಆಪರೇಟಿವ್‌ ಬ್ಯಾಂಕ್‌ ರಜತ ಮಹೋತ್ಸವ; ಗೋಪಾಲಕೃಷ್ಣ ಗಾಣಿಗರಿಂದ ಉದ್ಘಾಟನೆ

    ಸಂಬಂಧಿತ ಸುದ್ದಿ: ಕರಾವಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹೋದರ ಸೋಮಭಾಯಿ; 4 ದಿನಗಳ ಪ್ರವಾಸದ ಬಳಿಕ ಗುಜರಾತ್‌ಗೆ ನಿರ್ಗಮನ

    ಸಂಬಂಧಿತ ಸುದ್ದಿ: ಶ್ರೀಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್‌ ಟ್ರಸ್ಟ್‌ ಸೇವೆ 12 ಜಿಲ್ಲೆಗಳಿಗೆ ವಿಸ್ತರಣೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!