Thursday, May 2, 2024
spot_img
More

    Latest Posts

    ʼಅಕ್ಷರ ವೈಭವʼ ಕವನ ಸಂಕಲನಕ್ಕೆ ʼನುಡಿಸಿರಿʼ ಪುಸ್ತಕ ಪ್ರಶಸ್ತಿ

    ಬೆಂಗಳೂರು: ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದ ಯುವಕವಿ ಸಂಗಮನಾಥ ಪಿ. ಸಜ್ಜನ ಅವರ ʼಅಕ್ಷರ ವೈಭವʼ ಎಂಬ ಚೊಚ್ಚಲ ಕವನ ಸಂಕಲನಕ್ಕೆ ಚೇತನ ಫೌಂಡೇಷನ್ ಕರ್ನಾಟಕ ಹಾಗೂ ಸಂಚಲನ ಸುದ್ದಿವಾಹಿನಿ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಕೆಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ʼನುಡಿ ಸಡಗರʼ ಸಮಾರಂಭದಲ್ಲಿ ನುಡಿಸಿರಿ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

    ಈ ಕಾರ್ಯಕ್ರಮವನ್ನು ಖ್ಯಾತ ಕವಿ ಎಚ್.ದುಂಡಿರಾಜ್ ಉದ್ಘಾಟಿಸಿದ್ದು, ಡಾ.ಕೆ.ಸಿ.ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಖ್ಯಾತ ಕಾದಂಬರಿಕಾರ ಯತಿರಾಜ್ ವೀರಾಂಬುಧಿ ಆಗಮಿಸಿದ್ದರು. ಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಅಧ್ಯಾಪಕ-ಸಾಹಿತಿ ವಾಸುದೇವ ನಾಡಿಗ ವಹಿಸಿದ್ದರು. ಡಾ.ಸಿ.ನಂದಿನಿ, ಚಿತ್ರಸಾಹಿತಿ ಹೃದಯಶಿವ, ಮೌಲಾಲಿ ಬೋರಗಿ, ರೂಪ ಹೊಸದುರ್ಗ, ಪಾರ್ವತಿ ಸಪ್ನ ಮುಂತಾದ ಸಾಹಿತಿಗಳು ಹಾಗೂ ಚೇತನ ಫೌಂಡೇಷನ್ ಕರ್ನಾಟಕ ಅಧ್ಯಕ್ಷ ಚಂದ್ರಶೇಖರ್ ಮಾಡಲಗೇರಿ ಉಪಸ್ಥಿತರಿದ್ದರು.

    ಸಂಗಮನಾಥ ಪಿ. ಸಜ್ಜನ ಅವರ ʼಅಕ್ಷರ ವೈಭವʼ ಚೊಚ್ಚಲ ಕವನ ಸಂಕಲನ ಎರಡು ತಿಂಗಳ ಹಿಂದೆಯಷ್ಟೇ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಾಲೂಕು ಕಸಾಪದ ನೆರವಿನೊಂದಿಗೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ತಾಲೂಕು ಅಧ್ಯಕ್ಷ ಗುರುಬಸಪ್ಪ ಎಸ್. ಸಜ್ಜನಶೆಟ್ಟಿ ಅವರ ಸಮ್ಮುಖದಲ್ಲಿ ಬಿಡುಗಡೆಯಾಗಿತ್ತು.

    ಕವಿಯ ಸ್ಪಂದನಾಶೀಲ ಮನಸ್ಸು ಇಲ್ಲಿನ ಕವನಗಳಲ್ಲಿ ಬದುಕು, ಅಕ್ಷರ, ದೇಶಭಕ್ತಿ, ನಾಡಭಕ್ತಿ, ಮಾತೃಪ್ರೇಮ, ಕಲ್ಯಾಣ ಕರ್ನಾಟಕದ ಜೀವನ, ಒಗ್ಗಟಿನ ಬದುಕನ್ನು ಪ್ರತಿಬಿಂಬಿಸುತ್ತವೆ. ಕವಿಯ ನೂರಾರು ಭಾವನೆಗಳು ಸರಳ ಮತ್ತು ಸಾಮಾನ್ಯ ಭಾಷೆಯಲ್ಲಿ ವ್ಯಕ್ತವಾಗಿವೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಶುಭ ಸಂದೇಶದ ಮೂಲಕ ಹಾರೈಸಿದ್ದಾರೆ. ವಿಶೇಷವಾಗಿ ಸಜ್ಜನ ಅವರ ತಾಯಿಯೇ ಈ ಕವನ ಸಂಕಲನಕ್ಕೆ ಬೆನ್ನುಡಿಯಲ್ಲಿ ಹರಸಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿಯೇ ಈ ಕವನ ಸಂಕಲನವು ʼನುಡಿಸಿರಿʼ ಪ್ರಶಸ್ತಿ ಮುಡಿಗೇರಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಯಾದಗಿರಿಯ ಕನ್ನಡ ಜಾಗೃತಿಯ ಮಾಜಿ ಸದಸ್ಯ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶರಣು ಬಿ. ಗದ್ದುಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಹಿರಿಯ ಮಕ್ಕಳ ಕವಿ ಎ.ಕೆ.ರಾಮೇಶ್ವರ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ್, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ನಳ್ಳಿ, ಎಮ್.ಎನ್.ದೇಸಾಯಿ ಪದವಿ ಕಾಲೇಜಿನ ಅಧ್ಯಕ್ಷ ಸಂದೀಪ್ ದೇಸಾಯಿ ಹಾಗೂ ಶಿಕ್ಷಣ ಪ್ರೇಮಿ ಡಾ.ಕೇಶವ ಕಾಬಾ ಹರ್ಷ ವ್ಯಕ್ತಪಡಿಸಿದ್ದಾರೆ.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಯಾರಾಗುತ್ತಾರೆ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಚೊಚ್ಚಲ ಅಧ್ಯಕ್ಷ?

    ಸಂಬಂಧಿತ ಸುದ್ದಿ: ಅಖಿಲ ಕರ್ನಾಟಕ ಗಾಣಿಗರ ಸಂಘದ ಕೇಂದ್ರ ಕಚೇರಿಗೆ ಮಾಜಿ ಸಭಾಪತಿ ವಿ.ಆರ್‌. ಸುದರ್ಶನ್‌ ಭೇಟಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!