Thursday, May 2, 2024
spot_img
More

    Latest Posts

    ನೆನಪಿರಲಿ.. 2023ನೇ ವರ್ಷವನ್ನು ಸವಿನೆನಪಾಗಿಸಿಕೊಳ್ಳುವುದು ಹೇಗೆ?

    ಬೆಂಗಳೂರು: ನೆನಪುಗಳೇ ಹಾಗೆ.. ಮರೆಯಬೇಕೆಂದಷ್ಟೂ ನೆನಪಾಗುತ್ತಲೇ ಇರುತ್ತವೆ. ನೆನಪಾದರೆ ಸಾಕು, ಒಂದರ ಹಿಂದೊಂದು ನೆನಪುಗಳೇ. ಅಜ್ಜನಿಗೆ ಅಜ್ಜಿಯ ನೆನಪು, ತಾಯಿಗೆ ಕಳೆದುಕೊಂಡ ಮಗನ ನೆನಪು, ಪತ್ನಿಗೆ ದೂರವಾದ ಪತಿಯ ನೆನಪು, ಅವಳಿಗೆ ಅವನ ನೆನಪು, ಅವನಿಗೆ ಅವಳ ನೆನಪು. ಲೆಕ್ಕದ ಮೇಷ್ಟ್ರು ನಿಲ್ಲಿಸಿ ಮಗ್ಗಿ ಕೇಳುವಾಗ ತಡವರಿಸುವಂತೆ ಮಾಡುವ ನೆನಪು, ಪರೀಕ್ಷೆಯಲ್ಲಿ ಉತ್ತರಿಸಬೇಕು ಎಂದು ಪೆನ್ ಕೈಗೆತ್ತಿಕೊಂಡಾಗಲೇ ಸರಿಯಾಗಿ ಕೈಕೊಡುವ ನೆನಪು, ಎದುರಿಗೆ ಹಾದು ಹೋಗುತ್ತಿರುವ ಪರಿಚಿತರನ್ನು ಕೂಗಿ ಕರೆಯಬೇಕೆಂದಾಗ ಹೆಸರೇ ಹೊಳೆಯಂದಂತೆ ಮಾಡುವ ನೆನಪು. ಹಣದ ಅಗತ್ಯವಿರುವಾಗಲೇ ಅಪರೂಪಕ್ಕೊಮ್ಮೆ ಬಳಸುವ ಎಟಿಎಂ ಕಾರ್ಡ್ ಪಿನ್ ನಂಬರ್ ತೋಚದಂತೆ ಮಾಡುವ ನೆನಪು. ಸ್ನಾನದ ಕೋಣೆಯಲ್ಲಿ ನೀರಿನಿಂದ ಮೈತೋಯಿಸಿಕೊಂಡ ನಂತರವೇ ಆಗುವ ಮರೆತು ಬಂದ ಟವೆಲಿನ ನೆನಪು. ಆಗಷ್ಟೇ ಕೆಲಸಕ್ಕೆ ಸೇರಿದವನಿಗೆ ಕಳೆದ ಕಾಲೇಜು ದಿನಗಳ ನೆನಪು, ಸುಖದ ಸುಪ್ಪತ್ತಿಗೇರಿದವನಿಗೆ ಕಷ್ಟ-ಕಾರ್ಪಣ್ಯದ ನೆನಪು, ಸೋತು ಸುಣ್ಣವಾದವನಿಗೆ ಗತವೈಭವದ ನೆನಪು. ಉಫ್! ಒಂದಾ ಎರಡಾ? ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಮನದಂಗಳಕ್ಕೆ ಇಣುಕಿ ನೋಡಿದರೆ ನೆನಪುಗಳದೇ ಹುಲ್ಲುಹಾಸು. ಅಲ್ಲಿ ಎಷ್ಟೊಂದು ನೆನಪುಗಳು! ಮುದ ನೀಡುವ ಮಧುರ ನೆನಪುಗಳು, ಕಾಡುವ ಕಹಿ ನೆನಪುಗಳು. ಆ ನೆನಪುಗಳ ಜೊತೆಯಲ್ಲಿ, 2023ರ ಹೊಸ್ತಿಲಿನಲ್ಲಿ ಇರುವ ನಮಗೆಲ್ಲರಿಗೂ 2022 ಎನ್ನುವುದು ಕೂಡ ಇನ್ನು ಒಂದು ನೆನಪಷ್ಟೇ.

    ಈ ನೆನಪುಗಳೇ ಹೀಗೆ.. ಒಮ್ಮೊಮ್ಮೆ ವರ, ಕೆಲವೊಮ್ಮೆ ಶಾಪ. ಸನ್ಮಾರ್ಗಿಗೆ ಕೃತಜ್ಞತೆಯ ನೆನಪೇ ದಾರಿದೀಪ, ದುರ್ಮಾರ್ಗಿಗೆ ತಾನೆಸಗಿದ ಪಾಪದ ನೆನಪೇ ಪ್ರಾಯಶ್ಚಿತ್ತ. ಹೊಸ ವರುಷದ ಹರುಷದ ಹುರುಪಿನಲ್ಲಿ ಒಮ್ಮೆ ಹಿಂದಿರುಗಿ ನೋಡಿದರೆ ಮನದ ಹಾಳೆಯ ತುಂಬಾ ಸಾಲು ಸಾಲು ನೆನಪುಗಳು.  ಸೋಲು-ನೋವು ನೀಡಿದ ಘಟನೆಗಳ ನೆನಪುಗಳು ಕಹಿ ನೆನಪುಗಳಾದರೆ, ಬಾಳಹಾದಿಯಲ್ಲಿ ಗೆಲುವು ಸಂತಸದ ತಿರುವುಗಳೇ ಸಿಹಿ ನೆನಪುಗಳು. ಹಾಗೆ ನೋಡಿದರೆ ಪ್ರತಿ ವರ್ಷವೂ ಒಂದಷ್ಟು ಸಿಹಿ-ಕಹಿ ನೆನಪುಗಳ ಮಿಶ್ರಣವೇ. ಸಿಹಿಯ ಪಾಲು ಜಾಸ್ತಿ ಇದ್ದರೆ ಈ ವರ್ಷ ನನ್ನ ಪಾಲಿಗೆ ಚೆನ್ನಾಗಿತ್ತು; ‘ಇಟ್ಸ್ ಮೈ ಲಕ್ಕಿ ಇಯರ್’ ಎಂದು ಉದ್ಗರಿಸುತ್ತೇವೆ. ಅದೇ ಈ ವರ್ಷ ಕಹಿಯ ಪಾಲೇ ಜಾಸ್ತಿ ಇದ್ದರೆ, ‘ಏನ್ ಕೆಟ್ಟ ವರ್ಷವಪ್ಪ? ಸದ್ಯ ಮುಗೀತು’ ಅಂತ ನಿಟ್ಟುಸಿರಿಡುತ್ತೇವೆ.

    ಅಷ್ಟಕ್ಕೂ ಹೊಸ ವರ್ಷ ಅಂದರೆ ಜಸ್ಟ್ ಒಂದು ಇಸವಿಯ ಬದಲಾವಣೆ. ಮಿಕ್ಕಂತೆ ಯಥಾಪ್ರಕಾರ ಅವೇ 12 ತಿಂಗಳುಗಳು, 52 ವಾರಗಳು. ಅವೇ 365 ದಿನಗಳನ್ನು ಹೊಸದಾಗಿ ಕಳೆಯುವುದಷ್ಟೇ. ಯಾವ ದಿನ ಯಾವ ಘಟನೆಯೇ ನಡೆಯಲಿ; ಅದಕ್ಕೆ ನಾವು ಸ್ಪಂದಿಸುವ ರೀತಿ, ಆ ಘಟನೆಯ ಪರಿಣಾಮಗಳನ್ನು ಸ್ವೀಕರಿಸುವ ರೀತಿಗನುಗುಣವಾಗಿ, ಆ ಘಟನೆ ಹಾಗೂ ಅದರ ಪರಿಣಾಮಗಳು ನಮ್ಮ ಮನದಲ್ಲಿ ಸಿಹಿ ಅಥವಾ ಕಹಿ ನೆನಪಾಗಿ ದಾಖಲಾಗುತ್ತವೆ. ಸಂದರ್ಭ-ಸನ್ನಿವೇಶಗಳಿಗೆ ಅನುಗುಣವಾಗಿ ನಾವು ತೋರುವ ಪ್ರತಿಸ್ಪಂದನೆ ಮೇಲೆ ನಮ್ಮ ಸಂತಸ-ಸಂಕಟಗಳು ಅವಲಂಬಿಸಿರುತ್ತವೆ. Yes.. It’s all in the state of mind at that particular time. ದೃಷ್ಟಿಯಂತೆ ಸೃಷ್ಟಿ ಎಂದಂತೆ, ಸ್ವಲ್ಪೇ ಸ್ವಲ್ಪ ಸಹನೆ ಹಾಗೂ ಆಶಾಭಾವವೊಂದಿದ್ದರೆ ಅಹಿತಕರ ವಾತಾವರಣದಲ್ಲೂ ಒಂದಷ್ಟು ಖುಷಿ ಕಾಣಬಹುದು, ಖುಷಿಯ ಕ್ಷಣವನ್ನೂ ಮತ್ತಷ್ಟು ಖುಷಿಯದನ್ನಾಗಿಸಬಹುದು. ನಮ್ಮ ಸುತ್ತ ಅಥವಾ ನಮಗೆ ಏನಾಗುತ್ತದೆ ಎನ್ನುವುದಕ್ಕಿಂತ ನಮ್ಮ ಸುತ್ತ ನಡೆಯುವ ಮತ್ತು ನಮ್ಮ ಮೇಲಾಗುವ ಪ್ರಚೋದನೆಗಳಿಂದ ನಮ್ಮೊಳಗೆ ಏನಾಗುತ್ತಿದೆ/ಏನನಿಸುತ್ತದೆ ಎಂಬುದಷ್ಟೇ ಮುಖ್ಯ.

    ವರ್ಷಾರಂಭದಲ್ಲಿ ವರ್ಷ ಭವಿಷ್ಯ ತಿಳಿಯುವುದೊಂದು ಸಾಮಾನ್ಯ ಕುತೂಹಲ. ಹಾಗೆ ಎಲ್ಲೋ ಓದಿದ, ಕೇಳಿದ ಭವಿಷ್ಯವಾಣಿಯಲ್ಲಿ ಬರುವ ಕಂಟಕಗಳ ನಡುವೆಯೂ ಕೆಲವು ಶುಭಸೂಚಕ ನುಡಿಗಳು ಇರುತ್ತವೆ. ಭವಿಷ್ಯದ ಸತ್ಯಾಸತ್ಯತೆ ಒತ್ತಟ್ಟಿಗಿರಲಿ. ಹಂಸಕ್ಷೀರ ನ್ಯಾಯದಂತೆ, ಅದರಲ್ಲಿರುವ ಒಳ್ಳೆಯದನ್ನು ಮಾತ್ರ ಗ್ರಹಿಸಿ, ಒಳ್ಳೆಯದೇ ಆಗುತ್ತದೆ ಎಂದು ಭಾವಿಸಿ ಮುಂದೆ ಸಾಗಬೇಕು. ಹಾಗೆ ಒಳ್ಳೆಯದನ್ನೇ ಮಾಡುತ್ತ ಸಾಗುವಾಗ, ‘ಒಳ್ಳೆಯದನ್ನೇ ಮಾಡ್ತಿದಿಯ, ಒಳ್ಳೆಯದಾಗಲಿ, carry on’ ಅಂತ ಯಾವುದೇ ಮಾತ್ಸರ್ಯ ಇಲ್ಲದ ಹರಸುವ ಹಿತೈಷಿಗಳು ಸಿಗಬಹುದು; ಇಲ್ಲಾ.. ಮಾಡುವ ಪ್ರತಿ ಕೆಲಸದಲ್ಲೂ, ಅದು ಒಳ್ಳೆಯದೇ ಆಗಿದ್ದರೂ ಹುಳುಕು ಹುಡುಕಿ, ಹುಸಿ ಅಸಮಾಧಾನ ತೋರಿಸಿ, ಒಳಗೊಳಗೆ ಖುಷಿ ಪಡುವ ಧೂರ್ತರೂ ಎದುರಾಗಬಹುದು. ಎಲ್ಲವನ್ನೂ, ಎಲ್ಲರನ್ನೂ ಖುಷಿ-ಖುಷಿಯಿಂದಲೇ ಸ್ವೀಕರಿಸುತ್ತ ಸಾಗಬೇಕು. ಯಾಕೆಂದರೆ ಸವಿನೆನಪುಗಳು ಬೇಕು ಸವಿಯಲೀ ಬದುಕು. ಹಾಗೆ ನಿರ್ಧರಿಸಿ ಸಾಗಿದರೆ 2024ರ ಹೊಸ್ತಿಲಿನಲ್ಲಿ ನಾವೂ ನೀವೂ ಸೇರಿ ಸವಿನೆನಪುಗಳನ್ನು ಸವಿಯಲು ಸಾಧ್ಯ. ಕೊನೆಯದಾಗಿ ಈ ಜನವರಿಯ ಆದಿಯಲ್ಲೇ ಅಂತ್ಯವಾಗಲಿ ಎಲ್ಲ ಜನರ worry ಎಂಬ ಹಾರೈಕೆಯೊಂದಿಗೆ wel come to 2023. 2022ರ ನೆನಪಿನಲ್ಲೇ ಹಾಗೆ ಒಮ್ಮೆ ಕಲ್ಪಿಸಿಕೊಳ್ಳಿ, 2023ನೇ ವರ್ಷವನ್ನು ಸವಿನೆನಪಾಗಿಸಿಕೊಳ್ಳುವ ಆಯ್ಕೆ ನಿಮ್ಮ ಕೈಯಲ್ಲೇ ಇದೆ. ಆಲ್ ದಿ ಬೆಸ್ಟ್.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಕರ್ನಾಟಕದಲ್ಲೂ ನಮ್ಮ ಪರಿವಾರ ಇದೆ ಎಂಬ ಭಾವನೆ ಮೂಡಿದೆ: ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ

    ಸಂಬಂಧಿತ ಸುದ್ದಿ: ಗೋಕರ್ಣ ದೇವಸ್ಥಾನದಲ್ಲಿ ಗಾಣಿಗ ಸಮಾಜದವರಿಂದ ಪ್ರಪ್ರಥಮ ಕಾರ್ತಿಕ ಪೂಜೆ


    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!