Saturday, September 21, 2024
spot_img
More

    Latest Posts

    ಹಾರಾಡಿ ಸರ್ವೋತ್ತಮ ಗಾಣಿಗರಿಗೆ ಯಕ್ಷಸಿರಿ ಪ್ರಶಸ್ತಿ ಪ್ರದಾನ

    ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ ಪ್ರತಿಷ್ಠಿತ ‘ಯಕ್ಷಸಿರಿ’ ಪ್ರಶಸ್ತಿಗೆ ಯಕ್ಷಗಾನ ಕಲಾವಿದ ಹಾರಾಡಿ ಸರ್ವೋತ್ತಮ ಗಾಣಿಗ ಅವರು ಪಾತ್ರರಾಗಿದ್ದು, ಶನಿವಾರ ಪ್ರಶಸ್ತಿ ಪ್ರದಾನ ನಡೆಯಿತು.

    ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ಸಭಾಂಗಣದಲ್ಲಿ ನ. 7ರಂದು ನಡೆದ 2019ನೇ ಸಾಲಿನ ಪಾರ್ತಿಸುಬ್ಬ, ಗೌರವ ಮತ್ತು ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಸರ್ವೋತ್ತಮ ಗಾಣಿಗರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ. ಹೆಗಡೆ ಅವರು ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ಸಹಾಯಕ ನಿರ್ದೇಶಕ ಕುಮಾರಬಾಬು ಬೆಕ್ಕೇರಿ, ಡಾ. ಅತುಲ್‌ ಕುಮಾರ್‌ ಶೆಟ್ಟಿ, ಯಕ್ಷಗಾನ ಅಕಾಡೆಯಿ ರಿಜಿಸ್ಟ್ರಾರ್ ಎಚ್.ಎಸ್. ಶಿವರುದ್ರಪ್ಪ, ಯಕ್ಷಗಾನ ಅಕಾಡೆಮಿಯ ಸದಸ್ಯ ಸಂಚಾಲಕ ಕೆ.ಎಂ. ಶೇಖರ್, ಕೊಲ್ಲೂರು ದೇವಸ್ಥಾನದ ಅರ್ಚಕ ನರಸಿಂಹ ಭಟ್‌ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಯಕ್ಷಸಿರಿ ಪ್ರಶಸ್ತಿಯು 25 ಸಾವಿರ ರೂಪಾಯಿ ನಗರು, ಸ್ಮರಣಿಕೆ ಒಳಗೊಂಡಿದೆ.

    ಇದೇ ಸಂದರ್ಭಲ್ಲಿ ಖ್ಯಾತ ಯಕ್ಷಗಾನ ವಿಮರ್ಶಕ ಅಂಬಾತನಯ ಮುದ್ರಾಡಿ ಅವರಿಗೆ ‘ಪಾರ್ತಿಸುಬ್ಬ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ರಾಮಕೃಷ್ಣ ಗುಂದಿ ಅವರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸರ್ವೋತ್ತಮ ಗಾಣಿಗರಲ್ಲದೆ ಮಹಮ್ಮದ್‌ ಗೌಸ್‌, ಮೂರೂರು ರಾಮಚಂದ್ರ ಹೆಗಡೆ, ಎಂ.ಎನ್‌. ಹೆಗಡೆ ಹಳವಳ್ಳಿ ಅವರಿಗೂ ಯಕ್ಷಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ. ನಲ್ಲೂರು ಜನಾರ್ದನ ಆಚಾರ್ಯ ಅವರ ಪರವಾಗಿ ಅವರ ಪತ್ನಿ ಶಾರದಾ ಆಚಾರ್ಯ ಪ್ರಶಸ್ತಿ ಸ್ವೀಕರಿಸಿದರು. ಹಟ್ಟಿಯಂಗಡಿಯ ಶ್ರೀಕೃಪಾಪೋಷಿತ ಯಕ್ಷಗಾನ ಮಂಡಳಿಯ ಭೀಷ್ಮವಿಜಯ ಪ್ರಸಂಗದ ಪ್ರದರ್ಶನದೊಂದಿಗೆ ಸಮಾರಂಭ ಸಮಾಪ್ತಿಗೊಂಡಿತು.

    ಯಕ್ಷಗಾನದಲ್ಲಿ ವಿಶೇಷ ಸೇವೆ ಸಲ್ಲಿಸಿ ಇತ್ತೀಚೆಗೆ ಅಗಲಿದ ಮಲ್ಪೆ ವಾಸುದೇವ ಸಾಮಗ, ನಲ್ಲೂರು ಜನಾರ್ದನ ಆಚಾರ್ಯ, ಶಿಮಂತೂರು ಲಕ್ಷ್ಮಣ ಕಾಂಚನ್‌ ಅವರಿಗೆ ಇದೇ ವೇಳೆ ನುಡಿನಮನ ಸಲ್ಲಿಸಲಾಯಿತು.

    ಸರ್ವೋತ್ತಮ ಗಾಣಿಗ

    ಸರ್ವೋತ್ತಮ ಗಾಣಿಗರ ಕಿರು ಪರಿಚಯ

    ಯಕ್ಷಗಾನದಲ್ಲಿ ಪ್ರಪ್ರಥಮ ರಾಷ್ಟ್ರಪ್ರಶಸ್ತಿ ಪಡೆದವರು ಹಾರಾಡಿ ರಾಮ ಗಾಣಿಗ. ಯಕ್ಷಗಾನದಲ್ಲಿ ಪ್ರಸಿದ್ಧಿ ಪಡೆದಿರುವ ಅದೇ ಹಾರಾಡಿ ಮನೆತನದವರೇ ಸರ್ವೋತ್ತಮ ಗಾಣಿಗ. ಮಂದರ್ತಿ ಮೇಳದ ಮೂಲಕ ಇವರು ಹದಿನಾಲ್ಕನೇ ವಯಸ್ಸಿನಲ್ಲೇ ರಂಗಪ್ರವೇಶ ಮಾಡಿದರು. ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿದ್ದ ಇವರು ನೀಲಾವರ ರಾಮಕೃಷ್ಣಯ್ಯ, ಹಿರಿಯಡ್ಕ ಗೋಪಾಲರಾಯರು, ವೀರಭದ್ರ ನಾಯಕರಿಂದ ಶಾಸ್ತ್ರೋಕ್ತವಾಗಿ ರಂಗಶಿಕ್ಷಣ ಪಡೆದಿದ್ದಾರೆ. ಬಳಿಕ ಮಾರಣಕಟ್ಟೆ, ಕೋಟ, ಸಾಲಿಗ್ರಾಮ, ಸೌಕೂರು ಮುಂತಾದ ಮೇಳಗಳಲ್ಲೂ ತಮ್ಮ ಯಕ್ಷಪ್ರತಿಭೆ ಮೆರೆದಿದ್ದಾರೆ. ಪರಿಪೂರ್ಣ ಹೆಜ್ಜೆಗಾರಿಕೆ, ಖಚಿತ ಲಯಗಾರಿಕೆ, ಪರಿಶುದ್ಧ ಭಾಷಾ ಪ್ರೌಢಿಮೆ, ಪುರಾಣ ಪ್ರಜ್ಞೆ, ಸುದೀರ್ಘ ರಂಗಾನುಭವ ಹೊಂದಿರುವ ಸರ್ವೋತ್ತಮ ಗಾಣಿಗರು ಶ್ರೇಷ್ಠ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!