Sunday, September 22, 2024
spot_img
More

    Latest Posts

    ಗಂಡ-ಹೆಂಡತಿ ಇಬ್ಬರಿಗೂ ಇಲ್ಲ ಆರಾಮ, ನೆರವಿನ ನಿರೀಕ್ಷೆಯಲ್ಲಿದ್ದಾರೆ ಈ ರಾಮ…

    ಬೆಂಗಳೂರು: ಪತ್ನಿಗೆ ಹೃದ್ರೋಗ ಸಮಸ್ಯೆ, ಪತಿಗೆ ಗುಣವೇ ಆಗದ ಕಾಲಿನ ಸಮಸ್ಯೆ, ಜೊತೆಗೊಬ್ಬಳು ಮಗಳು ಇನ್ನೂ ಚಿಕ್ಕವಳು, ಇನ್ನೊಂದೆಡೆ ಸರ್ಕಾರಿ ಯೋಜನೆಯನ್ನು ನಂಬಿ ಕಟ್ಟಿದ ಮನೆಗೆ ಹಣ ಮಂಜೂರಾಗದೆ ಉಂಟಾಗಿರುವ ಸಾಲದ ಹೊರೆ, ಇವೆಲ್ಲದರ ಜೊತೆಗೆ ದುಡಿಯಲು ಮೈಯಲ್ಲಿ ಕಸುವಿಲ್ಲ, ಚಿಕಿತ್ಸೆ ಪಡೆಯಲು ಕೈಯಲ್ಲಿ ಕಾಸಿಲ್ಲ.. -ಹೀಗೆ ಚಿಂತೆಯಲ್ಲೇ ಬದುಕು ಸಾಗಿಸುತ್ತಿರುವ ಈ ಕುಟುಂಬ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದೆ.

    ಬೈಂದೂರು ತಾಲೂಕಿನ ಕಂಬದಕೋಣೆ ಗ್ರಾಮದ ಹಳಗೇರಿ ಮುಲ್ಲಿಮನೆ ನಿವಾಸಿ ರಾಮಕೃಷ್ಣ ಗಾಣಿಗರು ಇಂಥದ್ದೊಂದು ಚಿಂತಾಜನಕ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಹೋಟೆಲ್ ಕಾರ್ಮಿಕರಾಗಿದ್ದ ಇವರು ತಮಗೆ ಕಾಣಿಸಿಕೊಂಡ ಕಾಲುನೋವಿನಿಂದಾಗಿ ಮೂರು ವರ್ಷಗಳ ಹಿಂದೆ ತೀವ್ರ ಅನಾರೋಗ್ಯಕ್ಕೀಡಾದರು. ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಕಾಲುನೋವು ಗುಣವಾಗಲಿಲ್ಲ. ಸೂಕ್ತ ಚಿಕಿತ್ಸೆ ಪಡೆಯಲಾಗದ ಕಾರಣ ಇವರ ಕಾಲಿನ ಊತ ಕ್ರಮೇಣ ಅಧಿಕವಾಗಿದೆ. ಇದನ್ನು ಗುಣಪಡಿಸಬೇಕಾದರೆ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ. ಆದರೆ ದಿನವಹಿ ಖರ್ಚಿಗೂ ಪರದಾಡುತ್ತಿರುವ ರಾಮಕೃಷ್ಣ ಗಾಣಿಗರು ಅತ್ತ ದೊಡ್ಡ ಮೊತ್ತ ಹೊಂದಿಸಲಾಗದೆ, ಇತ್ತ ಅನಾರೋಗ್ಯದ ಕಾರಣ ಹೆಚ್ಚು ದುಡಿಯಲೂ ಆಗದೆ ಭಾರಿ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ.

    ನೋವಿನ ಬರೆ, ಸಾಲದ ಹೊರೆ: ನೋವಿನ ಬರೆ ಅನುಭವಿಸುತ್ತಿರುವ ಈ ಕುಟುಂಬಕ್ಕೆ ಮತ್ತೊಂದೆಡೆ ಸಾಲದ ಹೊರೆ ಕೂಡ ಕಾಡುತ್ತಿದೆ. ಆಸರೆಗಿದ್ದ ಒಂದು ಸಣ್ಣ ಸೂರು ಮಳೆಗಾಲದಲ್ಲಿ ಕುಸಿದ ಕಾರಣ, ಸರ್ಕಾರದ ಆಶ್ರಯ ಯೋಜನೆಯಡಿ ಮನೆ ಕಟ್ಟಲು ಮುಂದಾದರು. ಆದರೆ ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆಯಾಗದ್ದರಿಂದ ಮನೆ ಪೂರ್ತಿಗೊಳಿಸಲು ಮಾಡಿದ ಸಾಲವೂ ಇವರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

    ಸದ್ಯ ಗೇರುಬೀಜ ಕಾರ್ಖಾನೆಯೊಂದಕ್ಕೆ ಗೇರುಬೀಜ ಸಂಸ್ಕರಿಸಿ ಕೊಡುತ್ತಿರುವುದಕ್ಕೆ ವಾರಕ್ಕೊಮ್ಮೆ ಸಿಗುತ್ತಿರುವ 250-300 ರೂಪಾಯಿಯಷ್ಟೇ ಈ ಕುಟುಂಬದ ಜೀವನೋಪಾಯಕ್ಕಿರುವ ದುಡಿಮೆ. ಹೀಗಾಗಿ ಈ ಕುಟುಂಬ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದೆ. ಸಹಾಯ ಮಾಡಲು ಬಯಸುವವರು ಇವರ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಬಹುದು.

    ಖಾತೆ ವಿವರ
    ಖಾತೆದಾರರ ಹೆಸರು: ರಾಮಕೃಷ್ಣ
    ಎಸ್‌ಬಿ ಖಾತೆ ಸಂಖ್ಯೆ: 4222500101410501
    ಐಎಫ್ಎಸ್‌ಸಿ: KARB0000422
    ಬ್ಯಾಂಕ್: ಕರ್ಣಾಟಕ ಬ್ಯಾಂಕ್
    ಶಾಖೆ: ಕಿರಿಮಂಜೇಶ್ವರ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!