Sunday, September 22, 2024
spot_img
More

    Latest Posts

    ಯಕ್ಷಗಾನ ಅಭ್ಯಾಸದಿಂದ ಶರೀರ, ಶಾರೀರ, ಬುದ್ಧಿಶಕ್ತಿ, ಆರೋಗ್ಯ ವೃದ್ಧಿ

    ಬೆಂಗಳೂರು: ಯಕ್ಷಗಾನ ಅಭ್ಯಾಸದಿಂದ ಶರೀರ, ಶಾರೀರ, ಬುದ್ಧಿಶಕ್ತಿ, ಆರೋಗ್ಯ ವೃದ್ಧಿಸುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಶ್ರೀನಿವಾಸ ಸಾಸ್ತಾನ ಅವರು ಹೇಳಿದರು.

    ಸೋಮಕ್ಷತ್ರಿಯ ಗಾಣಿಗ ಸಮಾಜ (ರಿ.) ಬೆಂಗಳೂರು ಇವರು ಆರಂಭಿಸಿರುವ ‘ಯಕ್ಷಗಾನ ತರಬೇತಿ ತರಗತಿ’ಯನ್ನು ಸಾಂಕೇತಿಕವಾಗಿ ಉದ್ಘಾಟಿಸಿ ಅವರು ಮಾತನಾಡಿದರು. ಸೋಮಕ್ಷತ್ರಿಯ ಗಾಣಿಗ ಸಮಾಜದ 2019-20ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಡಿ. 27ರಂದು ಚಾಮರಾಜಪೇಟೆಯ ರಾಯರಾಯ ಕಲ್ಯಾಣ ಮಂಟಪದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಯಕ್ಷಗಾನ ತರಬೇತಿ ತರಗತಿಯನ್ನು ಉದ್ಘಾಟಿಸಲಾಯಿತು.

    ಶ್ರೀನಿವಾಸ ಸಾಸ್ತಾನ ಅವರಿಗೆ ಅಧ್ಯಕ್ಷ ಎಚ್.ಟಿ.ನರಸಿಂಹ ಅವರಿಂದ ಸನ್ಮಾನ. ಗೌರವಾಧ್ಯಕ್ಷ ಬಿ.ಎಸ್. ಮಂಜುನಾಥ್, ಯು.ಎ. ರಘುನಾಥ್, ರಾಜೇಂದ್ರ ಗಾಣಿಗ ಉಪಸ್ಥಿತರಿದ್ದರು.
    ಯಕ್ಷಗುರು ಕೃಷ್ಣಮೂರ್ತಿ ತುಂಗ ಅವರಿಗೆ ಗೌರವಾಧ್ಯಕ್ಷ ಬಿ.ಎಸ್. ಮಂಜುನಾಥ್ ಅವರಿಂದ ಸನ್ಮಾನ. ಶ್ರೀನಿವಾಸ ಸಾಸ್ತಾನ, ಎಚ್.ಟಿ.ನರಸಿಂಹ, ಶಂಕರ್ ರಾವ್, ಜಿ.ಆರ್. ಚಂದ್ರಯ್ಯ, ಎಂ.ಗೋಪಾಲಕೃಷ್ಣ ಉಪಸ್ಥಿತರಿದ್ದರು.

    ಯಕ್ಷಗಾನ ಕಲೆಯನ್ನು ಸೋಮಕ್ಷತ್ರಿಯ ಗಾಣಿಗ ಸಮಾಜದವರು ಬೆಳೆಸಿಕೊಂಡು ಬಂದರು. ಮಂದರ್ತಿ ಮೇಳದಲ್ಲಿ ಗಾಣಿಗ ಕಲಾವಿದರು ಒಬ್ಬರಾದರೂ ಇರಲೇಬೇಕು. ಅಷ್ಟರಮಟ್ಟಿಗೆ ಗಾಣಿಗ ಸಮಾಜಕ್ಕೂ ಯಕ್ಷಗಾನಕ್ಕೂ ನಂಟಿದೆ. ಪ್ರತಿಯೊಬ್ಬರಿಗೂ ನೆಲದ ಋಣ ಅಂತಿದೆ. ಹೀಗಾಗಿ ಅನೇಕರು ಯಕ್ಷಗಾನ ಕಲೆಯನ್ನು ಕಲಿತು ಬೆಳೆದು ಉಳಿಸಿಕೊಂಡು ಬಂದಿದ್ದಾರೆ ಎಂದು ಅವರು ಯಕ್ಷಗಾನಕ್ಕೆ ಗಾಣಿಗ ಸಮಾಜ ನೀಡಿರುವ ಕೊಡುಗೆಯನ್ನು ಶ್ಲಾಘಿಸಿದರು.

    ಉಪಾಧ್ಯಕ್ಷ ಜಿ.ಆರ್.ಚಂದ್ರಯ್ಯ ಅವರಿಂದ ಮಾತು.

    ಆಸಕ್ತರು ಈ ಕಲೆಯನ್ನು ಕಲಿಯಬೇಕು. ಅಂಥವರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಾಯ ಮಾಡುತ್ತದೆ. ಯಕ್ಷಗಾನ ಕಲಿಯುವುದರಿಂದ ಶರೀರ, ಶಾರೀರ, ಬುದ್ಧಿಶಕ್ತಿ ವೃದ್ಧಿಸುತ್ತದೆ. ೧೦-೧೨ ವರ್ಷಗಳ ಹಿಂದೆ ಮಕ್ಕಳ ಯಕ್ಷಗಾನ ಮಾಡುತ್ತಿದ್ದಾಗ ಒಬ್ಬನಿಗೆ ಅಸ್ತಮಾ ಸಮಸ್ಯೆ ಇತ್ತು. ಯಕ್ಷಗಾನ ಅಭ್ಯಾಸ ಮಾಡುತ್ತ ಕ್ರಮೇಣ ಅದು ಸರಿಹೋಯಿತು. ಹೀಗೆ ಯಕ್ಷಗಾನದಿಂದ ಆರೋಗ್ಯವೂ ಸುಧಾರಿಸುತ್ತದೆ ಎಂದ ಅವರು, ಕನ್ನಡ ಬರವಣಿಗೆ, ಬೆಳವಣಿಗೆಗೂ ಯಕ್ಷಗಾನದ ಕೊಡುಗೆ ದೊಡ್ಡದು. ಈ ಕಲೆಯನ್ನು ಉಳಿಸಿ ಬೆಳೆಸಬೇಕಾದ್ದು ನಮ್ಮೆಲ್ಲರ ಕರ್ತವ್ಯ ಎಂದರು.

    ಸಮಾರಂಭಕ್ಕೆ ಆಗಮಿಸಿದ್ದ ಸಮಾಜ ಬಾಂಧವರು ಮತ್ತು ವಿದ್ಯಾರ್ಥಿಗಳು

    ಯಕ್ಷಗಾನ ತರಬೇತಿ ತರಗತಿಯ ಗುರುಗಳಾದ ಕೃಷ್ಣಮೂರ್ತಿ ತುಂಗ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ ಬಿ.ಎಸ್. ಮಂಜುನಾಥ್, ಅಧ್ಯಕ್ಷ ಎಚ್.ಟಿ. ನರಸಿಂಹ, ಕೋಶಾಧಿಕಾರಿ ಕುತ್ಪಾಡಿ ಎಂ. ಶೇಖರ್, ಸಮಾಜದ ಹಿರಿಯರಾದ ಯು.ಎ. ರಘುನಾಥ್, ಪದಾಧಿಕಾರಿಗಳಾದ ಎಂ. ಗೋಪಾಲಕೃಷ್ಣ, ಪ್ರಕಾಶ್ಚಂದ್ರ ಕುತ್ಪಾಡಿ, ರಾಜೇಂದ್ರ ಗಾಣಿಗ, ಭಾಸ್ಕರ್ ಕುಂದಾಪುರ, ಜಿ.ಆರ್. ಚಂದ್ರಯ್ಯ, ಶಂಕರ್ ರಾವ್, ಜಗದೀಶ್, ಶ್ರೀಧರ ನಾಗೂರು, ಶಿಲ್ಪಾ ನಾಗೇಶ್, ಆಟೋ ರಾಜಾ ಮುಂತಾದವರು ಉಪಸ್ಥಿತರಿದ್ದರು.

    ಮಂಜುನಾಥ್ ಚಾಂದ್ ರಚಿತ ‘ಅಮ್ಮ ಕೊಟ್ಟ ಜಾಜಿ ದಂಡೆ’ ಕೃತಿಯ ಪ್ರತಿಗಳು ಮತ್ತು ಸ್ಮರಣಿಕೆಗಳು.
    ವಿದ್ಯಾರ್ಥಿಗಳ ಪುರಸ್ಕಾರಕ್ಕೆ ಸ್ಮರಣಿಕೆಗಳು

    ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪ್ರದಾನ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ವನ್ನು ಇದೇ ಸಂದರ್ಭದಲ್ಲಿ ನಡೆಸಲಾಯಿತು. ಸಮಾಜದ ವಿದ್ಯಾರ್ಥಿಗಳಲ್ಲಿ ಪಠ್ಯೇತರ ಓದಿನ ಆಸಕ್ತಿ ಹೆಚ್ಚಿಸುವ ಸಲುವಾಗಿ ಸಮಾಜದವರೇ ಆಗಿರುವ ಪತ್ರಕರ್ತ-ಕಥೆಗಾರ ಮಂಜುನಾಥ ಚಾಂದ್ ಅವರ ‘ಅಮ್ಮ ಕೊಟ್ಟ ಜಾಜಿ ದಂಡೆ’ ಕೃತಿಯ ಪ್ರತಿಗಳನ್ನು ರಮೇಶ್ ಗಾಣಿಗ ಮಟಪಾಡಿ ಹಾಗೂ ಸಂತೋಷ್ ಕೋಡಿ ಅವರು ಸ್ವಂತ ಖರ್ಚಿನಲ್ಲಿ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದರು.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!