Sunday, September 22, 2024
spot_img
More

    Latest Posts

    ಗಾಣಿಗರಿಗೆ ಎಸ್‌ಟಿ ಮೀಸಲಾತಿ ಬೇಡ, ಗಾಣಿಗ ಅಭಿವೃದ್ಧಿ ನಿಗಮ ಬೇಕೇಬೇಕು..

    ಬೆಂಗಳೂರು: “ಹಿಂದುವಳಿದ ವರ್ಗದಲ್ಲಿ ಗಾಣಿಗರಿಗೆ ಮೀಸಲಾತಿ ಎಷ್ಟಿದೆಯೋ ಅದು ಮುಂದುವರಿಯಲಿ, ಆದರೆ ಗಾಣಿಗರಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ಬೇಡ. ಒಂದುವೇಳೆ ಇತರ ಹಿಂದುಳಿದ ವರ್ಗ (ಒಬಿಸಿ) ಪಟ್ಟಿಯಲ್ಲಿ ಬೇರೆ ಜಾತಿಗಳನ್ನು ಸೇರಿಸಿದರೆ ಆಗ ಗಾಣಿಗ ಸಮುದಾಯಕ್ಕೂ ಪ್ರತ್ಯೇಕ ಮೀಸಲಾತಿ ನಿಗದಿ ಪಡಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಗಾಣಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು..”

    ಇದು ಬಾಗಲಕೋಟೆ ಜ್ಯೋತಿ ಬ್ಯಾಂಕ್ ಸಭಾಭವನದಲ್ಲಿ ಫೆ. 14ರ ಭಾನುವಾರ ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯ. ಅಖಿಲ ಭಾರತ ಗಾಣಿಗ ಸಮಾಜದ ಆಶ್ರಯದಲ್ಲಿ ವಿಜಯಪುರದ ಗಾಣಿಗ ಗುರುಪೀಠದ ಜಗದ್ಗುರು ಡಾ.ಜಯಬಸವಕುಮಾರ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಗಾಣಿಗ ಸಮಾಜಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ಚರ್ಚಿಸಿ ಈ ಕೆಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

    ‘ಗಾಣಿಗ ಸಮಾಜ ಹಿಂದುಳಿದಿರುವ ಕಾರಣ ಈಗಾಗಲೇ ಅದನ್ನು 2ಎ ವರ್ಗಕ್ಕೆ ಸೇರಿಸಲಾಗಿದೆ. ಆದರೆ ನಮ್ಮ ಸಮಾಜವು ಬುಡಕಟ್ಟು ಸಂಸ್ಕೃತಿ ಹೊಂದಿರದ ಕಾರಣ ಅದನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಅಗತ್ಯವಿಲ್ಲ, ಆ ಬಗ್ಗೆ ಯಾವುದೇ ಹೋರಾಟ ಬೇಡ. ಆದರೆ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ 1 ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಡಬೇಕು’ ಎಂಬ ಆಗ್ರಹಪೂರ್ವಕ ನಿರ್ಣಯವನ್ನು ಸಭೆಯಲ್ಲಿ ತಳೆಯಲಾಯಿತು.

    ಬಾಗಲಕೋಟೆಯಲ್ಲಿ ಫೆ. 14ರ ಭಾನುವಾರ ನಡೆದ ಸಭೆಯಲ್ಲಿ ವಿಜಯಪುರದ ಗಾಣಿಗ ಗುರುಪೀಠದ ಜಗದ್ಗುರು ಡಾ. ಜಯಬಸವಕುಮಾರ ಸ್ವಾಮೀಜಿ ಅವರಿಗೆ ಅಖಿಲ ಭಾರತ ಗಾಣಿಗ ಸಮಾಜದ ಪದಾಧಿಕಾರಿಗಳಿಂದ ಸನ್ಮಾನ.

    ಅಖಿಲ ಭಾರತ ಗಾಣಿಗ ಸಮಾಜದ ಅಧ್ಯಕ್ಷ ಗುರಣ್ಣ ಗೋಡಿ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಜಿಲ್ಲಾ ಅಧ್ಯಕ್ಷ ಅಶೋಕ ಲಾಗಲೋಟಿ, ಪ್ರಧಾನ ಕಾರ್ಯದರ್ಶಿ ನಿಂಗಣ್ಣ ಗೋಡಿ ಜೊತೆಗೆ ಸಮಾಜದ ಮುಖಂಡರಾದ ಸಂತೋಷ ಹೊಕ್ರಾಣಿ, ಪ್ರಕಾಶ ಅಂತರಗೊಂಡ, ಬಸವಪ್ರಭು ಸರನಾಡಗೌಡ, ದುಂಡಪ್ಪ ಏಳಮ್ಮಿ, ಕುಮಾರ ಯಳ್ಳಿಗುತ್ತಿ ಮುಂತಾದವರು ಉಪಸ್ಥಿತರಿದ್ದರು.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!