Saturday, September 21, 2024
spot_img
More

    Latest Posts

    ಕುಂದಗನ್ನಡಿಗರ ತಾಯ್ನುಡಿಗೆ ಕಲರ್ಸ್ ಕನ್ನಡ ಕಲರ್‌ಫುಲ್ ಕೊಡುಗೆ

    • ವಿಶ್ವ ತಾಯ್ನುಡಿ ದಿನ ಪ್ರಯುಕ್ತ ‘ಕುಂದಾಪ್ರ ಕನ್ನಡ’ದಲ್ಲಿ ‘ಶಾಂತಂ ಪಾಪಂ’

    ಬೆಂಗಳೂರು: ‘ಕಾಣದ ಕಡಲಿಗೆ ಹಂಬಲಿಸಿದೆ ಮನ..’ ಎಂದು ಒಮ್ಮೆಯಾದರೂ ಹೇಳಿಕೊಳ್ಳದವರು ಇರಲಿಕ್ಕಿಲ್ಲ. ಅದರಲ್ಲೂ ಕಡಲ ತೀರದಲ್ಲೇ ಹುಟ್ಟಿ ಬೇರೆಲ್ಲೋ ಬದುಕು ಕಟ್ಟಿಕೊಂಡು ಬೆಳೆಯುತ್ತಿರುವ ಕುಂದಗನ್ನಡಿಗರದ್ದೂ ಒಮ್ಮೊಮ್ಮೆ ಹೀಗೆ ‘ಕಾಣದ ಕಡಲಿಗೆ ಹಂಬಲಿಸಿದೆ ಮನ..’ ಎಂಬಂಥ ಪರಿಸ್ಥಿತಿ. ಊರಿನಿಂದ ದೂರವಿದ್ದೂ ಊರಿನ ಹಂಬಲದಲ್ಲೇ ಇರುವ, ಊರಲ್ಲಿದ್ದೂ ‘ಕಾಣದ ಕನಸಿನ ಕಡಲಿಗೆ’ ಹಂಬಲಿಸುತ್ತಿರುವ ಎಲ್ಲ ಕುಂದಗನ್ನಡಿಗರಿಗೂ ‘ಕಲರ್ಸ್ ಕನ್ನಡ’ ವಾಹಿನಿ ಫೆ. 22ರ ಈ ರಾತ್ರಿಯನ್ನು ಸ್ಮರಣೀಯಗೊಳಿಸಲು ಮುಂದಾಗಿದೆ. ಏಕೆಂದರೆ ಫೆ. 21ರ ‘ಅಂತಾರಾಷ್ಟ್ರೀಯ ಮಾತೃಭಾಷಾ ದಿನ’ ಪ್ರಯುಕ್ತ ವಿಶೇಷ ಸಂಚಿಕೆಯೊಂದನ್ನು ‘ಕುಂದಾಪುರ ಕನ್ನಡ’ದಲ್ಲೇ ‘ಕಲರ್ಸ್ ಕನ್ನಡ’ ಪ್ರಸಾರ ಮಾಡಲಿದೆ. ಆ ಮೂಲಕ ವಿಶ್ವ ಮಾತೃಭಾಷಾ ದಿನದಂದು ಕುಂದಗನ್ನಡಿಗರ ತಾಯ್ನುಡಿಗೆ ಕಲರ್‌ಫುಲ್ ಕೊಡುಗೆ ನೀಡಲಿದೆ ಕಲರ್ಸ್ ಕನ್ನಡ.

    ಹೌದು.. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಶಾಂತಂ ಪಾಪಂ’ ಸರಣಿಯಲ್ಲಿ ಈ ಸೋಮವಾರ ರಾತ್ರಿ ಹತ್ತು ಗಂಟೆಗೆ ವಿಶೇಷ ಸಂಚಿಕೆ ‘ಕಡಲೂರ ಕನಸುಗಳು’ ಪ್ರಸಾರವಾಗಲಿದೆ. ಇದು ಫೆಬ್ರವರಿ 21ರಂದು ಆಚರಿಸುವ ವಿಶ್ವ ತಾಯ್ನುಡಿ ದಿನಾಚರಣೆಯ ಉಡುಗೊರೆ. ಕನ್ನಡ ನಮ್ಮೆಲ್ಲರ ತಾಯ್ನುಡಿ ಹಾಗೂ ಕರ್ನಾಟಕದಾದ್ಯಂತ ಕನ್ನಡ ಭಾಷೆಯಲ್ಲಿ ವಿವಿಧತೆ ಮತ್ತು ವಿಭಿನ್ನ ಸೊಗಡುಗಳಿವೆ. ಅವುಗಳಲ್ಲಿ ಒಂದು ‘ಕುಂದಾಪ್ರ ಕನ್ನಡ’. ಟಿವಿ ಮಾಧ್ಯಮದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ‘ಕುಂದಾಪ್ರ ಕನ್ನಡ’ವನ್ನು ಬಳಸಿರುವ ಸತ್ಯಘಟನೆ ಆಧಾರಿತ ‘ಕಡಲೂರ ಕನಸುಗಳು’ ವಿಶೇಷ ಸಂಚಿಕೆ ಫೆಬ್ರವರಿ 22ರ ರಾತ್ರಿ 10ಕ್ಕೆ ಪ್ರಸಾರವಾಗಲಿದೆ.

    ಸಾಗರ, ಕಡಲು, ವಾರಿಧಿ.. ಎಂದೆಲ್ಲ ಕರೆಯಲ್ಪಡುವ, ಅಗಾಧ ಜಲರಾಶಿ-ಜೀವರಾಶಿಯನ್ನು ನೀಡಿ ತನ್ನ ಒಡಲಿನಲ್ಲಿ ಅಡಗಿಸಿಕೊಂಡಿರುವ ಈ ಸಮುದ್ರದ ಜೊತೆ ಮನುಷ್ಯನ ಸಂಬಂಧ ಅತ್ಯಂತ ವಿಶಿಷ್ಟ, ವಿಚಿತ್ರ ಹಾಗೂ ವಿಶೇಷವಾದದ್ದು. ಕಡಲಿನ ಆಕರ್ಷಣೆ ಯಾವತ್ತಿಗೂ ಮನುಷ್ಯನನ್ನು ಬಿಟ್ಟಿಲ್ಲ, ಮನುಷ್ಯನನ್ನು ಹಲವಾರು ಸಾಹಸಗಳಿಗೆ ಪ್ರಚೋದಿಸಿದ್ದೇ ಈ ಸಮುದ್ರ ಎಂದರೂ ಅತಿಶಯೋಕ್ತಿಯಲ್ಲ. ಇನ್ನು ಈ ಕಡಲಿನ ಮಕ್ಕಳೇ ಆದ ಮೀನುಗಾರರಿಗೂ ಕಡಲಿಗೂ ಇರುವ ಸಂಬಂಧವೇ ವಿಶಿಷ್ಟ. ಈ ಕಡಲು ಇವರಿಗಾಗಿ ಇದೆಯೋ, ಇವರು ಕಡಲಿಗಾಗಿ ಇದ್ದಾರೋ ಹೇಳುವುದು ಕಷ್ಟ. ಇವರಿಬ್ಬರ ಸಂಬಂಧ ಒಂದು ರೀತಿ ಪ್ರೀತಿ-ಸಂಘರ್ಷದ ಕಥೆ ಎನ್ನಬಹುದು. ಕಡಲು ಇವರಿಗೆ ಜೀವನವೂ ಹೌದು. ಕೆಲವೊಮ್ಮೆ ಮೈಮರೆತರೆ ಕಡಲು ಇವರ ಪಾಲಿಗೆ ಮೃತ್ಯುವೂ ಹೌದು.

    ಕಥಾಹಂದರ: ನಾಲ್ಕು ಮಕ್ಕಳ ತಂದೆ ನಾರಾಯಣ ಕಡಲನ್ನೇ ನಂಬಿ ಜೀವನ ನೆಡೆಸುತ್ತಿದ್ದವನು. ಆದರೆ ಅದೇ ಕಡಲು ಅವನನ್ನ ತನ್ನ ಒಡಲೊಳಗೆ ಸೆಳೆದುಕೊಂಡು ಅವನ ನಾಲ್ಕು ಮಕ್ಕಳನ್ನ ಅನಾಥರನ್ನಾಗಿ ಮಾಡಿದೆ. ಆದರೆ ಮನುಷ್ಯನ ಬದುಕಿಗಾಗಿನ ಹೋರಾಟ ಇದೆಯಲ್ಲ, ಅದು ಕಡಲಿಗಿಂತ ದೊಡ್ಡದು. ನಾರಾಯಣನ ಮಗಳು ರುಕ್ಕೂ, ತನ್ನ ತಮ್ಮ-ತಂಗಿಯರಿಗೆ ಆಸರೆಯಾಗಿ ನಿಂತು ಅವರನ್ನು ಬದುಕಿನ ದಡ ಸೇರಿಸಲು ಹೋರಾಡುತ್ತಾಳೆ. ಈ ಹೋರಾಟದಲ್ಲಿ ಈ ನಾಲ್ವರು ಮಕ್ಕಳ ಏಳು-ಬೀಳಿನ ಕಥೆಯೇ ‘ಕಡಲೂರ ಕನಸುಗಳು’.

    ಸುಂದರ ಚಿತ್ರಣ: ಕರಾವಳಿ ತೀರದ ಗಂಗೊಳ್ಳಿ ಬಳಿಯ ಸಮುದ್ರ ತೀರದಲ್ಲಿ ಸುಂದರ ತಾಣಗಳಲ್ಲಿ ಚಿತ್ರೀಕರಣ ಗೊಂಡಿರುವ ಈ ವಿಶೇಷ ಸಂಚಿಕೆ ಕಡಲೊಂದಿಗಿನ ಮನುಷ್ಯನ ಪ್ರೀತಿ, ಸಂಘರ್ಷ, ಹೋರಾಟ ಹಾಗೂ ಬದುಕಿನ ಕಥೆ ಹೇಳುತ್ತದೆ. ಕಡಲನೀರು ಉಪ್ಪಾಗಿರುವುದು ಕಡಲತೀರದ ಬದುಕಿನ ಕಣ್ಣೀರು ಸೇರಿರುವುದರಿಂದಲೇ ಅಲ್ಲವೇ? ಅಲ್ಲಿ ನೂರಾರು ಹೋರಾಟ ಹಾಗೂ ಸಂಘರ್ಷದ ಕಥೆಗಳಿವೆ. ಅಂತಹ ಅಪರೂಪದ ಕಥೆಯನ್ನು ಹೆಕ್ಕಿ ‘ಕಲರ್ಸ್ ಕನ್ನಡ’ ತಂಡ ವೀಕ್ಷಕರ ಮುಂದೆ ಪ್ರಸ್ತುತ ಪಡಿಸುತ್ತಿದೆ.

    ಕಥೆ ಡಾವೆಂಕಿ: ಕಡಲಾಳದ ಮುತ್ತುಗಳನ್ನು ಹೆಕ್ಕಿ ಕಥೆಯಾಗಿಸಿದವರು ವೈದ್ಯ, ಪತ್ರಕರ್ತ ಹಾಗೂ ಈಗ ಕಥೆಗಾರ ಆಗಿರುವ ಕ್ರಿಯೇಟಿವ್ ಡಾವೆಂಕಿ. ಹೌದು.. ಡಾವೆಂಕಿ ಎಂದೇ ಜನಜನಿತರಾಗಿರುವ ಕರಾವಳಿಯ ಕುಂದಾಪುರ ಮೂಲದವರೇ ಆಗಿರುವ ಡಾ.ವೆಂಕಟೇಶ್ ರಾವ್ ಈ ಕಡಲೂರ ಕನಸುಗಳ ಕಥೆಯನ್ನು ಹೆಣೆದಿದ್ದಾರೆ. ಡಾವೆಂಕಿ ಅವರ ಕಥೆಯನ್ನು ಈ ಸಂಚಿಕೆಯ ನಿರ್ದೇಶಕ ನವೀನ್ ಸೋಮನಹಳ್ಳಿ ತಮ್ಮ ಕಲ್ಪನೆ ಕುಸುರಿಯ ಮೂಲಕ ತೆರೆಯ ಮೇಲೆ ತಂದಿದ್ದಾರೆ. ಈ ಎಪಿಸೋಡಿಗೆ ಜಗದೀಶ್ ಭಾವೆ ಚಿತ್ರಕಥೆ, ಅನಂತ್ ಶಾಂದ್ರೇಯ ಸಂಭಾಷಣೆ, ರವಿ ಕನಕಪುರ ಛಾಯಾಗ್ರಹಣವಿದ್ದು, ರವೀಣ್ ಕುಮಾರ್ ಅವರ ನಿರ್ಮಾಣದಲ್ಲಿ ಇದು ಮೂಡಿಬಂದಿದೆ. ಪಾತ್ರವರ್ಗದಲ್ಲಿ ಚಿತ್ರನಟಿ ಕಾವ್ಯಾ ಗೌಡ, ಅರುಣ್ ಕುಮಾರ್ ಮುಂತಾದವರು ಅಭಿನಯಿಸಿದ್ದಾರೆ.

    ಡಾ.ವೆಂಕಟೇಶ್ ರಾವ್

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!