Sunday, September 22, 2024
spot_img
More

    Latest Posts

    ಎರಡೆರಡು ಗನ್‌ನಲ್ಲಿ ಲುಕ್ ಕೊಟ್ಟ ಗುರು; ದತ್ತ ಈಗ 1999ರತ್ತ…

    ಬೆಂಗಳೂರು: ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾ ಮೂಲಕ ಚಿತ್ರರಂಗದಲ್ಲಿ ನಿರ್ದೇಶಕನಾಗಿಯೂ ಪದಾರ್ಪಣೆ ಮಾಡಿರುವ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಗುರುದತ್ ಗಾಣಿಗ, ಈಗ ಎರಡೆರಡು ಗನ್‌ಗಳ ಮೂಲಕ ‘ಲುಕ್’ ಕೊಟ್ಟು 1999ರತ್ತ ಮುಖ ಮಾಡಿದ್ದಾರೆ. ಅಂದರೆ ಅವರೀಗ ಮತ್ತೊಂದು ಸಿನಿಮಾ ನಿರ್ದೇಶನಕ್ಕೂ ಮುಂದಾಗಿದ್ದು, ತಮ್ಮ ನೂತನ ಸಿನಿಮಾದ ಫಸ್ಟ್‌ಲುಕ್ ಇದೇ ಮಹಾಶಿವರಾತ್ರಿಯಂದು ಅನಾವರಣಗೊಳಿಸಿದ್ದಾರೆ.

    ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಹಾಗೂ ಅದಿತಿ ಪ್ರಭುದೇವ ನಾಯಕ-ನಾಯಕಿಯರಾಗಿ ಅಭಿನಯಿಸಲಿರುವ ಈ ಚಿತ್ರದ ಶೀರ್ಷಿಕೆ ಇನ್ನೂ ಪ್ರಕಟಿಸದ ಅವರು, ಸದ್ಯ ‘pd35’ ಎಂಬ ತಾತ್ಕಾಲಿಕ ಶೀರ್ಷಿಕೆ ಇರಿಸಿಕೊಂಡು ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದಾರೆ.

    ಗುರುದತ್ ಗಾಣಿಗ

    ಶಿವರಾತ್ರಿ ಶುಭ ಸಂದರ್ಭದಲ್ಲಿ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಆಗಿದ್ದು, ಅದು ‘ಟೂ ಡೈಮೆನ್ಷನಲ್’ ಕಥೆ ಇರುವ ಸುಳಿವನ್ನು ನೀಡುವಂತಿದೆ. ಫಸ್ಟ್‌ಲುಕ್‌ನಲ್ಲಿ ‘pd35’ ಎಂದು ಬರೆಯಲಾಗಿದ್ದು, ಅದರ ಅಕ್ಕಪಕ್ಕ ಎರಡು ಗನ್ ಇರಿಸಲಾಗಿದೆ. ಇವುಗಳಲ್ಲಿ ಒಂದು ಹಳೇ ಕಾಲದ ಹಾಗೂ ಇನ್ನೊಂದು ಇತ್ತೀಚಿನ ಆಧುನಿಕ ತಂತ್ರಜ್ಞಾನದ ಗನ್. ಹಳೇ ಕಾಲದ ಗನ್ ಪಕ್ಕ 1999 ಹಾಗೂ ಹೊಸ ಗನ್ ಪಕ್ಕದಲ್ಲಿ 2009 ಎಂದು ಬರೆಯಲಾಗಿದೆ. ಈ ಮೂಲಕ ಇದು ಒಂದು ದಶಕದ ಕಾಲಾವಧಿಯ ಘಟನಾವಳಿ ಹೊಂದಿರುವ ಕಥೆ ಆಗಿರಬಹುದು ಮತ್ತು 1999ರ ಫ್ಲ್ಯಾಷ್‌ಬ್ಯಾಕ್‌ ಆಧರಿಸಿ ಕಥೆ ಹೆಣೆದಿರಬಹುದು ಎಂಬ ಅಂದಾಜು ಸಿಗುತ್ತದೆ.

    ನಿರ್ಮಾಪಕ ಬಿ.ಕುಮಾರ್, ನಾಯಕ ಪ್ರಜ್ವಲ್ ದೇವರಾಜ್ ಜೊತೆ ಗುರುದತ್ ಗಾಣಿಗ
    ನೂತನ ಸಿನಿಮಾದ ಫಸ್ಟ್‌ಲುಕ್

    ಇನ್ನು ನಿರ್ದೇಶಕ ಗುರುದತ್ ಗಾಣಿಗ ಅವರೇ ಹೇಳಿಕೊಂಡಿರುವಂತೆ ಇದು ಮಾನವ ಕಳ್ಳಸಾಗಣಿಕೆಯ ವಿಷಯ ಇರುವ ಕಥೆಯಾಗಿದ್ದು, ಪ್ರಜ್ವಲ್ ದೇವರಾಜ್ ಈ ಸಿನಿಮಾದಲ್ಲಿ ತೀರಾ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ್ಯಕ್ಷನ್-ಥ್ರಿಲ್ಲರ್ ಕಥೆ ಇರುವ ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ವಿಭಿನ್ನ‌ ಮ್ಯಾನರಿಸಂ ಮೂಲಕ ತೆರೆ ಮೇಲೆ ಬರಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

    ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರೀಕರಣ ಸಂದರ್ಭದಲ್ಲಿ ಅಂಬರೀಷ್ ಜೊತೆ ಗುರುದತ್

    ಸದ್ಯಕ್ಕೆ ನಾಯಕ-ನಾಯಕಿಯ ಆಯ್ಕೆ ಅಂತಿಮವಾಗಿದ್ದು, ಉಳಿದ ಪ್ರಮುಖ ಕಲಾವಿದರ ಆಯ್ಕೆ ನಡೆಯುತ್ತಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು ‌ಕುಮಾರ್ (ಕುಮಾರ್ ಬಿ.) ಈ ಸಿನಿಮಾದ ನಿರ್ಮಾಪಕರಾಗಿದ್ದು, ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಹಾಗೂ ಮಾಸ್ತಿ ಅವರ ಸಂಭಾಷಣೆ ಇರಲಿದೆ.

    ನಟ ಕಿಚ್ಚ ಸುದೀಪ್ ಜೊತೆ ಗುರುದತ್ ಗಾಣಿಗ

    ಸಂಬಂಧಿತ ಸುದ್ದಿ: ಪ್ರಜ್ವಲ್ ದೇವರಾಜ್‌ ಸಿನಿಮಾಗೆ ಗುರುದತ್ ಗಾಣಿಗ ನಿರ್ದೇಶನ 


    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!