Sunday, September 22, 2024
spot_img
More

    Latest Posts

    ನಿವೃತ್ತ ಚಿತ್ರಕಲಾ ಶಿಕ್ಷಕ, ಅಂಕದಕಟ್ಟೆ ಅಚ್ಯುತ ಮಾಸ್ಟರ್‌ ನಿಧನ

    ಬೆಂಗಳೂರು: ನಿವೃತ್ತ ಚಿತ್ರಕಲಾ ಶಿಕ್ಷಕ, ಗಾಣಿಗ ಸಮಾಜದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಎಚ್‌.ಕೆ. ಅಚ್ಯುತ ಮಾಸ್ಟರ್‌ ಇಂದು ಬೆಳಗಿನ ಜಾವ ಬೆಂಗಳೂರಿನಲ್ಲಿ ನಿಧನರಾದರು. ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮೂರ್ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಬೆಳಗಿನ ಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೂಲತಃ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಅಂಕದಕಟ್ಟೆಯವರಾದ ಇವರು ಬೆಂಗಳೂರಿನ ಸ್ವಗೃಹದಲ್ಲಿ ನೆಲೆಸಿದ್ದರು.

    ಸಂಘ-ಸಂಸ್ಥೆಗಳಲ್ಲಿ ಸೇವೆ: ಶ್ರೀ ವೇಣುಗೋಪಾಲಕೃಷ್ಣ ಎಜುಕೇಷನಲ್ ಸೊಸೈಟಿ ಮೂಡುಕೇರಿ ಬಾರ್ಕೂರು ಇದರ ಅಧ್ಯಕ್ಷರಾಗಿ ಕಳೆದ ಆರು ವರ್ಷಗಳಿಂದ ಸಾವಿರಾರು ಮಕ್ಕಳಿಗೆ ಶೈಕ್ಷಣಿಕ ನೆರವು-ಮಾರ್ಗದರ್ಶನ ನೀಡಿ ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಬೆಂಗಳೂರಿನ ಸೋಮಕ್ಷತ್ರಿಯ ಗಾಣಿಗ ಸಮಾಜದಲ್ಲೂ ಸಕ್ರಿಯರಾಗಿದ್ದ ಇವರು ಅದರ ಶಾರದಾ ಸಮಿತಿ ಅಧ್ಯಕ್ಷರಾಗಿ ಶೈಕ್ಷಣಿಕ ಚಟುವಟಿಕೆ, ವಿದ್ಯಾರ್ಥಿ ವೇತನ ವಿತರಣೆ ಉಸ್ತುವಾರಿಯನ್ನೂ ವಹಿಸಿದ್ದರು. ಬೆಂಗಳೂರಿನ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ-ಕಾರ್ಯದರ್ಶಿ, ಬೆಂಗಳೂರಿನ ಶ್ರೀ ವೇಣುಗೋಪಾಲಕೃಷ್ಣ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ರಿ. ಇದರ ನಿರ್ದೇಶಕರಾಗಿಯೂ ಇವರು ಸೇವೆ ಸಲ್ಲಿಸಿದ್ದರು. ಅಲ್ಲದೆ ಸಂಘ-ಸಮಾಜದ ನಾನಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತ, ಸೂಕ್ತ ಸಲಹೆಗಳನ್ನು ನೀಡುತ್ತ ಮಾರ್ಗದರ್ಶಕರಾಗಿಯೂ ಇದ್ದರು.

    ಹಲವರ ಬದುಕಿನ ಚಿತ್ರಣ ರೂಪಿಸಿದವರಲ್ಲಿ ಪ್ರಮುಖರು: ಶಿಕ್ಷಣಪ್ರೇಮಿ, ವಿದ್ಯಾಪೋಷಕರಾಗಿದ್ದ ಇವರು ವೃತ್ತಿಯಿಂದ ಚಿತ್ರಕಲಾ ಶಿಕ್ಷಕ. ತಮ್ಮ ವೃತ್ತಿಜೀವನದಲ್ಲಿ ಹಲವಾರು ವಿದ್ಯಾರ್ಥಿಗಳ ಬದುಕಿನ ಚಿತ್ರಣವನ್ನು ರೂಪಿಸಿಕೊಳ್ಳುವಲ್ಲಿ ತಮ್ಮ ಪ್ರತಿಭೆಯನ್ನು ಧಾರೆ ಎರೆಯುವುದರ ಜೊತೆಗೆ ಸೂಕ್ತ ಸಲಹೆ-ಸೂಚನೆ ನೀಡಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ಕಂಡುಕೊಳ್ಳುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು.

    ಬೆಂಗಳೂರಿನ ಕೆ.ಆರ್.ರಸ್ತೆಯ ಸ್ವಗೃಹದಲ್ಲಿ ನಿವೃತ್ತ ಜೀವನವನ್ನು ಸಾಗಿಸುತ್ತಿದ್ದ ಇವರು, ಪುತ್ರರಾದ ಓಂಪ್ರಕಾಶ್‌, ಶ್ಯಾಂಪ್ರಕಾಶ್‌, ಪುತ್ರಿ ಪ್ರತಿಭಾ, ಸೊಸೆಯಂದಿರು-ಅಳಿಯ, ಮೊಮ್ಮಕ್ಕಳು ಸೇರಿ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ‘ಗ್ಲೋಬಲ್‌ ಗಾಣಿಗ’ ಸಂತಾಪ ಸೂಚಿಸುತ್ತಿದೆ.

    ಎಚ್.ಕೆ. ಅಚ್ಯುತ ಮಾಸ್ಟರ್‌

    ಸಂತಾಪ: ಅಚ್ಯುತ ಮಾಸ್ಟರ್‌ ಅವರ ಆತ್ಮಕ್ಕೆ ಶ್ರೀ ವೇಣುಗೋಪಾಲಕೃಷ್ಣ ಚಿರಶಾಂತಿ ಕರುಣಿಸಲಿ. ಅವರ ಮನೆಯವರಿಗೆ ಶೋಕವನ್ನು ಸಹಿಸಿಕೊಳ್ಳುವ ಶಕ್ತಿ ಆ ಭಗವಂತ ಕರುಣಿಸಲಿ ಎಂಬುದಾಗಿ ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷರು, ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗೂ ಕಾರ್ಯಕಾರಿ ಸಮಿತಿಯ ಸರ್ವಸದಸ್ಯರೆಲ್ಲರೂ ಅಗಲಿದ ಹಿರಿಯ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ಬೆಂಗಳೂರಿನ ಶ್ರೀ ವೇಣುಗೋಪಾಲಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸ್ಥಾಪನೆಗೆ ಸಮಾಜದ ಇತರ ಗಣ್ಯರೊಂದಿಗೆ ಶ್ರಮಿಸಿ, ನಂತರ ಸೊಸೈಟಿಯ ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ಸಂಸ್ಥೆಯ ಆಗುಹೋಗುಗಳ ಪರಿಚಯ ಇಟ್ಟುಕೊಂಡಿದ್ದಲ್ಲದೆ ಸದಾ ಅದರ ಒಳಿತನ್ನು ಬಯಸಿ ಸಹಕರಿಸಿದ್ದ ಹಿರಿಯ ಚೇತನ ಎಚ್.ಕೆ. ಅಚ್ಯುತ ಅವರು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇವೆ ಎಂಬುದಾಗಿ ಶ್ರೀ ವೇಣುಗೋಪಾಲಕೃಷ್ಣ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ರಿ. ಇದರ ಅಧ್ಯಕ್ಷರು ಮತ್ತು ನಿರ್ದೇಶಕ ಮಂಡಳಿಯವರು ಸಂತಾಪ ಸೂಚಿಸಿದ್ದಾರೆ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!