Sunday, September 22, 2024
spot_img
More

    Latest Posts

    ಉದಯ ಗಾಣಿಗ ಕೊಲೆ ಪ್ರಕರಣ: ಡಿಕೆಶಿ ಬಂದರು, ಲಕ್ಷ್ಯ ಕೊಟ್ಟರು, ಲಕ್ಷವನ್ನೂ ಕೊಟ್ಟರು…

    ಬೆಂಗಳೂರು: ಉದಯ ಗಾಣಿಗ ಕೊಲೆ ಪ್ರಕರಣ ತಣ್ಣಗಾಗುತ್ತಿದೆಯೇನೋ ಎಂದನಿಸುವಷ್ಟರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತ್ರಸ್ತ ಕುಟುಂಬದತ್ತ ಲಕ್ಷ್ಯ ವಹಿಸಿ, ಒಂದು ಲಕ್ಷಕ್ಕೂ ಅಧಿಕ ಹಣವನ್ನೂ ನೀಡಿ ಸಾಂತ್ವನ ಹೇಳಿದ್ದಾರೆ. ಇತ್ತೀಚೆಗೆ ಕರಾವಳಿಗೆ ಪ್ರವಾಸ ನೀಡಿದ್ದ ಅವರು ಕುಂದಾಪುರದ ಯಡಮೊಗೆಯಲ್ಲಿರುವ ಉದಯ ಗಾಣಿಗ ಅವರ ಮನೆಗೂ ಭೇಟಿ ನೀಡಿ, ಮೃತರ ಕುಟುಂಬದವರ ಅಹವಾಲನ್ನೂ ಆಲಿಸಿದ್ದಾರೆ. ಈ ಮೂಲಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಣ್ಣ ಸಂಚಲನವೊಂದು ಸೃಷ್ಟಿಯಾಗಿದೆ.

    ಯಡಮೊಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ ಅವರೇ ಉದಯ ಗಾಣಿಗರ ಪ್ರಾಣ ತೆಗೆದಿದ್ದಾರೆ ಎನ್ನಲಾಗಿದ್ದು, ಕೊಲೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂಬುದಾಗಿ ಗಾಣಿಗ ಸಮಾಜದ ಮುಖಂಡರು ಕೆಲವು ದಿನಗಳಿಂದ ಆಗ್ರಹಿಸುತ್ತಿದ್ದು, ಇದೀಗ ಡಿ.ಕೆ.ಶಿವಕುಮಾರ್ ಅವರು ಕೂಡ ಆ ಕುರಿತು ದನಿಗೂಡಿಸಿದ್ದಾರೆ.

    ಉದಯ ಗಾಣಿಗ ಅವರ ಮನೆಯಲ್ಲಿ ಸಂತ್ರಸ್ತ ಕುಟುಂಬದ ಅಹವಾಲು ಆಲಿಸಿದ ಡಿ.ಕೆ.ಶಿವಕುಮಾರ್. ವಿನಯಕುಮಾರ್ ಸೊರಕೆ, ಗೋಪಾಲ ಪೂಜಾರಿ ಇದ್ದರು.

    ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ರವಾಸಕ್ಕೆ ತೆರಳಿದ್ದ ಡಿ.ಕೆ.ಶಿವಕುಮಾರ್, ಜುಲೈ 6ರಂದು ಉದಯ ಗಾಣಿಗರ ಮನೆಗೆ ತೆರಳಿ, ಸಂತ್ರಸ್ತರ ಅಹವಾಲನ್ನು ಆಲಿಸಿದ್ದಾರೆ. ಕೊಲೆಗೆ ಇರಬಹುದಾದ ಹಿನ್ನೆಲೆ, ಅದರ ಹಿಂದಿರುವವರ ವಿವರ, ಕೊಲೆ ಬಳಿಕದ ಬೆಳವಣಿಗೆ ಸೇರಿ ಹಲವಾರು ವಿಷಯಗಳ ಕುರಿತು ಮಾತನಾಡಿ, ನ್ಯಾಯಕ್ಕಾಗಿ ತಾವೂ ಆಗ್ರಹಿಸುವುದಾಗಿ ಭರವಸೆ ನೀಡಿದ ಅವರು, ಕುಟುಂಬಕ್ಕೆ 1.25 ಲಕ್ಷ ರೂ. ಮೊತ್ತದ ಚೆಕ್​ ಹಸ್ತಾಂತರಿಸಿ ಧೈರ್ಯ ಹೇಳಿದರು.

    ಉದಯ ಗಾಣಿಗರ ಮನೆಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಮತ್ತು ತಂಡ.

    ಬಿಜೆಪಿ ಪಕ್ಷಕ್ಕಾಗಿ ಶ್ರಮಿಸಿರುವ ಉದಯ ಗಾಣಿಗರನ್ನು ಬಿಜೆಪಿಯ ಪಂಚಾಯತ್ ಅಧ್ಯಕ್ಷರೇ ಕೊಲೆ ಮಾಡಿರುವುದಾಗಿ ಕುಟುಂಬಸ್ಥರು ಸಂಕಟ ತೋಡಿಕೊಂಡಿದ್ದು, ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಈ ಬಗ್ಗೆ ದನಿ ಎತ್ತುವುದಾಗಿ ಹೇಳಿದ ಡಿ.ಕೆ.ಶಿವಕುಮಾರ್​, ಉದಯ ಗಾಣಿಗ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು. ಆ ಬಗ್ಗೆ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರ ಬಳಿ ಮಾತನಾಡುವುದಾಗಿಯೂ ಹೇಳಿದರು. ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ ಸೇರಿ ಕಾಂಗ್ರೆಸ್​ನ ಹಲವು ಮುಖಂಡರು ಹಾಜರಿದ್ದರು.

    ಸಂಬಂಧಿತ ಸುದ್ದಿ: ಉದಯ ಗಾಣಿಗ ಕೊಲೆ ಆರೋಪಿ ಪ್ರಾಣೇಶ್​ ಬಂಧನ; ಪ್ರಶ್ನಿಸಿದ್ದಕ್ಕೆ ಪ್ರಾಣ ತೆಗೆದ ಗ್ರಾಮ ಪಂಚಾಯತ್​ ಅಧ್ಯಕ್ಷ?

    ಸಂಬಂಧಿತ ಸುದ್ದಿ: ಉದಯ ಗಾಣಿಗ ಕೊಲೆ ಪ್ರಕರಣ: ನ್ಯಾಯಕ್ಕಾಗಿ ಕುಂದಾಪುರ ಶಾಸಕರಿಗೆ ಮನವಿ

    ಸಂಬಂಧಿತ ಸುದ್ದಿ: ಉದಯ ಗಾಣಿಗ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಆಗಲಿ; ಮಾಜಿ ಸಚಿವ ಸೊರಕೆ ಆಗ್ರಹ

    ಸಂಬಂಧಿತ ಸುದ್ದಿ: ಉದಯ ಗಾಣಿಗ ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನೂ ಬಂಧಿಸಿ; ಮಾಜಿ ಶಾಸಕ ಗೋಪಾಲ ಪೂಜಾರಿ ಆಗ್ರಹ

    ಸಂಬಂಧಿತ ಸುದ್ದಿ: ಉದಯ ಗಾಣಿಗ ಕೊಲೆ ಪ್ರಕರಣ; ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಜಿಲ್ಲಾ ಗಾಣಿಗ ಸಂಘಟನೆ ಆಗ್ರಹ 

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected]ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. 
    ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್​ಆ್ಯಪ್ ಮಾಡಿ.
     

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!