Saturday, September 21, 2024
spot_img
More

    Latest Posts

    ಟಿಎಸ್‌ಆರ್‌ಟಿಸಿಗೆ ಅವಮಾನ ಮಾಡಿದ ಬೈಕ್ ಟ್ಯಾಕ್ಸಿ ಸಂಸ್ಥೆ ರ‌್ಯಾಪಿಡೋಗೆ ಬಿಸಿ ಮುಟ್ಟಿಸಿದ ಸಜ್ಜನರ್‌

    ಬೆಂಗಳೂರು: ಐಪಿಎಸ್‌ ಅಧಿಕಾರಿಯಾಗಿರುವ ವಿ.ಸಿ.ಸಜ್ಜನರ್‌, ಸೈಬರಾಬಾದ್‌ನ ಪೊಲೀಸ್‌ ಕಮಿಷನರ್‌ ಆಗಿ ಬಹಳಷ್ಟು ಕೆಲಸ ಮಾಡಿ ಹೆಸರು ಗಳಿಸಿ ಕೆಲವು ತಿಂಗಳ ಹಿಂದೆ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ (ಟಿಎಸ್‌ಆರ್‌ಟಿಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ. ಆ ನಂತರ ಟಿಎಸ್‌ಆರ್‌ಟಿಸಿಯಲ್ಲೂ ಅವರ ಖಾಕಿ ಖದರ್‌ ಮುಂದುವರಿದಿದ್ದು, ತಮ್ಮ ಸಂಸ್ಥೆಯನ್ನು ಜಾಹೀರಾತಿನಲ್ಲಿ ಅವಮಾನಕರವಾಗಿ ತೋರಿಸಿದ್ದ ರ‌್ಯಾಪಿಡೋ ಸಂಸ್ಥೆಗೆ ಅವರು ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ.

    ಮೊಬೈಲ್ ಆ್ಯಪ್ ಆಧಾರಿತ ಬೈಕ್‌ ಟ್ಯಾಕ್ಸಿ ಸಂಸ್ಥೆ ರ‌್ಯಾಪಿಡೋ ಸಂಸ್ಥೆ ತನ್ನ ಜಾಹೀರಾತೊಂದರಲ್ಲಿ ಟಿಎಸ್‌ಆರ್‌ಟಿಸಿಯನ್ನು ಅವಮಾನಿಸಿ ಚಿತ್ರಿಸಿತ್ತು. ಈ ಜಾಹೀರಾತಿನಲ್ಲಿ ತೆಲುಗಿನ ಖ್ಯಾತ ಚಿತ್ರನಟ ಅಲ್ಲು ಅರ್ಜುನ್‌ ನಟಿಸಿದ್ದು, ಟಿಎಸ್‌ಆರ್‌ಟಿಸಿ ಬಸ್‌ನಲ್ಲಿ ನೂಕುನುಗ್ಗಲು  ಇರುತ್ತದೆ ಎಂದು ಅದರ ಸೇವೆಯನ್ನು ಅವಹೇಳನ ಮಾಡುವ ರೀತಿಯಲ್ಲಿ ಜಾಹೀರಾತು ಪ್ರಸಾರ ಮಾಡಲಾಗಿತ್ತು.

    ಟಿಎಸ್‌ಆರ್‌ಟಿಸಿ ಎಮ್‌ಡಿ ವಿ.ಸಿ.ಸಜ್ಜನರ್

    ಹೀಗಾಗಿ ರ‌್ಯಾಪಿಡೋ ಸಂಸ್ಥೆಗೆ ನೋಟಿಸ್‌ ಜಾರಿ ಮಾಡಿದ್ದ ಟಿಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಸಿ. ಸಜ್ಜನರ್, ಬೈಕ್‌ ಟ್ಯಾಕ್ಸಿ ಕಂಪನಿಯ ನಡೆಯನ್ನು ಖಂಡಿಸಿದ್ದರು. ಆ ಬಳಿಕ ಜಾಹೀರಾತಿನಲ್ಲಿ ಬಸ್‌ ಬಣ್ಣವನ್ನಷ್ಟೇ ಬದಲಿಸಿ ಅದೇ ಚಿತ್ರಣವನ್ನು ಮುಂದುವರಿಸಲಾಗಿತ್ತು. ಅದಾಗ್ಯೂ ರ‌್ಯಾಪಿಡೋ ಸರಿಯಾಗಿ ತಿದ್ದಿಕೊಳ್ಳದ್ದರಿಂದ ಸಜ್ಜನರ್‌ ಮತ್ತೊಂದು ದಿಟ್ಟ ಕ್ರಮಕೈಗೊಂಡಿದ್ದರು.

    ರ‌್ಯಾಪಿಡೋ ನಡೆಯನ್ನು ಪ್ರಶ್ನಿಸಿ ನಾಂಪಲ್ಲಿ ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಟಿಎಸ್‌ಆರ್‌ಟಿಸಿ ಮೂಲಕ ದಾವೆ ಹೂಡಿ, ಸಾರ್ವಜನಿಕ ಸಾರಿಗೆ ಸೇವೆ ಸುರಕ್ಷತವಲ್ಲ ಮತ್ತು ಸಮರ್ಪಕ ಸೇವೆ ಇಲ್ಲ ಎಂದು ಜಾಹೀರಾತಿನಲ್ಲಿ ಮಾನಹಾನಿಕರವಾಗಿ ಬಿಂಬಿಸಲಾಗಿದೆ. ಈ ಜಾಹೀರಾತು ಪ್ರದರ್ಶನವನ್ನು ನಿರ್ಬಂಧಿಸಬೇಕು. ಗೂಗಲ್, ಯು-ಟ್ಯೂಬ್‌ನಿಂದ ಆ ಜಾಹೀರಾತನ್ನು ತೆಗೆದು ಹಾಕಲು ಸೂಚನೆ ನೀಡಬೇಕು ಎಂದು ಮನವಿ ಮಾಡಲಾಗಿತ್ತು.

    ಟಿಎಸ್ಆರ್‌ಟಿಸಿ ಮನವಿಯನ್ನು ಪುರಸ್ಕರಿಸಿದ  ನ್ಯಾಯಾಲಯ ಆ ಮಾನಹಾನಿಕರ ಜಾಹೀರಾತು ನಿಲ್ಲಿಸುವಂತೆ ಆದೇಶಿಸಿದೆ. ಅಲ್ಲದೆ ಆದೇಶವನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದೆ. ಮಾತ್ರವಲ್ಲ, ಸಾರ್ವಜನಿಕ ಸ್ವತ್ತು ಮತ್ತು ಸೇವೆಯನ್ನು ಪ್ರತಿಯೊಬ್ಬರೂ ಗೌರವಿಸಿ ಬಳಸುವ ಮೂಲಕ ಪ್ರೋತ್ಸಾಹಿಸಬೇಕು. ಸ್ವಂತ ಲಾಭಕ್ಕಾಗಿ ಅವಹೇಳನ ಸರಿಯಲ್ಲ ಎಂಬುದಾಗಿಯೂ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.

    ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮವು ಸುರಕ್ಷಿತ ಹಾಗೂ ಉತ್ತಮವಾದ ಸೇವೆ ನೀಡುತ್ತಿದೆ. ಸ್ವಂತ ಲಾಭಕ್ಕಾಗಿ ಇಂಥ ಸಾರ್ವಜನಿಕ ಸಂಸ್ಥೆಯನ್ನು ದೂಷಣೆ ಮಾಡುವುದು ಸರಿಯಲ್ಲ.

     | ವಿ.ಸಿ. ಸಜ್ಜನರ್ ವ್ಯವಸ್ಥಾಪಕ ನಿರ್ದೇಶಕ, ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ

    ಸಂಬಂಧಿತ ಸುದ್ದಿ: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರನ್ನು ಭೇಟಿಯಾದ ಸಜ್ಜನರ್‌

    ಸಂಬಂಧಿತ ಸುದ್ದಿ: ಟಿಎಸ್‌ಆರ್‌ಟಿಸಿಯಲ್ಲೂ ಐಪಿಎಸ್‌ ಅಧಿಕಾರಿ ಸಜ್ಜನರ್‌ ಖಾಕಿ ಖದರ್‌!

    ಸಂಬಂಧಿತ ಸುದ್ದಿ: ೪೮ ಸಾವಿರ ಸಿಬ್ಬಂದಿಯ ಯೋಗಕ್ಷೇಮವೇ ನನ್ನ ಪ್ರಥಮ ಆದ್ಯತೆ ಎಂದ ಸಜ್ಜನರ್‌

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!