Saturday, September 21, 2024
spot_img
More

    Latest Posts

    ಸಂಭ್ರಮ-ಸಾಧನೆ-ಸಂವಾದದಿ ಮೇಳೈಸಿತು ʼಸಂಪರ್ಕ ಸುಧಾʼ ರಜತ ಮಹೋತ್ಸವ

    ಬೆಂಗಳೂರು: ಸೋಮಕ್ಷತ್ರಿಯ ಗಾಣಿಗ ಸಮಾಜದ ʼಸಂಪರ್ಕ ಸುಧಾʼ ಪತ್ರಿಕೆ ಇಪ್ಪತ್ತೈದನೇ ವರ್ಷವನ್ನು ಪೂರೈಸಿದ್ದು, ಇದರ ರಜತ ಮಹೋತ್ಸವ ಸಮಾರಂಭ ಕುಂದಾಪುರದ ಶ್ರೀವ್ಯಾಸರಾಜ ಮಂದಿರದಲ್ಲಿ ಫೆ. 27ರ ಭಾನುವಾರ ನಡೆಯಿತು. ದಿನವಿಡೀ ನಡೆದ ಈ ಕಾರ್ಯಕ್ರಮದಲ್ಲಿ ಸಂಭ್ರಮ, ಸಾಧನೆ, ಸಂವಾದಗಳು ಮೇಳೈಸಿದವು.

    ಬೆಂಗಳೂರಿನ ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ ಬಿ.ಎಸ್.‌ ಮಂಜುನಾಥ ಇವರಿಂದ ಬೆಳಗ್ಗೆ ಉದ್ಘಾಟನೆಗೊಂಡ ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಂಘದ ಅಧ್ಯಕ್ಷ ಬಿ. ವಾಸುದೇವ ಬೈಕಾಡಿ, ಬೆಂಗಳೂರಿನ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಎಚ್.ಟಿ. ನರಸಿಂಹ, ಉಪಾಧ್ಯಕ್ಷ ಕೆ.ಎಂ. ಲಕ್ಷ್ಮಣ, ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಕುಂಭಾಶಿ, ಬಾರ್ಕೂರಿನ ಶ್ರೀವೇಣುಗೋಪಾಲಕೃಷ್ಣ ಎಜುಕೇಷನ್‌ ಸೊಸೈಟಿ ಅಧ್ಯಕ್ಷ ರಾಜೇಂದ್ರ ಕೃಷ್ಣ ಗಾಣಿಗ, ಉತ್ತರಕನ್ನಡ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಂಘದ ಅಧ್ಯಕ್ಷ ಕೆ. ದಾಮೋದರ ಶೆಟ್ಟಿ ಮುಂತಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಪರ್ಕ ಸುಧಾ ಅಧ್ಯಕ್ಷ ಎಸ್‌.ಕೆ. ಪ್ರಾಣೇಶ್‌ ವಹಿಸಿದ್ದರು.

    ನಂತರ ʼಸಾರ್ವಜನಿಕ ಉದ್ಯಮಕ್ಕೆ ನಮ್ಮ ಸಮಾಜದ ಕೊಡುಗೆʼ ಎಂಬ ವಿಷಯದ ಮೇಲೆ ವಿಚಾರಗೋಷ್ಠಿ ನಡೆಸಲಾಗಿದ್ದು, ಅದು ನಮ್ಮ ಸಮಾಜದವರ ಸಾಧನೆಯನ್ನೂ ಅನಾವರಣಗೊಳಿಸಿತು. ಮುಂಬೈ ಗಾಣಿಗ ಸಮಾಜದ ಅಧ್ಯಕ್ಷ, ಉದ್ಯಮಿಯೂ ಆಗಿರುವ ಬಿ.ವಿ. ರಾವ್‌ ಅವರ ಅಧ್ಯಕ್ಷತೆಯಲ್ಲಿ ಈ ವಿಚಾರಗೋಷ್ಠಿ ನಡೆಯಿತು. ಇದರಲ್ಲಿ ಹೋಟೆಲೋದ್ಯಮಿ, ಮಾನಸ ಶಿವಮೊಗ್ಗದ ಸಂಸ್ಥಾಪಕ ಸುಬ್ಬಯ್ಯ ಗಾಣಿಗ, ಬೆಂಗಳೂರಿನ ಆರ್‌ಎಲ್‌ ಕೇಟರರ್ಸ್‌ನ ಕೆ.ಎಂ. ಲಕ್ಷ್ಮಣ, ಬೆಂಗಳೂರಿನ ಕೆನರಾ ಫೋರ್ಕ್‌ಲಿಫ್ಟ್‌ ಸರ್ವಿಸ್‌ನ ಕೆ.ಜಿ. ಸತ್ಯನಾರಾಯಣ, ಬೆಂಗಳೂರಿನ ಸೀ ರಾಕ್‌ ರೆಸ್ಟೋರೆಂಟ್‌ ಮಾಲೀಕ ಗಣೇಶ್‌ ರಾವ್‌, ಥಾಣೆಯ ಶೋಭಾ ಮೆಡಿಕೊ ಎಂ.ಡಿ. ಮೂಲತಃ ಉಡುಪಿಯ ಮಣಿಪುರದವರಾದ ರತ್ನಾಕರ ಶೆಟ್ಟಿ, ಬೆಂಗಳೂರಿನ ವಿ5 ಬಿಲ್ಡ್‌ ಟೆಕ್‌ ಸಲ್ಯೂಷನ್ಸ್‌ನ ಕೆ.ಎಂ. ಶೇಖರ್‌, ಬೆಂಗಳೂರಿನ ವಿ.ಜಿ. ಟ್ರಾನ್ಸ್‌ಫಾರ್ಮರ್ಸ್‌ನ ದಿನಕರ ಕುಂಭಾಶಿ, ಬ್ರಹ್ಮಾವರದ ಅನುಗ್ರಹ ಪಂಚಕರ್ಮ ಚಿಕಿತ್ಸಾ ಕೇಂದ್ರದ ಡಾ. ಪ್ರವೀಣ್‌ಕುಮಾರ್‌, ಕೆನರಾ ಬ್ಯಾಂಕ್‌ನ ನಿವೃತ್ತ ಜನರಲ್‌ ಮ್ಯಾನೇಜರ್‌ ಗೋಪಾಲ ಗಾಣಿಗ ಮಟಪಾಡಿ, ವಿಜಯ ಬ್ಯಾಂಕ್‌ನ ನಿವೃತ್ತ ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ ಕುತ್ಪಾಡಿ ಎಂ. ಶೇಖರ್‌ ಗಾಣಿಗ, ಬೆಂಗಳೂರಿನ ಮಾರಾಳಿ ಎಂಟರ್‌ಪ್ರೈಸಸ್‌ನ ನಾಗೇಶ್‌ ಮಾರಾಳಿ, ಬೆಂಗಳೂರಿನ ಶ್ರೀರಾಮ ಭವನ್‌ ಸ್ವೀಟ್ಸ್‌ನ ಜಿ.ಆರ್. ಚಂದ್ರಯ್ಯ, ಹುಬ್ಬಳ್ಳಿಯ ಉದ್ಯಮಿ ಎನ್.‌ ಭಾಸ್ಕರ್‌ ರಾವ್‌, ಸೇಲಂ ಮಂಜುನಾಥ್‌, ತುಮಕೂರು ವರ್ಷ ಫ್ಯಾಬ್‌ ಟೆಕ್‌ನ ಶಶಿರೇಖಾ ವಸಂತಕುಮಾರ್‌ ಮುಂತಾದವರು ತಮ್ಮ ಸಾಧನೆಯ ಹಾದಿಯನ್ನು ನೆನೆಯುತ್ತ ಸಮಾಜಕ್ಕೆ ನಮ್ಮ ಸಮಾಜದ ಉದ್ಯಮಿಗಳ ಕೊಡುಗೆಯ ಕುರಿತು ವಿಚಾರ ಮಂಡಿಸಿದರು.

    ಉದ್ಘಾಟನಾ ಸಮಾರಂಭ

    ಇದು ಸಮಾಜದ ಪತ್ರಿಕೆಯ ರಜತ ಮಹೋತ್ಸವದ ಕಾರ್ಯಕ್ರಮವಾದ್ದರಿಂದ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿರುವ ನಮ್ಮ ಸಮಾಜದ ಪತ್ರಕರ್ತರಿಂದ ʼಸಮಾಜಕ್ಕೆ ಸಂಪರ್ಕ ಸುಧಾ ಕೊಡುಗೆʼ ಎಂಬ ವಿಷಯದ ಕುರಿತು ವಿಚಾರಗೋಷ್ಠಿ ಆಯೋಜಿಸಲಾಗಿತ್ತು. ಈ ವಿಚಾರಗೋಷ್ಠಿಯನ್ನು ಜೀವ ವಿಮಾ ನಿಗಮದ ಅಧಿಕಾರಿ ರವಿರಾಜ್‌ ಕುಂಭಾಶಿ ಅವರು ನಿರೂಪಿಸಿದ್ದು, ವಿಜಯಕರ್ನಾಟಕ ವರದಿಗಾರ ಚಂದ್ರಶೇಖರ ಬೀಜಾಡಿ ಅಧ್ಯಕ್ಷತೆ ವಹಿಸಿದ್ದರು. ಜನಪ್ರತಿನಿಧಿ ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆ, ವಿಜಯವಾಣಿಯ ಹಿರಿಯ ವರದಿಗಾರ ರವಿಕಾಂತ ಕುಂದಾಪುರ, ವಿಜಯಕರ್ನಾಟಕ ವರದಿಗಾರ ಗಣೇಶ್‌ ಗಾಣಿಗ ಘಟಪ್ರಭಾ, ಉದಯವಾಣಿ ವರದಿಗಾರ ರಾಜೇಶ್‌ ಗಾಣಿಗ ಅಚ್ಲಾಡಿ ಅವರು ಭಾಗವಹಿಸಿ ಸಂಪರ್ಕದ ಮಹತ್ವ, ಮಾಧ್ಯಮದ ಅಗತ್ಯವನ್ನು ಪ್ರತಿಪಾದಿಸಿ, ಸಂಪರ್ಕ ಸುಧಾದ ಉನ್ನತಿಗೆ ಇನ್ನಷ್ಟು ಸಲಹೆಗಳನ್ನು ನೀಡಿದರು. ಪತ್ರಿಕೆ ಕುರಿತಂತೆ ಸಮಾಜಬಾಂಧವರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

    ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡ ಗಾಣಿಗ ಸಮಾಜದ ಉದ್ಯಮಿಗಳು.
    ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡ ಗಾಣಿಗ ಸಮಾಜದ ಪತ್ರಕರ್ತರು.

    ಸಂಜೆ ನಡೆದ ಸಮಾರೋಪ ಸಮಾರಂಭಕ್ಕೆ ಕುಂದಾಪುರದ ಕುಂದಪ್ರಭ ಪತ್ರಿಕೆಯ ಯು.ಎಸ್. ಶೆಣೈ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಿ ಮಾತನಾಡಿದರು. ʼಸಂಪರ್ಕ ಸುಧಾ ಎರಡೂವರೆ ಸಾವಿರ ಪ್ರತಿಗಳಷ್ಟಿದ್ದರೂ ಕಡಿಮೆ ಎಂಬ ಭಾವನೆ ಹೊಂದಿದ್ದೀರಿ. ಆದರೆ ಅದು ಕಡಿಮೆ ಪ್ರಸಾರ ಸಂಖ್ಯೆಯಲ್ಲ, ಒಂದು ಸಮಾಜದ ಪತ್ರಿಕೆಯಷ್ಟೇ ಆಗಿ 2 ಸಾವಿರಕ್ಕೂ ಅಧಿಕ ಪ್ರಸಾರ ಹೊಂದಿರುವುದು ಕೂಡ ಸಾಧನೆಯೇʼ ಎಂದು ಯು.ಎಸ್.‌ ಶೆಣೈ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ ʼಗಾಣಿಗರ ಸಂಖ್ಯೆ ಕಡಿಮೆ ಇದ್ದರೂ ನಿಮ್ಮದು ಬಲಿಷ್ಠ ಸಮಾಜವೇ, ನನಗೂ ನಿಮ್ಮ ಸಮಾಜಬಾಂಧವರ ಹಲವರ ಒಡನಾಟವಿದ್ದು, ಮಹಾನ್‌ ಸಾಧಕರು ಗಾಣಿಗ ಸಮಾಜದಲ್ಲಿದ್ದಾರೆʼ ಎಂದು ʼಸಂಪರ್ಕ ಸುಧಾʼ ಪತ್ರಿಕೆಗೆ ಮತ್ತಷ್ಟು ಶುಭ ಹಾರೈಸಿದರು.

    ಸಮಾರೋಪ ಸಮಾರಂಭ

    ಸಂಪರ್ಕ ಸುಧಾ ಅಧ್ಯಕ್ಷ ಎಸ್.‌ಕೆ. ಪ್ರಾಣೇಶ್‌ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಸಂಪರ್ಕ ಸುಧಾದ ಮಾಜಿ ಅಧ್ಯಕ್ಷ ಹುಬ್ಬಳ್ಳಿಯ ಮಂಜುನಾಥ್‌ ಆರ್.‌ ಉಡುಪಿ, ಸಂಪರ್ಕ ಸುಧಾದ ಸ್ಥಾಪಕ ಸದಸ್ಯರಾದ ಕೊಗ್ಗ ಗಾಣಿಗ, ಎ. ರವಿರಾಜ್‌ ಕುಂಭಾಶಿ, ಆನಗಳ್ಳಿ ಗೋಪಾಲ ಗಾಣಿಗ, ಕೆ.ಎಸ್‌. ಮಂಜುನಾಥ್‌, ಬಿ. ಶಂಕರ್‌, ಸಂಪರ್ಕ ಸುಧಾ ಕಾರ್ಯದರ್ಶಿ ಕೆ. ಉದಯಕುಮಾರ್‌, ಸಂಪಾದಕ ರಘುರಾಮ ಬೈಕಾಡಿ, ಆಡಳಿತ ಮಂಡಳಿ ಸದಸ್ಯ ಸೂರ್ಯನಾರಾಯಣ ಗಾಣಿಗ ಮಟಪಾಡಿ ಮುಂತಾದವರು ಉಪಸ್ಥಿತರಿದ್ದರು.

    ಸಂಪರ್ಕ ಸುಧಾದ ಸ್ಥಾಪಕ ಸದಸ್ಯರಿಗೆ ಸನ್ಮಾನ

    1997ರಲ್ಲಿ ರೇಂಜ್‌ ಫಾರೆಸ್ಟ್‌ ಆಫೀಸರ್‌ ಆಗಿದ್ದ ಜಿ. ಸಂಜೀವ ಗಾಣಿಗ ಅವರ ನೇತೃತ್ವ ಹಾಗೂ ರವಿರಾಜ್‌ ಕುಂಭಾಶಿ, ಕೊಗ್ಗ ಗಾಣಿಗ, ಆನಗಳ್ಳಿ ಗೋಪಾಲ್‌ ಗಾಣಿಗ, ಕೆ.ಎನ್.ಗೋವರ್ಧನ ಗಾಣಿಗ, ಸುಬ್ರಾಯ ಗಾಣಿಗ, ಕೆ.ಎಸ್.‌ ಮಂಜುನಾಥ, ಬಿ.ಶಂಕರ್‌ ಮುಂತಾದವರ ಒಮ್ಮತದ ಪರಿಶ್ರಮದ ಮೂಲಕ ಸಂಪರ್ಕ ಸುಧಾ ಆರಂಭಗೊಂಡಿತ್ತು. ಈ ರಜತ ಮಹೋತ್ಸವದಲ್ಲಿ ಸಂಪರ್ಕ ಸುಧಾ ಪತ್ರಿಕೆಯ ಸ್ಥಾಪಕ ಅಧ್ಯಕ್ಷ ಜಿ. ಸಂಜೀವ ಗಾಣಿಗ ಅವರು ಅನುಪಸ್ಥಿತರಾಗಿದ್ದರೂ ಸಮಾಜದ ಗಣ್ಯರು ಕೆಲವರು ಸಂಪರ್ಕ ಸುಧಾ ಆರಂಭವಾದ್ದರ ಹಿಂದೆ ಇದ್ದ ಅವರ ಶ್ರಮ-ನಾಯಕತ್ವವನ್ನು ಸ್ಮರಿಸಿಕೊಂಡರು. ಸಂಪರ್ಕ ಸುಧಾದ ಸ್ಥಾಪಕ ಸದಸ್ಯರಾದ ಕೊಗ್ಗ ಗಾಣಿಗ, ರವಿರಾಜ್‌ ಕುಂಭಾಶಿ, ಕೆ.ಎಸ್.‌ ಮಂಜುನಾಥ್‌, ಆನಗಳ್ಳಿ ಗೋಪಾಲ ಗಾಣಿಗ, ಸೀತಾರಾಮ ಗಾಣಿಗ ಮುಂತಾದವರನ್ನು ಸನ್ಮಾನಿಸಲಾಯಿತು.

    ರಜತ ಮಹೋತ್ಸವದಲ್ಲಿ ಗಾಣಿಗ ಸಮಾಜದ ಗಣ್ಯರು

    ಸಮಾರಂಭದಲ್ಲಿ 2021ರ ಮಕ್ಕಳ ಫೋಟೋ ಸ್ಪರ್ಧೆಯ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಬಾರ್ಕೂರು ಮೂಡುಕೇರಿಯ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಸಂಘದವರ ಸಾಂಸ್ಕೃತಿಕ ವೈಭವ ಮನರಂಜನೆಯೊಂದಿಗೆ ಗಮನ ಸೆಳೆಯಿತು.

    (ಚಿತ್ರಗಳು: ಐಶ್ವರ್ಯಾ ಡಿಜಿಟಲ್‌ ಸ್ಟುಡಿಯೊ, ಬೀಜಾಡಿ)

    ಸಂಪರ್ಕ ಸುಧಾ ರಜತ ಮಹೋತ್ಸವದ ನೇರಪ್ರಸಾರ ನೋಡಲು ಈ ಮೇಲಿನ ವಿಡಿಯೋ ಕ್ಲಿಕ್ಕಿಸಿ

    ಸಂಬಂಧಿತ ಸುದ್ದಿ: ಗಾಣಿಗ ನಿಗಮ-ಮಂಡಳಿಗಾಗಿ ಮೋದಿಯ ಸೆಳೆಯುವತ್ತ ಗಾಣಿಗ ಮುಖಂಡರ ಚಿತ್ತ

    ಸಂಬಂಧಿತ ಸುದ್ದಿ: ನಿಮಗೆ ಚುನಾವಣೆ ಗೆಲ್ಲಲು ಮೋದಿ ಹೆಸರು ಬೇಕು, ಗಾಣಿಗ ಸಮಾಜ ಬೇಡವೇ..?

    ಸಂಬಂಧಿತ ಸುದ್ದಿ: ಇಂದಿನ ನ್ಯಾಷನಲ್ ಕಾಲೇಜನ್ನು ಆರಂಭಿಸಿದ್ದು ಅಂದಿನ ದೊಡ್ಡಣ್ಣ ಶೆಟ್ಟರೇ..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!