Saturday, September 21, 2024
spot_img
More

    Latest Posts

    ಸಫಲ ಸೌಹಾರ್ದ ಸಹಕಾರಿ ನಿಯಮಿತದ ಬಿಕರ್ನಕಟ್ಟೆ ಶಾಖೆ ಉದ್ಘಾಟನೆ

    ಬೆಂಗಳೂರು: ಗುರುಪುರ ಕೈಕಂಬದಲ್ಲಿರುವ ಸಫಲ ಸೌಹಾರ್ದ ಸಹಕಾರಿ ನಿಯಮಿತದ ಪ್ರಥಮ ಶಾಖೆಯು ಮಂಗಳೂರಿನ ಬಿಕರ್ನಕಟ್ಟೆಯ ದತ್ತಗೋಕುಲ ಕಟ್ಟಡದಲ್ಲಿ ನಿನ್ನೆ ಅಂದರೆ ಮಾ. 6ರಂದು ಉದ್ಘಾಟನೆಗೊಂಡಿತು.

    ಶಾಖಾ ಕಚೇರಿಯನ್ನು ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ಧರ್ಮದರ್ಶಿ ಶ್ರೀ ದೇವು ಮೂಲ್ಯಣ್ಣ ಅವರು ಉದ್ಘಾಟಿಸಿದರು. ಕಚೇರಿಯಲ್ಲಿನ ಭದ್ರತಾ ಕೊಠಡಿಯನ್ನು ಮುಂಬಯಿ ಸಾಫಲ್ಯ ಸೇವಾ ಸಂಘದ ಮಾಜಿ ಅಧ್ಯಕ್ಷ ಓಂಪ್ರಕಾಶ್ ರಾವ್, ಗಣಕ ಯಂತ್ರ ವನ್ನು ಅಖಿಲ ಭಾರತ ಗಾಣಿಗರ ಸಂಘದ ಜಂಟಿ ಕಾರ್ಯದರ್ಶಿ ಎಂ.ಆರ್. ರಾಜಶೇಖರ ಗಾಣಿಗ ಉದ್ಘಾಟಿಸಿದರು. ನಿರಖು ಠೇವಣಿಪತ್ರವನ್ನು ಮೇಯರ್ ಪ್ರೇಮಾನಂದ ಶೆಟ್ಟಿ, ಸಫಲ ನಗದು ಪತ್ರವನ್ನು ಕಾರ್ಪೋರೇಟರ್‌ ಕಾವ್ಯಾ ನಟರಾಜ್, ಮಾಸಿಕ ಠೇವಣಿ ಖಾತೆ ಪುಸ್ತಕವನ್ನು ಸಹಕಾರಿ ಇಲಾಖೆಯ ಉಪನಿಬಂಧಕ ಪ್ರವೀಣ್ ಬಿ. ನಾಯಕ್, ಉಳಿತಾಯ ಖಾತೆ ಪುಸ್ತಕವನ್ನು ರಾಜ್ಯ ಸಹಕಾರಿ ನಿಯಮಿತ ಪ್ರಬಂಧಕ ಗುರುಪ್ರಸಾದ್ ಬಂಗೇರ, ಇ-ಸ್ಟಾಂಪನ್ನು ದತ್ತಗೋಕುಲ ಕಟ್ಟಡದ ಮಾಲೀಕ ಗೋಪಾಲಕೃಷ್ಣ ಶೆಣೈ ಬಿಡುಗಡೆಗೊಳಿಸಿದರು.

    ಎರಡು ವರ್ಷಗಳ ಹಿಂದೆ ಸ್ಥಾಪನೆಯಾದ ಸಫಲ ಸೌಹಾರ್ದ ಸಹಕಾರಿ ನಿಯಮಿತವು ಕೊರೊನಾ ಕಾಲದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿ ಯಶಸ್ವಿಯಾಗಿದ್ದಲ್ಲದೆ, ಹೊಸದೊಂದು ಶಾಖೆಯನ್ನು ಆರಂಭಿಸಿರುವುದು ಶ್ಲಾಘನೀಯ ಎಂದು ಮುಂಬೈ ಸಾಪಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಫಲ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

    ಸಫಲ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಸಂಜೀವ ಅಡ್ಯಾರ್‌ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ನಮ್ಮ ಸಂಸ್ಥೆ ಬೆಳೆಯಲು ಗ್ರಾಹಕರು, ಪಾಲುಬಂಡವಾಳದಾರರು, ಠೇವಣಿದಾರರು, ನಿರ್ದೇಶಕರು ಹಾಗೂ ಸಿಬಂದಿ ವರ್ಗವೇ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು.

    ಎರಡನೇ ವರ್ಷವೇ 45 ಕೋಟಿ ರೂ. ವಹಿವಾಟು: 2020ರ ಫೆಬ್ರವರಿಯಲ್ಲಿ ಉದ್ಘಾಟನೆಗೊಂಡ ಸಫಲ ಸೌಹಾರ್ದ ಸಹಕಾರಿ ನಿಯಮಿತ 2021-22ರ ಸಾಲಿನಲ್ಲಿ45 ಕೋಟಿ ರೂಪಾಯಿ ವಹಿವಾಟು ನಡೆಸಿದೆ. ಹತ್ತು ಕೋಟಿ ರೂಪಾಯಿ ಠೇವಣಿ ಹೊಂದಿದ್ದು 9.20 ಕೋಟಿ ರೂಪಾಯಿ ಸಾಲವಿದೆ. ಜೊತೆಗೆ 1.60 ಕೋಟಿ ರೂಪಾಯಿ ಪಾಲು ಬಂಡವಾಳವಿದ್ದು, ಎರಡೂ ವರ್ಷಗಳಲ್ಲಿ ಸದಸ್ಯರಿಗೆ ಡಿವಿಡೆಂಡ್ ಕೂಡ ನೀಡಲಾಗಿದೆ ಎಂದು ನಿರ್ದೇಶಕ ಭಾಸ್ಕರ ಎಸ್. ವಿವರಿಸಿದರು.

    ಬಿಕರ್ನಕಟ್ಟೆ ಇನ್‌ಫೆಂಟ್ ಜೀಸಸ್ ಚರ್ಚ್‌ನ ಧರ್ಮಗುರು ಚಾರ್ಲ್ಸ್ ಸೆರಾವೋ, ಕಾರ್ಪೊರೇಟರ್ ಶಕೀಲಾ ಕಾವ, ವಿಶ್ವಗಾಣಿಗರ ಚಾವಡಿ ಅಧ್ಯಕ್ಷ ಹರಿಪ್ರಸಾದ್ ಅತಿಥಿಗಳಾಗಿ ಆಗಮಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಪ್ರೇಮಾನಂದ ಸಾಲಿಯಾನ್‌, ನಿರ್ದೇಶಕರಾದ ಎಸ್. ರಮೇಶ್‌, ಮಾಧವ ಸುವರ್ಣ, ಮಾಧವ ಮಾವೆ, ಬಿ. ರಾಮದಾಸ್, ಎ.ಪಿ.ವೆಂಕಟೇಶ್, ಗೋಪಾಲಕೃಷ್ಣ, ಅನಿಲ್ ಕುಮಾರ್, ಮಹಾಬಲ ಅಡ್ಯಾರ್, ಕೆ. ಮೋನಪ್ಪ ಸಫಲಿಗ, ತಿರುಮಲೇಶ್ ಸಫಲಿಗ, ಎಚ್.ಮೋಹಿನಿ, ಅನಿತಾ, ಸತ್ಯಪ್ರಭಾ, ನಾಮನಿರ್ದೇಶಿತ ನಿರ್ದೇಶಕರಾದ ಯು.ಬಿ. ವಿಜಯಕುಮಾರ್, ಸೂರಜ್, ಪ್ರಧಾನ ವ್ಯವಸ್ಥಾಪಕ ಪ್ರಮೋದ್, ಶಾಖಾಧಿಕಾರಿ ಜೆ.ಎಸ್.ಪ್ರವೀಣ್  ಉಪಸ್ಥಿತರಿದ್ದರು. ಸಫಲ ಸಹಕಾರಿ ನಿಯಮಿತದ ನಿರ್ದೇಶಕ ಎಸ್. ಭಾಸ್ಕರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.. ಗೌರವ ಸಲಹೆಗಾರ ಯು. ಹರಿದಾಸ್ ವಂದನಾರ್ಪಣೆ ಸಲ್ಲಿಸಿದ್ದು, ಅರುಣ್ ಕುಮಾರ್ ಉಳ್ಳಾಲ ಕಾರ್ಯಕ್ರಮದ ನಿರೂಪಣೆ ಮಾಡಿದರು.

    ಸಂಬಂಧಿತ ಸುದ್ದಿ: ಸಂಭ್ರಮ-ಸಾಧನೆ-ಸಂವಾದದಿ ಮೇಳೈಸಿತು ʼಸಂಪರ್ಕ ಸುಧಾʼ ರಜತ ಮಹೋತ್ಸವ

    ಸಂಬಂಧಿತ ಸುದ್ದಿ: ನಿಮಗೆ ಚುನಾವಣೆ ಗೆಲ್ಲಲು ಮೋದಿ ಹೆಸರು ಬೇಕು, ಗಾಣಿಗ ಸಮಾಜ ಬೇಡವೇ..?

    ಸಂಬಂಧಿತ ಸುದ್ದಿ: ಗಾಣಿಗ ನಿಗಮ-ಮಂಡಳಿಗಾಗಿ ಮೋದಿಯ ಸೆಳೆಯುವತ್ತ ಗಾಣಿಗ ಮುಖಂಡರ ಚಿತ್ತ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!