Saturday, September 21, 2024
spot_img
More

    Latest Posts

    ಚಾಮರಾಜಪೇಟೆಗಾಗಿ ಸಂಸದರು-ಶಾಸಕರಿಂದ ಮಾಸಿಕ ಸಭೆ: ಪಿ.ಸಿ.ಮೋಹನ್‌ ಭರವಸೆ

    ಬೆಂಗಳೂರು: ಇನ್ನುಮುಂದೆ ಚಾಮರಾಜಪೇಟೆ ಬಡಾವಣೆ ನಿವಾಸಿಗರ ಸಮಸ್ಯೆಗಳು ತಿಂಗಳೊಳಗಾಗಿ ಜನಪ್ರತಿನಿಧಿಗಳಿಗೆ ತಲುಪಿ ಪರಿಹಾರಗೊಳ್ಳಲಿವೆ. ಏಕೆಂದರೆ ಚಾಮರಾಜಪೇಟೆ ಬಡಾವಣೆಯ ಜನರ ಕುಂದು-ಕೊರತೆಯ ಅಹವಾಲುಗಳನ್ನು ಆಲಿಸಲು ಖುದ್ದು ಸಂಸದ-ಶಾಸಕರೇ ತಿಂಗಳಿಗೊಮ್ಮೆ ಹಾಜರಿರಲಿದ್ದಾರೆ.

    ಹೀಗೆಂದು ಸಂಸದರೇ ಖುದ್ದು ಭರವಸೆ ನೀಡಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ ಮಕ್ಕಳ ಕೂಟದಲ್ಲಿ ಮಾ.20ರಂದು ನಡೆದ ಚಾಮರಾಜಪೇಟೆ ರೆಸಿಡೆಂಟ್ಸ್‌ ವೆಲ್‌ಫೇರ್‌ ಅಸೋಸಿಯೇಷನ್‌ (ರಿ.) ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಸಂಸದ ಪಿ.ಸಿ.ಮೋಹನ್‌ ಅವರು ಸಂಘವನ್ನು ಉದ್ಘಾಟಿಸಿ ಈ ವಿಷಯ ತಿಳಿಸಿದರು.

    ಚಾಮರಾಜಪೇಟೆ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘದವರು ತಿಂಗಳಿಗೊಮ್ಮೆ ಸಭೆ ಕರೆಯುವುದಾಗಿ ಹೇಳಿದ್ದಾರೆ. ಅವರ ಸಭೆಯಲ್ಲಿ ಪ್ರತಿ ತಿಂಗಳೂ ಶಾಸಕರ ಜೊತೆಯಾಗಿ ನಾನು ಹಾಜರಿದ್ದು, ಬಡಾವಣೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಸಂಸದ ಪಿ.ಸಿ. ಮೋಹನ್‌ ಭರವಸೆ ನೀಡಿದರು.

    ಸಂಸದ ಪಿ.ಸಿ.ಮೋಹನ್‌, ಅಧ್ಯಕ್ಷ ಬಿ.ಎಸ್.ಸುಬ್ಬಣ್ಣ ಮತ್ತಿತರರಿಂದ ಸಂಘದ ಉದ್ಘಾಟನೆ

    ಸಂಸದನಾಗಿ ನಾನು ಹಾಗೂ ಶಾಸಕರಾಗಿ ಜಮೀರ್‌ ಅಹಮದ್‌ ಖಾನ್‌ ಬೇರೆ ಬೇರೆ ಪಕ್ಷದವರಾದರೂ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಮ್ಮಲ್ಲಿ ಪಕ್ಷಭೇದವಿಲ್ಲ. ಐದು ವರ್ಷದ ಅವಧಿಯಲ್ಲಿ ಒಂದು ಹದಿನೈದು ದಿನ ಮಾತ್ರ ಅವರು ಅವರ ಪರವಾಗಿ ಹಾಗೂ ನಾನು ನನ್ನ ಪರವಾಗಿ ಮತ ಯಾಚಿಸುತ್ತೇವೆ. ಉಳಿದಂತೆ ನಮ್ಮದು ಪಕ್ಷಾತೀತ ಕೆಲಸ ಎಂದು ಸಂಸದರು ತಿಳಿಸಿದರು.

    ಸಂಘದವರು ಬಡಾವಣೆಗೆ ಸಿಸಿಟಿವಿ ಅಳವಡಿಕೆಗೆ ಅನುದಾನ ನೀಡುವಂತೆ ಕೋರಿದ್ದು, ಅದಕ್ಕೆ ಸಂಸದರ ನಿಧಿಯಿಂದ ಹಣ ಒದಗಿಸುವ ಭರವಸೆ ನೀಡಿದರು. ಇನ್ನು ಚಾಮರಾಜಪೇಟೆಯ ಫುಟ್‌ಪಾತ್ ವ್ಯಾಪಾರಿಗಳಿಗೆ ಸೂಕ್ತ ಜಾಗ ಕೊಡುವ ಬಗ್ಗೆ ನೀವೇ ನಿರ್ಧರಿಸಿ ಸಲಹೆ ಕೊಟ್ಟರೆ ಆ ಕುರಿತು ಕ್ರಮ ಜರುಗಿಸಲಾಗುವುದು ಎಂದರು.

    ಲಾಂಛನಕ್ಕೆ ಮೆಚ್ಚುಗೆ: ಸಂಘದ ಲಾಂಛನವನ್ನಾಗಿ ಚಾಮರಾಜ ಒಡೆಯರ್‌ ಅವರ ಚಿತ್ರವನ್ನು ಆರಿಸಿಕೊಂಡಿರುವುದು ಸ್ವಾಗತಾರ್ಹ. ಇದು ಅವರದೇ ಹೆಸರಿನಲ್ಲಿರುವ ಬಡಾವಣೆಯಾದರೂ ಎಲ್ಲೂ ಅವರ ಪುತ್ಥಳಿ ಇಲ್ಲ. ಕೋಟೆ ಪ್ರೌಢಶಾಲೆಯ ಒಂದು ಬದಿಯ ಜಾಗದಲ್ಲಿ ಚಾಮರಾಜ ಒಡೆಯರ್‌ ಅವರ ಪುತ್ಥಳಿ ನಿರ್ಮಿಸಿ, ಈಗಿನ ಯುವರಾಜರಿಂದ ಅದನ್ನು ಉದ್ಘಾಟಿಸುವ ಆಶಯ ವ್ಯಕ್ತಪಡಿಸಿದ ಅವರು, ಆ ಕುರಿತು ಪಾಲಿಕೆ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

    ಸಂಸದರಿಂದ ಲಾಂಛನ ಅನಾವರಣ

    ನೀವು ನನ್ನನ್ನು ಮೂರು ಬಾರಿ ಸಂಸದರಾಗಿ ಆರಿಸಿದ್ದೀರಿ. ಅದಕ್ಕೆ ಪ್ರತಿಯಾಗಿ ನಾನು ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಚಾಮರಾಜಪೇಟೆಯ ವೆನ್‌ಲಾಕ್‌ ಆಸ್ಪತ್ರೆ ಆವರಣದಲ್ಲಿ ಬೆಂಗಳೂರು ಒನ್‌ ಸ್ಥಾಪಿಸಿ, ಸುಸಜ್ಜಿತ ಲೈಬ್ರರಿ ಕೂಡ ನಿರ್ಮಿಸಲಾಗಿದೆ. ಅಲ್ಲಿ ಮಹಿಳೆಯರಿಗೆಂದೇ ರಾಜ್ಯದ ಮೊದಲ ಎಕ್ಸ್‌ಕ್ಲೂಸಿವ್‌ ಜಿಮ್‌ ಕೂಡ ಮಾಡಿಕೊಡಲಾಗಿದೆ. ಇನ್ನೊಂದು ವರ್ಷದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗಾಗಿ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು ಎಂದರು.

    ಈ ಬಡಾವಣೆ ನಿರ್ಮಾಣವಾಗಿ 132 ವರ್ಷ ಸಂದಿದ್ದು, ಯಾವಾಗಲೋ ಸಂಘ ನಿರ್ಮಾಣ ಆಗಬೇಕಿತ್ತು. ಆ ಕೆಲಸ ಇಂದು ಆಗಿದೆ, ಇದರಿಂದ ಬಡಾವಣೆಗೆ ಇನ್ನಷ್ಟು ಒಳಿತಾಗಲಿ ಎಂದು ಹಾರೈಸಿದರು. ನಾನು ಕೂಡ ಇದೇ ಬಡಾವಣೆಯಲ್ಲಿ ಹುಟ್ಟಿ ಬೆಳೆದವನು, ಈಗ ಕೆಲವು ವರ್ಷಗಳಿಂದ ವಾಸ್ತವ್ಯ ಬದಲಾಗಿದೆ ಎಂದರು.

    ಆರೋಗ್ಯ-ವಿದ್ಯಾಭ್ಯಾಸಕ್ಕೆ ಆದ್ಯತೆ: ಸಂಘದ ಅಧ್ಯಕ್ಷ ಬಿ.ಎಸ್.‌ ಸುಬ್ಬಣ್ಣ ಮಾತನಾಡಿ, ಸಂಘ ಆರಂಭವಾದ ಬಗೆ, ಅದಕ್ಕೆ ಜೊತೆಯಾದವರ ಬಗ್ಗೆ ವಿವರಿಸಿದರು. ಇದು ಹತ್ತನೇ ಚಾಮರಾಜ ಒಡೆಯರ್‌ ಅವರು ನಿರ್ಮಿಸಿದ್ದ ಬಡಾವಣೆ ಆಗಿರುವುದರಿಂದ ಒಡೆಯರ್‌ ಅವರ ಹೆಸರು ಹಾಗೂ ಚಿತ್ರವನ್ನೇ ಲಾಂಛನವಾಗಿ ಬಳಸಿಕೊಳ್ಳಲಾಗಿದೆ. ಚಾಮರಾಜಪೇಟೆ 1ನೇ ಮುಖ್ಯರಸ್ತೆಯಿಂದ 9ನೇ ಮುಖ್ಯರಸ್ತೆ ವರೆಗೆ ಸಂಘದ ವ್ಯಾಪ್ತಿ ಇದ್ದು, ಈ ವ್ಯಾಪ್ತಿಯಲ್ಲಿನ ಸ್ವಂತ ಮನೆ ಹೊಂದಿರುವ ಯಾರು ಬೇಕಾದರೂ ಸಂಘದ ಸದಸ್ಯರಾಗಬಹುದು. ಸದ್ಯ ಸಂಘದಲ್ಲಿ 125 ಸದಸ್ಯರಿದ್ದು, ನಿವಾಸಿಗರು ಬಡಾವಣೆಗೆ ಸಂಬಂಧಿಸಿದ ತಮ್ಮ ಕುಂದುಕೊರತೆಗಳನ್ನು ನಮ್ಮ ಗಮನಕ್ಕೆ ತಂದಲ್ಲಿ ಅದನ್ನು ಬಗೆಹರಿಸಲಾಗುವುದು ಎಂದರು. ದೊಡ್ಡ ಸಮಸ್ಯೆಗಳಿಗೆ ಸಂಸದರು-ಶಾಸಕರ ನೆರವು ಪಡೆದು ಬಗೆಹರಿಸಲಾಗುವುದು ಎಂದ ಅವರು, ಬಡಾವಣೆಯಲ್ಲಿ ಆದಷ್ಟೂ ಒಗ್ಗಟ್ಟಿನಿಂದ ಇರೋಣ ಎಂದು ಆಶಯ ವ್ಯಕ್ತಪಡಿಸಿದರು. ಆರೋಗ್ಯ ಶಿಬಿರ,  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ಹಾಗೂ ಪುರಸ್ಕಾರ ಸೇರಿದಂತೆ ಹಲವು ಉದ್ದೇಶಗಳನ್ನು ಸಂಘ ಇರಿಸಿಕೊಂಡಿದೆ ಎಂದರು.

    ಮೈಸೂರಿನ ಕಥೆಗಳು ಖ್ಯಾತಿಯ ಧರ್ಮೇಂದ್ರ ಕುಮಾರ್ ಅರೇಹಳ್ಳಿ ಮಾತನಾಡಿ, ಚಾಮರಾಜಪೇಟೆಯ ಐತಿಹಾಸಿಕ ಸಂಗತಿಗಳನ್ನು ತಿಳಿಸಿದರು. ಚಾಮರಾಜಪೇಟೆಯ ಮಾಜಿ ಪಾಲಿಕೆ ಸದಸ್ಯ ಚಂದ್ರಶೇಖರ್‌ ತಮ್ಮ ಸಕಲ ಸಹಕಾರ ಇರುವುದಾಗಿ ತಿಳಿಸಿದರು.

    ಸಂಘದ ಗೌರವಾಧ್ಯಕ್ಷ ಡಾ.ಎ. ಪ್ರಕಾಶ್‌, ಉಪಾಧ್ಯಕ್ಷರಾದ ಡಾ.ಎನ್‌.ಎಸ್‌. ಕೃಷ್ಣಮೂರ್ತಿ, ಎ.ಪಿ. ಗಂಗಾಧರ್, ಕಾನೂನು ಸಲಹೆಗಾರ ಬಿ.ಎಸ್.ರಾಧಾನಂದನ್‌ ಹಾಗೂ ಸಂಘದ ಪದಾಧಿಕಾರಿಗಳು, ಬಡಾವಣೆಯ ನಿವಾಸಿಗರು ಉಪಸ್ಥಿತರಿದ್ದರು.

    ಚಾಮರಾಜಪೇಟೆ ರೆಸಿಡೆಂಟ್ಸ್‌ ವೆಲ್‌ಫೇರ್‌ ಅಸೋಸಿಯೇಷನ್‌ (ರಿ.) ಉದ್ಘಾಟನೆ ಕುರಿತ ಸುದ್ದಿಯನ್ನು ಪ್ರಕಟಿಸಿದ ಎಲ್ಲ ಮಾಧ್ಯಮ ಸಂಸ್ಥೆಗಳಿಗೆ ಹಾಗೂ ಅದರ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗಕ್ಕೆ ಸಂಘದ ಅಧ್ಯಕ್ಷ ಬಿ.ಎಸ್.‌ ಸುಬ್ಬಣ್ಣ ಧನ್ಯವಾದಗಳನ್ನು ಸಲ್ಲಿಸಿ, ಸಂತೋಷ ವ್ಯಕ್ತಪಡಿಸಿದ್ದಾರೆ.

    ವಿಜಯವಾಣಿ
    ಕನ್ನಡಪ್ರಭ
    ವಿಶ್ವವಾಣಿ
    ಹೊಸದಿಗಂತ
    ವಿಜಯಕರ್ನಾಟಕ
    ಪ್ರಜಾವಾಣಿ

    ಸಂಬಂಧಿತ ಸುದ್ದಿ: ಚಾಮರಾಜಪೇಟೆ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಷನ್ ಇದೇ ರವಿವಾರ ಉದ್ಘಾಟನೆ

    ಸಂಬಂಧಿತ ಸುದ್ದಿ: ನಿಲುಗಡೆ-ಸಂಚಾರ ಸಮಸ್ಯೆ ಬಗ್ಗೆ ಪೊಲೀಸರ ಗಮನ ಸೆಳೆದ ಚಾಮರಾಜಪೇಟೆ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘ

    ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ದೀಪವೈಭವ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!