Saturday, September 21, 2024
spot_img
More

    Latest Posts

    ಪುಟ್ಟ ಸ್ವಾಮಿಯನ್ನು ಕೂರಿಸಲು ಹೋಗಿ ತಾವೇ ಪೂರ್ಣ ಸ್ವಾಮಿ ಆಗಿದ್ದೇಕೆ?

    ಬೆಂಗಳೂರು: ಬಿ.ಜೆ. ಪುಟ್ಟಸ್ವಾಮಿ.. – ಈ ಹೆಸರು ಗಾಣಿಗ ಸಮುದಾಯದಲ್ಲಿ ಬಹುತೇಕ ಎಲ್ಲರಿಗೂ ಚಿರಪರಿಚಿತ. ಸಾಮಾಜಿಕವಾಗಿ ಹೇಳುವುದಾದರೆ ಇವರು ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ, ವಿಶ್ವ ಗಾಣಿಗರ ಸಮುದಾಯ ಚಾರಿಟಬಲ್‌ ಟ್ರಸ್ಟ್‌ (ರಿ.) ಸಂಸ್ಥಾಪಕ.

    ರಾಜಕೀಯವಾಗಿ ಹೇಳುವುದಾದರೆ, ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ, ವಿಧಾನಪರಿಷತ್‌ ಸದಸ್ಯ, ಸಚಿವ, ಕರ್ನಾಟಕ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಆಗಿದ್ದವರು. ಮಾತ್ರವಲ್ಲ, ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಸಂಸ್ಥಾಪಕರು ಕೂಡ.

    ತಾವು ಗಾಣಿಗ ಸಮುದಾಯಕ್ಕಾಗಿ ಸ್ಥಾಪಿಸಿದ್ದ ಈ ಪೀಠಕ್ಕೆ ಅಧಿಪತಿಯಾಗಿ ಮೂವರು ಪುಟ್ಟ ಸ್ವಾಮಿಗಳನ್ನು ಅಂದರೆ ಯುವಕರನ್ನು ಸ್ವಾಮೀಜಿಯಾಗಿ ಪಟ್ಟಾಭಿಷೇಕ ಮಾಡಲು ಮುಂದಾಗಿದ್ದ ಬಿ.ಜೆ. ಪುಟ್ಟಸ್ವಾಮಿ ಸದ್ಯ ತಾವೇ ಪೂರ್ಣ ಸ್ವಾಮಿಯಾಗಿ ಅರ್ಥಾತ್‌ ಶ್ರೀಪೂರ್ಣಾನಂದಪುರಿ ಸ್ವಾಮಿಯಾಗಿ ಪೀಠಾರೋಹಣ ಮಾಡಲು ಸಜ್ಜಾಗಿದ್ದಾರೆ. ಹೀಗೆ ಪುಟ್ಟ ಸ್ವಾಮಿಯನ್ನು ಕೂರಿಸಲು ಹೋಗಿ ತಾವೇ ಪೂರ್ಣ ಸ್ವಾಮಿಯಾಗಿದ್ದೇಕೆ ಎಂಬ ಕುತೂಹಲ ಯಾರಲ್ಲಾದರೂ ಮೂಡಿದರೆ ಅಚ್ಚರಿ ಏನಲ್ಲ. ಅದನ್ನೆಲ್ಲ ನಿರೀಕ್ಷಿಸಿರುವ ಪುಟ್ಟಸ್ವಾಮಿಯವರು ತಮ್ಮ ಈ ವರೆಗಿನ ನಡೆ, ಕಾರ್ಯ, ಸಾಧನೆ ಎಲ್ಲವನ್ನೂ ಬಿಡಿಬಿಡಿಯಾಗಿ ವಿವರಿಸಿದ್ದಾರೆ. ಅದರ ಪೂರ್ಣ ವಿವರವನ್ನು ಗ್ಲೋಬಲ್‌ ಗಾಣಿಗ.ಕಾಮ್ ತನ್ನ ಸಮಾಜದ ಸಮಸ್ತ ಓದುಗರಿಗಾಗಿ ಇಲ್ಲಿ ನೀಡಿದೆ.

    ಶ್ರೀ ಪೂರ್ಣಾನಂದಪುರಿ ಸ್ವಾಮೀಜಿ ಆಗಲಿರುವ ಬಿ.ಜೆ.ಪುಟ್ಟಸ್ವಾಮಿ

    ಬಂಧುಗಳಲ್ಲಿ ನನ್ನ ಸಾಧನೆಯ ನುಡಿ

    ಆತ್ಮೀಯರೇ,

    • ಮುಖ್ಯವಾಗಿ ಗಾಣಿಗ ಜನಾಂಗ ಹಾಗೂ ಇತರೆ ಹಿಂದುಳಿದ ವರ್ಗಗಳ ಸಮಾಜದಲ್ಲಿನ ಸ್ಥಿತಿಗತಿಗಳನ್ನು ಸ್ವತ: ಅನುಭವಿಸಿ ಜ್ಯೋತಿಫಣ ಸಂಘ ಮತ್ತು ಅಖಿಲ ಕರ್ನಾಟಕ ಗಾಣಿಗರ ಸಂಘಗಳ ಸ್ಥಾಪನೆಯಲ್ಲಿ ಮುಖ್ಯ ಪಾತ್ರವಹಿಸಿ, ಆ ಎರಡು ಸಂಘಗಳಿಗೆ ನಿವೇಶನ ಕೊಡಿಸಿದ್ದೇನೆ.
    • ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷನಾಗಿ ರಾಜ್ಯದ ಹಲವೆಡೆ ಸಮಾವೇಶಗಳನ್ನು ನಡೆಸಿ ಒಳಪಂಗಡಗಳ ಐಕ್ಯತೆಗೆ ಶ್ರಮಿಸಿದ ಪ್ರಯುಕ್ತ ರಕ್ತ ಸಂಬಂಧ, ಬಾಂಧವ್ಯ ಬೆಳೆಯುತ್ತಿದೆ.
    • ತಪ್ಪು ಅಂಕಿ-ಅಂಶಗಳ ಆಧಾರದ ಮೇಲೆ 1990-91ರಲ್ಲಿ ನ್ಯಾ. ಚಿನ್ನಪ್ಪ ರೆಡ್ಡಿ ಆಯೋಗವು ಗಾಣಿಗ ಜನಾಂಗವನ್ನು ಅತ್ಯಂತ ಮುಂದುವರಿದ ಜನಾಂಗವೆಂದು ಸರ್ಕಾರಕ್ಕೆ ವರದಿ ನೀಡಿತ್ತು.
    • 1993-94ರಲ್ಲಿ ಸರ್ಕಾರದ ಉನ್ನತ ಮಟ್ಟದ ಸಮಿತಿ ಮುಂದೆ ವಾಸ್ತವಿಕ ಅಂಕಿ-ಅಂಶಗಳನ್ನು ಮಂಡಿಸಿ ಗಾಣಿಗ ಜನಾಂಗವನ್ನು ಅತ್ಯಂತ ಹಿಂದುಳಿದ ವರ್ಗಗಳ ಮೀಸಲಾತಿ 2ಎ’ಗೆ ಸೇರಿಸುವಲ್ಲಿ ಯಶಸ್ವಿಯಾದೆನು. ಇಂದು ಜನಾಂಗದ ವಿದ್ಯಾವಂತ ಯುವಕ – ಯುವತಿಯರು ಎಂಜಿನಿಯರ್‌ಗಳಾಗಿ, ಡಾಕ್ಟರ್‌ಗಳಾಗಿ ಹಾಗೂ ಸರ್ಕಾರದ ಉನ್ನತ ಹುದ್ದೆಗಳನ್ನು ಪಡೆಯುತ್ತಿದ್ದಾರೆ.
    • ರಾಜಕೀಯವಾಗಿ ಜನಾಂಗವನ್ನು ಪ್ರವರ್ಗ-2ಎ’ ಗುಂಪಿಗೆ ಸೇರಿಸಿರುವುದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಕ್ಯಾಟಗರಿ ‘ಎ’ ಗುಂಪಿಗೆ ಮೀಸಲಾತಿ ಪಡೆದಿದೆ. ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮವರು ಚುನಾಯಿತರಾಗುತ್ತಿದ್ದಾರೆ.
    • 1993-94ರಲ್ಲಿ ಕೊಳಚೆ ನಿರ್ಮೂಲನ ಮಂಡಳಿಯ ಅಧ್ಯಕ್ಷನಾಗಿ ಬೆಂಗಳೂರು, ಮಂಡ್ಯ, ಹಾಸನದಲ್ಲಿ ಜನಾಂಗದವರಿಗೆ ನೂರಾರು ಮನೆಗಳನ್ನು ಮಂಡಳಿಯಿಂದ ಕೊಟ್ಟಿದ್ದೇನೆ.
    • ಸಹಕಾರ ಮಂತ್ರಿಯಾಗಿ ದೇಶದಲ್ಲೇ ಮಾದರಿಯಾಗಿ ಎಲ್ಲಾ ಸಹಕಾರ ಸಂಘಗಳ ಆಡಳಿತ ಮಂಡಳಿಗಳಲ್ಲಿ ಹಿಂದುಳಿದ ವರ್ಗಗಳಿಗೆ ಎರಡು ಸ್ಥಾನಗಳನ್ನು ಮೀಸಲಾತಿ ಅವಕಾಶ ಕಲ್ಪಿಸಿದ್ದೇನೆ ಹಾಗೂ ಚುನಾವಣಾ ಆಯೋಗವನ್ನು ಕಾಯ್ದೆ ತಿದ್ದುಪಡಿ ಮೂಲಕ ತಂದಿದ್ದೇನೆ.

    ರಾಜಕೀಯ ಹಿನ್ನೆಲೆ

    • 1982ರಲ್ಲಿ ಅಂದಿನ ಸಚಿವರಾದ ದಿವಂಗತ ಪಿ. ವೆಂಕಟರಮಣರವರ ಪ್ರೋತ್ಸಾಹ ಮತ್ತು ಅಂದಿನ ಮುಖ್ಯಮಂತ್ರಿಯವರಾದ ದಿವಂಗತ ಆರ್. ಗುಂಡುರಾಯರವರು ಧರ್ಮದರ್ಶನದಲ್ಲಿ ನನಗೆ ವಿಧಾನ ಪರಿಷತ್ತಿನ ಸದಸ್ಯತ್ವವನ್ನು ನೀಡಿದರು.
    • ಸಕ್ರಿಯ ಸುಮಾರು 45 ವರ್ಷಗಳ ರಾಜಕೀಯ ಜೀವನದಲ್ಲಿ ಶಾಸಕನಾಗಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ, 2012ರಲ್ಲಿ ಶ್ರೀ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ ವಿಧಾನ ಪರಿಷತ್ತಿನ ಸದಸ್ಯನಾಗಿ ಹಾಗೂ ಸಹಕಾರ ಸಚಿವನಾಗಿ ಮತ್ತು 2019ರಲ್ಲಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷನಾಗಿ ಯಾವುದೇ ಒಂದು ಸಣ್ಣ ದೋಷವಿಲ್ಲದ ಕಪ್ಪುಚುಕ್ಕೆ ಇಲ್ಲದ ಸ್ವಚ್ಛ ರಾಜಕೀಯ ಜೀವನವನ್ನು ನಡೆಸಿದ್ದೇನೆ.
    • ನ್ಯಾಯಕ್ಕಾಗಿ, ಸಮಾನತೆಗಾಗಿ ನಡೆಸಿದ ಹೋರಾಟದಲ್ಲಿ ನಿಯೋಜನೆ ಮಾಡಿದ ವಿಚಾರಣಾ ಸಂಸ್ಥೆಗಳಿಂದ ಮತ್ತು ಗೌರವ ಕಾಪಾಡುವ ದೃಷ್ಟಿಯಿಂದ ನಾನು ಹೂಡಿದ ಮಾನನಷ್ಟ ಮೊಕದ್ದಮೆಯಲ್ಲಿ ನ್ಯಾಯಾಲಯ ನಡೆಸಿದ ವಿಚಾರಣೆಯಲ್ಲಿ ನನ್ನ ಮೇಲೆ ಒಂದು ಸಣ್ಣ ಗುರುತರವಾದ ಆಪಾದನೆಗಳು ಬಂದಿರುವುದಿಲ್ಲ. ಇವು ನನ್ನ ಸ್ವಚ್ಛ ರಾಜಕೀಯ ಜೀವನಕ್ಕೆ ಸಾಕ್ಷಿಯಾಗಿದೆ.
    • ಇಂಜಿನಿಯರ್ ಆಗಿ, ಮಿಲಿಟರಿಯಲ್ಲಿ ಗುತ್ತಿಗೆದಾರನಾಗಿ ಮತ್ತು ರಾಜಕೀಯ ಸ್ಥಾನಮಾನಗಳಲ್ಲಿ ನ್ಯಾಯವಾಗಿ ಸಂಪಾದಿಸಿದ್ದನ್ನು ಬಿಟ್ಟು ಬೇರೆ ಯಾವುದೇ ಅಕ್ರಮ ಆಸ್ತಿಯನ್ನು ಮಾಡಿಲ್ಲ. ಬೆಂಗಳೂರು ನಗರದಲ್ಲಿ ಒಂದು ಮನೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎರಡು ಎಕರೆ ಜಮೀನು ಹೊಂದಿದ್ದೇನೆ. ಇತರೆ ಯಾವುದೇ ವ್ಯವಹಾರವಿಲ್ಲ. ಇದನ್ನು ಬಿಟ್ಟು ಬೇರೆ ಏನೇ ಇದ್ದರೂ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು.
    • ನನ್ನ ರಾಜಕೀಯದ ಕೊನೆಯ ಅಂತ್ಯದಲ್ಲಿಯೂ ಸಾಲಗಾರನಾಗಿ 1986ರಲ್ಲಿ ಕಟ್ಟಿದ ಒಂದು ಸಣ್ಣ ಮನೆಯನ್ನು ಸಹ ಮಾರಾಟ ಮಾಡಿ ಸಾಲವನ್ನು ತೀರಿಸಿ ನನ್ನ ಮುಂದಿನ ಜೀವನಕ್ಕೂ ಆಧಾರವಾಗಿ ಸ್ವಲ್ಪ ಹಣವನ್ನು ಇಟ್ಟುಕೊಂಡಿದ್ದೇನೆ.
    • ದುಡಿದ ಬಹುಪಾಲು ಹಣವನ್ನು ಜನಾಂಗದ ಸಂಘಟನೆ ಮತ್ತು ಅಭಿವೃದ್ಧಿಗಾಗಿ ವ್ಯಯ ಮಾಡಿದ್ದೇನೆ.

    ಜನಾಂಗಕ್ಕಾಗಿ ಜೀವಮಾನ ಸಾಧನೆ

    • ನನ್ನ ಜೀವನದ ಮಹತ್ವಾಕಾಂಕ್ಷೆ ಈಡೇರಿಕೆಗಾಗಿ ಗುರುಪೀಠ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಶ್ರೀ ಬಿ.ಎಸ್. ಯಡಿಯೂರಪ್ಪ  ಅವರ ಸರ್ಕಾರದಿಂದ 8 ಎಕರೆ ಜಮೀನು ಹಾಗೂ 5 ಕೋಟಿ ರೂ. ಅನುದಾನದ ಮಂಜೂರಾತಿ ಪಡೆದೆನು.
    • ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ಅನುದಾನ ಬಿಡುಗಡೆಗೆ ಕಾರಣಕರ್ತನಾಗಿದ್ದೇನೆ.
    • ಜನಾಂಗದ ಬಂಧುಗಳಿಂದ ರೂ. 17,00,000 ದೇಣಿಗೆ ಮತ್ತು ನನ್ನಿಂದ ಮತ್ತು ನನ್ನ ಇತರೆ ಮೂಲಗಳಿಂದ ರೂ. 1,46,00,000 ಒಟ್ಟು ಗೂಡಿಸಿ ಗುರುಪೀಠ, ವಿದ್ಯಾರ್ಥಿ ನಿಲಯ ಮತ್ತು ಸಮುದಾಯ ಭವನವನ್ನು ನಿರ್ಮಿಸಲು ದಿನಾಂಕ 30-03-2012ರಂದು ಶ್ರೀ ಸಿದ್ದಗಂಗಾ ಶ್ರೀಗಳು ಮತ್ತು ಶ್ರೀ ಆದಿಚುಂಚನಗಿರಿ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಅಂದಿನ ಮಾನ್ಯ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದ್ದರು.
    • ದಿನಾಂಕ: 03-07-2016 ರಂದು ಈ ಕಟ್ಟಡಗಳ ಚಿರಸ್ಮರಣೀಯ ಉದ್ಘಾಟನೆಯನ್ನು ಪ್ರಧಾನಮಂತ್ರಿಗಳ ಹಿರಿಯ ಅಣ್ಣನವರಾದ ಶ್ರೀ ಸೋಮಾಭಾಯಿ ಮೋದಿಯವರ ಅಧ್ಯಕ್ಷತೆಯಲ್ಲಿ ಹಾಗೂ ಮಾನ್ಯ ಮುಖ್ಯಮಂತ್ರಿಗಳು ಮತ್ತು ಇತರ ರಾಜ್ಯ ಹಾಗೂ ಕೇಂದ್ರ ಸಚಿವರುಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು.

    ಗುರುಪೀಠ ಸ್ಥಾಪನೆ ಬಗ್ಗೆ

    • ನನ್ನ ಜೀವಮಾನದ ಆಶಯ ಜನಾಂಗಕ್ಕೆ ಒಂದು ಗುರುಪೀಠವನ್ನು ಸ್ಥಾಪಿಸಿ ಪೀಠಾಧಿಪತಿಗಳ ಮೂಲಕ ಜನಾಂಗಕ್ಕೆ ಒಂದು ದಾರಿ-ದೀಪವನ್ನು ಒದಗಿಸಲು 2016ರಿಂದ 2021ರವರೆಗೆ ಜನಾಂಗದಿಂದ ಸ್ವಇಚ್ಛೆಯಿಂದ ಸ್ವಾಮೀಜಿಯಾಗಲು ಬಂದ 3 ಯುವಕರಿಗೆ ದೀಕ್ಷೆ ಕೊಡಿಸಿದೆನು. ದುರದೃಷ್ಟವಷಾತ್ ಮೂರೂ ಯುವಕರು ಸ್ವಇಚ್ಛೆಯಿಂದ ತಮ್ಮ ಪೂರ್ವಾಶ್ರಮಕ್ಕೆ ಹಿಂತಿರುಗಿದರು.
    • ಒಂದು ಜನಾಂಗದ ಪ್ರಥಮ ಪೀಠಾಧಿಪತಿಯಾಗಲು ಅವರಿಗೆ ದೈವಪ್ರೇರಣೆ ಮತ್ತು ಜನಾಂಗಕ್ಕೆ ಮಾಡಿದ ಅವರ ತ್ಯಾಗ ಪ್ರಮುಖವಾಗುತ್ತದೆ. ಆ ದೈವ ಪ್ರೇರಣೆ ಶ್ರೀ ಬಿ.ಜೆ. ಪುಟ್ಟಸ್ವಾಮಿಯವರಿಗೆ ಪ್ರಾಪ್ತಿಯಾಗಿದೆ. ತದನಂತರ ಅವರು ಪರಿಪಕ್ವ ಯೋಗ್ಯ ಯುವಕರಿಗೆ ಪೀಠ ಹಸ್ತಾಂತರ ಮಾಡಬಹುದೆಂದು ಶ್ರೀ ಟಿ. ರಂಗರಾಜು ಮತ್ತು ಶ್ರೀ ಹನುಮಂತಶೆಟ್ಟಿ ಹಾಗೂ ವ್ಯಾಸಂಗದಲ್ಲಿದ್ದ ಮೂರನೇ ಯುವಕನ ಸಮ್ಮುಖದಲ್ಲಿ ಶ್ರೀ ಕೈಲಾಸ ಆಶ್ರಮದ ಪೀಠಾಧಿಪತಿಗಳವರು ನನಗೆ ತಿಳಿಸಿದರು. ಆಗ ಆ ಯುವಕ ಸ್ವಾಮೀಜಿಯವರಿಗೆ ದೀರ್ಘದಂಡ ನಮಸ್ಕಾರ ಮಾಡುವ ಮೂಲಕ ಪೂರ್ಣ ಸಮ್ಮತಿಯನ್ನು ಸೂಚಿಸಿದರು.
    • ಈ ಮೊದಲು ನನ್ನ ಮನಸ್ಸಿನಲ್ಲಿ ಎಂದಿಗೂ ಪೂಜ್ಯರು ತಿಳಿಸಿದ ಆಲೋಚನೆ ಇರಲಿಲ್ಲ, ಆದರೆ ಕಟ್ಟಡಗಳ ಉದ್ಘಾಟನೆ ಆದಾಗಿನಿಂದ ಇಲ್ಲಿಯವರೆಗೆ ಪೀಠಾಧಿಪತಿಯವರ ನೇಮಕ ಮುಂದೂಡಿಕೊಂಡು ಬಂದದ್ದು ಹಾಗೂ ದೈವ ಪ್ರೇರಣೆ ಎಂದು ಪೂಜ್ಯರು ಹೇಳಿರುವುದು ವಿಸ್ಮಯದ ವಿಷಯವಾಗಿದೆ.
    • ನನ್ನ ಆಯಸ್ಸಿನ ಬಹುಭಾಗವನ್ನು ಜನಾಂಗದ ಅಭಿವೃದ್ಧಿಗಾಗಿ ತನು-ಮನ-ಧನ ಹಾಗೂ ಕಾಲವನ್ನು ಧಾರೆ ಎರೆದಿದ್ದೇನೆ.
    • 2016ರಲ್ಲಿ ಕಟ್ಟಡಗಳನ್ನು ಉದ್ಘಾಟನೆ ಮಾಡಿದರೂ ನನ್ನ ಆಸೆಯಂತೆ ವಿದ್ಯಾರ್ಥಿನಿಲಯ, ಶಾಲೆ ಹಾಗೂ ಜನಾಂಗದ ಚಟುವಟಿಕೆಗಳು ನಡೆಯದಿರುವುದು ನನಗೆ ಅತ್ಯಂತ ದುಃಖವಾಗಿದೆ.
    • ನನ್ನ ಈ 82ನೇ ಇಳಿ ವಯಸ್ಸಿನಲ್ಲಿ ಎಲ್ಲವನ್ನೂ ತ್ಯಾಗ ಮಾಡಿ ಕಠಿಣ ಶ್ರಮಕ್ಕೆ ಪೂಜ್ಯರ ಆದೇಶದಂತೆ ಸಮ್ಮತಿಸಿದ್ದೇನೆ. ಅದಕ್ಕೆ ಕಾರಣ ಜನಾಂಗಕ್ಕೆ ಒಂದು ಶಾಶ್ವತ ದಾರಿದೀಪವಾಗಿ ಗುರುಪೀಠವನ್ನು ನನ್ನ ಜೀವಮಾನದಲ್ಲೇ ಸ್ಥಾಪಿಸಲು ಹಾಗೂ ಜನಾಂಗದ ಬಡ ವಿದ್ಯಾರ್ಥಿಗಳು ಮತ್ತು ಸಮಾಜದ ಇತರೆ ಅನಾಥ ಮಕ್ಕಳ ಮಧ್ಯದಲ್ಲಿ ನನ್ನ ಆಯುಷ್ಯದ ಕೊನೆಯ ದಿನಗಳನ್ನು ಕಳೆಯಲು ಮನಸ್ಸು ಮಾಡಿದ್ದೇನೆ.
    • ದೈವ ಪ್ರೇರಣೆಯಿಂದ ಬಂದ ಆದೇಶವನ್ನು ಗೌರವಿಸಿ ಪ್ರಪ್ರಥಮ ಪೀಠಾಧಿಪತಿಯಾಗಲು ದಿನಾಂಕ: 13.01.2022 ಮತ್ತು 27.02.2022ರಂದು ನಡೆದ ಜನಾಂಗದ ಪ್ರಮುಖರ ಸಭೆಯಲ್ಲಿ ವಿಷಯವನ್ನು ಚರ್ಚಿಸಿ ತಮ್ಮೆಲ್ಲರ ಒಪ್ಪಿಗೆಯ ಮೇರೆಗೆ ಒಪ್ಪಿದ್ದೇನೆ.

    ಮನದಾಳದ ಮಾತುಗಳು

    • ನನ್ನ ಜೀವನದಲ್ಲಿ ಅಸತ್ಯ ನುಡಿದಿಲ್ಲ, ಮೋಸ ಮಾಡಿಲ್ಲ, ವಿಶ್ವಾಸದ್ರೋಹ ಮಾಡಿಲ್ಲ, ಕಾಯಕವೇ ಕೈಲಾಸ ಎಂದು ನಂಬಿ ಕರ್ತವ್ಯ ನಿಷ್ಠೆಯಿಂದ ನನಗೆ ಸಿಕ್ಕ ಹುದ್ದೆಗಳಲ್ಲಿ, ಪ್ರಾಮಾಣಿಕವಾಗಿ, ಸಕ್ರಿಯವಾಗಿ, ಸಮಾಜಮುಖಿಯಾಗಿ, ಬದ್ಧತೆಯಿಂದ ಕೆಲಸ ಮಾಡಿದ್ದೇನೆ.
    • ರಾಜಕಾರಣಿಗಳು ಅಧಿಕಾರವನ್ನು ತಮ್ಮ ಸ್ವಂತಕ್ಕೆ ಬಳಸಿ ಆಸ್ತಿ ಮಾಡಿಕೊಳ್ಳುತ್ತಿರುವ ಈ ದಿನಮಾನಗಳಲ್ಲಿ ಜನಾಂಗದ ಒಳಪಂಗಡಗಳನ್ನು ಒಗ್ಗೂಡಿಸಿ ಜನಾಂಗದ ಶಾಶ್ವತ ಅಭಿವೃದ್ಧಿಗೆ ನನ್ನ ತನು-ಮನ-ಧನ ಮತ್ತು ಹೆಚ್ಚಿನ ಸಮಯವನ್ನು ಧಾರೆ ಎರೆದು ಸ್ಥಾಪಿಸಿದ ಆಸ್ತಿಯನ್ನು ಜನಾಂಗಕ್ಕೆ ಅರ್ಪಿಸಿದ್ದೇನೆ.
    • ಕರ್ಮವು ಮಾನವನ ಕರ್ತವ್ಯ ಫಲವು ದೈವಕೃಪೆ ಅದರಂತೆ, ದೈವಪ್ರೇರಣೆಯ ಪ್ರಕಾರ ಪ್ರಥಮ ಪೀಠಾಧಿಪತಿಯಾಗಲು ಒಪ್ಪಿದ್ದೇನೆ. ಇಲ್ಲಿ ವಾಸ್ತವಾಂಶವನ್ನು ಬಿನ್ನವಿಸಿದ್ದೇನೆ ಹೊರತು ಬೇರೆ ಯಾವ ಅಹಂ ಇಲ್ಲ, ಇದು ನನ್ನ ಕನಸಿನ ನನಸಾಗಿದೆ.
    • ಮುಂದೆ ಬೇರೆ ಜನಾಂಗದವರು ಮಠಕ್ಕೆ ತೋರುವ ಆದರ ಮತ್ತು ವಿಶ್ವಾಸವನ್ನು ನನ್ನ ಜನಾಂಗದ ಬಂಧುಗಳು ಮುಂದಿನ ಜನಾಂಗದ ಭವಿಷ್ಯದ ದೃಷ್ಟಿಯಿಂದ ರಾಗ-ದ್ವೇಷ ಮತ್ತು ರಾಜಕೀಯ ಮತ್ಸರಗಳಿಲ್ಲದೇ ಶ್ರೀ ಮಠದ ಅಭಿವೃದ್ಧಿ ಬಗ್ಗೆ ಆಸಕ್ತಿ ತೋರಬೇಕೆಂದು ಈ ನನ್ನ ಇಳಿ ವಯಸ್ಸಿನಲ್ಲಿ ಜನಾಂಗಕ್ಕೋಸ್ಕರ ಶ್ರಮಿಸಲು ಇಚ್ಛಿಸಿರುವ ನನಗೆ ತಮ್ಮೆಲ್ಲರ ಸಹಕಾರವನ್ನು ಕೋರುತ್ತೇನೆ.

    | ಬಿ.ಜೆ. ಪುಟ್ಟಸ್ವಾಮಿ

    ಸಂಬಂಧಿತ ಸುದ್ದಿ: ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಇನ್ಮುಂದೆ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿ!

    ಸಂಬಂಧಿತ ಸುದ್ದಿ: ಚಾಮರಾಜಪೇಟೆಗಾಗಿ ಸಂಸದರು-ಶಾಸಕರಿಂದ ಮಾಸಿಕ ಸಭೆ: ಪಿ.ಸಿ.ಮೋಹನ್‌ ಭರವಸೆ

    ಸಂಬಂಧಿತ ಸುದ್ದಿ: ಆ ದಿನಗಳ ʼಗಾಣಿಗರ ಬಂಧುʼ..!

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!