ಬೆಂಗಳೂರು: ಗಾಣಿಗ ಸಮಾಜಕ್ಕೆ ಪ್ರತ್ಯೇಕ ನಿಗಮ-ಮಂಡಳಿ ಸ್ಥಾಪನೆ ಮಾಡುವಂತೆ ಒತ್ತಾಯಿಸಿ ರಾಜ್ಯ ಗಾಣಿಗ ಒಕ್ಕೂಟವು ಜು. 4ರ ಸೋಮವಾರ ಶಾಂತಿಯುತ ಧರಣಿ ಹಮ್ಮಿಕೊಂಡಿದೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಂದು ಬೆಳಗ್ಗೆ 9ರಿಂದ ಸಂಜೆ 6ರ ವರೆಗೆ ಶಾಂತಿಯುತ ಧರಣಿ ನಡೆಯಲಿದೆ ಎಂದು ರಾಜ್ಯ ಗಾಣಿಗ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಯತೀಶ್ ಕುಮಾರ್ ತಿಳಿಸಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ನಡೆದಿದ್ದ ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ಜಮಖಂಡಿ ಶಾಸಕ ಆನಂದ ಸಿದ್ದು ನ್ಯಾಮಗೌಡ ಅವರು ಗಾಣಿಗ ಸಮುದಾಯಕ್ಕೆ ಪ್ರತ್ಯೇಕ ನಿಗಮ-ಮಂಡಳಿ ಸ್ಥಾಪಿಸಬೇಕು ಎಂಬ ವಿಷಯವನ್ನು ಪ್ರಸ್ತಾಪಿಸಿದ್ದರು. ಇದಕ್ಕೆ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ದಿನಕರ ಶೆಟ್ಟಿ ಅವರು ಕೂಡ ದನಿಗೂಡಿಸಿದ್ದರು.
ಆದರೆ ಆ ಸಂದರ್ಭದಲ್ಲಿ ಉತ್ತರ ನೀಡಿದ್ದ ಸಚಿವ ಗೋವಿಂದ ಕಾರಜೋಳ ಅವರು, ಗಾಣಿಗ ಸಮಾಜಕ್ಕೆ ಪ್ರತ್ಯೇಕ ನಿಗಮ-ಮಂಡಳಿ ನೀಡಲು ಆಗುವುದಿಲ್ಲ ಎಂದಿದ್ದರು. ಈ ಹಿನ್ನೆಲೆಯಲ್ಲಿ ಸಚಿವರ ವಿರುದ್ಧ ಗಾಣಿಗ ಸಮಾಜದ ಕೆಲವು ಮುಖಂಡರು ಅಸಮಾಧಾನ ಹೊರಹಾಕಿದ್ದರು.
ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಗಾಣಿಗ ಒಕ್ಕೂಟ ಶಾಂತಿಯುತ ಧರಣಿಗೆ ಮುಂದಾಗಿದ್ದು, ಗಾಣಿಗ ಸಮಾಜಕ್ಕೆ ಪ್ರತ್ಯೇಕ ನಿಗಮ-ಮಂಡಳಿ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಿದೆ.
ಸಂಬಂಧಿತ ಸುದ್ದಿ: ಅಧಿವೇಶನದಲ್ಲಿ ಸದ್ದು ಮಾಡಿತು ಗಾಣಿಗ ನಿಗಮ-ಮಂಡಳಿ ವಿಚಾರ
ಸಂಬಂಧಿತ ಸುದ್ದಿ: ಗಾಣಿಗ ನಿಗಮ-ಮಂಡಳಿಗಾಗಿ ಮೋದಿಯ ಸೆಳೆಯುವತ್ತ ಗಾಣಿಗ ಮುಖಂಡರ ಚಿತ್ತ
ಸಂಬಂಧಿತ ಸುದ್ದಿ: ಗಾಣಿಗರ ನಿಯೋಗದಿಂದ ಸಿಎಂ ಭೇಟಿ, ನಿಗಮ-ಮಂಡಳಿ ಸ್ಥಾಪಿಸುವಂತೆ ಮನವಿ