Sunday, September 22, 2024
spot_img
More

    Latest Posts

    3 ದಶಕಗಳ ಸೇವೆ ಸಲ್ಲಿಸಿದ ಶಿಕ್ಷಕ ಗಣೇಶ್‌ ಅವರಿಗೆ ಪ್ರಣಾಮ ಸಪ್ತಾಹದ ಬೀಳ್ಕೊಡುಗೆ

    ಬೆಂಗಳೂರು: ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕರೊಬ್ಬರಿಗೆ ಸ್ಥಳೀಯರೆಲ್ಲ ಸೇರಿ ಒಂದು ವಾರದ ʼಪ್ರಣಾಮʼದ ಮೂಲಕ ವಿಶಿಷ್ಟವಾಗಿ ಬೀಳ್ಕೊಟ್ಟು ಗಮನ ಸೆಳೆದಿದ್ದಾರೆ. ಈ ರೀತಿಯ ವಿಭಿನ್ನ ಬೀಳ್ಕೊಡುಗೆ ನಡೆದಿದ್ದು ಉಡುಪಿ ಜಿಲ್ಲೆಯ ಹಂಗಾರಕಟ್ಟೆಯ ಚೇತನಾ ಪ್ರೌಢಶಾಲೆಯಲ್ಲಿ. ಇಲ್ಲಿನ ಗಣೇಶ್‌ ಜಿ. ಚೆಲ್ಲೆಮಕ್ಕಿ ಅವರು ಈ ಬೀಳ್ಕೊಡುಗೆಗೆ ಪಾತ್ರರಾದ ಶಿಕ್ಷಕರು.

    ಹಂಗಾರಕಟ್ಟೆ ಚೇತನ ಪ್ರೌಢಶಾಲೆಯಲ್ಲಿ ಗಣೇಶ ಚಲ್ಲಿಮಕ್ಕಿ ಅವರು 10 ವರ್ಷ ಅಧ್ಯಾಪಕರಾಗಿ, 20 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಅವರು ಶಾಲೆಯನ್ನು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಗುರುತಿಸಿಕೊಳ್ಳುವಂತೆ ಮಾಡಿದ್ದಲ್ಲದೆ, ಶಾಲೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡುವ ಗುರುತರ ಕಾರ್ಯವನ್ನೂ ಮಾಡಿದ್ದಾರೆ. ಒಳ್ಳೆಯ ಸಂಪನ್ಮೂಲ ವ್ಯಕ್ತಿ, ಉತ್ತಮ ಸಂಘಟಕರಾಗಿರುವ ಇವರು ಚೇತನ ಶಾಲೆ ರಾಜ್ಯದಲ್ಲೇ ಗುರುತಿಸಿಕೊಳ್ಳುವಂತೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

    ಹೀಗೆ ಶಾಲೆಗೆ ಗಣನೀಯವಾಗಿ ಸೇವೆ ಸಲ್ಲಿಸಿದ ಗಣೇಶ್‌ ಅವರಿಗೆ, ಅವರ ಸೇವಾನಿವೃತ್ತಿಯ ಸಂದರ್ಭದಲ್ಲಿ ತನ್ನ ಕರ್ತವ್ಯಾವಧಿಯಲ್ಲಿ ಅವರ ಬದುಕಿಗೆ ಪ್ರೇರಣೆಯಾದಂಥ ಗುರುಗಳು, ದಾನಿಗಳು, ಸಹಶಿಕ್ಷಕರು, ಮಾಧ್ಯಮ ಸ್ನೇಹಿತರು, ಹಳೆಯ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ವಿದ್ಯಾಭಿಮಾನಿಗಳು, ವಿದ್ಯಾಪೋಷಕರು ಹಾಗೂ ಸಮಾಜಕ್ಕೆ ಕೃತಜ್ಞತೆ ಸಲ್ಲಿಸುವ ದೃಷ್ಟಿಯಲ್ಲಿ ಒಂದು ವಾರದ ʼಪ್ರಣಾಮʼ ಕಾರ್ಯಕ್ರಮ ಆಯೋಜಿಸಿದ್ದರು. ಜುಲೈ 23ರಿಂದ ಜು. 29ರವರೆಗೆ ಈ ಪ್ರಣಾಮ ಸಮಾರಂಭ ನಡೆಯಿತು.

    ಈ ವಾರದ ಪ್ರಣಾಮ ಕಾರ್ಯಕ್ರಮದ ಸಮಾರೋಪ ಸಮಾರಂಭವು ಬ್ರಹ್ಮಾವರ ಮದರ್ ಪ್ಯಾಲೇಸ್‌ನಲ್ಲಿ ಇತ್ತೀಚೆಗೆ ಜರುಗಿತು. ಇಲ್ಲಿ ಗುರು-ಶಿಷ್ಯ ಪರಂಪರೆಯ ಮೂರು ತಲೆಮಾರುಗಳ ಸಮಾಗಮವಾಗಿದ್ದು, ಆಗಮಿಸಿದ್ದವರ ಕಣ್ಮನಕ್ಕೆ ಖುಷಿ ನೀಡಿತ್ತು. ಅದರಲ್ಲೂ ಗಣೇಶ್ ಅವರ ಗುರುಗಳಾದ ಶ್ರೀಧರ ಹಂದೆಯವರ ಮಾತುಗಳು ಗಣೇಶ್‌ ಅವರ ವ್ಯಕ್ತಿತ್ವದ ಮೆರುಗನ್ನು ಹೆಚ್ಚಿಸಿತು. ಇವರ ಸುಮಧುರ ಬಾಂಧವ್ಯಕ್ಕೆ ಸಾಕ್ಷಿ ಎಂಬಂತೆ ಹಲವಾರು ಶಾಲಾ-ಕಾಲೇಜುಗಳು, ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದವು. ವ್ಯವಸ್ಥಿತವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮ ಅದ್ಭುತವಾಗಿ ನೆರವೇರಿತು.

    ಗಾಣಿಗ ಸಮುದಾಯದ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವ ನಿವೃತ್ತ ಶಿಕ್ಷಕ ಗಣೇಶ್‌ ಜೆ. ಚೆಲ್ಲೆಮಕ್ಕಿ ಅವರು ಉಡುಪಿ ಜಿಲ್ಲೆಯ ಬಾರ್ಕೂರಿನಲ್ಲಿರುವ ಶ್ರೀ ವೇಣುಗೋಪಾಲಕೃಷ್ಣ ಎಜುಕೇಷನ್‌ ಸೊಸೈಟಿಯಲ್ಲಿ ಕಾರ್ಯದರ್ಶಿ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಬೆಳವಣಿಗೆಯಲ್ಲೂ ಗಣೇಶ್‌ ಅವರು ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

    ಚೇತನ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಬಿ. ಭರತ್‌ಕುಮಾರ್ ಶೆಟ್ಟಿ, ಕಾರ್ಯದರ್ಶಿ ಎಚ್. ಇಬ್ರಾಹಿಂ ಸಾಹೇಬ್ ಮತ್ತು ಸರ್ವಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು, ಪೋಷಕರು, ಹಳೇ ವಿದ್ಯಾರ್ಥಿಗಳು ಹಾಗೂ ಬಿ.ಡಿ. ಶೆಟ್ಟಿ ಕಾಲೇಜ್ ಆಫ್ ಬ್ಯುಸಿನೆಸ್‌ ಮ್ಯಾನೇಜ್ಮೆಂಟ್‌ನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ನೇತೃತ್ವದಲ್ಲಿ ಈ ಸಮಾರಂಭವು ನೆರವೇರಿತು.

    ಸಂಬಂಧಿತ ಸುದ್ದಿ: ಶ್ರೀರಾಮಾಂಜನೇಯ ವ್ಯಾಯಾಮ ಶಾಲೆ ಮುಖ್ಯ ಶಿಕ್ಷಕ ಶರತ್​ಗೆ ಉತ್ತಮ ಯೋಗ ಗುರು ಪ್ರಶಸ್ತಿ

    ಸಂಬಂಧಿತ ಸುದ್ದಿ: ಶೇಖರ ಗಾಣಿಗ ಅವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

    ಸಂಬಂಧಿತ ಸುದ್ದಿ: ಕನ್ನಡ ಕಲಿಸುತ್ತಿರುವ ಸಮಾಜದ ಶಿಕ್ಷಕಿ; ಇದೊಂದು ‘ಆಶಾ’ದಾಯಕ ಬೆಳವಣಿಗೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!