Saturday, September 21, 2024
spot_img
More

    Latest Posts

    ‘ಸೌತ್ ತಿಂಡೀಸ್‌’ನಲ್ಲಿ ದಕ್ಷಿಣದ ಸೂರ್ಯ, ಸಾಮ್ರಾಟ್ ಅಶೋಕ..!

    ಬೆಂಗಳೂರು: ‘ಸೌತ್ ತಿಂಡೀಸ್’ನಲ್ಲಿ ದಕ್ಷಿಣದ ಸೂರ್ಯ.. ಎಂದಾಕ್ಷಣ ‘ಇದೇನಿದು ಸೂರ್ಯ ಯಾವಾಗಲೂ ಪೂರ್ವ ಇಲ್ಲವೇ ಪಶ್ಚಿಮ ತಾನೇ? ಇದೇನಿದು ದಕ್ಷಿಣದಲ್ಲಿ..?’ ಎಂದು ಯಾರಾದರೂ ಪ್ರಶ್ನಾರ್ಥವಾಗಿ ನೋಡಿದರೂ ಇಲ್ಲಿ ಈ ವಿಷಯದಲ್ಲಂತೂ ದಕ್ಷಿಣದ ಸೂರ್ಯ ಎಂದಿದ್ದು ಸರಿಯಾಗಿಯೇ ಇದೆ.

    ಏಕೆಂದರೆ ಇಲ್ಲಿ ದಕ್ಷಿಣದ ಸೂರ್ಯ ಎಂದರೆ ಬೇರಾರೂ ಅಲ್ಲ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ, ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ತೇಜಸ್ವಿಸೂರ್ಯ. ಇವರು ಇತ್ತೀಚೆಗೆ ಬೆಂಗಳೂರಿನ ಬಸವನಗುಡಿಯ ಕೃಷ್ಣರಾವ್ ಪಾರ್ಕ್ ಬಳಿ ಇರುವ, ಗಾಣಿಗ ಸಮಾಜದ ಬಿ.ಎಂ.ಧನಂಜಯ ಅವರ ಮಾಲೀಕತ್ವದ ‘ಸೌತ್ ತಿಂಡೀಸ್’ ಹೋಟೆಲ್‌ಗೆ ಭೇಟಿ ನೀಡಿದ್ದರು. ಇವರೊಂದಿಗೆ ‘ಸಾಮ್ರಾಟ್ ಅಶೋಕ’ ಎಂದೇ ಹಲವರಿಂದ ಕರೆಯಲ್ಪಡುತ್ತಿರುವ ಸಚಿವ ಆರ್. ಅಶೋಕ, ಪಾಲಿಕೆ ಸದಸ್ಯ ಎನ್.ಆರ್. ರಮೇಶ್ ಅವರೂ ಆಗಮಿಸಿದ್ದರು.

    ಕರೊನಾ ಹಿನ್ನೆಲೆಯಲ್ಲಿ ವಿಧಿಸಿದ್ದ ಲಾಕ್‌ಡೌನ್ ಹಂತಹಂತವಾಗಿ ಅನ್‌ಲಾಕ್ ಆದ ಬಳಿಕ ಹೋಟೆಲ್‌ಗಳೂ ಪುನಃ ಆರಂಭಗೊಂಡಿವೆ. ಆದರೆ ಕರೊನಾ ಭಯದಿಂದ ಹೋಟೆಲ್‌ಗೆ ಹೋಗಿ ಆಹಾರ ಸೇವಿಸಲು ಸಾರ್ವಜನಿಕರು ಕೆಲವರಲ್ಲಿ ಆತಂಕ ಉಳಿದಿದ್ದರಿಂದ, ಅಂಥವರ ಆತಂಕ ನಿವಾರಿಸಿ ಹೋಟೆಲೋದ್ಯಮಿಗಳಿಗೆ ನೈತಿಕ ಸ್ಥೈರ್ಯ ತುಂಬಲು ಖುದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದರು. ಕೆಲವು ದಿನಗಳ ಹಿಂದೆ ಬೆಂಗಳೂರಿನ ಮಾವಳ್ಳಿ ಟಿಫನ್ ರೂಮ್ (ಎಂಟಿಆರ್)ಗೆ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ ಹಾಗೂ ಸಂಸದ ತೇಜಸ್ವಿಸೂರ್ಯ ತೆರಳಿ, ಊಟೋಪಚಾರ ಸೇವಿಸಿ, ಕರೊನಾ ಸಂದರ್ಭದಲ್ಲೂ ಹೋಟೆಲ್ ಊಟ-ತಿಂಡಿಗಳನ್ನು ನಿರಾತಂಕವಾಗಿ ಸೇವಿಸಬಹುದು, ಏನೂ ಸಮಸ್ಯೆ ಇಲ್ಲ ಎಂದು ಸಾರ್ವಜನಿಕರಿಗೆ ಪರೋಕ್ಷವಾಗಿ ಒಂದು ಸಂದೇಶ ರವಾನಿಸಿದ್ದರು.

    ಅದರ ಮುಂದುವರಿದ ಭಾಗವಾಗಿ ಅದಾದ ಮರುದಿನವೇ ಸಂಸದ ತೇಜಸ್ವಿಸೂರ್ಯ, ಸಚಿವ ಅಶೋಕ, ಪಾಲಿಕೆ ಸದಸ್ಯ ಎನ್.ಆರ್.ರಮೇಶ್ ಅವರು ‘ಸೌತ್ ತಿಂಡೀಸ್’ ಹೋಟೆಲ್‌ಗೆ ತೆರಳಿ ತಿಂಡಿ ಸೇವಿಸಿದ್ದಾರೆ. ಮಾತ್ರವಲ್ಲ ಸೌತ್ ತಿಂಡೀಸ್ ಹೋಟೆಲ್‌ನ ಆಹಾರ-ಉಪಚಾರ ಹಾಗೂ ಕರೊನಾ ಹಿನ್ನೆಲೆಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮೂವರೂ ಮೆಚ್ಚುಗೆ ಸೂಚಿಸಿದ್ದಾರೆ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!