Saturday, September 21, 2024
spot_img
More

    Latest Posts

    ಅಂತಾರಾಷ್ಟ್ರೀಯ ಸೈಕ್ಲಿಂಗ್ ಸಾಧಕ ರಾಜು ಭಾಟಿಗೆ ಏಕಲವ್ಯ ಪ್ರಶಸ್ತಿ ಪ್ರದಾನ

    ಬೆಂಗಳೂರು: ಯಾರಾದರೂ ತುಂಬಾ ಕಷ್ಟಪಟ್ಟು ಮುಂದೆ ಬಂದಿದ್ದರೆ, ಸಾಧನೆ ಮಾಡಿದ್ದರೆ, “ತುಂಬಾ ಸೈಕಲ್ ಹೊಡೆದಿದ್ದಾರೆ” ಎಂದು ಅವರು ಪಟ್ಟ ಶ್ರಮವನ್ನು ವರ್ಣಿಸುತ್ತಾರೆ. ಹಾಗೆ ಸೈಕಲ್ ಹೊಡೆದೇ ಅರ್ಥಾತ್ ಅಪಾರ ಶ್ರಮದಿಂದ ಸಾಧಿಸಿ ಗುರುತಿಸಿಕೊಂಡಿದ್ದಾರೆ ಅಂತಾರಾಷ್ಟ್ರೀಯ ಸೈಕ್ಲಿಂಗ್ ಪಟು ರಾಜು ಅಡಿವೆಪ್ಪ ಭಾಟಿ.

    ರಾಜು ಅಡಿವೆಪ್ಪ ಭಾಟಿ ಅವರು ಸೈಕ್ಲಿಂಗ್‌ನಲ್ಲಿ ತಾವು ಮಾಡಿದ ಸಾಧನೆಯಿಂದಾಗಿ ಕರ್ನಾಟಕ ಸರ್ಕಾರ ಕೊಡುವ ಪ್ರತಿಷ್ಠಿತ “ಏಕಲವ್ಯ ಪ್ರಶಸ್ತಿ”ಗೆ ಪಾತ್ರರಾಗಿದ್ದು, ನ. 2ರಂದು ಪ್ರಶಸ್ತಿ ಸ್ವೀಕರಿಸಿದ್ದಾರೆ. ವಿಧಾನ ಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜು ಭಾಟಿ ಅವರಿಗೆ “ಏಕಲವ್ಯ ಪ್ರಶಸ್ತಿ” ಪ್ರದಾನ ಮಾಡಿದ್ದಾರೆ. ಕರ್ನಾಟಕ ಸರ್ಕಾರ 2017, 2018, 2019ನೇ ಸಾಲಿನ ಏಕಲವ್ಯ, ಕ್ರೀಡಾ ರತ್ನ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗಳನ್ನು ನ. 2ರಂದು ಒಟ್ಟಿಗೇ ಪ್ರದಾನ ಮಾಡಿದೆ. ರಾಜು ಭಾಟಿ ಅವರು 2017ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಏಕಲವ್ಯ ಪ್ರಶಸ್ತಿಯು ಏಕಲವ್ಯ ಕಂಚಿನ ಪ್ರತಿಮೆ, ಸ್ಕ್ರೋಲ್, ಸಮವಸ್ತ್ರ ಹಾಗೂ 2 ಲಕ್ಷ ರೂಪಾಯಿ ನಗದು ಒಳಗೊಂಡಿದೆ.

    ಏಕಲವ್ಯ ಪ್ರಶಸ್ತಿ ಸ್ವೀಕರಿಸಿದ ಬಳಿಕ ಖುಷಿಯ ಕ್ಷಣ

    ಮಾವ ಹಾಕಿಕೊಟ್ಟ ಟ್ರ್ಯಾಕ್‌ನಲ್ಲಿ ರಾಜು

    ರಾಜು ಭಾಟಿ ಬಾಲ್ಯದಲ್ಲೇ ಸೈಕ್ಲಿಂಗ್ ಶುರು ಮಾಡಿದ್ದರು. ಚಿಕ್ಕಂದಿನಲ್ಲೇ ಕ್ರೀಡೆ ಬಗ್ಗೆ ಅಪಾರ ಆಸಕ್ತಿ ಇದ್ದ ಇವರಿಗೆ ಸೈಕ್ಲಿಂಗ್ ಟ್ರ್ಯಾಕ್‌ನಲ್ಲಿ ಬಿಟ್ಟವರು ಇವರ ಮಾವ. ಪಿಇಟಿ ಆಗಿದ್ದ ಮಾವ ಶ್ರೀಶೈಲ ರೇಷ್ಮೆ ಅವರು ರಾಜು ನಾಲ್ಕನೇ ಕ್ಲಾಸ್‌ನಲ್ಲಿ ಓದುತ್ತಿದ್ದಾಗಲೇ ಇವರಲ್ಲಿನ ಸಾಧಕನನ್ನು ಗುರುತಿಸಿದ್ದರು. ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ರಾಜುವನ್ನು ಬಾಗಲಕೋಟೆಯ ಸ್ಪೋರ್ಟ್ಸ್ ಹಾಸ್ಟೆಲ್‌ಗೆ ಸೇರಿಸಿ ಸೈಕಲ್ ಟ್ರ್ಯಾಕ್ ತೋರಿಸಿದ್ದರು. ಅಂದರೆ ಸೈಕ್ಲಿಂಗ್‌ನಲ್ಲಿ ಅಭ್ಯಾಸ ಮಾಡುವಂತೆ ಮಾರ್ಗದರ್ಶನ ಮಾಡಿದ್ದರು. ನಂತರ 7ರಿಂದ 10ನೇ ತರಗತಿಯವರೆಗೆ ಬಿಜಾಪುರದ ಸ್ಪೋರ್ಟ್ಸ್ ಹಾಸ್ಟೆಲ್‌ಗೆ ಸೇರಿ ತಮ್ಮ ವಿದ್ಯಾಭ್ಯಾಸ-ಕ್ರೀಡಾಭ್ಯಾಸ ಎರಡನ್ನೂ ಮುಂದುವರಿಸಿದ ರಾಜು, ನಂತರ ದೆಹಲಿಯ ಸ್ಪೋರ್ಟ್ಸ್ ಅಕಾಡೆಮಿಗೆ ಸೇರಿ ಐದು ವರ್ಷ ಸೈಕ್ಲಿಂಗ್‌ನಲ್ಲಿ ಪಳಗಿದರು.

    ಸಾಧನೆ-ಕನಸು: ಸದ್ಯ ವಾರದಲ್ಲಿ 6 ದಿನ ಪ್ರತಿನಿತ್ಯ 4ರಿಂದ 5 ಗಂಟೆ ಕಾಲ 100ರಿಂದ 150 ಕಿ.ಮೀ. ವರೆಗೆ ಸೈಕ್ಲಿಂಗ್ ಅಭ್ಯಾಸ ಮಾಡುತ್ತಿರುವ ರಾಜು, ಮುಂದೆ ಏಷ್ಯನ್ ರೋಡ್ ಸೈಕ್ಲಿಂಗ್‌ನಲ್ಲಿ ಭಾಗವಹಿಸುವ ಕನಸು ಹೊಂದಿದ್ದಾರೆ.

    ವೃತ್ತಿ-ಪ್ರವೃತ್ತಿ: ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಟಕ್ಕಳಕಿಯ ರಾಜು ಅಡಿವೆಪ್ಪ ಭಾಟಿ ತಮ್ಮ ಸೈಕ್ಲಿಂಗ್ ಸಾಧನೆಯಿಂದಾಗಿ ರೈಲ್ವೆ ಇಲಾಖೆಯಲ್ಲಿ ಉದ್ಯೋಗವನ್ನೂ ಗಿಟ್ಟಿಸಿಕೊಂಡಿದ್ದಾರೆ. ಪ್ರಸ್ತುತ ಹುಬ್ಬಳ್ಳಿಯಲ್ಲಿ ಇವರು ರೈಲ್ವೆ ಟಿಕೆಟ್ ಎಕ್ಸಾಮಿನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಗಾಣಿಗ ಸಮಾಜದ ಅಡಿವೆಪ್ಪ ಕಲ್ಲಪ್ಪ ಭಾಟಿ ಹಾಗೂ ಸರೋಜ ದಂಪತಿಯ ಪುತ್ರ.

    ಆರೇಳು ವರ್ಷದ ಅಭ್ಯಾಸಕ್ಕೆ ಸಂದ ಫಲ

    ಏಕಲವ್ಯ ಪ್ರಶಸ್ತಿ ಬಂದಿದ್ದಕ್ಕೆ ತುಂಬಾ ಖುಷಿ ಆಗಿದೆ. ಇದು ಒಂದೆರಡು ವರ್ಷದ ಶ್ರಮವಲ್ಲ, ಆರೇಳು ವರ್ಷಗಳಿಗೂ ಅಧಿಕ ಕಾಲದ ಅಭ್ಯಾಸಕ್ಕೆ ಸಂದ ಫಲ ಎಂದು ಸಂತೋಷ ವ್ಯಕ್ತಪಡಿಸುವ ರಾಜು, ಸೈಕ್ಲಿಂಗ್‌ನಲ್ಲಿ ಸಾಧನೆ ಮಾಡಬೇಕು ಎನ್ನುವವರು ಚಿಕ್ಕಂದಿನಲ್ಲೇ ಅಭ್ಯಾಸ ಆರಂಭಿಸಬೇಕು ಎಂಬ ಕಿವಿಮಾತು ಹೇಳುತ್ತಾರೆ. 

    ಇವರ ಸಾಧನೆಯ ಟ್ರ್ಯಾಕ್ ಹೀಗಿದೆ.

    ಅಂತಾರಾಷ್ಟ್ರೀಯ

    2018: 18ನೇ ಏಷ್ಯನ್ ಗೇಮ್ ಜಕಾರ್ತಾ ಪ್ಯಾಲೆಂಬಾಂಗ್ ಇಂಡೋನೇಷ್ಯಾ- ಭಾಗಿ.

    2018: 38ನೇ ಏಷ್ಯನ್ ಟ್ರ್ಯಾಕ್ ಚಾಂಪಿಯನ್‌ಶಿಪ್ ಮಲೇಷ್ಯಾ- ಭಾಗಿ.

    2017: ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ ನವದೆಹಲಿ, ಯು/18, 4 ಕಿ.ಮೀ, ಟಿ ಪಿ- ಭಾಗಿ

    2016: ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ನವದೆಹಲಿ, ಯು/18, 4 ಕಿ.ಮೀ, ಟಿ ಪಿ- ತೃತೀಯ

    ರಾಷ್ಟ್ರೀಯ

    2019: ನ್ಯಾಷನಲ್ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ರಾಜಸ್ಥಾನ, 60 ಕಿ.ಮೀ. ಟೀಮ್ ಟೈಮ್ ಟ್ರಯಲ್-  ಪ್ರಥಮ.

    2018: ನ್ಯಾಷನಲ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ನವದೆಹಲಿ, 10 ಕಿ.ಮೀ. ಸ್ಕ್ರ್ಯಾಚ್ ರೇಸ್- ಪ್ರಥಮ.

    2018: ನ್ಯಾಷನಲ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ನವದೆಹಲಿ, 4 ಕಿ.ಮೀ. ಇಂಡಿವಿಜುವಲ್ ಪರ್ಸ್ಯೂಟ್- ದ್ವಿತೀಯ.

    2018: ನ್ಯಾಷನಲ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ನವದೆಹಲಿ, 4 ಕಿ.ಮೀ. ಇಂಡಿವಿಜುವಲ್ ಪರ್ಸ್ಯೂಟ್- ತೃತೀಯ

    2018: ನ್ಯಾಷನಲ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ನವದೆಹಲಿ, 4 ಕಿ.ಮೀ. ಇಂಡಿವಿಜುವಲ್ ಪರ್ಸ್ಯೂಟ್ (ಎಂ ಟಿ)- ದ್ವಿತೀಯ

    2018: ನ್ಯಾಷನಲ್ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್, 40 ಕಿ.ಮೀ. ಇಂಡಿವಿಜುವಲ್ ಟೈಮ್ ಟ್ರಯಲ್- ದ್ವಿತೀಯ.

    2017: ಟ್ರ್ಯಾಕ್ ಏಷ್ಯಾ ಕಪ್-ನವದೆಹಲಿ, ಇಂಡಿವಿಜುವಲ್ ಪರ್ಸ್ಯೂಟ್- ಪ್ರಥಮ

    2017: ಟ್ರ್ಯಾಕ್ ಏಷ್ಯಾ ಕಪ್-ನವದೆಹಲಿ, ಟೀಮ್ ಪರ್ಸ್ಯೂಟ್- ದ್ವಿತೀಯ

    2017: 37ನೇ ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ – ನವದೆಹಲಿ, ಟೀಮ್ ಪರ್ಸ್ಯೂಟ್- ಭಾಗಿ

    2016: ಟ್ರ್ಯಾಕ್ ನ್ಯಾಷನಲ್ ಸೈಕ್ಲಿಂಗ್ ಚಾಂಪಿಯನ್‌ಶಿಪ್, ಇಂಡಿವಿಜುವಲ್ ಪರ್ಸ್ಯೂಟ್- ಪ್ರಥಮ ಎನ್ಎನ್ಆರ್.

    2016: ನ್ಯಾಷನಲ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಕೇರಳ, 3 ಕಿ.ಮೀ., ಐ ಪಿ- ಪ್ರಥಮ ಹಾಗೂ ಹೊಸ ರಾಷ್ಟ್ರೀಯ ದಾಖಲೆ.

    2016: ನ್ಯಾಷನಲ್ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಅಲಿಘಡ (ಯುಪಿ), 40 ಕಿ.ಮೀ. ಟೀಮ್ ಟೈಮ್ ಟ್ರಯಲ್- ತೃತೀಯ.

    2015: ನ್ಯಾಷನಲ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಲುಧಿಯಾನ, 5 ಕಿ.ಮೀ. ಸ್ಕ್ರ್ಯಾಚ್ ರೇಸ್- ದ್ವಿತೀಯ; 2000 ಮೀಟರ್ ಐ ಪಿ- ದ್ವಿತೀಯ.

    2013: ನ್ಯಾಷನಲ್ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಕರ್ನಾಟಕ, 10 ಕಿ.ಮೀ. ಟೈಮ್ ಟ್ರಯಲ್- ತೃತೀಯ.

    2013: ನ್ಯಾಷನಲ್ ಮೌಂಟೇನ್ ಬಿಕ್ ಚಾಂಪಿಯನ್‌ಶಿಪ್ ಕೇರಳ, 6 ಕಿ.ಮೀ. ಟಿ ಟಿ – ಪ್ರಥಮ, 12 ಕಿ.ಮೀ. ಎಂ ಎಸ್- ಪ್ರಥಮ

    2012: ನ್ಯಾಷನಲ್ ಟ್ರ್ಯಾಕ್ ಸೈಕ್ಲಿಂಗ್ ಅಮೃತಸರ್, 2 ಕಿ.ಮೀ. ಟಿ ಟಿ- ಭಾಗಿ.

    2011: ನ್ಯಾಷನಲ್ ಮೌಂಟೇನ್ ಬಿಕ್ ಸೈಕ್ಲಿಂಗ್ ಪುಣೆ, 5 ಕಿ.ಮೀ. ಟಿ ಟಿ- ಭಾಗಿ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!