Sunday, September 22, 2024
spot_img
More

    Latest Posts

    ಅಭಿನಯದ ಅಲೆಗಳಲ್ಲಿ ‘ತೇಲಿ’ಸಿದ್ದ ನಟ ಶನಿಮಹದೇವಪ್ಪ ಇನ್ನು ಬರೀ ನೆನಪು

    ಬೆಂಗಳೂರು: ಪ್ರೇಕ್ಷಕರನ್ನು ತಮ್ಮ ಅತ್ಯುತ್ತಮ ಅಭಿನಯದ ಅಲೆಗಳಲ್ಲಿ ‘ತೇಲಿ’ಸಿದ್ದ ಖ್ಯಾತ ಪೋಷಕ ನಟ ಶನಿಮಹದೇವಪ್ಪ (88) ಜ. 3ರ ಭಾನುವಾರ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ ವಾಸವಾಗಿದ್ದ ಅವರು ಪತ್ನಿ, ಪುತ್ರ, ಪುತ್ರಿಯ ಜೊತೆಗೆ ಅಸಂಖ್ಯ ಅಭಿಮಾನಿಗಳನ್ನೂ ಅಗಲಿದ್ದಾರೆ.

    ಇಂದು ಅಂತ್ಯಕ್ರಿಯೆ: ಬೆಂಗಳೂರಿನ ಸುಮನಹಳ್ಳಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದು, ಬಂಧು-ಬಳಗದವರಷ್ಟೇ ಭಾಗಿಯಾಗಲಿದ್ದಾರೆ. ಕರೊನಾ ಲಕ್ಷಣಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿಲ್ಲ. ನಟ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಕಿಚ್ಚ ಸುದೀಪ್ ಸೇರಿ ಚಿತ್ರರಂಗದ ಅನೇಕ ಗಣ್ಯರು ಶನಿಮಹದೇವಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿದ್ದು, ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

    ಅಭಿನಯ ಪಿತ್ರಾರ್ಜಿತ, ಸಾಧನೆ ಸ್ವಯಾರ್ಜಿತ

    ಶನಿಮಹದೇವಪ್ಪ ಮೂಲತಃ ಮಂಡ್ಯದವರು. ಗಾಣಿಗ(ತೇಲಿ) ಸಮುದಾಯದ ಇವರು ಹುಟ್ಟಿದ್ದು ಮಳವಳ್ಳಿಯ ಬೆಳಕವಾಡಿಯಲ್ಲಿ. ಇವರಿಗೆ ಅಭಿನಯ ಒಂಥರಾ ಪಿತ್ರಾರ್ಜಿತ. ಏಕೆಂದರೆ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ತಂದೆ ಕೆಂಚಪ್ಪ ಅವರೇ ಇವರಿಗೆ ಸ್ಫೂರ್ತಿ-ಗುರು ಎಲ್ಲವೂ ಆಗಿದ್ದರು. ಅವರ ಅಭಿನಯದಿಂದ ರಂಗಭೂಮಿಯತ್ತ ಆಕರ್ಷಿತರಾದ ಶನಿಮಹದೇವಪ್ಪ ಕೂಡ ಅಭಿನಯದಲ್ಲಿ ಸೈ ಎನಿಸಿಕೊಂಡರು. ಅಂದಹಾಗೆ ಇವರ ಹೆಸರು ಬರೀ ಮಹದೇವಪ್ಪ. 1950ರ ಸುಮಾರಿಗೆ ಇವರು ಅಭಿನಯಿಸಿದ್ದ ‘ರಾಜಾ ವಿಕ್ರಮ’ ನಾಟಕದಲ್ಲಿ ಇವರದ್ದು ಶನಿಯ ಪಾತ್ರ. ಅದರಲ್ಲಿನ ಅಭಿನಯ ಅದೆಷ್ಟು ಮನೋಜ್ಞವಾಗಿತ್ತೆಂದರೆ ಆ ಬಳಿಕ ಇವರ ಹೆಸರಿನೊಂದಿಗೆ ಆ ಹೆಗ್ಗಳಿಕೆಯೂ ಅವಿಭಾಜ್ಯವಾಗಿ ಉಳಿದು, ಶನಿಮಹದೇವಪ್ಪ ಎಂದೇ ಖ್ಯಾತರಾದರು.

    ಮಧ್ಯವಯಸ್ಸಿನಲ್ಲಿ ಶನಿಮಹದೇವಪ್ಪ

    ಚಿತ್ರರಂಗ ಪ್ರವೇಶದ ಹಿಂದಿದೆ ‘ಧರ್ಮಸ್ಥಳ ಮಹಾತ್ಮೆ’

    ಮಹದೇವಪ್ಪ ಅವರ ರಂಗಭೂಮಿ ಪ್ರವೇಶಕ್ಕೆ ತಂದೆ ಕಾರಣರಾದರೆ, ಚಿತ್ರರಂಗ ಪ್ರವೇಶಕ್ಕೆ ಧರ್ಮಸ್ಥಳದ ಶ್ರೀಮಂಜುನಾಥೇಶ್ವರ ಕಾರಣ ಎಂದರೂ ತಪ್ಪೇನಲ್ಲ. ಸುಮಾರು ಹತ್ತು ವರ್ಷಗಳ ಕಾಲ ರಂಗಭೂಮಿಯಲ್ಲಿದ್ದು, ‘ಬಡವನ ಬಾಳು’, ‘ಚಂದ್ರಹಾಸ’, ‘ಅತ್ತೆ ಸೊಸೆ’, ‘ಸತ್ಯ ವಿಜಯ’ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದರು. ಬಳಿಕ 1961ರಲ್ಲಿ ‘ಧರ್ಮಸ್ಥಳ ಮಹಾತ್ಮೆ’ ಸಿನಿಮಾದಲ್ಲಿ ಬ್ರಹ್ಮನ ಪಾತ್ರ ಮಾಡಿದರು. ಆ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಶನಿಮಹದೇವಪ್ಪ, ಅಲ್ಲಿಯೂ ಮಿಂಚಿದರು.

    ವೃದ್ಧಾಪ್ಯದಲ್ಲಿ ಶನಿಮಹದೇವಪ್ಪ

    ರಾಜ್‌ಕುಮಾರ್ ಕುಟುಂಬದ ಒಡನಾಟ

    ಹಾಸ್ಯನಟ, ಖಳನಟ, ಪೋಷಕನಟನಾಗಿ 400ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದ ಶನಿಮಹದೇವಪ್ಪ, ‘ಸನಾದಿ ಅಪ್ಪಣ್ಣ’, ‘ಭಕ್ತ ಪ್ರಹ್ಲಾದ’, ‘ಭಕ್ತ ಕುಂಬಾರ’, ‘ಶಂಕರ್ ಗುರು’, ‘ದೇವತಾ ಮನುಷ್ಯ’, ‘ಬಡವರ ಬಂಧು’, ‘ಕವಿರತ್ನ ಕಾಳಿದಾಸ’ ಸೇರಿ ಡಾ. ರಾಜ್‌ಕುಮಾರ್ ಅಭಿನಯದ 70ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ರಾಜ್ ಕುಟುಂಬದ ಒಡನಾಟವನ್ನೂ ಗಳಿಸಿದರು. ಮಾತ್ರವಲ್ಲ ‘ರಾಜ್ ಸೌಹಾರ್ದ ಪ್ರಶಸ್ತಿ’, ‘ವರದಪ್ಪ ಪ್ರಶಸ್ತಿ’ಗೂ ಪಾತ್ರರಾಗಿದ್ದರು.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!