Sunday, September 22, 2024
spot_img
More

    Latest Posts

    ರಾಜ್ಯ ಯೋಜನಾ ಮಂಡಳಿಗೆ ಹೊಸ ಹೆಸರು, ಹೊಸ ಕಸುವು

    ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ಯೋಜನಾ ಮಂಡಳಿಗೆ ಹೊಸ ಹೆಸರನ್ನು ನಾಮಕರಣ ಮಾಡುವ ಜೊತೆಗೆ ಮಂಡಳಿಗೆ ಹೊಸ ಕಸುವನ್ನೂ ನೀಡಿ ಉತ್ತಮ ಕಾರ್ಯನಿರ್ವಹಣೆ ಸಾಧ್ಯವಾಗಿಸುವ ನಿಟ್ಟಿನಲ್ಲಿ ಮುಂದಾಗಿದೆ.

    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಯೋಜನಾ ಮಂಡಳಿಯ ಸಭೆ ನಡೆದಿದ್ದು, ಅಲ್ಲಿ ಈ ಕುರಿತ ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯ ಯೋಜನಾ ಮಂಡಳಿಗೆ ‘ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನೆ ಆಯೋಗ’ ಎಂಬುದಾಗಿ ಹೊಸದಾಗಿ ನಾಮಕರಣ ಮಾಡಲು ಈ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಭೆಯಲ್ಲಿ ಕೈಗೊಂಡ ಪ್ರಮುಖಾಂಶಗಳ ಕುರಿತು ಯೋಜನಾ ಮಂಡಳಿ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಸಭೆ ನಂತರದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ ನೀತಿ ಆಯೋಗದ ಮಾದರಿಯಲ್ಲಿ ಯೋಜನಾ ಮಂಡಳಿಯನ್ನೂ ಸಶಕ್ತಗೊಳಿಸುವ ಸಲುವಾಗಿ ಹೊಸ ಹೆಸರು ಇಡುವ ಜೊತೆಗೆ, ಹೊಸ ಕಸುವನ್ನೂ ನೀಡಲಾಗುತ್ತದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಮಂಡಳಿ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ವಿವರಣೆ.

    ಖರ್ಚು ಕಡಿಮೆ, ಕೆಲಸದ ಹೊರೆ ಇಳಿಕೆ: ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಒಗ್ಗೂಡಿಸಿದ ಮಾದರಿಯಲ್ಲೇ ರಾಜ್ಯದಲ್ಲಿ ಕೂಡ 1,745 ಯೋಜನೆಗಳನ್ನು ಸಮೀಕರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದೆ. ಆ ಪ್ರಕಾರ, ಒಂದು ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಯೋಜನೆಗಳನ್ನು ದೊಡ್ಡ ಯೋಜನೆಗಳ ಜೊತೆ ವಿಲೀನಗೊಳಿಸಲಾಗುವುದು. ಹೀಗೆ ಮಾಡುವುದರಿಂದ ಖರ್ಚು ತಗ್ಗುವ ಜೊತೆಗೆ ಕೆಲಸದ ಹೊರೆಯೂ ಇಳಿಯುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿರುವ ಬಗ್ಗೆ ಪುಟ್ಟಸ್ವಾಮಿ ಅವರು ತಿಳಿಸಿದರು.

    ಹೂಕುಂಡಕ್ಕೆ ನೀರೆರೆಯುವ ಮೂಲಕ ಸಭೆಗೆ ಚಾಲನೆ ನೀಡಿದ ಸಿಎಂ ಬಿ.ಎಸ್. ಯಡಿಯೂರಪ್ಪ. ಬಿ.ಜೆ. ಪುಟ್ಟಸ್ವಾಮಿ, ಶಾಲಿನಿ ರಜನೀಶ್ ಉಪಸ್ಥಿತಿ.
    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ.

    ಯೋಜನಾ ಮಂಡಳಿಗೆ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಎಂದು ನಾಮಕರಣ ಮಾಡುವ ಜೊತೆಗೆ ಸಲಹಾ ಸಮಿತಿಗಳನ್ನು ರಚಿಸಲಾಗುವುದು. ಅಲ್ಲದೆ ಸಂಶೋಧನಾ ಅಧಿಕಾರಿಗಳ ಸಂಖ್ಯೆಯನ್ನು ಮೂರರಿಂದ ಐದಕ್ಕೆ ಏರಿಸಿ, ಜಿಲ್ಲಾ ಯೋಜನಾ ಸಮಿತಿಗಳು ಆಯೋಗದ ಜೊತೆ ಕೈಜೋಡಿಸುವಂತೆಯೂ ಮಾಡಲಾಗುವುದು ಎಂದರು.

    17 ಗುರಿ, 2030 ಗಡುವು: 2030ನೇ ವರ್ಷದೊಳಗೆ ಎಲ್ಲ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸೂಕ್ತ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು. 17 ಸುಸ್ಥಿರ ಅಭಿವೃದ್ಧಿಯ ಅಂಶಗಳಲ್ಲಿ ಕರ್ನಾಟಕ 100ಕ್ಕೆ 66 ಅಂಕಗಳೊಂದಿಗೆ ದೇಶದಲ್ಲಿ 6ನೇ ಸ್ಥಾನದಲ್ಲಿದೆ. ಬಡತನ-ಹಸಿವುಮುಕ್ತ, ಲಿಂಗ ಸಮಾನತೆ, ಕೈಗಾರಿಕೆ, ನಾವೀನ್ಯತೆ ಮತ್ತು ಮೂಲಸೌಕರ್ಯ ಹಾಗೂ ಸುಸ್ಥಿರ ನಗರಗಳು ಮತ್ತು ಸಮುದಾಯಗಳು- ಈ ಆರು ಗುರಿಗಳಲ್ಲಿ ಪ್ರಗತಿ ಸಾಧಿಸಬೇಕಿದೆ. ಆ ನಿಟ್ಟಿನಲ್ಲಿ ವಿಷಯವಾರು ತಜ್ಞರ ಅಧ್ಯಯನ ಮತ್ತು ಸಲಹೆ ಆಧರಿಸಿ ವರದಿ ನೀಡಲು ರಾಜ್ಯ ಯೋಜನಾ ಮಂಡಳಿ ಕ್ರಮ ಕೈಗೊಳ್ಳಲಿದೆ ಎಂದು ಸಭೆಯಲ್ಲಿ ಸಿಎಂ ತಿಳಿಸಿದರು.

    ಶೀಘ್ರದಲ್ಲೇ ವರದಿ ಬಿಡುಗಡೆ: ಕೊರೊನಾ ಹಾಗೂ ಲಾಕ್ಡೌನ್ ಕಾರಣದಿಂದಾಗಿ ವಿವಿಧ ಕ್ಷೇತ್ರಗಳ ಚಟುವಟಿಕೆ ಕುಸಿತಗೊಂಡಿದ್ದು, ರಾಜ್ಯದ ಜಿಡಿಪಿ ಕೂಡ ಕುಸಿದಿದೆ. ಇವೆಲ್ಲದರ ಪೂರ್ಣ ಮಾಹಿತಿ ಇರುವ ವರದಿಯನ್ನು ಸರ್ಕಾರ ಈ ವಾರದಲ್ಲಿ ಬಿಡುಗಡೆ ಮಾಡಲಿದೆ ಎಂದು ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದರು.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!