Saturday, September 21, 2024
spot_img
More

    Latest Posts

    ಪತ್ರಕರ್ತ ಮಂಜುನಾಥ್ ಚಾಂದ್ ಅವರಿಗೆ ‘ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ’ ಪ್ರದಾನ

    ಬೆಂಗಳೂರು: ಹಿರಿಯ ಪತ್ರಕರ್ತ, ಕಥೆಗಾರ, ಕಾದಂಬರಿಕಾರ ಮಂಜುನಾಥ್ ಚಾಂದ್ ಅವರು 2020ನೇ ಸಾಲಿನ ‘ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ’ಗೆ ಪಾತ್ರರಾಗಿದ್ದು, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾ.12ರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

    ‘ನಾಡೋಜ ಡಾ. ಬರಗೂರು ಪ್ರತಿಷ್ಠಾನ’ದಿಂದ ನೀಡಲಾಗಿರುವ ಈ ಪ್ರಶಸ್ತಿಯನ್ನು ಖ್ಯಾತ ವೈದ್ಯ, ಶ್ರೀಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು ಪ್ರದಾನ ಮಾಡಿದರು.

    ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಡಾ.ಸಿ.ಎನ್‌. ಮಂಜುನಾಥ್, ಲೇಖಕರು, ಸಾಹಿತಿಗಳು ಮತ್ತು ಪುಸ್ತಕಗಳ ನಡುವೆ ನಾವಿದ್ದರೆ ನಮಗೂ ಸಾಹಿತಿ ಆಗಬೇಕಿತ್ತು ಅನಿಸುತ್ತದೆ, ಬರಹಕ್ಕೆ ಅಂಥ ಪ್ರಭಾವ ಇದೆ’ ಎಂದರು. ‘ಸಂಸ್ಕಾರವಂತರೇ ನಿಜವಾದ ಶ್ರೀಮಂತರು. ಬರಗೂರು ರಾಮಚಂದ್ರಪ್ಪ ಮತ್ತು ರಾಜಲಕ್ಷ್ಮಿ ದಂಪತಿ ಸಂಸಾರದಲ್ಲೂ ಸಂಸ್ಕಾರವನ್ನು ಹೊಂದಿ ಅನ್ಯೋನ್ಯತೆಯಿಂದ ಇದ್ದು ಅದನ್ನು ನಿರೂಪಿಸಿದ್ದಾರೆ. ಮುಂದಿನ ಜನ್ಮದಲ್ಲೂ ಅವರಿಬ್ಬರು ಜೊತೆಯಾಗಲಿ’ ಎಂದು ಹಾರೈಸಿದ್ದಲ್ಲದೆ, ‘ಮಾನವೀಯತೆಯನ್ನು ಮೈಗೂಡಿಸಿಕೊಂಡಿದ್ದ ಮಾತೃಹೃದಯಿ ರಾಜಲಕ್ಷ್ಮಿಯವರು’ ಎಂದು ಮೆಚ್ಚುಗೆ ಸೂಚಿಸಿದರು. ಅಲ್ಲದೆ ‘ಈ ಪ್ರಶಸ್ತಿಗೆ ನಿಜವಾದ ಸಾಧಕರನ್ನೇ ಗುರುತಿಸಿರುವುದು ವಿಶೇಷ’ ಎಂದು ಪ್ರಶಂಸೆಯನ್ನೂ ವ್ಯಕ್ತಪಡಿಸಿದರು.

    ಡಾ.ಸಿ.ಎನ್.ಮಂಜುನಾಥ್ ಅವರಿಂದ ಮಂಜುನಾಥ್ ಚಾಂದ್ ಅವರಿಗೆ ಪ್ರಶಸ್ತಿ ಪ್ರದಾನ

    ಪತ್ನಿಯ ಸ್ಮರಣಾರ್ಥ ಪ್ರಶಸ್ತಿ: ಬರಗೂರು ರಾಮಚಂದ್ರಪ್ಪ ಅವರ ಪತ್ನಿ ದಿವಂಗತ ಶ್ರೀಮತಿ ರಾಜಲಕ್ಷ್ಮಿ ಅವರ ಸ್ಮರಣಾರ್ಥ ನಾಡೋಜ ಡಾ. ಬರಗೂರು ಪ್ರತಿಷ್ಠಾನವು ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡುತ್ತಿದೆ. ವಿಚಾರ ಸಾಹಿತ್ಯ, ವಿಮರ್ಶೆ ಮತ್ತು ಕಾದಂಬರಿ ಪ್ರಕಾರಗಳಿಗೆ ನೀಡುವ ಪ್ರಶಸ್ತಿ ಇದಾಗಿದ್ದು, ‘ಶ್ರೀಮತಿ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ’ ಎಂಬ ಹೆಸರಿಡಲಾಗಿದೆ.

    ಮೂವರಿಗೆ ಪ್ರಶಸ್ತಿ ಪ್ರದಾನ: ಮಂಜುನಾಥ್ ಚಾಂದ್ ಅವರ ‘ಕಾಡ ಸೆರಗಿನ ಸೂಡಿ’ ಕಾದಂಬರಿಗಾಗಿ ಈ ಪ್ರಶಸ್ತಿ ನೀಡಲಾಗಿದೆ. ಇವರೊಂದಿಗೆ 2020ನೇ ಸಾಲಿನ ‘ಶ್ರೀಮತಿ ರಾಜಲಕ್ಷ್ಮೀ ಬರಗೂರು ಪುಸ್ತಕ ಪ್ರಶಸ್ತಿ’ಗೆ ಇನ್ನಿಬ್ಬರು ಲೇಖಕರೂ ಆಯ್ಕೆ ಆಗಿದ್ದು, ಅವರಿಗೂ ಇದೇ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ‘ಹೆಣ್ಣು ಹೆಜ್ಜೆ’ ಎಂಬ ವಿಚಾರ ಸಾಹಿತ್ಯ ಕೃತಿಗಾಗಿ ಡಾ.ಎಚ್.ಎಸ್. ಅನುಪಮಾ, ‘ಬಯಲು ಬೆಳಕು’ ವಿಮರ್ಶಾ ಕೃತಿಗಾಗಿ ಡಾ. ಬಸವರಾಜ ಸಬರದ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಸಮಾರಂಭದಲ್ಲಿ ಸರಸ್ವತಿ ಶ್ರೀನಿವಾಸರಾಜು, ನಿರುಪಮಾ ರಾಘವೇಂದ್ರ ರಾವ್ ಮುಖ್ಯ ಅತಿಥಿಗಳಾಗಿದ್ದು, ಡಾ.ಬರಗೂರು ರಾಮಚಂದ್ರಪ್ಪ, ಮುರಳೀಧರ ಹಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.

    ಕುಂದಗನ್ನಡಿಗ ಚಾಂದ್: ಉಡುಪಿ ಜಿಲ್ಲೆ ಕುಂದಾಪುರದ ತ್ರಾಸಿಯವರಾದ ಮಂಜುನಾಥ್ ಚಾಂದ್ ಅವರ ‘ಕಾಡ ಸೆರಗಿನ ಸೂಡಿ’ ಕಾದಂಬರಿಯು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು 1934ರಲ್ಲಿ ಕರಾವಳಿ ಭಾಗದ ಪುತ್ತೂರು, ಕುಂದಾಪುರ ಮುಂತಾದ ಕಡೆ ಬಂದಿದ್ದನ್ನು ಆಧಾರವಾಗಿಸಿ ರಚಿತವಾಗಿದೆ. ಅಂದಿನ ಕಾಲಘಟ್ಟದಲ್ಲಿನ ಕುಂದಾಪುರ ಪರಿಸರದ ಚಿತ್ರಣ ನೀಡುವ ಈ ಕಾದಂಬರಿ ಈಗಾಗಲೇ ಸಕಾರಾತ್ಮಕ ವಿಮರ್ಶೆಗೆ ಪಾತ್ರವಾಗಿದ್ದು, ಓದುಗರ ಮೆಚ್ಚುಗೆಯನ್ನೂ ಪಡೆದಿದೆ. ಈ ಕೃತಿಯನ್ನು ಚಾಂದ್ ಅವರು ತಮ್ಮದೇ ‘ಅಕ್ಷರ ಮಂಡಲ ಪ್ರಕಾಶನ’ದ ಮೂಲಕ ಪ್ರಕಟಿಸಿದ್ದಾರೆ. ಇವರು ಈಗಾಗಲೇ ‘ಕದ ತೆರೆದ ಆಕಾಶ’ ಎಂಬ ಕಥಾಸಂಕಲನ, ‘ಅಮ್ಮ ಕೊಟ್ಟ ಜಾಜಿ ದಂಡೆ’ ಎಂಬ ಲಲಿತ ಪ್ರಬಂಧವನ್ನು ರಚಿಸಿದ್ದು, ಅದನ್ನೂ ‘ಅಕ್ಷರ ಮಂಡಲ ಪ್ರಕಾಶನ’ವೇ ಪ್ರಕಟಿಸಿದೆ.

    ಕಾದಂಬರಿಕಾರ ಚಾಂದ್ ಅವರ ಅನಿಸಿಕೆ

    ಇದು ನನ್ನ ಜೀವನದ ಮೊಟ್ಟಮೊದಲ ಪ್ರಶಸ್ತಿ. ನಾನು ಬರೆದಿರುವ ಮೊದಲ ಕಾದಂಬರಿಗೇ ಈ ಮಾನ್ಯತೆ ದೊರೆತಿರುವುದಕ್ಕೆ ಅತೀವ ಖುಷಿ. ಬಹುಶಃ ಬೇರೆ ಯಾವ ಪ್ರಶಸ್ತಿ ಸಿಕ್ಕಿದ್ದರೂ ಇಷ್ಟು ಖುಷಿ ಆಗುತ್ತಿರಲಿಲ್ಲ, ಆದರೆ ಇಷ್ಟೂ ವರ್ಷಗಳ ಕಾಲ ಬರಗೂರು ಸರ್ ಅವರ ವಿಚಾರಗಳಿಂದ ಮತ್ತು ಅವರ ಜೀವನದ ಸಿದ್ಧಾಂತಗಳಿಂದ ಪ್ರಭಾವಿತನಾಗುತ್ತ ಬಂದವನಿಗೆ ಮೊಟ್ಟ ಮೊದಲಿಗೇ ಈ ಪುರಸ್ಕಾರ ಸಿಕ್ಕಿರುವುದು ನನ್ನ ಖುಷಿಯನ್ನು ಇಮ್ಮಡಿಗೊಳಿಸಿದೆ.

    ಬರಗೂರು ಪ್ರಶಸ್ತಿಗೆ ತುಂಬಾ ಎಚ್ಚರಿಕೆಯಿಂದ, ಮುತುವರ್ಜಿಯಿಂದ ಆಯ್ಕೆ ಮಾಡುತ್ತಾರೆ. ಬರಗೂರು ಪ್ರತಿಷ್ಠಾನದವರು ಯಾರೂ ಇದರಲ್ಲಿ ಭಾಗಿಯಾಗುವುದಿಲ್ಲ. ಹೊರಗಿನವರಿಂದ ಕೃತಿಗಳ ಆಯ್ಕೆಯನ್ನು ಮಾಡಿಸುತ್ತಾರೆ. ಮೂರು ಪ್ರಾಂತ್ಯಗಳ ಹಿರಿಯ ಸಾಹಿತಿಗಳಿಗೆ ಕೃತಿಯನ್ನು ಕಳಿಸಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಇಂತಹ ಪ್ರಕ್ರಿಯೆಯಲ್ಲಿ ‘ಕಾಡ ಸೆರಗಿನ ಸೂಡಿ’ ಕಾದಂಬರಿ ಆಯ್ಕೆಯಾಗಿರುವುದು ನಿಜಕ್ಕೂ ಭಯವಾಗುತ್ತಿದೆ. ಯಾಕೆಂದರೆ ಇದು ದೊಡ್ಡ ಜವಾಬ್ದಾರಿ. ಇನ್ನಷ್ಟು ಗಟ್ಟಿಯಾಗಿ ಕುಳಿತು ಬರೆಯಬೇಕು.

    ಗಾಂಧಿಯನ್ನು ಎಲ್ಲಿಯೂ ಮೂರ್ತರೂಪಕ್ಕೆ ತಾರದೆಯೇ ಊರಿನ ಆಚೆಯಿಂದಲೇ ಅವರು ಹೊರಟು ಹೋಗಬೇಕು. ಆದರೆ ಆ ಕಂಪನ ಈ ಕಣಿವೆಯಲ್ಲಿ ಕಾಣಿಸಬೇಕು ಎಂಬುದು ಈ ಕಾದಂಬರಿಯ ಕಥನದ ಆಶಯವಾಗಿತ್ತು. ಇದನ್ನು ಬರೆಯಬೇಕು ಎಂದು ಆರಂಭ ಮಾಡಿದಾಗ ಖಂಡಿತ ಅಸಾಧ್ಯ ಎನಿಸಿತ್ತು. ಆದರೆ ಈ ಕಾದಂಬರಿ ನಿಜಕ್ಕೂ ಸಾಧ್ಯವಾಗುವಂತೆ ಮಾಡಿದ್ದು ನಮ್ಮ ಊರು, ನಾನು ಕಂಡು ಅನುಭವಿಸಿದ ಪ್ರಕೃತಿ, ಕುಂದಾಪುರ ಭಾಷೆ ಮತ್ತು ಅಲ್ಲಿನ ಪಾತ್ರಗಳು. ಅವೆಲ್ಲವೂ ನನ್ನ ಕೈ ಹಿಡಿದು ನಡೆಸಿಕೊಂಡು ಹೋದವು ಎಂದೇ ಹೇಳಬೇಕು.

    ‘ಕಾಡ ಸೆರಗಿನ ಸೂಡಿ’ ಕೃತಿಯನ್ನು ಪ್ರಶಸ್ತಿಗಾಗಿ ಪರಿಗಣಿಸಿದ, ಈ ದೊಡ್ಡ ಗೌರವದ ಮೂಲಕ ನನ್ನ ಬರವಣಿಗೆಯ ಜವಾಬ್ದಾರಿಯನ್ನು ಹೆಚ್ಚಿಸಿದ ಬರಗೂರು ಪ್ರತಿಷ್ಠಾನದ ಎಲ್ಲರಿಗೂ ನಾನು ಚಿರಋಣಿ.

    ಇಡೀ ಕಾದಂಬರಿ ಮತ್ತು ಈಗ ಬಂದಿರುವ ‘ರಾಜಲಕ್ಷ್ಮಿ ಬರಗೂರು ಪ್ರಶಸ್ತಿ’ ನಾನು ಕಂಡ ಪ್ರಕೃತಿ, ಕುಂದಾಪುರದ ಭಾಷೆಗೆ ಸಂದ ಗೌರವ ಎಂದು ನಾನಾದರೂ ಭಾವಿಸಿದ್ದೇನೆ. ಹಾಗಾಗಿ ಈ ಪುರಸ್ಕಾರ, ಕಾದಂಬರಿಯನ್ನು ಆವರಿಸಿಕೊಂಡ ಪ್ರಕೃತಿ ಮತ್ತು ಕುಂದಾಪುರ ಭಾಷೆಗೆ ಅರ್ಪಣೆ.

    | ಮಂಜುನಾಥ್ ಚಾಂದ್ ‘ರಾಜಲಕ್ಷ್ಮಿ ಬರಗೂರು ಪ್ರಶಸ್ತಿ’ ಪುರಸ್ಕೃತ ಕಾದಂಬರಿಕಾರ

    ಸಂಬಂಧಿತ ಸುದ್ದಿ: ‘ಸೂಡಿ’ ಬೆಳಕಲ್ಲಿ.. ‘ಕುಂದಾಪುರಕ್ಕೆ ಬಂದಿದ್ದ ಗಾಂಧಿ..’! 

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!