ಬೆಂಗಳೂರು: ‘ಬರಿಗೈ ಮಾಲೀಕ ಕೂತು ತಿಂದರೂ ಸವೆಯದಂಥ ಆಸ್ತಿ ಮಾಡಿದ’ ಎಂದರೆ ಅದೇನೂ ತಮಾಷೆಯ ಸಂಗತಿಯಲ್ಲದಿದ್ದರೂ, ಅಂಥ ಅನೇಕ ಉದಾಹರಣೆಗಳು ಈ ಜಗತ್ತಿನಲ್ಲಿವೆ. ಆದರೆ ನಾವು ಇಲ್ಲಿ ಹೇಳುತ್ತಿರುವುದು ಬೇರೆಯದೇ ವಿಷಯ. ಇಲ್ಲಿಯೂ ಬರಿಗೈ ಮಾಲೀಕ ಕೂತು ತಿಂದರೂ ಸವೆಯದ ಆಸ್ತಿ ಮಾಡಿದ್ದಾನೆ. ಅಸಲಿಗೆ ಇದು ತಮಾಷೆಯ ಸಂಗತಿಯೇ. ಅದಾಗ್ಯೂ ಈ ತಮಾಷೆಯಲ್ಲಿ ಸಂತೋಷವಿದೆ, ಸಂದೇಶವೂ ಇದೆ.
ನಿಜ.. ನಾವೀಗ ಹೇಳಲು ಹೊರಟಿರುವುದು ನೈಜ ಸಂಗತಿಯಲ್ಲ. ಆದರೆ ಈ ಕಾಲ್ಪನಿಕ ದೃಶ್ಯಾವಳಿಯಲ್ಲೂ ನೈಜತೆ ಇದೆ. ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ನಿಜಜೀವನಕ್ಕೆ ಹತ್ತಿರವಾದ ವಾಸ್ತವ ಅಂಶವಿದೆ. ಇಂಥ ಕಟುವಾಸ್ತವದಲ್ಲೂ ಮನುಷ್ಯ ನಿತ್ಯ ಆನಂದವಾಗಿರಬೇಕು ಎಂಬ ಸೂಕ್ಷ್ಮ ಸಂದೇಶವೂ ಇದೆ. ಇಷ್ಟೆಲ್ಲ ಹೇಳಬೇಕಾಗಿರುವುದು ಉಜಿರೆಯ ಎಸ್ಡಿಎಂ ಕಾಲೇಜ್ ಆಫ್ ಎಜುಕೇಷನ್ನ ಪ್ರಾಂಶುಪಾಲ, ಪ್ರೊ. ನಿತ್ಯಾನಂದ ಕೃಷ್ಣ ಹಾಗೂ ಅವರ ಪುತ್ರ ಪ್ರಧಾನ್ ನಂದ ಅವರು ಇತ್ತೀಚೆಗೆ ಮಾಡಿರುವ ಕಿರುಚಿತ್ರಗಳ ಕುರಿತು.
ಪ್ರಧಾನ್ ನಂದ ತಮ್ಮ ಯೂ-ಟ್ಯೂಬ್ ಚಾನೆಲ್ನಲ್ಲಿ ಕಿರುಚಿತ್ರಗಳನ್ನು ಮಾಡಿಕೊಂಡು ಹಂಚಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ಈ ತಂದೆ-ಮಗನ ಜೋಡಿಯೇ ಇದರಲ್ಲಿ ಅಭಿನಯಿಸುತ್ತಿದ್ದು, ಚಿಕ್ಕಚಿಕ್ಕ ವಿಷಯಗಳನ್ನೇ ಆರಿಸಿಕೊಂಡು ಚೊಕ್ಕದಾಗಿ ಒಂದು ಮನರಂಜನಾತ್ಮಕ ಕಿರುಚಿತ್ರವನ್ನಾಗಿಸಿ ಹಂಚಿಕೊಳ್ಳುತ್ತಿದ್ದಾರೆ. ಆ ಪೈಕಿ ಗಮನ ಸೆಳೆಯುವಂಥದ್ದು ಒಂದು ‘ಬರಿಗೈ ಮಾಲೀಕ’ ಹಾಗೂ ಇನ್ನೊಂದು ‘ಕೂತು ತಿಂದರೂ ಸವೆಯದ ಆಸ್ತಿ’ ಎಂಬ ಎರಡು ಕಿರುಚಿತ್ರಗಳು.
ಕೂಲಿಯಾಳುಗಳಿಂದ ಕೆಲಸ ಮಾಡಿಸಿಕೊಳ್ಳುವವರ ಸ್ವಾರ್ಥ, ಕೆಲಸಕ್ಕೆ ತಕ್ಕ ಸಂಬಳ ಕೇಳಿದಾಗ ಅವರು ತೋರುವ ಉಡಾಫೆತನವನ್ನು ‘ಬರಿಗೈ ಮಾಲೀಕ’ ಕಿರುಚಿತ್ರದಲ್ಲಿ ಹೇಳಿರುವ ಈ ಜೋಡಿ, ಕೊನೆಗೆ ಒಂದು ಪ್ರಮುಖ ಪ್ರಶ್ನೆ ಕಾಡುವಂತೆ ಕ್ಲೈಮ್ಯಾಕ್ಸ್ ಸೃಷ್ಟಿಸಿ, ಚಿಂತನೆಗೆ ಹಚ್ಚುವಂತೆ ಮುಗಿಸಿದ್ದಾರೆ. ಈ ಲಾಕ್ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡ, ಉದ್ಯೋಗದಾತರೇ ನಷ್ಟದಲ್ಲಿ ಇರುವ ಈ ಸಂದರ್ಭದಲ್ಲಿ ಕೆಲಸ ಮಾಡಿದರೂ ಸಂಬಳ ಸಿಗುವುದೇ ಕಷ್ಟವಾಗಿರುವಂಥ ಈಗಿನ ಪರಿಸ್ಥಿತಿಯನ್ನು ಬಿಂಬಿಸುವಂತಿದ್ದಾನೆ ಈ ‘ಬರಿಗೈ ಮಾಲೀಕ’.
ಇನ್ನು ‘ಕೂತು ತಿಂದರೂ ಸವೆಯದ ಆಸ್ತಿ’ ಕಿರುಚಿತ್ರದಲ್ಲಿ ಆಸ್ತಿ-ಅಂತಸ್ತುಗಳ ಕುರಿತು ತಮಾಷೆಯಾಗಿಯೇ ಹೇಳುವ ಜೊತೆಗೆ ಮುಖ ನೋಡಿ ಮಣೆ ಹಾಕಬಾರದು ಎಂಬ ಗಾದೆಯನ್ನೂ ನೆನಪಿಸುತ್ತಾರೆ. ಒಟ್ಟಿನಲ್ಲಿ ಈ ತಂದೆ-ಮಗ ಜೋಡಿಯ ಸೃಜನಶೀಲತೆ ಮನರಂಜನೆ ನೀಡುತ್ತಿದ್ದು, ಮೆಚ್ಚುಗೆಯನ್ನೂ ಗಳಿಸುತ್ತಿದೆ. ಅವರ ಈ ಕಿರುಚಿತ್ರಗಳನ್ನು ನೀವೂ ನೋಡಿ ಆನಂದಿಸಿ, ಪ್ರೋತ್ಸಾಹಿಸಿ. ಇವರಿಂದ ಇಂಥ ಮತ್ತಷ್ಟು ಸೃಜನಾತ್ಮಕ ವಿಡಿಯೋಗಳು ಮೂಡಿಬರಲಿ ಎಂದು ಗ್ಲೋಬಲ್ ಗಾಣಿಗ ಹಾರೈಸುತ್ತಿದೆ.
ಬರಿಗೈ ಮಾಲೀಕ
ಕೂತು ತಿಂದರೂ ಮುಗಿಯದ ಆಸ್ತಿ
ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.