Saturday, September 21, 2024
spot_img
More

    Latest Posts

    ಅಧಿವೇಶನದಲ್ಲಿ ಸದ್ದು ಮಾಡಿತು ಗಾಣಿಗ ನಿಗಮ-ಮಂಡಳಿ ವಿಚಾರ

    ಬೆಂಗಳೂರು: ಗಾಣಿಗ ನಿಗಮ-ಮಂಡಳಿ ಸ್ಥಾಪನೆ ಸಂಬಂಧವಾಗಿ ಬಹಳ ದಿನಗಳಿಂದ ಗಾಣಿಗ ಸಮುದಾಯದಿಂದ ಬೇಡಿಕೆ ಇದ್ದರೂ ಯಾವುದೇ ಸರ್ಕಾರದಿಂದ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಈಗ ಮತ್ತೆ ಆ ವಿಚಾರ ಮುನ್ನೆಲೆಗೆ ಬಂದಿದ್ದು ಪ್ರಸ್ತುತ ಅಧಿವೇಶನದಲ್ಲಿ ತತ್ಸಂಬಂಧಿತ ದನಿ ಕೇಳಿಬಂದಿದೆ.

    ಗಾಣಿಗ ಸಮುದಾಯದವರಾದ ಶಾಸಕ ಕೆ.ದಿನಕರ ಶೆಟ್ಟಿ ಹಾಗೂ ಆನಂದ ಸಿದ್ದು ನ್ಯಾಮಗೌಡ ಅವರು ಫೆ. 16ರಂದು ಅಧಿವೇಶನಲ್ಲಿ ಗಾಣಿಗ ನಿಗಮ-ಮಂಡಳಿ ರಚನೆ ವಿಚಾರವಾಗಿ ಧ್ವನಿ ಎತ್ತಿದ್ದಾರೆ. ಆದಷ್ಟು ಬೇಗ ಗಾಣಿಗ ನಿಗಮ-ಮಂಡಳಿ ಸ್ಥಾಪಿಸಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.

    ಗಾಣಿಗ ಸಮುದಾಯದ ಜನಸಂಖ್ಯೆ ರಾಜ್ಯದಲ್ಲಿ 40 ಲಕ್ಷಕ್ಕಿಂತಲೂ ಅಧಿಕವಿದೆ. ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿಯೂ ಗಾಣಿಗ ಸಮಾಜ ತುಂಬಾ ಹಿಂದೆ ಉಳಿದಿದೆ. ಇತರ ಅನೇಕ ಸಮಾಜಗಳಿಗೆ ನಿಗಮ-ಮಂಡಳಿ ಮಾಡಿ ಆರ್ಥಿಕ ಶಕ್ತಿ ತುಂಬಿದಂತೆ ಗಾಣಿಗ ಸಮಾಜಕ್ಕೂ ನಿಗಮ-ಮಂಡಳಿ ಮಾಡಿ ಆರ್ಥಿಕ ಶಕ್ತಿ ತುಂಬಬೇಕು ಎಂದು ಜಮಖಂಡಿ ಶಾಸಕ ಆನಂದ ಸಿದ್ದು ನ್ಯಾಮಗೌಡ ಆಗ್ರಹಿಸಿದ್ದಾರೆ.

    ಕುಮಟಾ-ಹೊನ್ನಾವರ ಶಾಸಕ ಕೆ.ದಿನಕರ ಶೆಟ್ಟಿ, ಜಮಖಂಡಿ ಶಾಸಕ ಆನಂದ ಸಿದ್ದು ನ್ಯಾಮಗೌಡ

    ಈ ಸಂದರ್ಭದಲ್ಲಿ ಆನಂದ ಸಿದ್ದು ನ್ಯಾಮಗೌಡರ ಬೇಡಿಕೆಗೆ ದನಿಗೂಡಿಸಿದ ಕುಮಟಾ-ಹೊನ್ನಾವರ ಶಾಸಕ ಕೆ.ದಿನಕರ ಶೆಟ್ಟಿ ಅವರು ಕೂಡ ಗಾಣಿಗ ನಿಗಮ-ಮಂಡಳಿ ಸ್ಥಾಪನೆ ಮಾಡಬೇಕು ಎಂದು ಕೋರಿದರು. ನಾನು ಸಹ ಗಾಣಿಗ ಸಮಾಜದವನಾಗಿದ್ದು, ನಮ್ಮ ಸಮಾಜಕ್ಕೆ ಒಂದು ನಿಗಮ-ಮಂಡಳಿ ತೀರಾ ಅಗತ್ಯವಿದೆ ಎಂದು ಅವರು ಆಗ್ರಹ ವ್ಯಕ್ತಪಡಿಸಿದರು.

    ಆದರೆ ಈ ಬಗ್ಗೆ ಸದನದಲ್ಲಿ ಉತ್ತರಿಸಿದ ಉಪ ಮುಖ್ಯಮಂತ್ರಿ ಹಾಗೂ ಸಚಿವ ಗೋವಿಂದ ಕಾರಜೋಳ ಅವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 12 ನಿಗಮ-ಮಂಡಳಿಗಳಿವೆ. ಈಗಾಗಲೇ ನಿಗಮ-ಮಂಡಳಿಗಳಿಗೆ ನೀಡಲಾಗುತ್ತಿರುವ ಅನುದಾನದಲ್ಲಿ ಶೇ. 30 ಅವುಗಳ ಆಡಳಿತಾತ್ಮಕ ವೆಚ್ಚಕ್ಕೇ ಖರ್ಚಾಗುತ್ತಿದೆ. ಅಲ್ಲದೆ ಹೊಸದಾಗಿ ಯಾವುದೇ ನಿಗಮ-ಮಂಡಳಿ ಮಾಡುವ ಚಿಂತನೆ ಸರ್ಕಾರದ ಮುಂದಿಲ್ಲ. ಸದ್ಯ ದೇವರಾಜು ಅರಸು ನಿಗಮದ ಮೂಲಕವೇ ಎಲ್ಲವನ್ನೂ ನಿಭಾಯಿಸುತ್ತಿದ್ದು, ತಮಗೆ ಏನಾದರೂ ಅನನುಕೂಲ ಇದ್ದರೆ ಅದರ ಮೂಲಕ ಈಡೇರಿಸಲು ಪ್ರಯತ್ನಿಸುತ್ತೇವೆ ಎಂದರು.

    ಸಂಬಂಧಿತ ಸುದ್ದಿ: ಇಂದಿನ ನ್ಯಾಷನಲ್ ಕಾಲೇಜನ್ನು ಆರಂಭಿಸಿದ್ದು ಅಂದಿನ ದೊಡ್ಡಣ್ಣ ಶೆಟ್ಟರೇ..

    ಸಂಬಂಧಿತ ಸುದ್ದಿ: ಕೇಂದ್ರ ಸಚಿವರಲ್ಲಿ ಗಾಣಿಗ ನಿಗಮ-ಮಂಡಳಿ ಬೇಡಿಕೆ ಇಟ್ಟ ಮುಖಂಡರು

    ಸಂಬಂಧಿತ ಸುದ್ದಿ: ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ, ಸಾಮಾಜಿಕ ನ್ಯಾಯ ರಕ್ಷಿಸಿ: ಜಿಲ್ಲಾಧ್ಯಕ್ಷ ವಿಜಯಕುಮಾರ್ ಆಗ್ರಹ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!