Saturday, September 21, 2024
spot_img
More

    Latest Posts

    ಬೆಳಗಾವಿ ಸುವರ್ಣಸೌಧದ ಎದುರು ನಡೆಯಲಿದೆ ಗಾಣಿಗ ಸಮಾಜದ ಪ್ರತಿಭಟನೆ; ಯಾವಾಗ, ಯಾಕೆ?

    ಬೆಂಗಳೂರು: ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಡಿ.29ರ ಗುರುವಾರ ಗಾಣಿಗ ಸಮಾಜದವರ ಪ್ರತಿಭಟನೆ ನಡೆಯಲಿದೆ. ಈ ಮೂಲಕ ಗಾಣಿಗ ಸಮಾಜಕ್ಕೆ ಪ್ರತ್ಯೇಕ ನಿಗಮ-ಮಂಡಳಿ ನೀಡಬೇಕು ಎಂಬ ಬೇಡಿಕೆಯ ಕೂಗು ಇನ್ನೊಮ್ಮೆ ಮೊಳಗಲಿದೆ.

    ಗಾಣಿಗ ಸಮಾಜಕ್ಕೆ ಪ್ರತ್ಯೇಕ ನಿಗಮ-ಮಂಡಳಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗಾಣಿಗ ಸಮಾಜದ ವನಶ್ರೀ ಸಂಸ್ಥಾನ ಮಠದ ಜಗದ್ಗುರು ಶ್ರೀ ಜಯಬಸವಕುಮಾರ ಸ್ವಾಮೀಜಿ ಹಾಗೂ ಗಾಣಿಗ ಸಂಘದ ರಾಜ್ಯಾಧ್ಯಕ್ಷ ಗುರಣ್ಣ ಗೋಡಿ ನೇತೃತ್ವದಲ್ಲಿ ಡಿ.29ರಂದು ಬೆಳಗಾವಿ ಸುವರ್ಣಸೌಧದ ಎದುರು ಪ್ರತಿಭಟನೆ ನಡೆಯಲಿದೆ.

    ಇದೇ ಸಂದರ್ಭದಲ್ಲಿ ಸ್ವಾಮೀಜಿಯವರೊಂದಿಗೆ ಗಾಣಿಗ ಸಮಾಜದ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನೂ ನೀಡುವೆವು ಎಂದು ಗಾಣಿಗ ಸಮಾಜ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದ್ದಾರೆ.

    ವಿಜಯಪುರದ ವನಶ್ರೀ ಸಂಸ್ಥಾನ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಸಮಾಜಕ್ಕೆ ತೊಂದರೆಯಾಗುತ್ತಿದೆ. ಸರ್ಕಾರದಿಂದ ಉಚಿತ ಐಎಎಸ್-ಕೆಎಎಸ್ ತರಬೇತಿ ನೀಡಲಾಗುತ್ತದೆ. ಗಾಣಿಗರಿಗೆ 2ಎ ಮೀಸಲಾತಿ ಇದ್ದರೂ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಅದಕ್ಕೆ ಅವಕಾಶ ಸಿಗುತ್ತಿಲ್ಲ. ಸಮಾಜದ ಅನೇಕ ಶಿಕ್ಷಣ ಸಂಸ್ಥೆಗಳಿವೆ, ಮಠಗಳಿವೆ. ಅವುಗಳನ್ನು ಅಭಿವೃದ್ಧಿ ಮಾಡಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗದೆ ಸಮಾಜ ಹಿಂದುಳಿಯುತ್ತಿದೆ. ಹಾಗಾಗಿ ಗಾಣಿಗ ಸಮಾಜಕ್ಕೆ ಪ್ರತ್ಯೇಕ ನಿಗಮ-ಮಂಡಳಿ ಕೊಡಬೇಕು ಎಂದು ಆಗ್ರಹಿಸುತ್ತಿದ್ದೇವೆ ಎಂದು ತಿಳಿಸಿದರು.

    ಬಡ ಕುಟುಂಬಗಳನ್ನು ರಕ್ಷಣೆ ಮಾಡಬೇಕಾದರೆ ಉಚಿತ ವಸತಿ ನಿಲಯಗಳು, ಶಾಲೆಗಳು, ಸಮುದಾಯ ಭವನಗಳನ್ನು ನಿರ್ಮಾಣ ಮಾಡಬೇಕು. ಹಾಗಾಗಿ ನಮ್ಮ ಸಮಾಜಕ್ಕೆ ನಿಗಮ ಮಂಡಳಿ ಘೋಷಣೆ ಮಾಡಲೇಬೇಕು ಎಂದು ಒತ್ತಾಯಿಸಿದರು.

    ಗಾಣಿಗ ಸಮಾಜ 2ಎ ಮೀಸಲಾತಿಯಲ್ಲಿ ಬರುತ್ತದೆ. ಆದರೆ 2ಎಯಲ್ಲಿ ಈಗಾಗಲೇ 102 ಸಮಾಜಗಳಿವೆ. ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಲು ನಮ್ಮದೇನೂ ತಕರಾರು ಇಲ್ಲ. ಆದರೆ ಮೀಸಲಾತಿ ಪ್ರಮಾಣ ಹೆಚ್ಚಿಸಿ ನೀಡಲಿ ಎಂದರು.

    ಸರ್ಕಾರ ನೂತನವಾಗಿ ಕೆಲವು ಸಮಾಜಗಳಿಗೆ ನಿಗಮ ಮಂಡಳಿಗಳನ್ನು ಘೋಷಣೆ ಮಾಡುತ್ತದೆ ಎಂದು ತಿಳಿದು ಬಂದಿದೆ. ಆ ನಿಟ್ಟಿನಲ್ಲಿ ಗಾಣಿಗ ಸಮಾಜದ ಬೇಡಿಕೆ ಬಹಳ ಹಿಂದಿನದ್ದು, ನಿಗಮ ಮಂಡಳಿ ಘೋಷಣೆ ಮಾಡುವಾಗ ನಮ್ಮ ಸಮಾಜಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

    ಶೀಘ್ರದಲ್ಲೇ ಗಾಣಿಗ ಸಮಾಜದ ಬೃಹತ್ ಸಮಾವೇಶ ನಡೆಯಲಿದೆ. ಆ ಸಮಾವೇಶದಲ್ಲಿ ಸಮಾಜದ ಲಕ್ಷಾಂತರ ಮಂದಿ ಭಾಗವಹಿಸಲಿದ್ದಾರೆ. ಅದಕ್ಕೂ ಮೊದಲೇ ಗಾಣಿಗ ಸಮಾಜಕ್ಕೆ ನಿಗಮ-ಮಂಡಳಿಯನ್ನು ಅದೇ ಸಮಾವೇಶದಲ್ಲಿ ಮುಖ್ಯಮಂತ್ರಿಯವರನ್ನು ಸನ್ಮಾನಿಸಲಾಗುವುದು. ಒಂದು ವೇಳೆ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಅದೇ ಸಮಾವೇಶದಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಣಯಿಸಲಾಗುವುದು ಎಂದರು.

    ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಬಿ.ಬಿ. ಪಾಸೊಡಿ, ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಮಲ್ಲಪ್ಪ ಮಸಳಿ (ನಾಗಠಾಣ), ಜಿಲ್ಲಾ ಗೌರಾವಾಧ್ಯಕ್ಷ ಬಿ.ಎಂ. ಪಾಟೀಲ, ಕಾರ್ಯಾಧ್ಯಕ್ಷ ಡಾ. ಅಶೋಕ ತರಡಿ, ಸಹ ಕಾರ್ಯದರ್ಶಿ ಸಂಗಮೇಶ ಪುಟ್ಟಿ, ಖಜಾಂಚಿ ಬಿ.ಕೆ. ಚೌಧರಿ ಮುಂತಾದವರು ಉಪಸ್ಥಿತರಿದ್ದರು.

    ಸಂಬಂಧಿತ ಸುದ್ದಿ: ಆಸ್ಪತ್ರೆಗೆ ಧಾವಿಸಿ ಅಮ್ಮನ ಯೋಗಕ್ಷೇಮ ವಿಚಾರಿಸಿದ್ರು ಪ್ರಧಾನಿ ಮೋದಿ

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಜನವರಿಯಲ್ಲಿ ನಡೆಯಲಿದೆ ಬೃಹತ್‌ ಗಾಣಿಗ ಸಮಾವೇಶ; ಬೇಡಿಕೆಗಳ ಕುರಿತು ನಡೆಯಿತು ಪೂರ್ವಭಾವಿ ಸಭೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!