Saturday, September 21, 2024
spot_img
More

    Latest Posts

    ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀ ವಿಧಿವಶ, ನಾಳೆ ಸಂಜೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ

    ಬೆಂಗಳೂರು: ಭಕ್ತರ ವಲಯದಲ್ಲಿ ನಡೆದಾಡುವ ದೇವರು ಎಂದೇ ಕರೆಯಲ್ಪಡುತ್ತಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ (82) ಇಂದು ವಿಧಿವಶರಾದರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಸಂಜೆ 6.05ಕ್ಕೆ ಅವರು ಶಿವೈಕ್ಯರಾದರು.  

    ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ದೇಹ ಅದಕ್ಕೆ ಸ್ಪಂದಿಸದೆ ಅವರು ಇಹಲೋಕ ತ್ಯಜಿಸಿದರು. ಸ್ವಾಮೀಜಿಯ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ಆಶ್ರಮಕ್ಕೆ ಭಕ್ತರ ದಂಡುದಂಡಾಗಿ ಬರಲಾರಂಭಿಸಿದ್ದು, ಜನಸ್ತೋಮ ಉಂಟಾಗಿದೆ. ನಾಳೆ ಸಂಜೆ ಅಂತಿಮಸಂಸ್ಕಾರ ನಡೆಯಲಿದ್ದು, ಸಂಜೆ ನಾಲ್ಕರ ವರೆಗೂ ಅಂತಿಮದರ್ಶನಕ್ಕೆ ಅವಕಾಶ ಇರಲಿದೆ ಎನ್ನಲಾಗಿದೆ.

    ಸ್ವಾಮೀಜಿಯವರ ನಿಧನದ ಹಿನ್ನೆಲೆಯಲ್ಲಿ ನಾಳೆ ವಿಜಯಪುರದ ಜಿಲ್ಲೆಯ ಶಾಲೆ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿರುವ ರಾಜ್ಯ ಸರ್ಕಾರ, ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಿರುವುದಾಗಿ ತಿಳಿಸಿದೆ.

    ತಮ್ಮ ಸರಳ ಪ್ರವಚನಗಳಿಂದಲೇ ಜಗತ್ತಿನಾದ್ಯಂತ ಅಸಂಖ್ಯಾತ ಭಕ್ತವೃಂದವನ್ನು ಹೊಂದಿರುವ ಸ್ವಾಮೀಜಿ, ಬದುಕಿನ ಕುರಿತು ಹಲವು ಒಳನೋಟಗಳನ್ನು ಮನದಟ್ಟು ಆಗುವಂತೆ ಸಮಾಜಕ್ಕೆ ತಿಳಿಸುತ್ತಿದ್ದರು. ತಾವು ಕೂಡ ಯಾವುದೇ ಆಡಂಬರವಿರದೆ ಅತ್ಯಂತ ಸರಳವಾಗಿ ಜೀವನ ಸಾಗಿಸುವ ಮೂಲಕ ಸ್ವಾಮೀಜಿ ಮಾದರಿ ಎನಿಸಿಕೊಂಡಿದ್ದರು.

    ಸ್ವಾಮೀಜಿ ಕಿರುಪರಿಚಯ

    ಶ್ರೀ ಸಿದ್ದೇಶ್ವರ ಸ್ವಾಮೀಜಿ ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1941ರ ಅಕ್ಟೋಬರ್ 24 ರಂದು ಜನಿಸಿದರು. ಸಿದ್ದಗೊಂಡಪ್ಪ ಇವರ ಬಾಲ್ಯದ ಹೆಸರು. ಬಿಜ್ಜರಗಿ ಗ್ರಾಮದ ಶಾಲೆಯಲ್ಲೇ ನಾಲ್ಕನೇ ತರಗತಿವರೆಗೆ ಓದಿದ ನಂತರ ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಬಂದರು. ‘ಬೆಳೆಯುವ ಪೈರು ಮೊಳಕೆಯಲ್ಲೇ’ ಎಂಬಂತೆ ಬಾಲಕ ಸಿದ್ಧೇಶ್ವರನ ಚುರುಕುತನ ಮಲ್ಲಿಕಾರ್ಜುನ ಸ್ವಾಮಿಗಳ ಗಮನಕ್ಕೆ ಬರಲು ತಡವಾಗಲಿಲ್ಲ. ತಾವು ಪ್ರವಚನ ಮಾಡುವ ಸ್ಥಳಗಳಿಗೆ ಅವರು ಸಿದ್ಧೇಶ್ವರರನ್ನು ಕರೆದೊಯ್ಯ ತೊಡಗಿದರು. ಜೊತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯಕ್ಕೆ ಸೇರಿ ಅಲ್ಲಿ ತತ್ವಶಾಸ್ತ್ರ ವಿಷಯದಲ್ಲಿ ಎಂ.ಎ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು.

    ಆಧ್ಯಾತ್ಮ ಸಾಧಕ: ವಿಜಯಪುರ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆಗಿದ್ದು ಕನ್ನಡ, ಸಂಸ್ಕೃತ,ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಷ್ಣಾತರು. ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು, ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ.

    ವಿಜಯಪುರದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ ಈ ಆಶ್ರಮ ಇವರ ಗುರುಗಳಾದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಅತ್ಯಂತ ಪ್ರವರ್ಧಮಾನಕ್ಕೆ ಬಂತು. ಉತ್ತರ ಕರ್ನಾಟಕದ ಜನಮಾನಸದಲ್ಲಿ ಬಹಳವಾಗಿ ಮಹತ್ವ ಪಡೆಯಿತು.

    ಶ್ರೀಮಲ್ಲಿಕಾರ್ಜುನ ಸ್ವಾಮಿಗಳು ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿ ಬೆಳಗುತ್ತಿದ್ದರು. ಅವರು ಕರ್ನಾಟಕವಲ್ಲದೆ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ತಿಂಗಳುಗಟ್ಟಲೆ ಪ್ರವಚನ ನೀಡುತ್ತಿದ್ದರು. ಅವರ ಗಾಢ ಪ್ರಭಾವ ಸುತ್ತಮುತ್ತಲ ಜನರ ಮೇಲೆ ಉಂಟಾಯಿತು. ಕ್ರಮೇಣ ಶ್ರೀಗಳು ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯೆಗಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿ ಅವರಿಗಾಗಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಅವರಿಗೆ ಊಟ, ವಸತಿಗಳಿಗೆ ವ್ಯವಸ್ಥೆ ಮಾಡಿದರು. ಇದರಿಂದಾಗಿ ಸಾವಿರಾರು ಮಕ್ಕಳು ವಿದ್ಯಾವಂತರಾದರು. ಹಾಗೆ ವಿದ್ಯೆ ಕಲಿಯಲು ಬಂದ ಸಾವಿರಾರು ಮಕ್ಕಳಲ್ಲಿ ಶ್ರೀ ಸಿದ್ದೇಶ್ವರರೂ ಒಬ್ಬರು.

    ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ಸಿದ್ಧೇಶ್ವರರು ತಮ್ಮ ಗುರುಗಳ ಮಾರ್ಗದರ್ಶನದಲ್ಲೇ ಆಶ್ರಮದ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದರು. ಸಿದ್ದೇಶ್ವರರ ಪ್ರವಚನ ಕೇಳಿದವರು ಅದರಲ್ಲೇ ಅನುರಕ್ತರಾಗಿ ಬಿಡುತ್ತಿದ್ದರು. ಅವರ ಪ್ರವಚನ ಕಾರ್ಯಕ್ರಮ ಎಲ್ಲಿ ಏರ್ಪಡಿಸಿದರೂ ಅಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಒಂದು ಗಂಟೆಯ ಅವರ ಪ್ರವಚನದುದ್ದಕ್ಕೂ ಸೇರಿದ ಅಷ್ಟೂ ಮಂದಿ ತನ್ಮಯತೆಯಿಂದ ಕುಳಿತಿರುತ್ತಾರೆ. ಅವರು ತಮ್ಮ ಭಾಷೆ, ಧಾಟಿ, ಪ್ರದಪ್ರಯೋಗ, ಉದಾಹಣೆಗಳ ಮೂಲಕ ಪ್ರಚಲಿತ ಸಂಗತಿಗಳನ್ನು ಸಮ್ಮಿಳಿತಗೊಳಿಸುತ್ತಿದ್ದರು. ಜೊತೆಗೆ ಕಲ್ಲು, ಮಣ್ಣು, ಗಿಡ, ಮರ, ಹೂವು, ಪಕ್ಷಿ,ಪ್ರಾಣಿಗಳಲ್ಲಿ ಜೀವಚೈತನ್ಯವಿದೆ ಎಂಬುದನ್ನು ಅವರು ವಿವರಿಸುವ ರೀತಿ ಅದ್ಬುತವಾದುದು.

    ಎಲ್ಲವೂ ಭಗವಂತನದು: ತಮ್ಮ ಗುರುಗಳು ಸ್ಥಾಪಿಸಿದ ನೂರಾರು ವಿದ್ಯಾ ಸಂಸ್ಥೆಗಳನ್ನು ಸಿದ್ದೇಶ್ವರರು ಮುಂದುವರಿಸಿಕೊಂಡು ಬಂದಿದ್ದರೂ ಅವರ ಯಾವ ಸಂಸ್ಥೆಗಳಿಗೂ ಆಶ್ರಮದ ಹೆಸರಾಗಲಿ, ಅವರ ಹೆಸರಾಗಲಿ ಇರುವುದಿಲ್ಲ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ದಾಸ ವಾಣಿಯಂತೆ ನನ್ನದೇನಿದೆ? ಎಲ್ಲವೂ ಭಗವಂತನದು,ಇಲ್ಲಿರುವ ಪ್ರತಿಯೊಬ್ಬ ಮನುಷ್ಯನೂ ದೇವರು, ಎಲ್ಲರಲ್ಲೂ ದೇವರನ್ನು ಕಾಣಬೇಕು. ನಾನು ನನ್ನದೆಂಬ ಮಮಕಾರ ಸಲ್ಲದು. ಇಹ-ಪರ ಎರಡೂ ಒಂದೇ ಎಂದು ಸಾರುತ್ತ ಅದರಂತೆ ನಡೆದ ಅಪರೂಪದ ಯೋಗಿ ಶ್ರೀಸಿದ್ದೇಶ್ವರರು ಇಂದು ಇಹಲೋಕ ತ್ಯಜಿಸಿದರು.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಕರ್ನಾಟಕದಲ್ಲೂ ನಮ್ಮ ಪರಿವಾರ ಇದೆ ಎಂಬ ಭಾವನೆ ಮೂಡಿದೆ: ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ

    ಸಂಬಂಧಿತ ಸುದ್ದಿ: ಪಡುಕೋಣೆ ಸ್ಪೋರ್ಟ್ಸ್‌ ಮ್ಯಾನೇಜ್‌ಮೆಂಟ್‌ನ ಬ್ಯಾಡ್ಮಿಂಟನ್‌ ಟೂರ್ನಮೆಂಟ್‌ನಲ್ಲಿ ರಿಷಿತಾ-ಲಮ್ಯಾ ರನ್ನರ್‌ ಅಪ್‌

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!