Friday, May 17, 2024
spot_img
More

    Latest Posts

    ಸೈಬರಾಬಾದ್ ಪೊಲೀಸ್ ಕಮಿಷನರ್ ಸಜ್ಜನರ್‌ಗೆ ಸಚಿವರಿಂದ ಸನ್ಮಾನ

    ಬೆಂಗಳೂರು: ತೆಲಂಗಾಣದ ಸೈಬರಾಬಾದ್ ಪೊಲೀಸ್ ಕಮಿಷನರ್ ವಿಶ್ವನಾಥ ಸಿ. ಸಜ್ಜನರ್ ಅವರನ್ನು ಅಲ್ಲಿನ ಪೌರಾಡಳಿತ ಹಾಗೂ ನಗರಾಭಿವೃದ್ಧಿ ಸಚಿವರಾಗಿರುವ ಕೆ.ತಾರಕ ರಾಮರಾವ್ ಅವರು ಸನ್ಮಾನಿಸಿ ಅಭಿನಂದಿಸಿದ್ದಾರೆ.

    ಸೈಬರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ದಕ್ಷತೆಯಿಂದ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಜ್ಜನರ್ ಅವರು ಕಳೆದ ಕೆಲವು ತಿಂಗಳಿನಿಂದ ಕೊರೊನಾ ಸಾಂಕ್ರಾಮಿಕ ಪಿಡುಗಿನ ನಡುವೆಯೂ ನಿಭಾಯಿಸಿದ ಕರ್ತವ್ಯ, ಅವಿರತ ಶ್ರಮ ಹಾಗೂ ಸೇವೆಯನ್ನು ಪರಿಗಣಿಸಿ ಸಚಿವರು ಈ ಸನ್ಮಾನದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

    ತೆಲಂಗಾಣದ ಕೈಗಾರಿಕೆ ಮತ್ತು ವಾಣಿಜ್ಯ, ಮಾಹಿತಿ ತಂತ್ರಜ್ಞಾನ ಸಚಿವರೂ ಆಗಿರುವ ಕೆ.ತಾರಕ ರಾಮರಾವ್ ಅವರು ತೆಲಂಗಾಣದ ಕೊಂಡಾಪುರದಲ್ಲಿರುವ ಎಚ್ಐಸಿಸಿ ನೊವೊಟೆಲ್ ಹೈದರಾಬಾದ್ ಕನ್ವೆಷನ್ ಸೆಂಟರ್‌ನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕಮಿಷನರ್ ಅವರನ್ನು ಸನ್ಮಾನಿಸಿ, ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಇನ್ನೂ ಹೆಚ್ಚಿನ ಕಾರ್ಯನಿರ್ವಹಿಸುವಲ್ಲಿ ಸಕಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

    ಸನ್ಮಾನಿಸಿದ ಸಚಿವ ಕೆ.ತಾರಕ ರಾಮರಾವ್ ಅವರಿಂದ ಪೊಲೀಸ್ ಕಮಿಷನರ್ ವಿ.ಸಿ.ಸಜ್ಜನರ್ ಅವರಿಗೆ ಸ್ಮರಣಿಕೆ ಪ್ರದಾನ.

    ಸಚಿವರು ತಮ್ಮನ್ನು ಸನ್ಮಾನಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದ ಕಮಿಷನರ್ ಸಜ್ಜನರ್ ಅವರು, ಕೊರೊನಾ ಸೋಂಕನ್ನು ನಿಯಂತ್ರಣದಲ್ಲಿರಿಸುವ ಹಾಗೂ ಕ್ರಮೇಣ ಅದನ್ನು ತೊಲಗಿಸುವ ನಿಟ್ಟಿನಲ್ಲಿ ತಮ್ಮ ಯೋಚನೆ/ಯೋಜನೆಗಳನ್ನು ವಿವರಿಸಿದರು.

    ಕಮಿಷನರ್ ಸಜ್ಜನರ್ ಅವರು ಕೊರೊನಾ ಸೋಂಕು ತಡೆ ನಿಟ್ಟಿನಲ್ಲಿ ಪ್ಲಾಸ್ಮಾ ದಾನ ಕುರಿತು ಜಾಗೃತಿ ಮೂಡಿಸಲು ಈಗಾಗಲೇ ಒಂದು ವಿಶೇಷವಾದ ಪ್ರಯತ್ನವನ್ನು ಮಾಡಿದ್ದರು. ಕನ್ನಡಿಗರಾಗಿರುವ ವಿ.ಸಿ. ಸಜ್ಜನರ್ ಅವರು ಇತ್ತೀಚೆಗೆ ಪ್ಲಾಸ್ಮಾ ದಾನ ಕುರಿತು ಕನ್ನಡದಲ್ಲೇ ಒಂದು ಜಾಗೃತಿ ಗೀತೆಯೊಂದನ್ನು ತೆಲಂಗಾಣ ಪೊಲೀಸ್ ಇಲಾಖೆ ಮೂಲಕ ಪ್ರಸ್ತುತಿ ಪಡಿಸಿ, ಕರ್ನಾಟಕ ಪೊಲೀಸ್ ಇಲಾಖೆ ಮುಖೇನ ಅದನ್ನು ಕನ್ನಡಿಗರಿಗೆ ಅರ್ಪಿಸಿದ್ದರು. ಈ ಜಾಗೃತಿ ಗೀತೆಯ ಸಾಹಿತ್ಯವನ್ನು ಡಾ.ಪರಪ್ಪ ಸಜ್ಜನ್ ಅವರು ರಚಿಸಿದ್ದು, ‘ಬಾಹುಬಲಿ’ ಸಿನಿಮಾ ತಂಡದ ಎಂ.ಎಂ. ಕೀರವಾಣಿ ಹಾಗೂ ಶ್ರೀನಿಧಿ ತಿರುಮಲ ಅವರು ಹಾಡಿದ್ದರು. ಈ ಗೀತೆಗೆ ಶ್ರೀನಿಧಿ ತಿರುಮಲ ಸಂಗೀತ ಸಂಯೋಜಿಸಿದ್ದರು.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!