Friday, May 17, 2024
spot_img
More

    Latest Posts

    ಭಳಿರೆ ‘ಬಾಲರ್ಕ’.. ಇದು ಬಲಾಢ್ಯ ಭಾರತೀಯನ ಗರಡಿ!

    ಬೆಂಗಳೂರು: ಕುರುಕ್ಷೇತ್ರದಲ್ಲಿ ಹೋರಾಡಿದ ಅರ್ಜುನನಿಗಿಂತ ಅವನನ್ನು ಹೋರಾಡುವಂತೆ ಪ್ರೇರೇಪಿಸಿದ, ಎದುರಾಳಿಯನ್ನು ಸದೆಬಡಿಯುವ ಕೆಚ್ಚನ್ನು ಅವನಲ್ಲಿ ತುಂಬಿಸಿದ ಭಗವಾನ್ ಶ್ರೀಕೃಷ್ಣನೇ ಶ್ರೇಷ್ಠ. ಯಾವಾಗಲೂ ಅಷ್ಟೇ.. ಕಿಂಗ್‌ಗಿಂತ ಕಿಂಗ್ ಮೇಕರೇ ವಿಶೇಷ ಎನಿಸಿಕೊಳ್ಳುತ್ತಾನೆ. ತಾನು ಶಕ್ತಿಶಾಲಿ ಆಗುವ ಜೊತೆಗೆ ಇನ್ನೊಬ್ಬರನ್ನೂ ಶಕ್ತಿಶಾಲಿ ಆಗಿಸಲು ಶ್ರಮಿಸುವವನು, ತನ್ನ ಸಾಧನೆ ಜೊತೆಗೆ ಇನ್ನೊಬ್ಬರೂ ಸಾಧಿಸಲಿ ಎಂದು ಬಯಸುವವನೇ ಮಿಗಿಲು. ಅಂಥವರೇ ನಿಜವಾದ ಶಕ್ತಿಶಾಲಿಗಳು.. ಅಂಥವರೇ ನಿಜವಾದ ಸಾಧಕರು. ಅಂಥ ಶಕ್ತಿಶಾಲಿ ಸಾಧಕರೊಬ್ಬರ ಕುರಿತ ಬರಹವಿದು.

    ಇವರ ಹೆಸರು ವಿಶ್ವನಾಥ ಭಾಸ್ಕರ ಗಾಣಿಗ. ಅಂತಾರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್. ಮಾತ್ರವಲ್ಲ ಬಲಾಢ್ಯ ಭಾರತೀಯ ಕೂಡ. ಏಕೆಂದರೆ “ಜೆರಾಯ್” ಆಯೋಜಿಸಿದ್ದ ಸ್ಪರ್ಧೆಯಲ್ಲಿ ಇವರು “ಸ್ಟ್ರಾಂಗ್ ಮ್ಯಾನ್ ಆಫ್ ಇಂಡಿಯಾ” ಟೈಟಲನ್ನು ತಮ್ಮದಾಗಿಸಿಕೊಂಡಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ಸತತ ಪರಿಶ್ರಮ ಹಾಗೂ ಛಲದಿಂದ ಒಬ್ಬ ಪರಿಪೂರ್ಣ ಪವರ್ ಲಿಫ್ಟರ್ ಆಗಿ ಹೊರಹೊಮ್ಮಿರುವ ಇವರು ರಾಜ್ಯ, ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಸ್ಪರ್ಧಿಸಿ ಪದಕಗಳನ್ನು ಗೆದ್ದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ದೇಶಕ್ಕೆ ಚಿನ್ನದ ಪದಕದ ಹೆಮ್ಮೆ ತಂದುಕೊಟ್ಟ ಹಿರಿಮೆ ಇವರದು. ಇಷ್ಟೆಲ್ಲ ಸಾಧನೆ ನಡುವೆ ತಾವು ಸಾಗಿ ಬಂದ ಹಾದಿಯನ್ನು ಮರೆಯದ ಇವರು, ಇದೀಗ ತಾವು ಸಾಗಿದ್ದ ಹಾದಿಯಲ್ಲಿ ಸಾಗಬಯಸುವ ಯುವಕರಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡಲು ಮುಂದಾಗಿದ್ದಾರೆ. ಆ ನಿಟ್ಟಿನಲ್ಲಿ ಈಗ ಬೆಂಗಳೂರಿನ ಸೌತ್ ಎಂಡ್ ಮೆಟ್ರೋ ಸ್ಟೇಷನ್ ಬಳಿ “ಬಾಲರ್ಕ ಫಿಟ್‌ನೆಸ್ ಫಿಸಿಯೋಥೆರಪಿ” ಕೇಂದ್ರ ತೆರೆದಿದ್ದಾರೆ.

    ‘ಎಲ್ಲ ಕಡೆ ನಾಯಿಕೊಡೆಗಳಂತೆ ಜಿಮ್‌ಗಳು ಆರಂಭವಾಗಿರುವಾಗ ಇದರಲ್ಲೇನು ವಿಶೇಷ?’ ಅಂತ ನಿಮಗೆ ಅನಿಸಬಹುದು. ಆದರೆ ವಿಶೇಷ ಇರುವುದಂತೂ ನಿಜ. ಇದೊಂಥರ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂಥ ಜಿಮ್. ಚಿಕ್ಕ-ಚೊಕ್ಕ ಜಾಗದಲ್ಲೇ ಎಂಥ ಅಭ್ಯಾಸಕ್ಕೂ ತಕ್ಕ ತರಬೇತಿ ನೀಡುವಂಥ ವ್ಯವಸ್ಥೆ ಮಾಡಿಕೊಂಡಿದ್ದಾರೆ ವಿಶ್ವನಾಥ ಭಾಸ್ಕರ ಗಾಣಿಗ.

    ಬೆಂಗಳೂರಿನಲ್ಲಿ ಐಟಿ ಕ್ಷೇತ್ರದ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಇವರಿಗೆ ಇಂಥದ್ದೊಂದು ಕಸರತ್ತಿನ ಕೇಂದ್ರ ಸ್ಥಾಪಿಸುವ ಯೋಚನೆ ಮೂಡಿದ್ದಕ್ಕೂ ಒಂದು ಕಾರಣವಿದೆ. ‘ಪ್ರತಿ ಸಲ ಯಾವುದಾದರೂ ಸ್ಪರ್ಧೆಗೆ ಹೋಗಬೇಕಾದಾಗ ರಜೆ ಕೇಳಿದರೆ ಆಫೀಸ್‌ನಲ್ಲಿದ್ದ ಸೀನಿಯರ್ಸ್ ಮುಖ ಕೆಂಪಾಗುತ್ತಿತ್ತು. ಹೀಗೆ ಕಂಪನಿಯಲ್ಲಿ ಕೆಲಸ ಮಾಡುತ್ತ ಅಭ್ಯಾಸ-ಸಾಧನೆ ಎರಡೂ ಕಷ್ಟ ಅನಿಸಿತು. ಎಲ್ಲಕ್ಕಿಂತ ಹೆಚ್ಚು ತಮಗೆ ಪ್ಯಾಷನ್ ಇರುವ ಕ್ಷೇತ್ರದಲ್ಲಿ ಒಂದು ಗುರಿ ಇರಿಸಿಕೊಂಡು ಗಂಭೀರವಾಗಿ ತೊಡಗಿಸಿಕೊಂಡವರು ಯಾರೂ ಸೋತಿಲ್ಲ ಎಂಬುದನ್ನು ನಾನು ಗಮನಿಸಿದ್ದೆ. ಹೀಗಾಗಿ ನನಗೂ ಅಭ್ಯಾಸ ಮಾಡಿದಂತಾಗಬೇಕು, ನನ್ನಂಥವರಿಗೆ ತರಬೇತಿ ನೀಡಿದಂತೆಯೂ ಇರಬೇಕು, ಅಂಥದ್ದೇನನ್ನಾದರೂ ಮಾಡಬೇಕು ಎನಿಸಿದಾಗ ತೋಚಿದ್ದೇ ಈ ಬಾಲರ್ಕ’ ಎಂದು ವಿವರಣೆ ನೀಡುತ್ತಾರೆ ವಿಶ್ವ.

    ಸ್ಲೋ, ಸ್ಟೆಡಿ ಆ್ಯಂಡ್ ನ್ಯಾಚುರಲ್

    ‘ಬೇರೆ ಜಿಮ್‌ಗಳಿಗಿಂತ ನಿಮ್ಮದು ಹೇಗೆ ವಿಭಿನ್ನ?’ ಎಂದರೆ ವಿಶ್ವ ಹೇಳುವುದಿಷ್ಟು. ‘ಇಲ್ಲಿ ನಮ್ಮದು ಎಲ್ಲವೂ ನ್ಯಾಚುರಲ್. ಸಹಜ ರೀತಿಯಲ್ಲೇ ಸಶಕ್ತರಾಗುವ, ಸಶಕ್ತರನ್ನಾಗಿಸುವ ಗುರಿ ನಮ್ಮದು. ಈಗ ಜನರಿಗೆ ಎಲ್ಲವೂ ಫಟಾಫಟ್ ಆಗಬೇಕು. ಅದಕ್ಕೆ ತಕ್ಕಂತೆ ಹಲವು ಜಿಮ್‌ನವರು ನಾವು ಮೂರು ತಿಂಗಳಲ್ಲಿ ಸಿಕ್ಸ್ ಪ್ಯಾಕ್, ನಾಲ್ಕು ತಿಂಗಳಲ್ಲಿ ಎಯ್ಟ್ ಪ್ಯಾಕ್ ಎಲ್ಲ ಮಾಡಿಸುತ್ತೇವೆ ಎನ್ನುತ್ತಾರೆ. ಇನ್ನು ಕೆಲವರು ತಿಂಗಳೊಳಗೇ 10 ಕೆ.ಜಿ., 20 ಕೆ.ಜಿ. ತೂಕ ಇಳಿಸುತ್ತೇವೆ ಎಂದು ಹೇಳುತ್ತಾರೆ. ಅದಕ್ಕಾಗಿ ಕೆಲವರು ಸ್ಟೆರಾಯ್ಡ್, ಮೆಡಿಸಿನ್ ಬಳಸಿ ಅಸಹಜ ರೀತಿಯಲ್ಲಿ ಫಲಿತಾಂಶ ತೋರಿಸುತ್ತಾರೆ. ಹಾಗೆ ಮಾಡುವುದರಿಂದ ಬೇಗ ರಿಸಲ್ಟ್ ಸಿಗುವುದು ಎಷ್ಟು ಸತ್ಯವೋ ಅಷ್ಟೇ ಬೇಗ ದೈಹಿಕವಾಗಿ ಸಮಸ್ಯೆಗೆ ಒಳಗಾಗುವುದು ಕೂಡ ಅಷ್ಟೇ ಸತ್ಯ. ಹೀಗಾಗಿ ನಾವು ಆ ಥರದ ಅನಾರೋಗ್ಯಕಾರಿ ಆಮಿಷಗಳನ್ನು ಒಡ್ಡುವುದಿಲ್ಲ. ಯಾರೇ ಆಗಲಿ ಇದ್ದಕ್ಕಿದ್ದ ಹಾಗೆ ತುಂಬಾ ದಪ್ಪ ಆಗಿ ಬಿಡುವುದಿಲ್ಲ. ತಿಂಗಳು ಅಥವಾ ವರ್ಷಗಟ್ಟಲೆ ಜಂಕ್ ಫುಡ್ ತಿಂದು ಸರಿಯಾಗಿ ವ್ಯಾಯಾಮ ಮಾಡದೆ ಬೊಜ್ಜು ಉಂಟಾಗಿರುತ್ತದೆ. ಆ ಸಮಸ್ಯೆ ನಿಧಾನವಾಗಿಯೇ ಉಂಟಾಗಿರುತ್ತದೆ, ಅದನ್ನು ನಿಧಾನವಾಗಿಯೇ ನಿವಾರಿಸಿಕೊಳ್ಳಬೇಕಾಗುತ್ತದೆ. ಒಂದು ವರ್ಷದಲ್ಲಿ ಸೇರಿಕೊಂಡ ಕೊಬ್ಬನ್ನು ಕರಗಿಸಿಕೊಳ್ಳಲು ಕನಿಷ್ಠ ಆರು ತಿಂಗಳಾದರೂ ಸತತ ಪರಿಶ್ರಮ ಪಡಬೇಕು. ಅದೇ ಸರಿಯಾದ ಹಾಗೂ ಸಹಜವಾದ ಮಾರ್ಗ. ಹಾಗೆ ಶ್ರಮ ಪಟ್ಟು ಸಿಕ್ಕಿದ್ದು ಮಾತ್ರ ಒಳ್ಳೆಯ ಫಲ ಕೊಡುತ್ತದೆ ಹಾಗೂ ಖುಷಿಯನ್ನೂ ಕೊಡುತ್ತದೆ’ ಎನ್ನುತ್ತಾರೆ ವಿಶ್ವ.

    ವಿಶ್ವನಾಥ ಭಾಸ್ಕರ ಗಾಣಿಗ- 91645 26417

    ಜಿಮ್ ಜೊತೆ ಫಿಸಿಯೋ ಯಾಕೆ?

    ಸ್ಪರ್ಧೆಗೆಂದೇ ಕಸರತ್ತು ನಡೆಸುವವರಿಗೆ ಆಗಾಗ ನೋವು, ಸ್ನಾಯು ಸೆಳೆತ, ಉಳುಕು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ನಾವು ಹಾಗೆ ಅತಿಯಾಗಿ ಪ್ರ್ಯಾಕ್ಟಿಸ್ ಮಾಡಿ ತೊಂದರೆಯಾದಾಗ ಒಮ್ಮೊಮ್ಮೆ ಫಿಸಿಯೋಥೆರಪಿ ಅಪಾಯಿಂಟ್‌ಮೆಂಟ್‌ಗಾಗಿ ತುಂಬಾ ರಿಕ್ವೆಸ್ಟ್ ಮಾಡಿಕೊಳ್ಳಬೇಕಾಗಿ ಬಂದಿದ್ದೂ ಇದೆ. ಹೀಗಾಗಿ ನಾವು ಇಲ್ಲಿಯೇ ಫಿಸಿಯೋಥೆರಪಿ ಕೂಡ ವ್ಯವಸ್ಥೆ ಮಾಡಿದ್ದೇವೆ. ಫಿಸಿಯೋಥೆರಪಿಯಲ್ಲಿ ನುರಿತ, ಹಲವಾರು ವರ್ಷಗಳ ಅನುಭವ ಇರುವ ಡಾ.ರೇಣು ಖೇತ್ವಾಲ್ ಕೂಡ “ಬಾಲರ್ಕ ಫಿಟ್‌ನೆಸ್ ಫಿಸಿಯೋಥೆರಪಿ”ಯ ಆಧಾರಸ್ತಂಭಗಳಲ್ಲಿ ಒಬ್ಬರಾಗಿದ್ದಾರೆ’ ಎನ್ನುತ್ತಾರೆ ವಿಶ್ವ.

    ಅವರು ಮಾತ್ರವಲ್ಲ..

    ‘ಅಂದಹಾಗೆ “ಬಾಲರ್ಕ ಫಿಟ್‌ನೆಸ್ ಫಿಸಿಯೋಥೆರಪಿ” ಬಾಡಿ ಬಿಲ್ಡಿಂಗ್ ಮಾಡುವವರಿಗೆ ಅಥವಾ ಸ್ಪರ್ಧೆಗಾಗಿ ದೇಹದಂಡಿಸಿಕೊಳ್ಳುವವರಿಗೆ ಮಾತ್ರವಲ್ಲ. ಸಹಜ ರೀತಿಯಲ್ಲಿ ಆರೋಗ್ಯ ಹಾಗೂ ಫಿಟ್‌ನೆಸ್ ಕಾಪಾಡಿಕೊಳ್ಳಬೇಕು ಎಂದು ಬಯಸುವ ಯಾರು ಬೇಕಾದರೂ ಇಲ್ಲಿಗೆ ಬರಬಹುದು’ ಎಂಬುದು ವಿಶ್ವನಾಥ್ ಸಲಹೆ.

    ಕನಸು-ಗುರಿ: ನಾನು ಈಗಾಗಲೇ ಡೆಡ್‌ಲಿಫ್ಟ್‌ನಲ್ಲಿ 330 ಕೆ.ಜಿ. ಎತ್ತಿ ದಾಖಲೆ ಮಾಡಿದ್ದೇನೆ. ಮುಂದೆ ಅದನ್ನೂ ಮೀರಿ ಲಿಫ್ಟ್ ಮಾಡಬೇಕು. ಹಾಗೆಯೇ ನಾನು ಕಳೆದ ಎರಡೂ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್‌ನಲ್ಲಿ ಒಂದೊಂದು ಚಿನ್ನದ ಪದಕ ಗಳಿಸಿದ್ದೇನೆ. ಮುಂದಿನ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್‌ನಲ್ಲೂ ಚಿನ್ನದ ಪದಕ ಗಳಿಸಬೇಕು ಎಂಬ ಗುರಿ ಹಾಗೂ ಕನಸು ವಿಶ್ವ ಅವರದು.

    ಜಿಮ್ ಎಂದಾಕ್ಷಣ ಬಾಡಿ ಬಿಲ್ಡಿಂಗ್ ಅಲ್ಲ. ಫಿಟ್‌ನೆಸ್ ಹಾಗೂ ಆರೋಗ್ಯ ಎರಡನ್ನೂ ಸಹಜವಾದ ರೀತಿಯಲ್ಲಿ ಕಾಪಾಡಿಕೊಳ್ಳುವುದಕ್ಕೆ ನಮ್ಮ ಆದ್ಯತೆ. ನಾವು ಇಲ್ಲಿ ಯಾವ ಅಡ್ಡದಾರಿಯನ್ನು ಬಳಸುವುದಿಲ್ಲ, ತೋರಿಸುವುದೂ ಇಲ್ಲ. ಮೆಡಿಸಿನ್ ಬಳಕೆಗೆ ಶಿಫಾರಸು ಮಾಡುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ನೀವು ತುಂಬಾ ದಪ್ಪ ಇದೀರಿ ಹಾಗೆ ಹೀಗೆ ಅಂತ ಆರೋಗ್ಯದ ವಿಷಯದಲ್ಲಿ ಹೆದರಿಸುವುದಿಲ್ಲ. ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಸರಿಯಾದ ಮಾರ್ಗದರ್ಶನ ನೀಡಿ ತರಬೇತಿಗೊಳಿಸುತ್ತೇವೆ.

    | ವಿಶ್ವನಾಥ ಭಾಸ್ಕರ ಗಾಣಿಗ ಅಂತಾರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್ ಹಾಗೂ ಮಾಲೀಕರು, ಬಾಲರ್ಕ ಫಿಟ್‌ನೆಸ್ ಫಿಸಿಯೋಥೆರಪಿ.

    ವಿಶ್ವನಾಥ ಅವರು ಅಂತಾರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್‌ನಲ್ಲಿ ಒಟ್ಟು 5 ಚಿನ್ನದ ಪದಕ, 1 ಬೆಳ್ಳಿಯ ಪದಕ ಹಾಗೂ 3 ಕಂಚಿನ ಪದಕ, ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್‌ನಲ್ಲಿ 16 ಚಿನ್ನದ ಪದಕ, 5 ಬೆಳ್ಳಿಯ ಪದಕ ಹಾಗೂ 3 ಕಂಚಿನ ಪದಕಗಳನ್ನು ಪಡೆದಿರುತ್ತಾರೆ. ಇವರು 2019ರಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ 2017ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಇವರು ಒಟ್ಟು 6 ಸಲ ಅಂತಾರಾಷ್ಟ್ರೀಯ ಹಾಗೂ 19 ಸಲ ರಾಷ್ಟ್ರೀಯ ಚಾಂಪಿಯನ್ ಆಗಿರುತ್ತಾರೆ.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ 2019ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ. ಸಚಿವ ಸಿ.ಟಿ.ರವಿ, ಸಂಸದ ತೇಜಸ್ವಿಸೂರ್ಯ ಮತ್ತಿತರರ ಉಪಸ್ಥಿತಿ.

    ಸಾಧನೆಯ ಮೈಲಿಗಲ್ಲುಗಳು

    1. 2019ರಲ್ಲಿ ಕೆನಡಾದಲ್ಲಿ ನಡೆದ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 1 ಚಿನ್ನದ ಪದಕ. ಇದೇ ಚಾಂಪಿಯನ್‌ಶಿಪ್‌ನಲ್ಲಿ 327.5 ಕೆ.ಜಿ. ಭಾರ ಎತ್ತುವ ಮೂಲಕ 8 ವರ್ಷದ ಹಳೇ ದಾಖಲೆ ಮುರಿದು ಭಾರತಕ್ಕೆ ಹೆಮ್ಮೆ ತಂದಿರುತ್ತಾರೆ.

    2. ಜೆರಾಯ್ ಸ್ಟ್ರಾಂಗ್ ಮ್ಯಾನ್ ಆಫ್ ಇಂಡಿಯಾ 2016 ಪ್ರಶಸ್ತಿ ವಿಜೇತ.

    3. ಜೆರಾಯ್ ಸ್ಟ್ರಾಂಗ್ ಮ್ಯಾನ್ ಆಫ್ ಇಂಡಿಯಾ 2017 ಪ್ರಶಸ್ತಿ ವಿಜೇತ

    4. 2016ರಲ್ಲಿ ಜಮ್‌ಷೆಡ್‌ಪುರದಲ್ಲಿ ನಡೆದ ಸುಬ್ರತಾ ಕ್ಲಾಸಿಕ್ ಇಂಟರ್‌ನ್ಯಾಷನಲ್ ಪವರ್ ಲಿಫ್ಟಿಂಗ್‌ನಲ್ಲಿ 1 ಚಿನ್ನದ ಪದಕ ಹಾಗು ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್‌ನಲ್ಲಿ ಬಲಿಷ್ಠ ಪುರುಷ 2016 ಪ್ರಶಸ್ತಿ.

    5. 2016ರಲ್ಲಿ ಜಮ್‌ಷೆಡ್‌ಪುರದಲ್ಲಿ ನಡೆದ ಸುಬ್ರತಾ ಕ್ಲಾಸಿಕ್ ಇಂಟರ್‌ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್‌ಲಿಫ್ಟ್‌ನಲ್ಲಿ 1 ಚಿನ್ನದ ಪದಕ ಹಾಗು ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಡೆಡ್‌ಲಿಫ್ಟ್‌ನಲ್ಲಿ ಬಲಿಷ್ಠ ಪುರುಷ ಪ್ರಶಸ್ತಿ.

    6. 2012ರಲ್ಲಿ ತಮಿಳುನಾಡಿನಲ್ಲಿ ನಡೆದ  ಏಷ್ಯನ್ ಕ್ಲಾಸಿಕ್ ಪವರ್ ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ.

    7. 2017ರಲ್ಲಿ ಜಮ್ಮುವಿನಲ್ಲಿ  ನಡೆದ ಫೆಡರೇಷನ್ ಕಪ್ ಪವರ್ ಲಿಫ್ಟಿಂಗ್‌ನಲ್ಲಿ 1 ಚಿನ್ನ ಹಾಗೂ ಬಲಿಷ್ಠ ಪುರುಷ ದ್ವಿತೀಯ ಸ್ಥಾನ.

    8. 2017ರಲ್ಲಿ ಜಮ್ಮುವಿನಲ್ಲಿ ನಡೆದ ಕ್ಲಾಸಿಕ್  ಪವರ್  ಲಿಫ್ಟಿಂಗ್  ಡೆಸ್‌ಲಿಫ್ಟ್‌ನಲ್ಲಿ 1 ಚಿನ್ನ ಹಾಗೂ ಬಲಿಷ್ಠ ಪುರುಷ ಪ್ರಶಸ್ತಿ.

    9. 2017ರಲ್ಲಿ ಜಮ್ಮುವಿನಲ್ಲಿ ನಡೆದ ಕ್ಲಾಸಿಕ್ ಪವರ್ ಲಿಫ್ಟಿಂಗ್ ‌ನಲ್ಲಿ 1 ಬೆಳ್ಳಿಯ ಪದಕ.

    10. 2016ರಲ್ಲಿ ಜಮ್‌ಷೆಡ್‌ಪುರದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್‌ಲಿಫ್ಟ್‌ನಲ್ಲಿ 1 ಚಿನ್ನದ ಪದಕ.

    11. 2016ರಲ್ಲಿ ಜಮ್‌ಷೆಡ್‌ಪುರದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಇಂಟೆರ್ ಸ್ಟೇಟ್ ಪವರ್ ಲಿಫ್ಟಿಂಗ್‌ನಲ್ಲಿ 1  ಚಿನ್ನದ ಪದಕ.

    12. 2016ರಲ್ಲಿ ಜಮ್‌ಷೆಡ್‌ಪುರದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್‌ನಲ್ಲಿ 1 ಬೆಳ್ಳಿಯ ಪದಕ.

    13. ಜಮ್‌ಷೆಡ್‌ಪುರದಲ್ಲಿ ನಡೆದ ಫೆಡರೇಷನ್ ಕಪ್ ಪವರ್ ಲಿಫ್ಟಿಂಗ್‌ನಲ್ಲಿ 1 ಚಿನ್ನ ಹಾಗೂ ಬಲಿಷ್ಠ ಪುರುಷ ದ್ವಿತೀಯ ಸ್ಥಾನ.

    14. ಜಮ್‌ಷೆಡ್‌ಪುರದಲ್ಲಿ ನಡೆದ ಸೀನಿಯರ್ ಪವರ್  ಲಿಫ್ಟಿಂಗ್ ಡೆಡ್‌ಲಿಫ್ಟ್‌ನಲ್ಲಿ 1 ಚಿನ್ನ ಹಾಗೂ ಬಲಿಷ್ಠ ಪುರುಷ ಪ್ರಶಸ್ತಿ.

    15. ಜಮ್‌ಷೆಡ್‌ಪುರದಲ್ಲಿ ನಡೆದ ಜೂನಿಯರ್ ಪವರ್  ಲಿಫ್ಟಿಂಗ್ ಡೆಡ್‌ಲಿಫ್ಟ್‌ನಲ್ಲಿ 1 ಚಿನ್ನದ ಪದಕ.

    16. ಹಿಮಾಚಲ ಪ್ರದೇಶದಲ್ಲಿ ನಡೆದ ಕ್ಲಾಸಿಕ್ ಪವರ್ ಲಿಫ್ಟಿಂಗ್‌ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ.

    17. ಹಿಮಾಚಲ ಪ್ರದೇಶದಲ್ಲಿ ನಡೆದ ಜೂನಿಯರ್ ಪವರ್ ಲಿಫ್ಟಿಂಗ್‌ನಲ್ಲಿ 1 ಕಂಚಿನ  ಪದಕ ಹಾಗೂ  ಡೆಡ್‌ಲಿಫ್ಟ್‌ನಲ್ಲಿ 300 ಕೆ.ಜಿ. ಭಾರ ಎತ್ತಿ  ನೂತನ ದಾಖಲೆ.

    18. 2013ರಲ್ಲಿ ಅಮರಾವತಿಯಲ್ಲಿ ನಡೆದ ಜೂನಿಯರ್ ನ್ಯಾಷನಲ್ ಕ್ಲಾಸಿಕ್  ಪವರ್ ಲಿಫ್ಟಿಂಗ್‌ನಲ್ಲಿ 1 ಚಿನ್ನದ ಪದಕ.

    19. 2013ರಲ್ಲಿ ಅಮರಾವತಿಯಲ್ಲಿ ನಡೆದ ಜೂನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್‌ಲಿಫ್ಟ್‌ನಲ್ಲಿ 287.5 ಕೆ.ಜಿ ಭಾರ ಎತ್ತಿ  ನೂತನ ದಾಖಲೆ ಮಾಡಿರುತ್ತಾರೆ.

    20. 2013ರಲ್ಲಿ ಮಂಗಳೂರಿನಲ್ಲಿ ನಡೆದ ಸೀನಿಯರ್ ನ್ಯಾಷನಲ್ ಕ್ಲಾಸಿಕ್ ಪವರ್ ಲಿಫ್ಟಿಂಗ್‌ನಲ್ಲಿ 1 ಚಿನ್ನದ ಪದಕ.

    21. 2013ರಲ್ಲಿ ಮಂಗಳೂರಿನಲ್ಲಿ ನಡೆದ ಸೀನಿಯರ್ ನ್ಯಾಷನಲ್ ಪವರ್  ಲಿಫ್ಟಿಂಗ್ ಡೆಡ್‌ಲಿಫ್ಟಿಂಗ್‌ನಲ್ಲಿ 1 ಚಿನ್ನದ ಪದಕ.

    22. 2013ರಲ್ಲಿ ಜಮ್‌ಷೆಡ್‌ಪುರದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಪವರ್  ಲಿಫ್ಟಿಂಗ್ ಡೆಡ್‌ಲಿಫ್ಟಿಂಗ್‌ನಲ್ಲಿ 1 ಚಿನ್ನದ ಪದಕ.

    23. 2013ರಲ್ಲಿ  ಜಮ್‌ಷೆಡ್‌ಪುರದಲ್ಲಿ ನಡೆದ ಜೂನಿಯರ್  ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್‌ಲಿಫ್ಟಿಂಗ್‌ನಲ್ಲಿ 1 ಚಿನ್ನದ ಪದಕ.

    24. 2012ರಲ್ಲಿ  ಹಿಮಾಚಲ ಪ್ರದೇಶದಲ್ಲಿ ನಡೆದ ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್‌ಲಿಫ್ಟಿಂಗ್‌ನಲ್ಲಿ 1 ಚಿನ್ನದ ಪದಕ.

    25. 2011ರಲ್ಲಿ ತಮಿಳುನಾಡಿನಲ್ಲಿ ನಡೆದ ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್‌ಲಿಫ್ಟಿಂಗ್‌ನಲ್ಲಿ 1 ಬೆಳ್ಳಿಯ ಪದಕ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!