Friday, May 17, 2024
spot_img
More

    Latest Posts

    ಮತ್ತೆ ಗಾಣಿಗ ಸಮಾಜದ ಉಸ್ತುವಾರಿಯಲ್ಲಿ ವ್ಯಾಸರಾಜ ಮಠ

    ಬೆಂಗಳೂರು: ಉತ್ತರಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಹುಲೇಕಲ್‌ನಲ್ಲಿರುವ ಶ್ರೀವ್ಯಾಸರಾಜ ಮಠವು ಮರಳಿ ಗಾಣಿಗ ಸಮಾಜದ ಉಸ್ತುವಾರಿಗೆ ಲಭಿಸಿದ್ದು, ಅದಕ್ಕೆಂದೇ ನೂತನ ಸಮಿತಿ ಕೂಡ ರಚನೆಯಾಗಿದೆ. “ಶ್ರೀ ವ್ಯಾಸರಾಜ ಸೇವಾ ಸಮಿತಿ, ಹುಲೇಕಲ್” ಎಂಬ ಹೆಸರಿನಲ್ಲಿ ಹೊಸ ಸಮಿತಿ ರಚನೆಯಾಗಿದ್ದು, ನೂತನ ಪದಾಧಿಕಾರಿಗಳ ಆಯ್ಕೆಯೂ ನಡೆದಿದೆ.


    ಗಾಣಿಗ ಸಮಾಜವು ಅನಾದಿಕಾಲದಿಂದಲೂ ಕುಂದಾಪುರ ವ್ಯಾಸರಾಜ ಮಠದ ಶಿಷ್ಯವೃಂದವಾಗಿದ್ದು, ಅದರಂತೆ ಹುಲೇಕಲ್ ವ್ಯಾಸರಾಜ ಮಠವೂ ಗಾಣಿಗ ಸಮಾಜದ ಉಸ್ತುವಾರಿಯಲ್ಲಿತ್ತು. ಬಳಿಕ ಕಾರಣಾಂತರಗಳಿಂದ ಮಠವು ನಮ್ಮ ಗುರುಗಳ ಸುಪರ್ದಿಗೆ ಒಳಪಟ್ಟಿತ್ತು. ಆದರೆ ಈಗ ಕೆಲವು ತಿಂಗಳ ಹಿಂದೆ ಗುರುಗಳು ಈ ಮಠದ ಉಸ್ತುವಾರಿಯನ್ನು ಮರಳಿ ಗಾಣಿಗ ಸಮಾಜಕ್ಕೆ ವಹಿಸಿದ್ದಾರೆ.

    ಶ್ರೀ ವ್ಯಾಸರಾಜರ ಮೃತ್ತಿಕಾ ಬೃಂದಾವನ

    ವಿಶೇಷವೆಂದರೆ ಈ ನೂತನ ಸಮಿತಿಗೆ ನಮ್ಮ ಪರಮಪೂಜ್ಯ ಗುರುಗಳಾಗಿರುವ ಶ್ರೀ 1008 ಲಕ್ಷ್ಮೀಂದ್ರ ತೀರ್ಥ ಶ್ರೀಪಾದಂಗಳವರೇ ಅಧ್ಯಕ್ಷರಾಗಿರುತ್ತಾರೆ. ಅವರ ಅಧ್ಯಕ್ಷತೆಯ ಈ ಹುಲೇಕಲ್ ಶ್ರೀ ವ್ಯಾಸರಾಜ ಸೇವಾ ಸಮಿತಿಯಲ್ಲಿ 15 ಜನರು ಸದಸ್ಯರಿದ್ದು, ಆ ಪೈಕಿ ಆರು ಜನ ಮಾಧ್ವರು ಹಾಗೂ ಒಂಬತ್ತು ಮಂದಿ ಗಾಣಿಗ ಸಮಾಜದವರು ಸದಸ್ಯರಾಗಿರುತ್ತಾರೆ. ಇದರಲ್ಲಿ ಎರಡು ಉಪಾಧ್ಯಕ್ಷ ಸ್ಥಾನವಿದ್ದು ಒಂದನ್ನು ಮಾಧ್ವರಿಗೆ, ಇನ್ನೊಂದನ್ನು ಗಾಣಿಗರಿಗೆ ಎಂದು ನಿಗದಿ ಮಾಡಲಾಗಿದೆ. ಧಾರ್ಮಿಕ ವಿಧಿ-ವಿಧಾನದ ಕುರಿತ ಉಸ್ತುವಾರಿಯನ್ನು ಮಾಧ್ವ ಸಮುದಾಯದ ಉಪಾಧ್ಯಕ್ಷರು, ಆಡಳಿತ ಕುರಿತ ವಿಚಾರಗಳನ್ನು ಗಾಣಿಗ ಸಮುದಾಯದ ಉಪಾಧ್ಯಕ್ಷರು ನೋಡಿಕೊಳ್ಳುತ್ತಾರೆ. ಉಳಿದಂತೆ ಕಾರ್ಯದರ್ಶಿ ಸ್ಥಾನವೂ ಗಾಣಿಗ ಸಮಾಜಕ್ಕೇ ನಿಗದಿಯಾಗಿದೆ.

    ಶ್ರೀ ವಿಶ್ವಂಭರ/ತೋರಣ ಗಣಪತಿ

    ಇನ್ನು ಈ ವ್ಯಾಸರಾಜ ಮಠವು ಇನ್ನುಮುಂದೆ ಗಾಣಿಗ ಸಮಾಜದ ಉಸ್ತುವಾರಿಯಲ್ಲೇ ಇದ್ದರೂ, ಪ್ರಸ್ತುತ ರಚನೆಯಾಗಿರುವ ಸಮಿತಿಯ ಅವಧಿ ಮೂರು ವರ್ಷದ್ದಾಗಿರುತ್ತದೆ. ಅಂದರೆ ಪ್ರತಿ ಮೂರು ವರ್ಷಗಳಿಗೊಮ್ಮೆ ಸಮಿತಿಗೆ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯುತ್ತಿರುತ್ತದೆ.

    ಗಾಣಿಗ ಸಮಾಜದ ಉಸ್ತುವಾರಿಯಲ್ಲಿ ವ್ಯಾಸರಾಜ ಮಠವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ, ಆ ಮೂಲಕ ಸಮಾಜಕ್ಕೂ ಒಳಿತಾಗಿಸುವ ನಿಟ್ಟಿನಲ್ಲಿ ನೂತನ ಸಮಿತಿಯು ಸಂಕಲ್ಪ ಮಾಡಿದೆ. ಮಾತ್ರವಲ್ಲ ಈ ಸಂಬಂಧ ಸಮಸ್ತ ಗಾಣಿಗ ಸಮಾಜದ ಸಹಕಾರ-ಸಹಾಯ-ಸಲಹೆಗಳನ್ನು ಸಮಿತಿ ಬಯಸುತ್ತಿದೆ. ಮಠದ ಉನ್ನತಿಗಾಗಿ ಸಲಹೆ-ಸಹಾಯ-ಸಹಕಾರ ನೀಡಲಿಚ್ಛಿಸುವವರು 8277456018 ಸಂಪರ್ಕಿಸಬಹುದು ಎಂದು ಸಮಿತಿ ಮುಖ್ಯಸ್ಥರು ತಿಳಿಸಿದ್ದಾರೆ.

    ಶ್ರೀ ಶ್ರೀ ಶ್ರೀ 1008 ಲಕ್ಷ್ಮೀಂದ್ರ ತೀರ್ಥ ಶ್ರೀಪಾದಂಗಳವರು

    “ಕೆಲವೇ ಜನರು ಸೇರುವುದರಿಂದ ಸಮಾಜ ಬೆಳೆಯುವುದಿಲ್ಲ. ಸಮಾಜ ಬಾಂಧವರೆಲ್ಲ ಒಗ್ಗೂಡಿ ಸಹಕರಿಸಬೇಕು. ಆ ಮೂಲಕ ತಮ್ಮ ಇರುವಿಕೆಯನ್ನು ತೋರ್ಪಡಿಸಿ, ಸಮಾಜವನ್ನು ಬಲಪಡಿಸಬೇಕು” ಎಂಬುದಾಗಿ ಸಮಿತಿಯ ನಿಯೋಜಿತ ಕಾರ್ಯದರ್ಶಿ ಚಿದಂಬರ ಗೋಪಾಲ ಶೆಟ್ಟಿ ಮತ್ತು ನಿಯೋಜಿತ ಉಪಾಧ್ಯಕ್ಷ ಚಂದ್ರಶೇಖರ ಜಿ. ಶೆಟ್ಟಿ ಕೋರಿಕೊಂಡಿದ್ದಾರೆ.

    ಸೋದೆ ಅರಸು ಮನೆತನದವರು ನಂಬಿದ್ದ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ

    ಅರಸರ ಮನೆತನದ ದೇವರು: ಶ್ರೀ ವ್ಯಾಸರಾಜರಿಂದ ಪ್ರತಿಷ್ಠಾಪಿತ ಹಾಗೂ ಅವರಿಂದ ಪೂಜಿಸಲ್ಪಟ್ಟು, ಸೋದೆ ಅರಸರ ಮನೆದೇವರಾಗಿರುವ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಇಲ್ಲಿನ ಮತ್ತೊಂದು ವಿಶೇಷ. ಅಲ್ಲದೆ ವಿಶ್ವಂಭರ/ಬಾಗಿಲು ಗಣಪತಿ/ತೋರಣ ಗಣಪತಿ ಎಂದೆಲ್ಲ ಕರೆಯಲಾಗುವ ಗಣೇಶ, ಸಾಕ್ಷಿ ಗಣಪತಿ ಹಾಗೂ ಶ್ರೀ ವ್ಯಾಸರಾಜರ ಮೃತ್ತಿಕಾ ಬೃಂದಾವನವೂ ಈ ಕ್ಷೇತ್ರದಲ್ಲಿವೆ. ಸಮಾಜ ಬಾಂಧವರು ಈ ಕ್ಷೇತ್ರಕ್ಕೆ ಆಗಮಿಸಿ, ದೇವರು-ಗುರುಗಳ ಆಶೀರ್ವಾದಕ್ಕೆ, ವ್ಯಾಸರಾಜರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂಬುದು ಹುಲೇಕಲ್ ಶ್ರೀ ವ್ಯಾಸರಾಜ ಸೇವಾ ಸಮಿತಿಯ ಆಶಯ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!