Friday, May 17, 2024
spot_img
More

    Latest Posts

    ಉದ್ಯೋಗ ತೊರೆದು ಜನಸೇವೆ ಮಾಡುತ್ತಿರುವ ವೈದ್ಯ ಮಹಾಶಯ ಡಾ. ಸುನೀಲ್ ಕುಮಾರ್ ಹೆಬ್ಬಿ

    ಬೆಂಗಳೂರು: ಉದ್ಯೋಗದ ನಡುವೆ ಒಂದಷ್ಟು ಸಮಾಜ ಸೇವೆ ಮಾಡುವವರು ಸಮಾಜದಲ್ಲಿ ಬಹಳಷ್ಟು ಮಂದಿ ಸಿಗುತ್ತಾರೆ. ಆದರೆ ಸಮಾಜ ಸೇವೆಗೆಂದು ಉದ್ಯೋಗವನ್ನೇ ಬಿಟ್ಟು ತೊಡಗಿಸಿಕೊಳ್ಳುವವರು ಅತಿ ವಿರಳ. ಅಂಥ ವಿರಳಾತಿವಿರಳ ವ್ಯಕ್ತಿಗಳಲ್ಲಿ ಒಬ್ಬರು ಡಾ. ಸುನೀಲ್ ಕುಮಾರ್ ಹೆಬ್ಬಿ. ಹೆಚ್ಚೂಕಡಿಮೆ ಹದಿಮೂರು ವರ್ಷಗಳಿಂದ ಇಂಥದ್ದೊಂದು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಡಾ. ಸುನೀಲ್.

    13 ವರ್ಷಗಳಿಂದ ನಿರಂತರ ಸೇವೆ

    ಎಂಬಿಬಿಎಸ್ ಪದವೀಧರರಾದ ಬಳಿಕ ಎಲ್ಲರಂತೆಯೇ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿ ತೊಡಗಿದ ಡಾ. ಸುನೀಲ್, ಬೆಂಗಳೂರಿನ ಪ್ರತಿಷ್ಠಿತ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿ ಕೆಲಸ ಮಾಡುತ್ತಲೇ ಸಮಾಜ ಸೇವೆಗೆ ಮುಂದಾದ ಇವರು ಆರಂಭದಲ್ಲಿ ವಾರಕ್ಕೊಮ್ಮೆ ಅಲ್ಲಲ್ಲಿ ಕ್ಯಾಂಪ್ ಮಾಡುವ ಮೂಲಕ ತುರ್ತು ವೈದ್ಯಕೀಯ ನೆರವು ಅಗತ್ಯ ಇರುವವರಿಗೆ ಸಹಾಯ ಮಾಡುತ್ತಿದ್ದರು. ಕ್ರಮೇಣ ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿ ವಾರಕ್ಕೆರಡು ಮೂರು ದಿನ ಸಮಾಜ ಸೇವೆ ಮಾಡುವಂತಾಯಿತು. ಇದಕ್ಕೆ ಆಸ್ಪತ್ರೆಯವರಿಂದಲೂ ಸಹಕಾರ ಸಿಕ್ಕಿತ್ತು. ಆದರೆ ಮುಂದೆ ಬೇಡಿಕೆ ಹೆಚ್ಚಾಗಿ ವಾರದಲ್ಲಿ ನಾಲ್ಕೈದು ದಿನ ಮಾಡಿದರೂ ಮುಗಿಯವುದಿಲ್ಲ ಎಂದಾದಾಗ ಇವರು ಖಾಸಗಿ ಆಸ್ಪತ್ರೆಯಲ್ಲಿನ ಉದ್ಯೋಗ ತೊರೆದು, ಪೂರ್ಣಪ್ರಮಾಣದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು. ಹೀಗೆ ಮೂರು ವರ್ಷಗಳ ವೃತ್ತಿಜೀವನಕ್ಕೆ ವಿದಾಯ ಹೇಳಿದ ಡಾ. ಸುನೀಲ್, ಕಳೆದ ಹದಿಮೂರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಉದ್ಯೋಗ ತೊರೆದ ಮೇಲೆ ಹೊಟ್ಟೆಪಾಡಿಗಾಗಿ ಪಾರ್ಟ್ ಟೈಮ್ ಥರ ಕ್ಲಿನಿಕ್ ನಡೆಸುತ್ತಿದ್ದ ಇವರು ಈಗ ಅದನ್ನೂ ಮುಚ್ಚಿದ್ದು, ಪೂರ್ತಿಯಾಗಿ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ.

    ಮಾತೃಸಿರಿ ಫೌಂಡೇಷನ್

    ಉದ್ಯೋಗವನ್ನೂ ತೊರೆದು ಸಮಾಜ ಸೇವೆಯಲ್ಲಿ ಉದಾರವಾಗಿ ತೊಡಗಿಸಿಕೊಳ್ಳಬೇಕೆಂದರೆ ಅಂಥವರು ಮಾತೃಹೃದಯಿ ಆಗಿರಬೇಕು. ಡಾ. ಸುನೀಲ್ ಕೂಡ ಅಂಥವರಲ್ಲಿ ಒಬ್ಬರೆಂದರೂ ತಪ್ಪೇನಲ್ಲ. ಅದನ್ನು ಸಾಬೀತು ಪಡಿಸುವಂತೆ ಸಮಾಜ ಸೇವೆಯಲ್ಲಿ ನಿರತರಾಗಿರುವ ಹೆಬ್ಬಿ, ಅದಕ್ಕೆಂದೇ ಸಂಸ್ಥೆಯೊಂದನ್ನು ಹುಟ್ಟುಹಾಕಿ, ಅದಕ್ಕೆ ‘ಮಾತೃಸಿರಿ ಫೌಂಡೇಷನ್’ ಎಂಬ ಹೆಸರಿಟ್ಟು, ಆ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ.

    ಕಾರೇ ಕ್ಲಿನಿಕ್, ಪಾರ್ಕ್ ಮಾಡಿದಲ್ಲೇ ಚಿಕಿತ್ಸೆ

    ಜನರ ಬಳಿಗೇ ತೆರಳಿ ಚಿಕಿತ್ಸೆ-ವೈದ್ಯಕೀಯ ನೆರವು ನೀಡುವ ಡಾ. ಸುನೀಲ್ ಅದಕ್ಕಾಗಿ ತಮ್ಮ ಕಾರನ್ನೇ ಮೊಬೈಲ್ ಕ್ಲಿನಿಕ್ ಥರ ಪರಿವರ್ತಿಸಿಕೊಂಡಿದ್ದಾರೆ. ಸುಮಾರು ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿ ಕಾರನ್ನು ಕ್ಲಿನಿಕ್ ಥರ ಮಾಡಿಕೊಂಡಿರುವ ಇವರು, ವೈದ್ಯಕೀಯ ಪರೀಕ್ಷೆ ಮಾಡಲು ಸಾಮಾನ್ಯವಾಗಿ ಬೇಕಾಗುವ ಎಲ್ಲ ವ್ಯವಸ್ಥೆಗಳನ್ನೂ ಒಂದೊಂದಾಗಿ ಮಾಡಿಕೊಂಡಿದ್ದಾರೆ. ಅದರಲ್ಲೀಗ ಹೋದಲ್ಲೇ ಇಸಿಜಿ ಪರೀಕ್ಷೆ ಮಾಡಿಸುವಷ್ಟು ವ್ಯವಸ್ಥೆ ಇದೆ. ಹೀಗಾಗಿ ಇವರನ್ನು ಮೊಬೈಲ್ ಡಾಕ್ಟರ್ ಎಂಬುದಾಗಿಯೂ ಜನರು ಕರೆಯುತ್ತಿದ್ದಾರೆ.

    ಸಮಾಜ ಸೇವಕರ ಜಾಲ

    ಆರಂಭದಲ್ಲಿ ತಮ್ಮನ್ನೂ ಸೇರಿಸಿ ಒಟ್ಟು ಐದು ಜನ ವೈದ್ಯಮಿತ್ರರ ಮೂಲಕ ಈ ಸಮಾಜ ಸೇವೆ ಶುರು ಮಾಡಲಾಗಿತ್ತು. ಬಳಿಕ ಮೂವರು ಉತ್ತಮ ಭವಿಷ್ಯವನ್ನು ಅರಸಿ ವಿದೇಶಕ್ಕೆ ತೆರಳಿದ ಮೇಲೆ ಇಬ್ಬರೇ ಉಳಿದರು. ಆಗಲೂ ಈ ಸೇವೆಯನ್ನು ಬಿಡದ ಡಾ.ಹೆಬ್ಬಿ, ನಂತರ ತಮ್ಮ ಜೊತೆ ಕೈಜೋಡಿಸುವಂಥ ದೊಡ್ಡ ಜಾಲವೊಂದನ್ನೇ ರೂಪಿಸಿಕೊಂಡಿದ್ದಾರೆ. ಸಮಾನಮನಸ್ಕ ವೈದ್ಯರನ್ನು ತಮ್ಮೊಂದಿಗೆ ಸೇರಿಸಿಕೊಂಡು, ಅವರಿರುವ ಜಾಗದ ಸುತ್ತಮುತ್ತಲಿನ ಜನರಿಗೆ ಸೇವೆ ಮಾಡುವಂಥ ವ್ಯವಸ್ಥೆ ಮಾಡಿಕೊಂಡಿದ್ದಾರೆ. 

    ರವಿಕೃಷ್ಣಾರೆಡ್ಡಿ ಅವರಿಂದ ವಿಜಯಪುರದಲ್ಲಿ ಉಚಿತ ಚಿಕಿತ್ಸಾಲಯ ಉದ್ಘಾಟನೆ

    ಇವರೊಂದಿಗೆ ಅಂಥ 320 ಮಂದಿ ವೈದ್ಯರ ನೆಟ್ವರ್ಕ್ ಇದ್ದು, ವೈದ್ಯೇತರ 120 ಮಂದಿ ಕೂಡ ಸಹಕರಿಸುತ್ತಿದ್ದಾರೆ. ಚಿಕಿತ್ಸೆಗಾಗಿ ತೆರಳುವ 15 ದಿನಗಳ ಮುಂಚೆ ಹೋಗಬೇಕಾದ ಜಾಗದಲ್ಲಿನ ಜನರಿಗೆ ಮಾಹಿತಿ ನೀಡಿ, ವಿವರ ಕಲೆಹಾಕಿ, ಬಳಿಕ ಅಗತ್ಯ ತಯಾರಿಯೊಂದಿಗೆ ಅಲ್ಲಿಗೆ ತೆರಳಿ ವೈದ್ಯಕೀಯ ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಅಗತ್ಯವಿದ್ದರೆ ಸರ್ಕಾರಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. ಮಾತ್ರವಲ್ಲ, ಸರ್ಕಾರಿ ಯೋಜನೆಗಳ ಮಾಹಿತಿ ನೀಡಿ, ಅದರ ಪ್ರಯೋಜನ ಪಡೆಯಲಿಕ್ಕೂ ಸಹಾಯ ಮಾಡಲಾಗುತ್ತದೆ. ಹೀಗೆ ಇದುವರೆಗೆ 780 ಕ್ಯಾಂಪ್ ನಡೆಸಿ ಹೆಚ್ಚೂಕಡಿಮೆ ಒಂದೂವರೆ ಲಕ್ಷ ಹೊರರೋಗಿಗಳಿಗೆ ಚಿಕಿತ್ಸೆ ನೀಡಿರುವ ಡಾ.ಹೆಬ್ಬಿ ತಂಡ, ಒಂದೂವರೆ ಸಾವಿರಕ್ಕೂ ಹೆಚ್ಚು ಜನರಲ್ಲಿ ಶಸ್ತ್ರಚಿಕಿತ್ಸೆ ಅಗತ್ಯ ಕಂಡು ಅದಕ್ಕೂ ಸೂಕ್ತ ಶಿಫಾರಸು ಮಾಡಿದ್ದಾರೆ. ಇದಕ್ಕಾಗಿ ಒಂದಷ್ಟು ಆಶಾ ಕಾರ್ಯಕರ್ತೆಯರು, ಸ್ಥಳೀಯ ಕೆಲವು ಮುಖಂಡರು ಕೂಡ ಇವರಿಗೆ ಸಹಕಾರ ನೀಡಿದ್ದಾರೆ.

    ವೈಯಕ್ತಿಕ ಮಾಹಿತಿ: ಗಾಣಿಗ ಸಮಾಜದವಾಗಿರುವ ಡಾ.ಸುನೀಲ್ ಕುಮಾರ್ ಹೆಬ್ಬಿ ವಿಜಯಪುರ ಜಿಲ್ಲೆಯ ಬಬಲೇಶ್ವರದ ಮಮದಾಪುರದವರು. ಇದೀಗ ಮೊನ್ನೆಮೊನ್ನೆ ವಿಜಯಪುರದಲ್ಲೇ ಒಂದು ಉಚಿತ ಚಿಕಿತ್ಸೆಯ ಕ್ಲಿನಿಕ್ ತೆರೆದಿರುವ ಡಾ. ಸುನೀಲ್, ಅದಕ್ಕಾಗಿ ಸ್ಥಳೀಯ ವೈದ್ಯಕೀಯ ಕಾಲೇಜೊಂದರ ಇಂಟರ್ನ್ ಶಿಪ್ ವೈದ್ಯರ ನೆರವು ಪಡೆಯುತ್ತಿದ್ದಾರೆ. ಮಾತ್ರವಲ್ಲ, ಇನ್ನು 2-3 ತಿಂಗಳಿಗೆ ಬೇಕಾಗುವಷ್ಟು ಔಷಧ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಸದ್ಯಕ್ಕೆ ‘ಡಾ.ಸುನೀಲ್ ಕುಮಾರ್ ಹೆಬ್ಬಿ ಉಚಿತ ಚಿಕಿತ್ಸಾಲಯ’ ಎಂಬ ಹೆಸರಿನ ಈ ಸೇವಾಕೇಂದ್ರವನ್ನು ಒಂದು ಹಂತಕ್ಕೆ ತಂದು ಸುಗಮವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ನಿಟ್ಟಿನಲ್ಲಿ ಡಾ.ಹೆಬ್ಬಿ ಗಮನ ಕೇಂದ್ರೀಕರಿಸಿದ್ದಾರೆ.

    ಆ ಕುಟುಂಬವೇ ಪ್ರೇರಣೆ

    ಒಂದು ದಿನ ನಾನು ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಸಾಗುತ್ತಿದ್ದಾಗ ಒಬ್ಬರು ಅಪಘಾತಕ್ಕೀಡಾಗಿ ಗಾಯಗೊಂಡು ಅಸ್ವಸ್ಥರಾಗಿದ್ದರು. ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದೆ. ಮೂರು ದಿನಗಳ ಬಳಿಕ ಅವರ ತಂದೆ ಕರೆ ಮಾಡಿ, ನನ್ನ ಮಗನನ್ನು ಉಳಿಸಿಕೊಟ್ಟಿರಿ ಎಂದು ಧನ್ಯವಾದ ಹೇಳಿದರು. ಮಾತ್ರವಲ್ಲ, ನಿಮ್ಮನ್ನು ಒಮ್ಮೆ ನೋಡಬೇಕು ಎಂದು ಮನೆಗೆ ಕರೆಸಿ ಥ್ಯಾಂಕ್ಸ್ ಹೇಳಿ ಕೃತಜ್ಞತೆ ಸಲ್ಲಿಸಿದರು. ಈ ಘಟನೆ ನನ್ನನ್ನು ಇಂಥದ್ದೊಂದು ಸೇವೆ ಮಾಡಲು ಪ್ರೇರೇಪಿಸಿತು ಎನ್ನುತ್ತಾರೆ ಡಾ.ಹೆಬ್ಬಿ.

    ಪ್ರಶಸ್ತಿ ಪುರಸ್ಕಾರ

    ಡಾ.ಸುನೀಲ್ ಕುಮಾರ್ ಹೆಬ್ಬಿ ಅವರ ಸಮಾಜ ಸೇವೆಗೆ ಉಪ ರಾಷ್ಟ್ರಪತಿಯವರ ಪ್ರಶಸ್ತಿಯೂ ಲಭಿಸಿದೆ. ಇವರ ಸೇವೆಯನ್ನು ಗುರುತಿಸಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿದೆ. ಪಬ್ಲಿಕ್ ಟಿವಿ ಸಂಸ್ಥೆಯು ಇವರಿಗೆ ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಎಂದು ಗುರುತಿಸಿ, ಪುರಸ್ಕರಿಸಿದೆ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!