Saturday, September 21, 2024
spot_img
More

    Latest Posts

    ೪೮ ಸಾವಿರ ಸಿಬ್ಬಂದಿಯ ಯೋಗಕ್ಷೇಮವೇ ನನ್ನ ಪ್ರಥಮ ಆದ್ಯತೆ ಎಂದ ಸಜ್ಜನರ್‌

    ಬೆಂಗಳೂರು: ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿರುವ ಐಪಿಎಸ್‌ ಅಧಿಕಾರಿ ವಿ.ಸಿ. ಸಜ್ಜನರ್‌, ತಮ್ಮ ನೂತನ ಜವಾಬ್ದಾರಿಗೆ ಸಂಬಂಧಿಸಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಸಂಸ್ಥೆಯ ಚಟುವಟಿಕೆಗಳಿಗೆ ಮತ್ತಷ್ಟು ಚುರುಕು ಮೂಡಿಸಿದ್ದಾರೆ.

    ಯಾವುದೇ ಸಂಸ್ಥೆಯ ಪ್ರಗತಿಯಲ್ಲಿ ಸಂವಹನ ಎಂಬುದು ಅತಿಮುಖ್ಯ. ಅದರಲ್ಲೂ ಸೋಷಿಯಲ್‌ ಮೀಡಿಯಾ ಮೂಲಕ ಜನರನ್ನು ಸುಲಭದಲ್ಲಿ ತಲಪುವುದು ಸಾಧ್ಯ. ಮಾತ್ರವಲ್ಲ, ಜನರೂ ತಮ್ಮ ಕುಂದುಕೊರತೆ-ಅಹವಾಲುಗಳನ್ನು ಸೋಷಿಯಲ್‌ ಮೀಡಿಯಾ ಮೂಲಕ ಸಂಸ್ಥೆಯ ಗಮನಕ್ಕೆ ತರುವುದು ಕೂಡ ಅತಿ ಸುಲಭ. ಹೀಗಾಗಿ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆ ತೆಲಂಗಾಣ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಸಂಬಂಧಿಸಿದಂತೆ ಪ್ರತ್ಯೇಕ ಟ್ವಿಟರ್‌ ಹ್ಯಾಂಡಲ್‌ (@tsrtcmdoffice) ಕ್ರಿಯೇಟ್‌ ಮಾಡಿಸಿ ಸಂಸ್ಥೆಯ ಕಾರ್ಯಗಳನ್ನು ಇನ್ನಷ್ಟು ಸುಗಮವಾಗಿ ಹ್ಯಾಂಡಲ್‌ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. 

    ಇನ್ನು ಸಾರ್ವಜನಿಕರು ಟಿಎಸ್‌ಆರ್‌ಟಿಸಿಗೆ ಸಂಬಂಧಿಸಿದಂತೆ ಯಾವುದೇ ಸಲಹೆ-ಅಹವಾಲುಗಳಿದ್ದರೂ ನೇರವಾಗಿ ತಮಗೇ ತಿಳಿಸಬಹುದು ಎಂದು ಹೇಳಿರುವ ಅವರು ಟ್ವಿಟರ್‌ ಮೂಲಕ ತಮ್ಮ ಅಧಿಕೃತ ಇ-ಮೇಲ್‌ ಐಡಿ ([email protected]) ಕೂಡ ಹಂಚಿಕೊಂಡಿದ್ದಾರೆ.

    ಟಿಎಸ್‌ಆರ್‌ಟಿಸಿ ಬಸ್‌ ಭವನದಲ್ಲಿ ನಡೆದ ಕಾಳೋಜಿ ನಾರಾಯಣ ರಾವ್‌ ಸ್ಮರಣೆ ಕಾರ್ಯಕ್ರಮದಲ್ಲಿ ವಿ.ಸಿ.ಸಜ್ಜನರ್

    ಸರ್ಕಾರಿ ಕಾರ್ಯದ ಜೊತೆಗೆ ನಾಡು-ನುಡಿಗಾಗಿ ಹೋರಾಡಿದವರ ಸ್ಮರಣೆ ಕೂಡ ಅತಿಮುಖ್ಯ ಎಂಬುದನ್ನೂ ಅವರು ಕಾರ್ಯಮುಖೇನ ತೋರಿಸಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ತೆಲಂಗಾಣ ಸಾರಿಗೆ ಸಂಸ್ಥೆಯ ಬಸ್‌ ಭವನದಲ್ಲಿ ಇತ್ತೀಚೆಗೆ ಪದ್ಮವಿಭೂಷಣ ಕಾಳೋಜಿ ನಾರಾಯಣ ರಾವ್‌ ಸ್ಮರಣೆ ಕಾರ್ಯಕ್ರಮ ಏರ್ಪಡಿಸಿದ್ದರು. ಕವಿ-ಹೋರಾಟಗಾರ ಕಾಳೋಜಿ ನಾರಾಯಣ ರಾವ್‌ ಅವರ ಜನ್ಮಶತಮಾನದ ಅಂಗವಾಗಿ ಸೆ.೯ರಂದು ಗೌರವ ನಮನ ಕಾರ್ಯಕ್ರಮ ಜರುಗಿದೆ.

    ಟಿಎಸ್‌ಆರ್‌ಟಿಸಿಯ ಕಂಟೋನ್ಮೆಂಟ್‌ ಡಿಪೋಗೆ ಸೇರಿದ ಬಸ್‌ ಚಾಲಕರೊಬ್ಬರು ನಿನ್ನೆ ಕಾರ್ಯನಿರತರಾಗಿದ್ದಾಗ ಹಠಾತ್‌ ಅನಾರೋಗ್ಯಕ್ಕೆ ಒಳಗಾದರೂ ಪ್ರಯಾಣಿಕರು ಯಾವುದೇ ಅಪಾಯಕ್ಕೆ ಒಳಗಾಗದಂತೆ ತಮ್ಮ ಸಮಯಪ್ರಜ್ಞೆಯಿಂದ ಪಾರು ಮಾಡಿದ್ದಾರೆ. ನಂತರ ಆ ಚಾಲಕ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದು, ತಕ್ಷಣವೇ ಆಸ್ಪತ್ರೆಗೆ ಧಾವಿಸಿದ್ದ ವಿ.ಸಿ. ಸಜ್ಜನರ್‌ ತಮ್ಮ ಸಿಬ್ಬಂದಿಯ ಯೋಗಕ್ಷೇಮ ವಿಚಾರಿಸಿದ್ದಲ್ಲದೆ, ಆಸ್ಪತ್ರೆ ಮುಖ್ಯಸ್ಥರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ನೀಡುವ ಕುರಿತು ಚರ್ಚಿಸಿ ಸೂಚನೆ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಸಂಸ್ಥೆಯಲ್ಲಿರುವ ಸುಮಾರು ೪೮ ಸಾವಿರ ಸಿಬ್ಬಂದಿಯ ಯೋಗಕ್ಷೇಮವೇ ನನ್ನ ಪ್ರಥಮ ಆದ್ಯತೆ ಎಂಬ ಭರವಸೆ ನೀಡುವ ಮೂಲಕ ಸಿಬ್ಬಂದಿ ವರ್ಗದಲ್ಲಿ ವಿಶ್ವಾಸ ಮೂಡಿಸಿದ್ದಾರೆ.

    ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಟಿಎಸ್‌ಆರ್‌ಟಿಸಿ ಸಿಬ್ಬಂದಿಯ ಆರೋಗ್ಯ ಕುರಿತು ಸಜ್ಜನರ್‌ ವಿಚಾರಣೆ.

    ಈ ಹಿಂದೆ ಸೈಬರಾಬಾದ್‌ ಪೊಲೀಸ್‌ ಕಮಿಷನರ್‌ ಆಗಿದ್ದಾಗ ಸಮಾಜಘಾತಕ ಶಕ್ತಿಗಳ ಹೆಡೆಮುರಿ ಕಟ್ಟಿ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಎಂದೂ ಹೆಸರಾಗಿದ್ದ ಸಜ್ಜನರ್‌, ಜನಪರ ಕಾಳಜಿಯ ಹಾಗೂ ಇತರ ಸಾಮಾಜಿಕ ಚಟುವಟಿಕೆಗಳ ಮೂಲಕ ನಿಜಾರ್ಥದಲ್ಲೂ ಸಜ್ಜನರು ಎಂದು ಜನಮೆಚ್ಚುಗೆಗೂ ಪಾತ್ರರಾಗಿದ್ದರು. ಇದೀಗ ಟಿಎಸ್‌ಆರ್‌ಟಿಸಿ ಎಮ್‌ಡಿ ಆಗಿ ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ಉತ್ತಮ ಕಾರ್ಯನಿರ್ವಹಣೆಯ ಮೂಲಕ ಮತ್ತದೇ ಭರವಸೆಯನ್ನು ಅವರು ಮೂಡಿಸಿದ್ದಾರೆ.

    ತಮ್ಮ ಸಿಬ್ಬಂದಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಕುರಿತು ಆಸ್ಪ್ರತ್ರೆಯ ಮುಖ್ಯಸ್ಥರ ಜೊತೆ ಸಮಾಲೋಚನೆ

    ಸಂಬಂಧಿತ ಸುದ್ದಿ: ವಿ.ಸಿ. ಸಜ್ಜನರ್ ಇನ್ನು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ

    ಸಂಬಂಧಿತ ಸುದ್ದಿ: ಸೈಬರಾಬಾದ್ ಪೊಲೀಸ್ ಕಮಿಷನರ್ ಸಜ್ಜನರ್‌ಗೆ ಸಚಿವರಿಂದ ಸನ್ಮಾನ

    ಸಂಬಂಧಿತ ಸುದ್ದಿ: ತೆಲಂಗಾಣದ ಎಡಿಜಿಪಿ ಆಗಿ ಕನ್ನಡಿಗ ವಿ.ಸಿ. ಸಜ್ಜನರ್; ಪೊಲೀಸ್ ಕಮಿಷನರ್ ಆಗಿಯೂ ಮುಂದುವರಿಕೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!