Friday, May 17, 2024
spot_img
More

    Latest Posts

    ಅನಾಥರಾಗಿದ್ದ ಕಮಲಜ್ಜಿಗೆ ಕೋಟ ಗಾಣಿಗ ಯುವಸಂಘಟನೆಯಿಂದ ಅಂತ್ಯಸಂಸ್ಕಾರ

    ಬೆಂಗಳೂರು: ಉಡುಪಿ ಜಿಲ್ಲೆ ಕುಂದಾಪುರದ ಕೋಟ ಪರಿಸರದಲ್ಲಿದ್ದ ಕಮಲ ಗಾಣಿಗ ಅವರು ಅನಾಥ ಪರಿಸ್ಥಿತಿಯಲ್ಲಿದ್ದಾಗ ಕಂಡು ನೆರವಾದ ಕೋಟ ಘಟಕದ ಗಾಣಿಗ ಯುವ ಸಂಘಟನೆ, ಆಕೆ ನಿಧನರಾದ ಬಳಿಕ ಅಂತ್ಯಸಂಸ್ಕಾರವನ್ನೂ ನಡೆಸಿರುವುದು ಗಮನ ಸೆಳೆದಿದೆ.

    ಕೋಟ ಪರಿಸರದ ಗಾಣಿಗ ಸಮಾಜಕ್ಕೆ  ಸೇರಿದ್ದ ಕಮಲ ಗಾಣಿಗ ಎನ್ನುವ ವೃದ್ಧೆ ನಾಲ್ಕೈದು ತಿಂಗಳ ಹಿಂದೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಅನಾಥ ಸ್ಥಿತಿಯಲ್ಲಿ ಇರುವುದಾಗಿ ಹಾಗೂ ಆಕೆಗೆ ನೆರವಾಗುವಂತೆ ಸಾಮಾಜಿಕ ಕಾರ್ಯಕರ್ತರು ಮನವಿ ಮಾಡಿದ ಮೇರೆಗೆ ಕೋಟ ಘಟಕದ ಗಾಣಿಗ ಯುವ ಸಂಘಟನೆಯು ಸಹಾಯಕ್ಕೆ ಮುಂದಾಗಿತ್ತು.

    ಸಮಾಜದ ದಾನಿಗಳ ನೆರವನ್ನು ಪಡೆದು ಕೋಟೇಶ್ವರದಲ್ಲಿರುವ  ಸರ್ಜನ್ ಆಸ್ಪತ್ರೆಯ ಹಿರಿಯರ ಶುಶ್ರೂಷೆ ಕೇಂದ್ರಕ್ಕೆ ಕಮಲಜ್ಜಿಯನ್ನು ದಾಖಲಿಸಲಾಗಿತ್ತು. ಆ ಬಳಿಕ ಅಜ್ಜಿಗೆ ಅನಾರೋಗ್ಯ ಉಲ್ಬಣಿಸಿದ್ದು ಮಾ.14ರ ಸೋಮವಾರ ಕಮಲಜ್ಜಿ  ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

    ಅನಾಥೆಯಾದ ಕಮಲಜ್ಜಿಯ ಅಂತ್ಯ ಸಂಸ್ಕಾರ ನೆರವೇರಿಸುವವರು ಯಾರು ಎನ್ನುವ ಪ್ರಶ್ನೆ ಕಾಡತೊಡಗಿದಾಗ ಕೋಟ ಗಾಣಿಗ ಯುವ ಸಂಘಟನೆಯ ಅಧ್ಯಕ್ಷ ವಿಶ್ವನಾಥ ಗಾಣಿಗ ಬೆಟ್ಲಕ್ಕಿ ಮುಂದಾಳತ್ವದಲ್ಲಿ ಚಿತ್ರಪಾಡಿಯ ಹಿಂದೂ ರುದ್ರಭೂಮಿಯಲ್ಲಿ  ಹಿಂದೂ ಗಾಣಿಗ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

    ಕಮಲಜ್ಜಿಗೆ  ಮಕ್ಕಳು ಇರಲಿಲ್ಲ. ತಾನು ಅನಾಥೆಯಾಗಿ ಭಿಕ್ಷೆ ಬೇಡುತ್ತ ಜೀವನ ಸಾಗಿಸುತ್ತಿರುವುದಾಗಿ ಅವರಿ ಈ ಹಿಂದೆ ತಿಳಿಸಿದ್ದರು.  ಉಡುಪಿಯ ಅಜ್ಜರಕಾಡು ಆಸ್ಪತ್ರೆಯಲ್ಲಿದ್ದ  ಅಜ್ಜಿಯನ್ನು ಯಾವುದಾದರೂ ಅನಾಥಶ್ರಮಕ್ಕೆ ಸೇರಿಸುವ ಸಲುವಾಗಿ ಕೋಟದ ಗಾಣಿಗ ಯುವ ಸಂಘಟನೆ ಐದಾರು ಆಶ್ರಮಗಳನ್ನು ಸಂಪರ್ಕಿಸಿತ್ತು.  ಆದರೆ ಅಜ್ಜಿಗೆ ನಡೆಯಲು ಆಗದ ಸ್ಥಿತಿ ಇದ್ದಿದ್ದರಿಂದ ಹಾಗೂ ಹಾಸಿಗೆಯಲ್ಲೇ ಎಲ್ಲ ಚಾಕರಿ ಮಾಡಿಸಬೇಕಾದ್ದರಿಂದ ಅನಾಥಶ್ರಮಕ್ಕೆ ಸೇರಿಸಲು ಅಸಾಧ್ಯವಾಗಿತ್ತು.  ಅದಾಗ್ಯೂ ಅಜ್ಜಿಯನ್ನು ಏನಾದರೂ ಮಾಡಿ ವ್ಯವಸ್ಥಿತ ಜಾಗಕ್ಕೆ ಸೇರಿಸಬೇಕು, ಆಕೆ ಹೆಚ್ಚಿನ ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಎನ್ನುವ ನಿಟ್ಟಿನಲ್ಲಿ ಹೋಮ್ ನರ್ಸ್‌ಗಳ ಸೇವೆ ಇರುವ  ಹಿರಿಯರ ಶುಶ್ರೂಷೆ ಕೇಂದ್ರಗಳನ್ನು ವಿಚಾರಿಸಿ ಅಲ್ಲಿಗೆ ಸೇರಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.

    ಮುಂಗಡ ಹಣ  20 ಸಾವಿರ ಮತ್ತು ತಿಂಗಳಿಗೆ  10 ಸಾವಿರ ರೂಪಾಯಿ ಶುಲ್ಕ ನೀಡುವ ಮಾತುಕತೆ ನಡೆಸಿ  ನವೆಂಬರ್ 27ರ ಸಂಜೆ ಕೋಟೇಶ್ವರದಲ್ಲಿರುವ ಸರ್ಜನ್ ಆಸ್ಪತ್ರೆಯ ಹಿರಿಯರ ಶುಶ್ರೂಷೆ ಕೇಂದ್ರಕ್ಕೆ ಸೇರಿಸಲಾಗಿತ್ತು. ಅಲ್ಲಿಂದ ನಾಲ್ಕು ತಿಂಗಳ ಕಾಲ ದಾನಿಗಳ ನೆರವಿನಿಂದ ಆಸ್ಪತ್ರೆ ವೆಚ್ಚ ಭರಿಸಲಾಗಿತ್ತು. ಅದಾಗ್ಯೂ ಅಜ್ಜಿಯನ್ನು ಹೆಚ್ಚು ಕಾಲ ಉಳಿಸಿಕೊಳ್ಳಲಾಗದಿರುವುದು ಬೇಸರದ ಸಂಗತಿ.

    ಮಾ. 14ರ ಬೆಳಗ್ಗೆ ಅಜ್ಜಿ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಗಾಣಿಗ ಯುವ ಸಂಘಟನೆಯ ಗೌರವಾಧ್ಯಕ್ಷ ಪ್ರಶಾಂತ್ ಗಾಣಿಗ ಕಾರ್ಕಡ, ಕಾರ್ಯದರ್ಶಿ ಗಣೇಶ್ ಗಾಣಿಗ ಚಿತ್ರಪಾಡಿ, ಖಜಾಂಚಿ ಗಿರೀಶ್ ಗಾಣಿಗ ಬೆಟ್ಲಕ್ಕಿ,  ಸಮಾಜದ ಪ್ರಮುಖರಾದ ದಿನೇಶ್ ಗಾಣಿಗ ಕೋಟ, ನಾಗರಾಜ್ ಗಾಣಿಗ ಸಾಲಿಗ್ರಾಮ, ರಾಜೇಶ್ ಗಾಣಿಗ ಅಚ್ಲಾಡಿ, ಸುರೇಶ್ ಗಾಣಗ ಶೇವಧಿ, ಪ್ರಕಾಶ್ ಗಾಣಿಗ ಕಾರ್ಕಡ,  ಮಹಿಳಾ ಸಂಘಟನೆಯ ಅನಿತಾ ಶ್ರೀಧರ್, ರೇಖಾ ಗಣೇಶ್ ಚಿತ್ರಪಾಡಿ, ಮಾಲತಿ ಚಿತ್ರಪಾಡಿ, ಸಂಧ್ಯಾ ಗಾಣಿಗ,  ಲಕ್ಷ್ಮೀಶ್ ಚಿತ್ರಪಾಡಿ, ಸುಬ್ರಹ್ಮಣ್ಯ ಚಿತ್ರಪಾಡಿ, ಅಮೋಘ ಚಿತ್ರಪಾಡಿ, ದಯಾನಂದ ಉಡುಪಿ ಮುಂತಾದವರು ಧಾವಿಸಿ, ವಿಧ್ಯುಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು.

    ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ದೀಪವೈಭವ

    ಸಂಬಂಧಿತ ಸುದ್ದಿ: ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ-ಅಧ್ಯಕ್ಷರಾಗಿ ಮಂಜುನಾಥ-ನರಸಿಂಹ ಅವಿರೋಧ ಆಯ್ಕೆ

    ಸಂಬಂಧಿತ ಸುದ್ದಿ: ಚಾಮರಾಜಪೇಟೆ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಷನ್ ಇದೇ ರವಿವಾರ ಉದ್ಘಾಟನೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!