Friday, May 17, 2024
spot_img
More

    Latest Posts

    ಆಜ್ರಿ ಗೋಪಾಲ ಗಾಣಿಗರಿಗೆ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ

    ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯು 2021ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ‘ಯಕ್ಷ ಸಿರಿ’ ಪ್ರಶಸ್ತಿಗೆ ಆಜ್ರಿ ಗೋಪಾಲ ಗಾಣಿಗ ಅವರು ಆಯ್ಕೆ ಆಗಿದ್ದಾರೆ.

    ಉಡುಪಿ ಜಿಲ್ಲೆ ಕುಂದಾಪುರದ ಆಜ್ರಿಯ ಮಂಜಯ್ಯ ಗಾಣಿಗ-ಮುತ್ತಯ್ಯ ದಂಪತಿಯ ಪುತ್ರರಾಗಿರುವ ಇವರು ಏಳನೇ ತರಗತಿ ವಿದ್ಯಾಭ್ಯಾಸದ ಬಳಿಕ ಆರ್ಗೋಡು ಗೋವಿಂದರಾಯ ಶೆಣೈ ಮತ್ತು ನರಸಿಂಹ ಶೆಣೈಯವರ ಪ್ರೇರಣೆಯಿಂದ ಯಕ್ಷಗಾನ ರಂಗಕ್ಕೆ ಪದಾರ್ಪಣೆ ಮಾಡಿದರು.

    ಅದಾಗ್ಯೂ ಯಕ್ಷಗಾನ ಇವರಿಗೆ ಜನ್ಮತಃ ಸಿದ್ಧಿಸಿರುವ ಕಲೆ ಎಂದರೂ ತಪ್ಪೇನಲ್ಲ. ಏಕೆಂದರೆ ಇವರು ಯಕ್ಷಗಾನಕ್ಕೆ ಪ್ರಪ್ರಥಮ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಖ್ಯಾತ ಕಲಾವಿದ ಹಾರಾಡಿ ರಾಮ ಗಾಣಿಗರ ಮೊಮ್ಮಗ. ಅಲ್ಲದೆ ಇವರ ತಂದೆ ಮಂಜಯ್ಯ ಗಾಣಿಗರು ಯಕ್ಷಗಾನ ಅರ್ಥದಾರಿ. ಇಂಥ ಯಕ್ಷಗಾನ ಹಿನ್ನೆಲೆಯಿಂದ ಯಕ್ಷರಂಗಕ್ಕೆ ಧುಮುಕಿದ ಇವರು ತಂದೆಯವರಿಂದ ಮಾತುಗಾರಿಕೆ ಕಲಿತು, ನಂತರ ಹೆಚ್ಚಿನ ಕಲಿಕೆಗಾಗಿ ಉಡುಪಿ ಯಕ್ಷಗಾನ ಕೇಂದ್ರಕ್ಕೆ ಸೇರಿದರು.

    ಆಜ್ರಿ ಗೋಪಾಲ ಗಾಣಿಗ

    ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಹೆರಂಜಾಲು ವೆಂಕಟರಮಣ, ನೀಲಾವರ ರಾಮಕೃಷ್ಣಯ್ಯ, ಹಿರಿಯಡಕ ಗೋಪಾಲ ರಾಯರಂಥ ಘಟಾನುಘಟಿಗಳ ವಿದ್ಯಾರ್ಥಿಯಾಗಿ ಯಕ್ಷಗಾನದ ವಿವಿಧ ಅಂಗಗಳಲ್ಲಿ ಪರಿಪೂರ್ಣತೆ ಸಾಧಿಸಿದರು. ಬಾಲಗೋಪಾಲ, ಸಖಿ ಸ್ತ್ರೀವೇಷ ಮುಂತಾದ ಪಾತ್ರಗಳನ್ನು ಕಮಲಶಿಲೆ, ಸೌಕೂರು, ರಂಜದಕಟ್ಟೆ, ಪೆರ್ಡೂರು ಮೇಳಗಳಲ್ಲಿ ಅಭಿನಯಿಸಿ ನಂತರ ಇಡಗುಂಜಿ, ಮೂಲ್ಕಿ ಡೇರೆ ಮೇಳಗಳಲ್ಲಿ ಪರಿಪೂರ್ಣ ಕಲಾವಿದರಾಗಿ ಮೂಡಿಬಂದರು.

    ಆಜ್ರಿ ಗೋಪಾಲ ಗಾಣಿಗರ ಭೀಷ್ಮ, ಪರಶುರಾಮ, ರಾವಣ, ಹಿರಣ್ಯಕಶಿಪು, ಋತುಪರ್ಣ, ಕಮಲಭೂಪ, ಭೀಮ ಮುಂತಾದ ಪಾತ್ರಗಳಲ್ಲಿ ವೀರಭದ್ರ ನಾಯ್ಕರ ಹೆಜ್ಜೆಗಾರಿಕೆ ಮತ್ತು ರಾಮಗಾಣಿಗರ ಛಾಪನ್ನು ಗುರುತಿಸಬಹುದು. ವಿಶೇಷವೆಂದರೆ ಇವರು ಹಾರಾಡಿ ರಾಮ ಗಾಣಿಗರ ಹಾಗೆ ಕೇವಲ ಮಂದಾರ್ತಿ ಮೇಳವೊಂದರಲ್ಲೇ ಸುದೀರ್ಘ‌ ಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಎರಡನೇ ವೇಷ, ಪುರುಷ ವೇಷ ಎರಡನ್ನೂ ಮಾಡಬಲ್ಲ ಇವರ ಕರ್ಣಾರ್ಜುನದ ಅರ್ಜುನ, ಪುಷ್ಕಳ, ಸುಧನ್ವ ಮುಂತಾದ ಪುರುಷ ವೇಷಗಳು ಹಾರಾಡಿ ಕುಷ್ಟ ಗಾಣಿಗರ ಪಡಿಯಚ್ಚು ಎನ್ನಬಹುದು.

    (ಪೂರಕ ಮಾಹಿತಿ: ಪ್ರೊ.ಎಸ್‌.ವಿ.ಉದಯ ಕುಮಾರ ಶೆಟ್ಟಿ, ಕಾರ್ತಿಕ್ ಪ್ರಸಾದ್ ಕೋಡಿ)

    ಕರ್ನಾಟಕ ಯಕ್ಷಗಾನ ಅಕಾಡೆಮಿಯು ಪ್ರತಿವರ್ಷ ‘ಪಾರ್ತಿಸುಬ್ಬ ಪ್ರಶಸ್ತಿ’, ‘ಗೌರವ ಪ್ರಶಸ್ತಿ’ ಮತ್ತು ‘ಯಕ್ಷಸಿರಿ ಪ್ರಶಸ್ತಿ’ಗಳನ್ನು ನೀಡುತ್ತಿದೆ. 2021ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್‌ ಅವರನ್ನು ಆಯ್ಕೆ ಮಾಡಲಾಗಿದೆ.

    ಗೌರವ ಪ್ರಶಸ್ತಿ

    • ಸತ್ಯನಾರಾಯಣ ವರದ, ಹಾಸ್ಯಗಾರ, ಕರ್ಕಿ, (ಸಂಪೂರ್ಣ ಯಕ್ಷಗಾನ)
    • ಮತ್ತುಪ್ಪ ತನಿಯ ಪೂಜಾರಿ, ಹೊರನಾಡ ಕನ್ನಡಿಗ (ಸಂಪೂರ್ಣ ಯಕ್ಷಗಾನ)
    • ನರೇಂದ್ರ ಕುಮಾರ್‌ ಜೈನ್‌, ಉಜಿರೆ (ತೆಂಕುತಿಟ್ಟು ಯಕ್ಷಗಾನ ಗುರು ಮತ್ತು ಸಂಘಟಕ)
    • ಮೂಡಲಗಿರಿಯಪ್ಪ ಕಡವೀಗೆರೆ, ತುಮಕೂರು ( ಭಾಗವತಿಕೆ ಮತ್ತು ಮುಖವೀಣೆ)
    • ಎನ್‌.ಟಿ. ಮೂರ್ತಾಚಾರ್ಯ ನೆಲ್ಲಿಗೆರೆ, ಮಂಡ್ಯ (ಭಾಗವತಿಕೆ ಮತ್ತು ಮೂಡಲಪಾಯ ಕಲಾವಿದ)

    ಯಕ್ಷಸಿರಿ ಪ್ರಶಸ್ತಿ

    • ಹಳ್ಳಾಡಿ ಜಯರಾಮ ಶೆಟ್ಟಿ, ಕುಂದಾಪುರ
    • ಗೋಪಾಲ ಗಾಣಿಗ ಆಜ್ರಿ
    • ಬೋಳಾರ ಸುಬ್ಬಯ್ಯ ಶೆಟ್ಟಿ, ಮಂಗಳೂರು
    • ಸೀತೂರು ಅನಂತ ಪದ್ಮನಾಭರಾವ್‌, ಚಿಕ್ಕಮಗಳೂರು
    • ಕಡತೋಕ ಲಕ್ಷ್ಮೀನಾರಾಯಣ ಶಂಭು ಭಾಗವತ, ಹೊನ್ನಾವರ
    • ರಾಮ ಸಾಲಿಯಾನ್‌ ಮಂಗಲ್ಪಾಡಿ, ಕಾಸರಗೋಡು
    • ಕೊಕ್ಕಡ ಈಶ್ವರ ಭಟ್‌, ಬಂಟ್ವಾಳ
    • ಅಡಿಗೋಣ ಬೀರಣ್ಣ ನಾಯ್ಕ, ಅಂಕೋಲ
    • ಭದ್ರಯ್ಯ, ಬೆಂಗಳೂರು, ಮೂಡಲಪಾಯ ಕಲಾವಿದ
    • ಬಸವರಾಜಪ್ಪ, ಕೋಲಾರ, ಕೇಳಿಕೆ ಕಲಾವಿದ

    ಸಂಬಂಧಿತ ಸುದ್ದಿ: ಯಕ್ಷಗಾನ ಕಲಾವಿದ ಆಜ್ರಿ ಗೋಪಾಲ ಗಾಣಿಗ, ಪಟ್ಲ ಸತೀಶ್‌ ಶೆಟ್ಟಿ ಅವರಿಗೆ ಸನ್ಮಾನ

    ಸಂಬಂಧಿತ ಸುದ್ದಿ: ಯಕ್ಷಗಾನ ಕಲಾವಿದ ಕೃಷ್ಣ ಗಾಣಿಗರಿಗೆ ಪಡ್ರೆ ಚಂದು ಪ್ರಶಸ್ತಿ ಪ್ರದಾನ

    ಸಂಬಂಧಿತ ಸುದ್ದಿ: ಮಕ್ಕಳಿಗೆಂದೇ ಯಕ್ಷಗಾನ ಕಲಿಕಾ ತರಬೇತಿ ಕೇಂದ್ರ ಉದ್ಘಾಟನೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!