Saturday, September 21, 2024
spot_img
More

    Latest Posts

    ಗಾಣಿಗ-ಗಾಣಿಗೇರ್‌ ಬೇರೆಯಲ್ಲ, ಹಿಂದೂ ಲಿಂಗಾಯತ-ಗಾಣಿಗ ಲಿಂಗಾಯತ ಎರಡೂ ಒಂದೇ..

    ಬೆಂಗಳೂರು: ಗಾಣಿಗ ಸಮಾಜದಲ್ಲಿ ನಾನಾ ಪಂಗಡ, ಉಪಜಾತಿಗಳಿದ್ದು, ಒಂದೊಂದು ಪ್ರದೇಶದಲ್ಲಿ ಈ ಸಮುದಾಯವನ್ನು ಒಂದೊಂದು ರೀತಿಯಲ್ಲಿ ಕರೆಯುತ್ತಾರೆ. ಈ ಮಧ್ಯೆ ಗಾಣಿಗ ಸಮುದಾಯದ ಕುರಿತಾಗಿ, ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪೊಂದನ್ನು ನೀಡಿದೆ. ಆ ಮೂಲಕ ಗಾಣಿಗ-ಗಾಣಿಗೇರ್‌ ಬೇರೆ ಅಲ್ಲ, ಹಿಂದೂ ಲಿಂಗಾಯತ ಹಾಗೂ ಗಾಣಿಗ ಲಿಂಗಾಯತ ಎರಡೂ ಒಂದೇ ಎಂಬುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

    ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಗಪ್ಪ ಹಸನಪ್ಪ ಮಲೆಣ್ಣವರ್ ಅವರ ಜಾತಿಗೆ ಸಂಬಂಧಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಈ ತೀರ್ಪನ್ನು ನೀಡಿದೆ. ಸಂಗಪ್ಪ ಅವರಿಗೆ ಗಾಣಿಗ ಜಾತಿ ಪ್ರಮಾಣಪತ್ರ ನೀಡಿರುವುದನ್ನು ರದ್ದುಪಡಿಸಿ ಒಬಿಸಿ ಮೀಸಲಾತಿ ಪಡೆಯುವಂತೆ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ 2017ರಲ್ಲಿ ಸೂಚಿಸಿತ್ತು. ಆದರೆ ಈ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್ ವಿಭಾಗೀಯ ಪೀಠ ಸಂಗಪ್ಪ ಪರ ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಐಪಿಎಸ್ ಅಧಿಕಾರಿ ಎಂ.ವಿ. ಚಂದ್ರಕಾಂತ್ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಇಂದಿರಾ ಬ್ಯಾನರ್ಜಿ ಮತ್ತು ಜೆ.ಕೆ. ಮಾಹೇಶ್ವರಿ ಅವರಿದ್ದ ನ್ಯಾಯಪೀಠ ಶುಕ್ರವಾರ ವಜಾಗೊಳಿಸಿದೆ. ಸಂಗಪ್ಪ ಪರವಾಗಿ ಸುಪ್ರೀಂ ಕೋರ್ಟ್ ವಕೀಲ ಎಚ್.ಚಂದ್ರಶೇಖರ್ ವಾದಿಸಿದ್ದರು.

    ಪ್ರಕರಣದ ಹಿನ್ನೆಲೆ: ಸಂಗಪ್ಪ ಅವರು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) 1999ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಗ್ರೂಪ್ ಎ ಹಾಗೂ ಬಿ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ನೇಮಕಗೊಂಡಿದ್ದರು. ಆಗ ಚಂದ್ರಕಾಂತ್ ಡಿವೈಎಸ್‌ಪಿ ಹಾಗೂ ಸಂಗಪ್ಪ ಉಪವಿಭಾಗಾಧಿಕಾರಿ (ಜೂನಿಯರ್‌ ಗ್ರೇಡ್) ಹುದ್ದೆಗೆ ಆಯ್ಕೆ ಆಗಿದ್ದರು.

    ಸಂಗಪ್ಪ ಅವರ ತಂದೆ ‘ಲಿಂಗಾಯತ’ ಜಾತಿಗೆ ಸೇರಿದ್ದು, ಸಂಗಪ್ಪ ‘ಗಾಣಿಗ’ ಜಾತಿಗೆ ಸೇರಿದವರು ಎಂದು ಹೇಳಿಕೊಂಡು ಮೀಸಲಾತಿ ಪ್ರಯೋಜನ ಪಡೆದಿದ್ದಾರೆ ಎಂದು ಚಂದ್ರಕಾಂತ್ ನ್ಯಾಯಾಲಯ ಹೋಗಿದ್ದರು.

    ಹೈಕೋರ್ಟ್‌ನಲ್ಲಿ ಸೋಲು-ಗೆಲುವು: ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕಸದಸ್ಯ ಪೀಠ, ‘ಸಂಗಪ್ಪ ಅವರ ತಂದೆ ಹಿಂದೂ ಲಿಂಗಾಯತ ಜಾತಿಗೆ ಸೇರಿದವರು ಎಂದು ಶಾಲೆಯ ದಾಖಲೆಗಳು ಬಹಿರಂಗಪಡಿಸುತ್ತವೆ. ಆದ್ದರಿಂದ ಅವರ ಪುತ್ರ ಗಾಣಿಗ ಸಮುದಾಯ ಎಂದು ಹೇಳಿಕೊಂಡಿರುವುದು ಸರಿಯಲ್ಲ’ ಎಂದು ತೀರ್ಪು ನೀಡಿತ್ತು. ಆದರೆ, ವಿಭಾಗೀಯ ಪೀಠವು ಏಕಪೀಠದ ಆದೇಶವನ್ನು ತಳ್ಳಿಹಾಕಿತ್ತು.

    ಸುಪ್ರೀಂ ಅಭಿಪ್ರಾಯ: ನಂತರ ಸುಪ್ರೀಂ ಕೋರ್ಟ್ ಕೂಡ ವಿಭಾಗೀಯ ಪೀಠದ ಆದೇಶವನ್ನೇ ಎತ್ತಿ ಹಿಡಿದಿದೆ. ಮಾತ್ರವಲ್ಲ ‘ಸಂಗಪ್ಪ ಅವರ ತಂದೆ 1953ರಲ್ಲಿ ಶಾಲೆಗೆ ದಾಖಲಾದ ವೇಳೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಪರಿಚಯಿಸಿರಲಿಲ್ಲ ಎಂಬ ಅಂಶವನ್ನು ಗಮನಿಸಿದೆ. ಆದರೆ, ಸಂಗಪ್ಪ ಶಾಲೆಗೆ ದಾಖಲಾಗುವ ಸಂದರ್ಭದಲ್ಲಿ ಮೀಸಲಾತಿ ಸೌಲಭ್ಯ ಪರಿಚಯಿಸಲಾಗಿತ್ತು. ಆದ್ದರಿಂದ ಅವರ ತಂದೆಯ ಜಾತಿ ಕೇವಲ ‘ಲಿಂಗಾಯತ’ ಹಾಗೂ ಪುತ್ರನ ದಾಖಲಾತಿಯಲ್ಲಿ ‘ಹಿಂದೂ ಗಾಣಿಗ’ ಎಂದು ಉಲ್ಲೇಖಿಸಲ್ಪಟ್ಟಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

    ‘ಲಿಂಗಾಯತ ಹಿಂದೂ ಉತ್ತರಾಧಿಕಾರ ಕಾಯ್ದೆ 1956, ಹಿಂದೂ ವಿವಾಹ ಕಾಯ್ದೆ 1955, ಹಿಂದೂ ಅಲ್ಪಸಂಖ್ಯಾತ ಮತ್ತು ಪಾಲಕತ್ವ ಕಾಯ್ದೆ 1956, ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆ 1956 ಪ್ರಕಾರ ಲಿಂಗಾಯತರು ಸಹ ಹಿಂದೂಗಳು ಎಂದು ಪರಿಗಣಿಸಲ್ಪಡುತ್ತಾರೆ. ಸಂಗಪ್ಪ ಅವರ ಜಾತಿಯನ್ನು ಅವರ ತಂದೆ ಶಾಲಾ ದಾಖಲಾತಿಗಳಲ್ಲಿ ‘ಹಿಂದೂ ಲಿಂಗಾಯತ’ ಎಂದು ಉಲ್ಲೇಖಿಸಿದ್ದಾರೆ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

    ಸಂಗಪ್ಪ ಅವರು ಪ್ರಕರಣದ ವಿಚಾರಣೆ ವೇಳೆ 1909ರ ನೋಂದಾಯಿತ ದಾಖಲೆ ಸಲ್ಲಿಸಿದ್ದರು. ಅಲ್ಲಿ ಅವರ ತಾತನ ಜಾತಿ ‘ಗಾಣಿಗೇರ್‌’ ಎಂದಿತ್ತು. ಆದ್ದರಿಂದ ಸಂಗಪ್ಪ ಜಾತಿಯನ್ನು ‘ಗಾಣಿಗ’ ಎಂದು ಸಾಬೀತುಪಡಿಸಿದ ದಾಖಲೆ ಪ್ರಸ್ತುತವಾಗಿದೆ. ಸಂಗಪ್ಪ ತಮ್ಮ ಸಂಬಂಧಿಕರಿಗೆ ನೀಡಲಾದ ಜಾತಿ ಪ್ರಮಾಣಪತ್ರಗಳನ್ನು ಅವಲಂಬಿಸಿದ್ದಾರೆ ಎಂದು ಸುಪ್ರೀಂಕೋರ್ಟ್ ಆದೇಶದಲ್ಲಿ ತಿಳಿಸಿದೆ.

    ಸಂಬಂಧಿತ ಸುದ್ದಿ: ಗಾಣಿಗ ನಿಗಮ-ಮಂಡಳಿಗಾಗಿ ಮೋದಿಯ ಸೆಳೆಯುವತ್ತ ಗಾಣಿಗ ಮುಖಂಡರ ಚಿತ್ತ

    ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..

    ಸಂಬಂಧಿತ ಸುದ್ದಿ: ನಮ್ಮದು ಸಣ್ಣ ಸಮಾಜ, ಕಡಿಮೆ ಜನಸಂಖ್ಯೆ ಎಂಬ ಭಾವನೆ ಬೇಡ; ಗಾಣಿಗ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಲಹೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!