Friday, May 17, 2024
spot_img
More

    Latest Posts

    ನಮ್ಮದು ಸಣ್ಣ ಸಮಾಜ, ಕಡಿಮೆ ಜನಸಂಖ್ಯೆ ಎಂಬ ಭಾವನೆ ಬೇಡ; ಗಾಣಿಗ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಲಹೆ

    ಬೆಂಗಳೂರು: ನಮ್ಮದು ಸಣ್ಣ ಸಮಾಜ, ಕಡಿಮೆ ಜನರಿದ್ದೇವೆ ಎಂಬ ಭಾವನೆ ಬೇಡ ಎಂದು ಗಾಣಿಗ ಸಮಾಜದವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕಿವಿಮಾತು ಹೇಳಿದ್ದಾರೆ.

    ಮಾಜಿ ಸಭಾಪತಿ ವಿ.ಆರ್.‌ ಸುದರ್ಶನ್‌ ಅವರ ನೇತೃತ್ವದಲ್ಲಿ ಬೆಂಗಳೂರಿನ ದೇವನಹಳ್ಳಿಯ ಎಸ್‌ಎಸ್‌ಬಿ ಕನ್ವೆನ್ಷನ್‌ ಹಾಲ್‌ನಲ್ಲಿ ಅಕ್ಟೋಬರ್‌ 3ರಂದು ಹಮ್ಮಿಕೊಳ್ಳಲಾಗಿದ್ದ ʼಗಾಣಿಗ ಸಮುದಾಯ ಕಾರ್ಯಾಗಾರʼದಲ್ಲಿ ಅವರು ಮಾತನಾಡಿದರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಜೊತೆಯಾಗಿ ಸಮಾರಂಭವನ್ನು ಉದ್ಘಾಟಿಸಿದರು.

    ಸಮಾಜಕ್ಕೆ ಬೆಳಕು ನೀಡಲು, ಶುಭ ಕಾರ್ಯ ಮಾಡಲು ದೀಪ ಹಾಗೂ ಅದಕ್ಕೆ ಎಣ್ಣೆ ಅಗತ್ಯ. ಭಗವಂತನಿಗೂ ಭಕ್ತನಿಗೂ ನೇರ ಸಂಬಂಧ ಕಲ್ಪಿಸಲು ಗಾಣಿಗರು ಬೇಕು. ಎಣ್ಣೆಯನ್ನು ತಯಾರಿಸಿದ್ದು ನಾನಲ್ಲ, ಸುದರ್ಶನ್‌ ಕೂಡ ಅಲ್ಲ. ನಮ್ಮ ಪೂರ್ವಜರು ಆ ಕೆಲಸವನ್ನು ಮಾಡಿದ್ದು, ಗಾಣಿಗ ಎಂಬುದು ಒಂದು ಐತಿಹಾಸಿಕ ವೃತ್ತಿ ಎಂಬುದಾಗಿ ಡಿ.ಕೆ. ಶಿವಕುಮಾರ್‌ ಬಣ್ಣಿಸಿದರು.

    ಅದಾಗ್ಯೂ ನಮ್ಮದು ಸಣ್ಣ ಸಮಾಜ, ಕಡಿಮೆ ಜನರಿದ್ದೇವೆ ಎಂಬ ಭಾವನೆ ಗಾಣಿಗ ಸಮುದಾಯದವರಲ್ಲಿದೆ. ನಾವು ಕಡಿಮೆ ಎಂಬ ಭಾವನೆ ಬೇಡ. ಈಗ ವಿ.ಆರ್.‌ ಸುದರ್ಶನ್‌, ಬಿ.ಜೆ. ಪುಟ್ಟಸ್ವಾಮಿ, ಶಾರದಾ ಮೋಹನ ಶೆಟ್ಟಿ ಅವರಿಗೇನು ಕಡಿಮೆ ಇದೆ. ದೇಶದ ಪ್ರಧಾನಮಂತ್ರಿ ಅವರಿಗೇನು ಕಡಿಮೆ ಇದೆ. ಗಾಣಿಗರು ಬೇರೆ ಬೇರೆ ಕ್ಷೇತ್ರಗಳಲ್ಲಿ ಮುಂದೆ ಬಂದಿದ್ದಾರೆ. ಹೀಗಿರುವಾಗ ನಾವು ಜನಸಂಖ್ಯೆಯಲ್ಲಿ ಕಡಿಮೆ ಇದ್ದೇವೆ, ಸಣ್ಣ ಸಮಾಜ ಎಂಬ ಭಾವನೆ ಬೇಡ ಎಂದು ಅವರು ಹುರಿದುಂಬಿಸಿದರು.

    ಸಣ್ಣದು, ಕಡಿಮೆ ಎಂಬ ಪ್ರಶ್ನೆ ಇಲ್ಲ. ಮುಖ್ಯವಾಗಿ ಬೇಕಾಗಿರುವುದು ಮಾನವಧರ್ಮ. ಅದರಲ್ಲಿ ಗಾಣಿಗರದ್ದೂ ಪವಿತ್ರ ಹಾಗೂ ಪ್ರಮುಖ ಪಾತ್ರವಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

    ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ, ಗಾಣಿಗ ಸಮಾಜದ ಹಿರಿಮೆ-ಗರಿಮೆಯನ್ನು ಕೊಂಡಾಡಿದರು. ಜೊತೆಗೆ ಮೀಸಲಾತಿಯ ಅಗತ್ಯವನ್ನೂ ವಿವರಿಸಿದರು. ಸಮರ್ಪಕ ಮೀಸಲಾತಿಗೆ ಜಾತಿಗಣತಿ ಮಾಹಿತಿ ಅತ್ಯಗತ್ಯ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಾತಿಗಣತಿ ಮಾಹಿತಿಯನ್ನು ಬಹಿರಂಗಪಡಿಸಲಿದೆ ಎಂದು ಭರವಸೆ ನೀಡಿದರು.

    ಮಾಜಿ ಸಭಾಪತಿ ವಿ.ಆರ್.‌ ಸುದರ್ಶನ್‌, ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಎಂ.ಡಿ‌‌. ಲಕ್ಷ್ಮಿನಾರಾಯಣ, ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ ಬಿ.ಎಸ್.‌ ಮಂಜುನಾಥ್‌, ಅಧ್ಯಕ್ಷ ಎಚ್.‌ಟಿ. ನರಸಿಂಹ, ಆಯೋಜಕರಾದ ದೇವನಹಳ್ಳಿ ಪುರಸಭೆ ಅಧ್ಯಕ್ಷೆ ರೇಖಾ ಗೋಪಿನಾಥ್, ದೇವನಹಳ್ಳಿ ವೇಣುಗೋಪಾಲ್‌, ಅಖಿಲ ಕರ್ನಾಟಕ ಗಾಣಿಗ ಸಮುದಾಯದ ಅಧ್ಯಕ್ಷ ಚಂದ್ರಶೇಖರ್, ಶ್ರೀಗಾಣಿಗ ಎಜುಕೇಷನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಆರ್. ನಾಗರಾಜ ಶೆಟ್ಟಿ ಮುಂತಾದವರು ಭಾಗಿಯಾಗಿದ್ದರು.

    ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..

    ಸಂಬಂಧಿತ ಸುದ್ದಿ: ನೂತನ ಸಂಪುಟ ರಚನೆ ಬೆನ್ನಿಗೇ ಮತ್ತಷ್ಟು ಕ್ರಿಯಾಶೀಲರಾದ್ರು ಶಾಸಕ ದಿನಕರ ಶೆಟ್ಟಿ

    ಸಂಬಂಧಿತ ಸುದ್ದಿ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ವಿದ್ಯಾರ್ಥಿಗಳು

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!