Friday, May 17, 2024
spot_img
More

    Latest Posts

    ಕೊಗ್ಗ ಮಾಸ್ಟರ್ ಎಂದೇ ಹೆಸರಾಗಿದ್ದ ಕೊಗ್ಗ ಗಾಣಿಗರು ನಿಧನ..

    ಬೆಂಗಳೂರು: ಆಪ್ತವಲಯದಲ್ಲಿ ಕೊಗ್ಗ ಮಾಸ್ಟರ್ ಎಂದೇ ಕರೆಯಲ್ಪಡುತ್ತಿದ್ದ ಉಡುಪಿ ಜಿಲ್ಲೆ ಕುಂದಾಪುರದ ಮದ್ದುಗುಡ್ಡೆಯ ಕೊಗ್ಗ ಗಾಣಿಗ (71) ಅವರು ಇಂದು ನಿಧನರಾದರು.

    ಕುಂದಾಪುರ ತಾಲೂಕು ಗಾಣಿಗ ಸಂಘದ ಅಧ್ಯಕ್ಷರಾಗಿದ್ದ ಕೊಗ್ಗ ಮಾಸ್ಟರ್ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾಗ್ಯೂ ಚಿಕಿತ್ಸೆ ಫಲಿಸದೆ ಅವರು ಇಂದು ಮಧ್ಯಾಹ್ನ ಕೊನೆಯುಸಿರೆಳೆದರು. ಕೊಗ್ಗ ಮಾಸ್ಟರ್ ಅವರು ಪತ್ನಿ, ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

    ಕೊಗ್ಗ ಗಾಣಿಗ ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ನಿವೃತ್ತಿ ಬಳಿಕವೂ ಕ್ರಿಯಾಶೀಲರಾಗಿದ್ದರು. ಗಾಣಿಗ ಸಮಾಜದ ಸಂಘ-ಸಂಘಟನೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಅವರು, ಗಾಣಿಗ ಪ್ರಕಾಶನದ ‘ಸಂಪರ್ಕ ಸುಧಾ’ ಪತ್ರಿಕೆಯ ಸ್ಥಾಪಕ ಸದಸ್ಯರಾಗಿದ್ದರು. ಅದರ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ಹಲವು ಕಾಲ ಸೇವೆ ಸಲ್ಲಿಸಿದ್ದರು. ಕುಂದಾಪುರ ವ್ಯಾಸರಾಜ ಮಠದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿಯೂ ಆಗಿದ್ದ ಅವರು ಹತ್ತು ಹಲವು ಸಮಾಜಮುಖಿ ಯೋಜನೆಗಳ ರೂವಾರಿಯಾಗಿದ್ದರು. ಕುಂದಾಪುರ ವ್ಯಾಸರಾಜ ಮಠದ ಸಭಾಂಗಣ ನಿರ್ಮಾಣದಲ್ಲಿ ಅವರು ನೇತೃತ್ವ ವಹಿಸಿದ್ದು, ಅಪಾರ ಶ್ರಮವಹಿಸಿದ್ದರು.

    ಅಲ್ಲದೆ ಗಾಣಿಗ ಸಮುದಾಯದ ಸಮಾನಮನಸ್ಕರ ‘ಟೀಮ್​ ಏಕತಾ’ ಗ್ರೂಪ್​ನಲ್ಲೂ ಸಕ್ರಿಯರಾಗಿದ್ದ ಅವರು, ಆರ್ಥಿಕವಾಗಿ ಸಮಸ್ಯೆಯಲ್ಲಿ ಇರುವವರಿಗೆ ಟೀಮ್​ ಏಕತಾದ ಹಣ ತಲುಪಿಸುವಲ್ಲಿ ಉತ್ಸುಕತೆಯಿಂದ ಪಾಲ್ಗೊಳ್ಳುತ್ತಿದ್ದರು. ಎಷ್ಟೋ ಸಲ ದೂರದ ಸ್ಥಳಕ್ಕೂ ಸ್ವಂತ ಖರ್ಚಿನಲ್ಲಿ ಕಾರು ತೆಗೆದುಕೊಂಡು ಹೋಗಿ ಧನಸಹಾಯದ ಮೊತ್ತ ತಲುಪಿಸಿ ಬರುತ್ತಿದ್ದರು. ಅಲ್ಲದೆ ಟೀಮ್​ ಏಕತಾದ ಫಲಾನುಭವಿಗಳ ಪರಿಶೀಲನೆಯಲ್ಲೂ ವಿಶೇಷ ಮುತುವರ್ಜಿ ವಹಿಸುತ್ತಿದ್ದ ಅವರು, ಟೀಮ್​ ಏಕತಾದ ಆಧಾರಸ್ತಂಭದಂತೆ ಇದ್ದರು. ಜೊತೆಗೆ ಭಾರತ್ ಸ್ಕೌಟ್ಸ್​ ಮತ್ತು ಗೈಡ್ಸ್​​ನಲ್ಲೂ ಸಕ್ರಿಯರಾಗಿದ್ದರು. ಸ್ಕೌಟ್ಸ್​ ಮತ್ತು ಗೈಡ್ಸ್​ನಲ್ಲಿ ಕೊನೆಯವರೆಗೂ ಸಕ್ರಿಯರಾಗಿದ್ದ ಅವರು, ಇತ್ತೀಚೆಗೆ ಅದರ ಉಡುಪಿ ಜಿಲ್ಲಾ ಅಧಿಕಾರಿಯಾಗಿಯೂ ನೇಮಕಗೊಂಡಿದ್ದರು.

    ಗಾಣಿಗ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಕೊಗ್ಗ ಮಾಸ್ಟರ್​ ಸಮಾಜಕ್ಕೆ ತುಂಬಾ ಬೇಕಾದ ವ್ಯಕ್ತಿಯಾಗಿದ್ದರು. ಗ್ಲೋಬಲ್ ಗಾಣಿಗ.ಕಾಮ್, ಟೀಮ್​ ಏಕತಾ, ಸೋಮಕ್ಷತ್ರಿಯ ಗಾಣಿಗ ಸಮಾಜ ಬೆಂಗಳೂರು, ಕುಂದಾಪುರ ತಾಲೂಕು ಸೋಮಕ್ಷತ್ರಿಯ ಗಾಣಿಗ ಸಮಾಜ, ಕುಂದಾಪುರದ ವ್ಯಾಸರಾಜ ಮಠ ಟ್ರಸ್ಟ್​, ಬೆಂಗಳೂರಿನ ಶ್ರೀವೇಣುಗೋಪಾಲಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸೇರಿ ವಿವಿಧ ಸಂಘ-ಸಂಸ್ಥೆಗಳು ಕೊಗ್ಗ ಮಾಸ್ಟರ್ ಅವರ ಆತ್ಮಕ್ಕೆ ಸದ್ಗತಿ ಕೋರಿದ್ದು, ಕುಟುಂಬಸ್ಥರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ಕುಲದೇವರಾದ ಶ್ರೀವೇಣುಗೋಪಾಲಕೃಷ್ಣ ಕರುಣಿಸಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ.



    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!