Friday, May 17, 2024
spot_img
More

    Latest Posts

    ಯಾರಿವರು.. ಎಲ್ಲಿದ್ದರು ಇಷ್ಟು ದಿನ?; ಇದು ‘ಕ್ಷಯ’ ಹುಟ್ಟುಹಾಕಿದ ಪ್ರಶ್ನೆ!

    ಕ್ಷಯ..

    – ಇದು ಕ್ಷಯಿಸುವಂಥದ್ದು, ಸಾಯಿಸುವಂಥದ್ದು. ಆದರೆ ಕ್ಷಯ ಹುಟ್ಟುಹಾಕುವಂಥದ್ದು ಕೂಡ ಎಂದರೂ ತಪ್ಪಿಲ್ಲ. ಏಕೆಂದರೆ ಇದು ಈಗ ಒಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಅದೇ ʼಯಾರಿವರು, ಎಲ್ಲಿದ್ದರು ಇಷ್ಟು ದಿನ?ʼ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿರುವುದು ʼಕ್ಷಯʼ ಎಂಬ ಈ ಕಾದಂಬರಿ. ಅಂದಹಾಗೆ ಈ  ಪ್ರಶ್ನೆ ಅದರ ಕೃತಿಕಾರ ಡಾ.ವಾಸುದೇವ ಶೆಟ್ಟಿ ಅವರ ಕುರಿತಾದ್ದು.

    ಹಿರಿಯ ಪತ್ರಕರ್ತ ಡಾ. ವಾಸುದೇವ ಶೆಟ್ಟಿ ಅವರು ಬರೆದಿರುವ ಎರಡನೇ ಕಾದಂಬರಿ ಕ್ಷಯವನ್ನು ʼವೀರಲೋಕʼ ಪ್ರಕಾಶನ ಸಂಸ್ಥೆ ಪ್ರಕಟಿಸಿದ್ದು, ನ. 1ರಂದು ಇತರ ಹತ್ತುಕೃತಿಗಳೊಂದಿಗೆ ಈ ಕಾದಂಬರಿ ಬಿಡುಗಡೆಗೊಂಡಿದೆ.

    ʼವೀರಲೋಕʼ ಹೊರತಂದಿರುವ ಹತ್ತು ಕೃತಿಗಳ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಎನ್‌.ಆರ್.‌ ಕಾಲನಿಯ ಡಾ.ಸಿ. ಅಶ್ವಥ್‌ ಕಲಾಭವನದಲ್ಲಿ ರಾಜ್ಯೋತ್ಸವದಂದು ನಡೆದಿದೆ. ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್‌ ಈ ಕಾರ್ಯಕ್ರಮ ಉದ್ಘಾಟಿಸಿದ್ದು, ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್‌ ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದರು.

    ಡಾ.ಸಿ.ಎನ್.ಮಂಜುನಾಥ್‌ ಅವರಿಂದ ಡಾ.ವಾಸುದೇವ ಶೆಟ್ಟಿ ಅವರಿಗೆ ಸನ್ಮಾನ

    ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ವಿಜಯಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ಲೇಖಕ ಸಂತೋಷ್‌ಕುಮಾರ್‌ ಮೆಹಂದಳೆ, ರಂಗಕರ್ಮಿ-ನಟ ಮಂಡ್ಯ ರಮೇಶ್‌ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ಬರಹಗಾತಿ ಕುಸುಮಾ ಆಯರಹಳ್ಳಿ ಪುಸ್ತಕ ಪರಿಚಯ ಮಾಡಿದ್ದರು. ವೀರಲೋಕ ಬುಕ್ಸ್‌ನ ವೀರಕಪುತ್ರ ಶ್ರೀನಿವಾಸ್‌, ಬಿಡುಗಡೆಗೊಂಡ ಇತರ ಕೃತಿಗಳ ಲೇಖಕರಾದ ಮಂಜುನಾಥ್‌ ಚಾಂದ್‌, ನರೇಂದ್ರ ರೈ ದೇರ್ಲ, ರಂಗಸ್ವಾಮಿ ಮೂಕನಹಳ್ಳಿ, ರಾಜೀವ ನಾರಾಯಣ ನಾಯಕ, ನಾಗವೇಣಿ ಎಂ. ಹೆಗಡೆ, ಶುಭಶ್ರೀ ಭಟ್ಟ, ರಾಘವ್‌, ಸದಾಶಿವ ಸೊರಟೂರು ಉಪಸ್ಥಿತರಿದ್ದರು.

    ಕನ್ನಡಪ್ರಭ ಪತ್ರಿಕೆಯ ಉನ್ನತ ಸ್ಥಾನದಲ್ಲಿದ್ದು ಇತ್ತೀಚೆಗಷ್ಟೇ ನಿವೃತ್ತಿ ಹೊಂದಿರುವ, ಹಿರಿಯ ಪತ್ರಕರ್ತ ಡಾ.ವಾಸುದೇವ ಶೆಟ್ಟಿ ಅವರು ಮೂಲತಃ ಉತ್ತರಕನ್ನಡ ಜಿಲ್ಲೆಯವರು. ಇವರು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿದ್ದರೂ ತೆರೆಯಮರೆಯಲ್ಲೇ ದೊಡ್ಡಶಕ್ತಿಯಾಗಿದ್ದುಕೊಂಡು ಕೆಲಸ ಮಾಡಿದವರು. ಹೀಗಾಗಿ ಹೊರಜಗತ್ತಿಗೆ ಅಷ್ಟು ಚಿರಪರಿಚಿತರಲ್ಲ. ಆದರೆ ಅವರು ಬರೆದಿರುವ ಕಾದಂಬರಿ ʼಕ್ಷಯʼ ಅವರನ್ನು ಹೊರಜಗತ್ತಿಗೆ ಹೊಸದಾಗಿ ಪರಿಚಯಿಸುವಂಥ ಲಕ್ಷಣಗಳು ಗೋಚರಿಸಲಾರಂಭಿಸಿವೆ. ಇದು ಅಂದು ಕೃತಿ ಬಿಡುಗಡೆಯ ಸಂದರ್ಭದಲ್ಲೇ ಆರಂಭವನ್ನು ಕಂಡಿದೆ.

    ಅಂದು ಪುಸ್ತಕ ಪರಿಚಯ ಮಾಡಬೇಕಿದ್ದ ಕುಸುಮಾ ಆಯರಹಳ್ಳಿ ಅವರು, ʼಯಾರು ಈ ವಾಸುದೇವ್ ಶೆಟ್ಟಿ ಸರ್..? ಎಲ್ಲಿದ್ದರು ಇಷ್ಟು ದಿನ..?’ ಎಂಬ ಪ್ರಶ್ನೆಯನ್ನು ಬಿಡುಗಡೆಯ ಸಮಯಕ್ಕೆ ಕೇಳಿದ್ದಕ್ಕೆ ಇನ್ನೊಬ್ಬ ಸಾಹಿತಿ ಗುರುರಾಜ್‌ ಕೊಡ್ಕಣಿ ಅವರು ಸಾಕ್ಷಿಯಾಗಿದ್ದು, ಅವರು ಕೂಡ ವಾಸುದೇವ ಶೆಟ್ಟಿ ಅವರ ನೂತನ ಕೃತಿಯ ಕುರಿತು, ಅದರ ಬರವಣಿಗೆ ಬಗ್ಗೆ ಮಾರುಹೋಗಿದ್ದು, ಸೋಷಿಯಲ್‌ ಮೀಡಿಯಾದಲ್ಲೂ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

    ʼಕ್ಷಯʼ ಕೃತಿಯ ಓದಿನ ಬಳಿಕ ವಾಸುದೇವ ಶೆಟ್ಟಿ ಅವರ ಕುರಿತು ಗುರುರಾಜ್‌ ಕೊಡ್ಕಣಿ ಅವರ ಮಾತುಗಳು ಇಂತಿವೆ…

    ʼಯಾರು ಈ ವಾಸುದೇವ್ ಶೆಟ್ಟಿ ಸರ್..? ಎಲ್ಲಿದ್ದರು ಇಷ್ಟು ದಿನ..?’

    ಹೀಗೊಂದು ಪ್ರಶ್ನೆಯನ್ನು ಬಿಡುಗಡೆಯ ಸಮಯಕ್ಕೆ ಕುಸುಮಾ ಆಯರಹಳ್ಳಿಯವರು ಕೇಳಿದ್ದರು. ಅವರು ಕೇಳಿದ್ದಕ್ಕೆ ಕಾರಣವೂ ಇತ್ತು.ಅಷ್ಟು ಅದ್ಭುತ ಬರಹಗಾರರ ಪರಿಚಯ ನನಗಿಲ್ಲವಲ್ಲ ಎನ್ನುವ ಹಳಹಳಿಕೆಯದು.

    ಪುಸ್ತಕ ಓದಿದ ಮೇಲೆ ಕುಸುಮಾರವರ ಪ್ರಶ್ನೆ ನನ್ನದೂ ಆಗಿದೆ ಎಂದರೆ ಉತ್ಪ್ರೇಕ್ಷೆಯಲ್ಲ ಬಿಡಿ. ಎಷ್ಟು ಚಂದ ಬರೀತಾರೆ ಮಾರಾಯ್ರೆ ಈ ಲೇಖಕರು. ಚಿಕ್ಕ ಊರು, ಚಿಕ್ಕಚಿಕ್ಕ ಸಂದರ್ಭಗಳನ್ನು ಕಟ್ಟಿಕೊಡುವ ಅವರ ಶೈಲಿ ತೀರ ಅನನ್ಯ. ಅವರೇ ಹೇಳುವಂತೆ ಕತೆಯನ್ನು ಅವರು ಬರೆದದ್ದು ತೊಂಬತ್ತರ ದಶಕದ ದ್ವಿತೀಯಾರ್ಧದಲ್ಲಿಯಾದರೂ ಕಾದಂಬರಿ ಇವತ್ತಿಗೂ ಪ್ರಸ್ತುತ ಎನಿಸುವಂಥ ಭಾವ ಹುಟ್ಟಿಸಿದರೆ ಅದು ಬರಹಗಾರನ ಬರಹ ಶಕ್ತಿಗೆ ಋಜುವಾತು.

    ಇಲ್ಲಿ ಕಾದಂಬರಿಯ ಮುಖ್ಯ ಪಾತ್ರವೇ ʼಕ್ಷಯʼ. ಕ್ಷಯ ಎಂದರೆ ಕಾಯಿಲೆ, ಕ್ಷಯ ಎಂದರೆ ನಾಶ. ಕೆಲವೊಮ್ಮೆ ಕಾಯಿಲೆ ಎನ್ನುವುದೇ ನಾಶಕ್ಕೆ ಕಾರಣವೂ ಹೌದು. ಇದೊಂದು ಶ್ಲೇಷೆಯನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ ಲೇಖಕರು. ಕ್ಷಯ ಎನ್ನುವ ಪದದ ರೂಪಕವನ್ನು ಬಹಳ ಅದ್ಭುತವಾಗಿ ಬಳಸಿಕೊಂಡಿದ್ದಾರೆ ಬರಹಗಾರರು. ಓದುತ್ತ ಸಾಗಿದಂತೆ ಸಣ್ಣ ಊರು, ಊರಿನ ಘಟನಾವಳಿಗಳು, ಎಲ್ಲವೂ ಓದುಗನಿಗೆ ಸ್ಪಷ್ಟ ಸ್ಪಷ್ಟ. ಇಲ್ಲಿ ಯಾರೂ ನಾಯಕರಿಲ್ಲ, ಆದರೆ ಬರುವ ಪ್ರತಿ ಪಾತ್ರವೂ ಪ್ರಮುಖವೇ. ಚಂದದ ಪ್ರಾದೇಶಿಕ ಭಾಷೆಯ ಕಾದಂಬರಿ ಓದಿ ಮುಗಿಯುವ ಹೊತ್ತಿಗೆ ಅಂತ್ಯ ಅರ್ಥಪೂರ್ಣ ಎನ್ನಿಸಿದರೆ, ಬಿಟ್ಟು ಬಂದ ಊರು ಸುಮ್ಮನೆ ಒಮ್ಮೆ ನೆನಪಾದರೆ, ಕಾಯಿಲೆಗಳು, ಔಷಧಗಳ ಪರಿಮಿತಿ ಅರಿವಾದರೆ, ಒಮ್ಮೆ ಲೇಖಕರಿಗೆ ಮನಸಿನಲ್ಲಿಯೇ ಒಂದು ಥ್ಯಾಂಕ್ಸ್ ಹೇಳಿ ಬಿಡಿ.

    -ಗುರುರಾಜ್ ಕೊಡ್ಕಣಿ

    ಸಮಾಜಬಾಂಧವರು ವಾಸುದೇವ ಶೆಟ್ಟಿ ಅವರ ʼಕ್ಷಯʼ ಕೃತಿಯನ್ನು ಖರೀದಿಸಿ ಓದಿ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಅವರು ಇನ್ನಷ್ಟು ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವಂತೆ ಹುರಿದುಂಬಿಸಬೇಕು. ಆಸಕ್ತರು ಪುಸ್ತಕವನ್ನು ಖರೀದಿಸಲು http://www.veeralokabooks.com ಅಥವಾ http://www.bookmaadi.com ತಾಣಕ್ಕೆ ಭೇಟಿ ನೀಡಬಹುದು. ಇಲ್ಲವೇ 70221 22121 ಅಥವಾ 080-6926 2222 ಸಂಪರ್ಕಿಸಬಹುದು.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಬೆಂಗಳೂರು ನಗರ ಜಿಲ್ಲೆ ಸ್ಪೆಷಲ್‌ ಡೆಪ್ಯುಟಿ ಕಮಿಷನರ್‌ ಆಗಿ ಡಾ. ವಾಸಂತಿ ಅಮರ್‌ ನೇಮಕ

    ಸಂಬಂಧಿತ ಸುದ್ದಿ: ವಿಶ್ವ ಯೋಗ ದಿನದಂದೇ ನಿಮಗಿದೋ ಕೇಳುವ ಯೋಗ; ಕಣಗಾಲರ ‘ಮಾನಸ ಸರೋವರ’ ಕೇಳಿಸಲಿದ್ದಾರೆ ಡಾವೆಂಕಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!