Friday, May 17, 2024
spot_img
More

    Latest Posts

    ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ‌ ಸ್ಥಾಪನೆ; ಕೊನೆಗೂ ಈಡೇರಿತು ಬಹುಕಾಲದ ಪ್ರಾರ್ಥನೆ

    ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ‘ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ’ ಸ್ಥಾಪನೆ ಮಾಡುವ ಮೂಲಕ ಗಾಣಿಗ ಸಮುದಾಯದ ಬಹುಕಾಲದ ಬೇಡಿಕೆಯನ್ನು ಈಡೇರಿಸಿದೆ. ಸಾಕಷ್ಟು ಮನವರಿಕೆ-ಕೋರಿಕೆಗಳ ಬಳಿಕ ಕೊನೆಗೂ ನಿಗಮ ಸ್ಥಾಪನೆ ಕುರಿತು ನಿನ್ನೆ(ಫೆ.20) ಆದೇಶ ಹೊರಡಿಸುವ ಮೂಲಕ ಡಬಲ್‌ ಇಂಜಿನ್‌ ಸರ್ಕಾರ ಸಮಸ್ತ ಗಾಣಿಗ ಸಮಾಜದ ಮನಗೆದ್ದಿದೆ. ಅದರಲ್ಲೂ ಪ್ರಧಾನಮಂತ್ರಿಯವರೇ ಗಾಣಿಗ ಸಮಾಜದವರಾಗಿರುವ ಸಂದರ್ಭದಲ್ಲೇ ಗಾಣಿಗ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ ಆಗಿರುವುದು ಅವಿಸ್ಮರಣೀಯ ಸಂಗತಿ.

    ಸಮುದಾಯಕ್ಕೆ ಪ್ರತ್ಯೇಕ ನಿಗಮ ಇಲ್ಲವೇ ಮಂಡಳಿಯನ್ನು ಸ್ಥಾಪಿಸಬೇಕು ಎಂಬುದಾಗಿ ಗಾಣಿಗ ಸಮಾಜದ ಜನಪ್ರತಿನಿಧಿಗಳು, ಗಾಣಿಗ ಸಮಾಜದ ಸಂಘಟನೆಗಳು, ವಿವಿಧ ಕ್ಷೇತ್ರಗಳಲ್ಲಿರುವ ಸಮಾಜದ ಮುಖಂಡರು ಸರ್ಕಾರಕ್ಕೆ ಮೇಲಿಂದ ಮೇಲೆ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಇದೇ ಬೇಡಿಕೆ ಸಲುವಾಗಿ ಹಲವಾರು ಸಲ ಪ್ರತಿಭಟನೆಗಳು ಕೂಡ ನಡೆದಿದ್ದವು. ಅದಾಗ್ಯೂ ಗಾಣಿಗ ಸಮಾಜಕ್ಕೆ ಪ್ರತ್ಯೇಕ ನಿಗಮ-ಮಂಡಳಿಯ ಬೇಡಿಕೆ ನನೆಗುದಿಗೆ ಬಿದ್ದಿತ್ತು. ಆದರೆ ಈಗ ಅವೆಲ್ಲದರ ಫಲವಾಗಿ ಮತ್ತು ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರ ಸಮಾಜದ ಬೇಡಿಕೆಯನ್ನು ಪರಿಗಣಿಸಿದ್ದು ʼಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮʼವನ್ನು ಸ್ಥಾಪಿಸಿದೆ.

    ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರವಾಗಿ ಗಾಣಿಗ ಸಮಾಜದವರಾಗಿರುವ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ದಿನಕರ ಶೆಟ್ಟಿ, ಜಮಖಂಡಿ ಶಾಸಕ ಆನಂದ ಸಿದ್ದು ನ್ಯಾಮಗೌಡ ಅವರು ಕಳೆದ ವರ್ಷ ಅಧಿವೇಶನದಲ್ಲಿ ದನಿ ಎತ್ತಿದ್ದರು. ಮಾತ್ರವಲ್ಲ, ಗಾಣಿಗ ಸಮಾಜದವರಾದ ಮಾಜಿ ಸಭಾಪತಿ, ವಿಧಾನಪರಿಷತ್‌ ಮಾಜಿ ಸದಸ್ಯ ವಿ.ಆರ್.ಸುದರ್ಶನ್‌, ಶ್ರೀಪೂರ್ಣಾನಂದಪುರಿ ಸ್ವಾಮೀಜಿ (ಪೂರ್ವಾಶ್ರಮ-ಬಿ.ಜೆ.ಪುಟ್ಟಸ್ವಾಮಿ, ವಿಧಾನಪರಿಷತ್‌ ಮಾಜಿ ಸದಸ್ಯ), ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಮೋಹನ್‌ ಶೆಟ್ಟಿ ಅವರು ಕೂಡ ಗಾಣಿಗ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸುವಂತೆ ತಂತಮ್ಮ ಅಧಿಕಾರಾವಧಿಯಲ್ಲಿ ಮನವಿ ಮಾಡಿಕೊಂಡು, ಆಗ್ರಹಿಸಿದ್ದರು.

    ಮಾತ್ರವಲ್ಲದೆ ಶ್ರೀಜಯಬಸವ ಕುಮಾರ ಸ್ವಾಮೀಜಿ, ಶ್ರೀಕಲ್ಲಿನಾಥ ಸ್ವಾಮೀಜಿಯವರೂ ನಿಗಮ ಕುರಿತ ಬೇಡಿಕೆಗೆ ದನಿಗೂಡಿಸಿದ್ದರು. ಅಖಿಲ ಕರ್ನಾಟಕ ಗಾಣಿಗ ಮಹಾಸಭಾ, ಸೋಮಕ್ಷತ್ರಿಯ ಗಾಣಿಗ ಸಮಾಜ (ರಿ.) ಸೇರಿದಂತೆ ಗಾಣಿಗ ಸಮಾಜದ ವಿವಿಧ ಸಂಘ-ಸಂಸ್ಥೆಗಳು ಕೂಡ ಪ್ರತ್ಯೇಕ ನಿಗಮಕ್ಕಾಗಿ ಬೇಡಿಕೆ ಇರಿಸಿ ಮನವಿ ಮಾಡಿಕೊಂಡಿದ್ದವು. ಈ ಮೂಲಕ ಗಾಣಿಗ ಸಮಾಜದ ಸಂಘಟಿತ ಹೋರಾಟಕ್ಕೆ ಜಯ ಸಿಕ್ಕಿದೆ.

    ಸರ್ಕಾರಿ ಆದೇಶದಲ್ಲಿ ಏನಿದೆ?

    ಗಾಣಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಒಂದು ಹೊಸ ನಿಗಮವನ್ನು ಸ್ಥಾಪಿಸಲು ಮುಖ್ಯಮಂತ್ರಿ ಅವರಿಂದ ಆದೇಶವಾಗಿರುತ್ತದೆ. ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಕ್ರಮ ಸಂಖ್ಯೆ: 78 (ಎ)ಯಿಂದ (4)ರ ವರೆಗೆ ಬರುವ ಗಾಣಿಗ, ತೇಲಿ, ಗಾಂಡ್ಲ, ವನಿಯನ್ ಹಾಗೂ ಜೋತಿನಗರ, ಜ್ಯೋತಿನಗರ ವೈಶ್ಯ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ʼಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮʼವನ್ನು ಸ್ಥಾಪಿಸಿ ಆದೇಶಿಸಲಾಗಿದೆ.

    ರಾಜ್ಯದ ಗಾಣಿಗ,ತೇಲಿ,ವನಿಯನ್, ಜ್ಯೋತಿನಗರ ಹಾಗೂ ಜ್ಯೋತಿನಗರ ವೈಶ್ಯ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಗಾಣಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಲಾಗಿದೆ.” ಮುಖ್ಯಮಂತ್ರಿ @BSBommai

    Originally tweeted by CM of Karnataka (@CMofKarnataka) on February 20, 2023.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಕರ್ನಾಟಕದಲ್ಲೂ ನಮ್ಮ ಪರಿವಾರ ಇದೆ ಎಂಬ ಭಾವನೆ ಮೂಡಿದೆ: ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ

    ಸಂಬಂಧಿತ ಸುದ್ದಿ: ನಿಮಗೆ ಚುನಾವಣೆ ಗೆಲ್ಲಲು ಮೋದಿ ಹೆಸರು ಬೇಕು, ಗಾಣಿಗ ಸಮಾಜ ಬೇಡವೇ..?

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!