Friday, May 17, 2024
spot_img
More

    Latest Posts

    ಸಮಾಜದ ಸಂಘಟಿತ ಶಕ್ತಿಗೆ ನಿದರ್ಶನ, ರಾಹುಲ್‌ ಗಾಂಧಿಯ ಈ ಪ್ರಕರಣ!

    ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಇತ್ತೀಚೆಗೆ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿದ್ದಷ್ಟೇ ಅಲ್ಲದೆ, ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದೂ ನಡೆದಿದೆ. ಇದಕ್ಕೆ ಕಾರಣ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದು ಎಂಬುದು ಮೇಲ್ನೋಟಕ್ಕೆ ಅನಿಸಿದರೂ ರಾಹುಲ್‌ ಗಾಂಧಿ ಇಂಥದ್ದೊಂದು ಪರಿಸ್ಥಿತಿಗೆ ಒಳಗಾಗಲು ಪ್ರಮುಖ ಕಾರಣ ಅವರು ಒಂದು ಸಮುದಾಯವನ್ನು ಟೀಕಿಸಿದ್ದು. ಅರ್ಥಾತ್‌, ಲಲಿತ್‌ ಮೋದಿ, ನೀರವ್‌ ಮೋದಿಯವರ ಹೆಸರಿನೊಂದಿಗೆ ಪ್ರಧಾನಿ ಮೋದಿಯವರ ಹೆಸರನ್ನೂ ತಳುಕು ಹಾಕಿ ಇಡೀ ಒಂದು ಸಮುದಾಯವನ್ನೇ ಟೀಕಿಸಿದ್ದು ಅವರಿಗೆ ಮುಳುವಾಯಿತು.

    ಮೋದಿ ಅಂದರೆ ಸಮಸ್ತ ಗಾಣಿಗ ಸಮುದಾಯವನ್ನು ಟೀಕಿಸಿದ್ದ ರಾಹುಲ್‌ ಗಾಂಧಿಗೆ ಕೊನೆಗೆ ಅದೇ ಮುಳುವಾಗಿದ್ದು, ಆ ವಿಷಯ ಕೋಲಾರದ ಮುಳಬಾಗಿಲಿನಿಂದ ಗುಜರಾತಿನ ಸೂರತ್‌ವರೆಗೂ ತಲುಪಿ, ಸಂಸತ್ತಿನಾಚೆಗೆ ಕೊಂಡೊಯ್ದು ನಿಲ್ಲಿಸಿದೆ. ಅರ್ಥಾತ್‌, ಕರ್ನಾಟಕದ ಗಾಣಿಗ ಸಮುದಾಯದ ಮುಖಂಡರಲ್ಲಿ ಒಬ್ಬರಾಗಿರುವ ಕೋಲಾರದ ಮುಳಬಾಗಿಲಿನ ಪಿ.ಎಂ. ರಘುನಾಥ್‌, ಗುಜರಾತ್‌ನ ಗಾಣಿಗ ಸಮುದಾಯದ ಮುಖಂಡರಲ್ಲೊಬ್ಬರಾಗಿರುವ ಸೂರತ್‌ ಶಾಸಕ ಪೂರ್ಣೇಶ್‌ ಮೋದಿಯವರ ಸಂಘಟಿತ ಪ್ರಯತ್ನ ರಾಹುಲ್‌ ಗಾಂಧಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಲ್ಲದೆ, ಜಾತಿಯನ್ನು ನಿಂದಿಸಿ ಮಾತನಾಡಿದ್ದಕ್ಕೆ ತಕ್ಕಶಾಸ್ತಿ ಆಗುವಂತೆ ಮಾಡಿದೆ.

    ಪ್ರಕರಣದ ವಿವರ

    ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ 2019ರ ಲೋಕಸಭಾ ಚುನಾವಣೆಯಲ್ಲಿ ಕೋಲಾರದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅಂದು ಕೆ.ಎಚ್.ಮುನಿಯಪ್ಪ ಪರವಾಗಿ ಮತ ಕೇಳುವಾಗ, ‘ನೀರವ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಇವರೆಲ್ಲರ ಸರ್‌ನೇಮ್‌ ಒಂದೇ ಆಗಿದ್ದು, ಈ ಎಲ್ಲ ಕಳ್ಳರು ದೇಶವನ್ನು ಲೂಟಿ ಮಾಡಿದ್ದಾರೆ’ ಎಂದು ಹರಿಹಾಯ್ದಿದ್ದರು. ಈ ಮೂಲಕ ಮೋದಿ ಎಂಬ ಸರ್‌ನೇಮ್‌ ಅರ್ಥಾತ್‌ ಗಾಣಿಗ ಸಮುದಾಯವನ್ನೇ ಅವಮಾನಿಸಿ ಮಾತನಾಡಿದ್ದರು.

    ಪೂರ್ಣ ವಿರಾಮ?

    ರಾಹುಲ್‌ ಗಾಂಧಿ ಗಾಣಿಗ ಸಮುದಾಯವನ್ನು ನಿಂದಿಸಿದ್ದನ್ನು ಖಂಡಿಸಿ ಅಷ್ಟಕ್ಕೇ ಸುಮ್ಮನಾಗದ ಕೋಲಾರ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಪಿ.ಎಂ. ರಘುನಾಥ್‌, ಬಳಿಕ ಸೂರತ್‌ ಶಾಸಕ ಪೂರ್ಣೇಶ್‌ ಮೋದಿಯನ್ನು ಸಂಪರ್ಕಿಸಿ, ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡಿದ್ದರು. ಅವುಗಳ ಆಧಾರದ ಮೇಲೆ ಸೂರತ್‌ನ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಪೂರ್ಣೇಶ್‌ ಮೋದಿ ಪ್ರಕರಣ ದಾಖಲಿಸಿದ್ದರು.

    ನಾನೇ ಸಾಕ್ಷಿ: ರಘುನಾಥ್‌ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಸಾಕ್ಷ್ಯಾಧಾರಗಳನ್ನು ನೀಡಿ ಸುಮ್ಮನಾಗದೆ ಸೂರತ್‌ಗೆ ತೆರಳಿ ಕಟಕಟೆಯಲ್ಲಿ ನಿಂತಿದ್ದರು. ʼಅಂದು ಮಾನಹಾನಿಕರ ಭಾಷಣ ಮಾಡಿದ್ದವರು ಇವರೇʼ ಎಂದು ರಾಹುಲ್ ಗಾಂಧಿಯನ್ನು ಗುರುತಿಸಿ ಸಾಕ್ಷಿ ನುಡಿದಿದ್ದರು. ಅದಕ್ಕೆ ಪೂರಕವಾಗಿ ರಾಜ್ಯ ಚುನಾವಣಾ ಆಯೋಗದಿಂದ ಕೋಲಾರದಲ್ಲಿ ಚಿತ್ರೀಕರಣಗೊಂಡಿದ್ದ ಕಾರ್ಯಕ್ರಮದ ಸಂಪೂರ್ಣ ವೀಡಿಯೊ ನ್ಯಾಯಾಲಯಕ್ಕೆ ಪ್ರಮುಖ ಸಾಕ್ಷಿಯಾಗಿ ಒದಗಿಸಿದ್ದರು. ಪ್ರಕರಣ ಇತ್ಯರ್ಥಗೊಳಿಸಿದ ನ್ಯಾಯಾಲಯ ರಾಹುಲ್‌ ಗಾಂಧಿಗೆ 2 ವರ್ಷಗಳ ಶಿಕ್ಷೆ ವಿಧಿಸಿದೆ. ಈ ಮೂಲಕ ಗಾಣಿಗ ಸಮುದಾಯವನ್ನು ನಿಂದಿಸಿದ ವಿಚಾರಕ್ಕೆ ಒಂದು ಹಂತದ ಪೂರ್ಣ ವಿರಾಮ ಇಟ್ಟಂತಾಗಿದೆ.

    ಚುನಾವಣೆ ಪ್ರಚಾರ ಹಿಂದಿನ ಸಾಧನೆ ಮತ್ತು ಮುಂದಿನ ಅಭಿವೃದ್ಧಿ ಕುರಿತಾಗಿರಬೇಕು. ರಾಜಕೀಯ ವಿರೋಧಿಗಳ ವಿರುದ್ಧ ಮಾತನಾಡುವಾಗ ವೈಯಕ್ತಿಕ ತೇಜೋವಧೆ ಆಗದಂತೆ ಎಚ್ಚರಿಕೆ ವಹಿಸಬೇಕು.

    | ಪಿ.ಎಂ.ರಘುನಾಥ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ, ಕೋಲಾರ.

    ಸಮಾಜದ ಸಂಘಟಿತ ಶಕ್ತಿಯ ಜಯ

    ಒಟ್ಟಿನಲ್ಲಿ ಈ ಪ್ರಕರಣದ ತಾರ್ಕಿಕ ಅಂತ್ಯದ ಹಿಂದಿರುವುದು ಗಾಣಿಗ ಸಮಾಜದ ಇಬ್ಬರು ಮುಖಂಡರು ಎಂಬುವುದು ನಿಜ. ನೆರೆರಾಜ್ಯಗಳ ಇಬ್ಬರು ಗಾಣಿಗ ಮುಖಂಡರ ವ್ಯವಸ್ಥಿತ ಕಾರ್ಯತಂತ್ರ ರಾಷ್ಟ್ರೀಯ ಪಕ್ಷದ ನೇತಾರರೊಬ್ಬರನ್ನು ಇಕ್ಕಟಿಗೆ ಸಿಲುಕಿಸಿದೆ. ಇಬ್ಬರು ಮುಖಂಡರು ಸಂಘಟಿತರಾಗಿ ಇಷ್ಟು ಕೆಲಸ ಮಾಡಬಹುದಾದರೆ ಗಾಣಿಗ ಸಮಾಜದ ಹಲವಾರು ಮುಖಂಡರು ಸಂಘಟಿತರಾದರೆ ಸಮಾಜಕ್ಕೆ ಒಳಿತಾಗುವ ಇನ್ನೂ ಹಲವು ಕಾರ್ಯಗಳನ್ನು ಮಾಡಬಹುದು ಎನ್ನುವುದಕ್ಕೆ ಈ ಪ್ರಕರಣವೇ ನಿದರ್ಶನ. ಗಾಣಿಗ ಸಮಾಜದ ಅಂಥ ಸಂಘಟನೆಗೆ ವೇದಿಕೆ ಕೊಡುವುದೇ ಗ್ಲೋಬಲ್‌ ಗಾಣಿಗ.ಕಾಮ್‌ನ ಪ್ರಮುಖ ಉದ್ದೇಶಗಳಲ್ಲಿ ಒಂದು. ಸಂವಹನ-ಸಂಘಟನೆಯೇ ಶಕ್ತಿ ಎಂಬುದನ್ನು ಇನ್ನಾದರೂ ಅರಿತು ಪಾಲಿಸೋಣ.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನದಂದು ಅವರನ್ನು ನೆನಪಿಸಿಕೊಂಡ ರಘುನಾಥ್‌

    ಸಂಬಂಧಿತ ಸುದ್ದಿ: ಗಾಣಿಗ ನಿಗಮ ಸ್ಥಾಪನೆ: ಸಮುದಾಯದ ಸಂಘ-ಸಂಸ್ಥೆಗಳಿಂದ ಸಂಭ್ರಮಾಚರಣೆ, ಸಿಎಂಗೆ ಅಭಿನಂದನೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!