Thursday, May 2, 2024
spot_img
More

    Latest Posts

    ಆಂಧ್ರ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಟಿಜೆಎ ಗಾಣಿಗ ನಿಧನ

    ಬೆಂಗಳೂರು: ಪ್ರತಿಷ್ಠಿತ ಆಂಧ್ರ ಬ್ಯಾಂಕ್‌ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರೂ ಆಗಿದ್ದ ತೆಂಕನಿಡಿಯೂರು ಜನಾರ್ದನ ಅನಂತ ಗಾಣಿಗ (84) ಅವರು ನಿನ್ನೆ ನಿಧನರಾದರು. ಟಿಜೆಎ ಗಾಣಿಗ ಎಂದೇ ಖ್ಯಾತರಾಗಿದ್ದ ಅವರು ಜು. 10ರಂದು ಕಿನ್ನಿಮೂಲ್ಕಿಯಲ್ಲಿರುವ ತಮ್ಮ ನಿವಾಸದಲ್ಲಿ ಅಸುನೀಗಿದರು. ಅವರು ಪತ್ನಿ, ಪುತ್ರಿ ಸಂಧ್ಯಾ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುತ್ತಾರೆ.

    ಅತ್ಯುನ್ನತ ಹುದ್ದೆ: ಗಾಣಿಗ ಸಮುದಾಯದಲ್ಲಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಅತ್ಯುನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಟಿಜೆಎ ಗಾಣಿಗರದ್ದು. ಅವರು ಸಿಂಡಿಕೇಟ್‌ ಬ್ಯಾಂಕ್ ವರಿಷ್ಠರಾಗಿದ್ದ ಟಿಎಪೈ ಅವರ ಮುಖೇನ ಸಿಂಡಿಕೇಟ್‌ ಬ್ಯಾಂಕ್‌ ಉದ್ಯೋಗಿಯಾಗಿ ಸೇರುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು.

    ಜವಾಬ್ದಾರಿ ಸಮರ್ಥ ನಿರ್ವಹಣೆ: ಟಿಜೆಎ ಗಾಣಿಗರು ನಂತರ ಒಂದೊಂದೇ ಮಜಲನ್ನು ತಲುಪುತ್ತ ವಿವಿಧ ಸ್ತರಗಳಲ್ಲಿ ಸುಮಾರು ಮೂರೂವರೆ ದಶಕಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ನವದೆಹಲಿಯ ಶಾಖೆಯಲ್ಲಿ ಗಣನೀಯ ಕಾರ್ಯನಿರ್ವಹಣೆ ಮಾಡಿದ್ದ ಇವರು ಬಳಿಕ ಮಣಿಪಾಲ ಪ್ರಧಾನ ಕಚೇರಿಯಲ್ಲಿ ಮಹಾಪ್ರಬಂಧಕ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸಿದರು.

    ಪ್ರಮುಖ ಪಾತ್ರ: ಆಂಧ್ರ ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಪದೋನ್ನತಿ ಹೊಂದಿದ ಗಾಣಿಗರು ಬಳಿಕ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರೂ ಆಗಿ ಕಾರ್ಯನಿರ್ವಹಿಸಿದರು. ಅವರ ನೇತೃತ್ವದಲ್ಲಿ ಆಂಧ್ರ ಬ್ಯಾಂಕ್‌ ಸಾಕಷ್ಟು ಹೊಸತನಕ್ಕೆ ಸಾಕ್ಷಿಯಾಯಿತು. ಆಂಧ್ರ ಬ್ಯಾಂಕ್‌ನ ಸರ್ವತೋಮುಖ ಅಭಿವೃದ್ಧಿಯಲ್ಲಿ ಟಿಜೆಎ ಗಾಣಿಗರು ಪ್ರಮುಖ ಪಾತ್ರ ವಹಿಸಿದ್ದರು. ನಿವೃತ್ತಿ ಬಳಿಕ ಬಿಎಸ್‌ಆರ್‌ಬಿ ದಕ್ಷಿಣ ವಲಯದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಆ ನಂತರ ಕಿನ್ನಿಮೂಲ್ಕಿಯಲ್ಲಿ ವಿಶ್ರಾಂತ ಜೀವನದಲ್ಲಿದ್ದರು.

    ಸಾಂಸ್ಕೃತಿಕ ಚಟುವಟಿಕೆ: ವೃತ್ತಿ ಬದುಕಿನ ಜೊತೆಗೆ ವೃತ್ತಿಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದ ಟಿಜೆಎ ಗಾಣಿಗರು, ಉಡುಪಿ ಮತ್ತು ಮಣಿಪಾಲದ ಬಹುತೇಕ ಎಲ್ಲ ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಯಾರಾಗುತ್ತಾರೆ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಚೊಚ್ಚಲ ಅಧ್ಯಕ್ಷ?

    ಸಂಬಂಧಿತ ಸುದ್ದಿ: ಉಡುಪಿ ಪರ್ಯಾಯೋತ್ಸವಕ್ಕೆ ಗಾಣಿಗ ಸಮಾಜದಿಂದ ಅಕ್ಕಿಮುಡಿ ಸಮರ್ಪಣೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!