Sunday, September 22, 2024
spot_img
More

    Latest Posts

    ಏಳು ವರ್ಷ ಪೂರೈಸಿದ ವಿಶ್ವ ಗಾಣಿಗರ ಚಾವಡಿ; ಇಲ್ಲಿದೆ ಇದುವರೆಗಿನ ಕೆಲಸಗಳ ಕೈಪಿಡಿ..

    ಬೆಂಗಳೂರು: ಆಧುನಿಕ ಜಗತ್ತನ್ನು ಸಾಮಾಜಿಕ ಜಾಲತಾಣ ಆವರಿಸಿಕೊಂಡಿದೆ. ಸಂವಹನ ಮಾತ್ರವಲ್ಲದೆ ಬಹುತೇಕ ಎಲ್ಲ ವ್ಯವಹಾರಗಳೂ ಆನ್‌ಲೈನ್ ಮೂಲಕವೇ ನಡೆಯುತ್ತಿವೆ. ಗುರುತು-ಪರಿಚಯವಿಲ್ಲದ ಜನ ಮನಸ್ಸಿಗೆ ಹತ್ತಿರವಾಗುತ್ತಿದ್ದಾರೆ, ಪರಿಚಿತರ-ಸಮುದಾಯದವರ ನಡುವಿನ ಒಡನಾಟ ಹೆಚ್ಚಾಗುತ್ತಿದೆ.

    ಟ್ವಿಟರ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ನಂಥ ತಂತ್ರಾಂಶಗಳು ಬರೀ ಸಾಮಾಜಿಕ ಜಾಲತಾಣಗಳಾಗಿಯಷ್ಟೇ ಉಳಿಯದೆ ಸಾಮಾಜಿಕ ಚಟುವಟಿಕೆಗಳಿಗೂ ವೇದಿಕೆ ಆಗುತ್ತಿವೆ. ಅಂಥದ್ದೇ ಒಂದು ವೇದಿಕೆಯೇ ವಿಶ್ವ ಗಾಣಿಗರ ಚಾವಡಿ (ರಿ.) ಸೋಷಿಯಲ್‌ ಮೀಡಿಯಾ ತಂಡ.

    ಸಾಮಾಜಿಕ ಜಾಲತಾಣದ ಮುಖೇನ ಸಾಮಾಜಿಕ ಚಟುವಟಿಕೆಗಳಿಗೆ ಮಿಡಿಯುವ ಯುವ ಮನಸ್ಸುಗಳನ್ನು ಒಂದುಗೂಡಿಸಿ, ಅವರಿಂದ ಎಲ್ಲ ರೀತಿಯ ಸಹಕಾರ ಪಡೆದು ಅನಾರೋಗ್ಯಪೀಡಿತರಿಗೆ, ಬಡ ಹೆಣ್ಣುಮಕ್ಕಳ ಮದುವೆಗೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುವ ಕಾಯಕದಲ್ಲಿ ಕಳೆದ 7 ವರ್ಷಗಳಿಂದ ನಿರಂತರವಾಗಿ ವಿಶ್ವ ಗಾಣಿಗರ ಚಾವಡಿ(ರಿ.) ತೊಡಗಿಕೊಂಡಿದೆ.

    ಈ ಸಂಘಟನೆಯ ಆರಂಭದ ದಿನಗಳು ಅಷ್ಟೇನೂ ಸುಲಭವಾಗಿರಲಿಲ್ಲ. ಪರಸ್ಪರ ಅಪರಿಚಿತರಾಗಿದ್ದ ಸದಸ್ಯರು ಸಮಾಜದ ಎದುರು ನೆರವಿಗಾಗಿ ಕೈಚಾಚಿದಾಗ ಸಹಜವಾಗೇ ಇತರರಿಗೆ ಸಂಶಯ ಮೂಡುವುದರಲ್ಲಿ ತಪ್ಪಿಲ್ಲ. ಕಾರಣ ಸೇವೆ ಹೆಸರಿನಲ್ಲಿ ಹಣವನ್ನು ಪಡೆದು ವಂಚಿಸಿದರೆ ಎಂಬ ಭಯ ಎಲ್ಲರಲ್ಲೂ ಇದ್ದೇ ಇರುತ್ತಿತ್ತು. ಅದಕ್ಕಾಗಿ ಸೋಷಿಯಲ್ ಮೀಡಿಯಾದ ಮಿತ್ರರು ಒಂದು ವಿಶ್ವಾಸಾರ್ಹ ತಂಡ ರಚಿಸುವ ಯಶಸ್ವಿಯಾದೆವು ಎಂದು ಚಾವಡಿಯ ಸದಸ್ಯರು ಹೇಳಿಕೊಂಡಿದ್ದಾರೆ.

    ಪ್ರಪ್ರಥಮವಾಗಿ ಮಂಗಳೂರು ಸುತ್ತಮುತ್ತಲ ಬೀಚ್‌ಗಳಿಗೆ ಪ್ರವಾಸ ಕೈಗೊಳ್ಳುವ ಘೋಷಣೆ ಮೂಲಕ ಸಾಮಾಜಿಕ ಜಾಲತಾಣದ ಮಿತ್ರರಿಗೆ ಪ್ರಥಮ ಆಹ್ವಾನ ನೀಡಲಾಯಿತು. ಹೆಚ್ಚಿನ ಮಿತ್ರರು ಅಂದು ಪ್ರವಾಸದಲ್ಲಿ ಪಾಲ್ಗೊಂಡು ಪರಸ್ಪರ ಪರಿಚಯ ಮಾಡಿಕೊಂಡರು. ಅಷ್ಟೇ ಅಲ್ಲದೆ ನಮ್ಮ ತಂಡವನ್ನು ಸಮಾಜಕ್ಕೆ ದಾರಿದೀಪವಾಗುವ ನಿಟ್ಟಿನಲ್ಲಿ ಹೇಗೆ ರೂಪಿಸಬಹುದು ಎಂಬ ಬಗ್ಗೆ ಗೆಳೆಯರ ನಡುವೆ ಸಂಭಾಷಣೆ ನಡೆಯಿತು. ಆಗ ಮೂಡಿದ ಹೊಸ ಕಲ್ಪನೆಯಿಂದ ವಿಶ್ವ ಗಾಣಿಗರ ಚಾವಡಿ ಎಂಬ ಹೆಸರಿನಲ್ಲಿ ವಾಟ್ಸ್ಯಾಪ್‌ ಗುಂಪನ್ನು ರಚಿಸಿ, ಅದರ ಮೂಲಕ ಎಲ್ಲರೂ ಪರಸ್ಪರ ಸಂಪರ್ಕದಲ್ಲಿದ್ದು, ಯಾರಿಗಾದರೂ ಸಹಾಯ ಬೇಕಿದ್ದರೆ, ಎಲ್ಲರೂ ಸ್ವಲ್ಪ ಸ್ವಲ್ಪ ಹಣ ಒಟ್ಟುಗೂಡಿಸಿ ಸಹಾಯಧನ ನೀಡುವ ಬಗ್ಗೆ ನೀಲನಕ್ಷೆ ಸಿದ್ಧವಾಯಿತು.

    2014ರ ಅಕ್ಟೋಬರ್ 22ರಂದು ಇಂಥದ್ದೊಂದು ತಂಡ ರಚಿಸಿ ಅದಕ್ಕೆ ʼವಿಶ್ವ ಗಾಣಿಗರ ಚಾವಡಿʼ ಎಂದು ನಾಮಕರಣ ಮಾಡಲಾಯಿತು. ಪ್ರಥಮವಾಗಿ ಇನೋಳಿ ದೈವಸ್ಥಾನಕ್ಕೆ ಗಾಣಿಗ ಸಮುದಾಯದ ವತಿಯಿಂದ ನೀಡಲಾದ ಪಲ್ಲಕ್ಕಿಗೆ ಸಹಕಾರ ನೀಡಬೇಕಾಗಿ ಬೇಡಿಕೆ ಬಂದಿತ್ತು. ಕೂಡಲೇ ಗೆಳೆಯರು ಪರಸ್ಪರ ಚರ್ಚಿಸಿ ನಿಧಿ ಸಂಗ್ರಹಿಸುವ ಕೆಲಸಕ್ಕೆ ಮುಂದಾದರು. ಸುಮಾರು 25,000 ಮೊತ್ತವನ್ನು ನೀಡುವ ಉದ್ದೇಶದಿಂದ ಸದಸ್ಯರಲ್ಲಿ ಬೇಡಿಕೆ ಇಟ್ಟಾಗ ಸಂಗ್ರಹವಾಗಿದ್ದು ಬರೋಬ್ಬರಿ 35,000 ರೂಪಾಯಿ. ಸದಸ್ಯರ ಸಹಕಾರ, ತುರ್ತು ಸ್ಪಂದನೆಯಿಂದ ಸೇವೆಯೆಂಬ ಬೀಜ ಮನದಲ್ಲಿ ಮೊಳಕೆಯೊಡೆಯಿತು. ಸುಮಾರು 25,000 ಮೊತ್ತವನ್ನು ಪಲ್ಕಕ್ಕಿಗೆ ಅರ್ಪಿಸಿ ಉಳಿದ 10,000 ಮೊತ್ತವನ್ನು ಮಂಗಳೂರಿನ ಜಪ್ಪುಬಪ್ಪಾಲ್ ನಿವಾಸಿ ಅನಾರೋಗ್ಯ ಪೀಡಿತರಿಗೆ ನೀಡಲಾಯಿತು. ಈ ಯೋಜನೆಗೆ ಎಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ಬಡವರ ಆಶೀರ್ವಾದದ ಫಲವಾಗಿ ಎಲ್ಲರಲ್ಲೂ ಹೊಸ ಚೈತನ್ಯ ತುಂಬಿತು. ನಿರಂತರವಾಗಿ ಇಂತಹ ಸಮಾಜಮುಖಿ  ಕಾರ್ಯ ನಡೆಸುತ್ತಾ ಸಾಗೋಣ ಎಂದು ದೃಢ ನಿರ್ಧಾರದೊಂದಿಗೆ ಮುಂದಡಿ ಇಡಲಾಯಿತು.

    ಬಳಿಕ ಮುಂದೇನು ಎಂದು ಯೋಚಿಸುತ್ತಿರುವಾಗ ಬಂಟ್ವಾಳ ತಾಲೂಕಿನ ನರಿಕೊಂಬು ಪ್ರದೇಶದ ಯುವಕರ ತಂಡ ವಿಶ್ವ ಗಾಣಿಗರ ತಂಡವನ್ನು ಸಂಪರ್ಕಿಸಿತು. ನರಿಕೊಂಬುವಿನ ಜೈನರಪೇಟೆಯಲ್ಲಿ ಒಂದು ಬಡ ಕುಟುಂಬ ಸರಿಯಾದ ಸೂರಿನ ವ್ಯವಸ್ಥೆ ಇಲ್ಲದೆ ಗುಡಿಸಲಿನಲ್ಲಿ ವಾಸವಾಗಿತ್ತು. ಕೂಲಿಕಾರ್ಮಿಕರಾಗಿದ್ದ ಮನೆ ಯಜಮಾನ ತನ್ನ ಪತ್ನಿ, ಅನಾರೋಗ್ಯ ಪೀಡಿತ ಮಗ ಹಾಗೂ ಓರ್ವ ಮಗಳ ಜೊತೆ ಅದೇ ಗುಡಿಸಲಿನಲ್ಲಿ ನೆಲೆಸಿದ್ದರು. ಇವರಿಗೆ ನೆರವಾಗುವಂತೆ ಸ್ಥಳೀಯ ಯುವಕರಿಂದ ಬೇಡಿಕೆ ಬಂದಿತ್ತು. ಕೂಡಲೇ ಅಲ್ಲಿಗೆ ತೆರಳಿದ ತಂಡಕ್ಕೆ ಮನೆ ನಿರ್ಮಿಸಲು ಮೊದಲಿಗೆ ಕಾನೂನು ತೊಡಕು ಉಂಟಾಯಿತು. ಬಳಿಕ ಕೋರ್ಟ್‌ನಲ್ಲಿ ನ್ಯಾಯಪರವಾಗಿ ತೀರ್ಪು ಬಂದ ಕೂಡಲೇ ವಿಜಿಸಿ ಸದಸ್ಯರು ಸ್ಥಳೀಯ ಯುವಕರ ಸಹಕಾರದಿಂದ ಶ್ರಮದಾನ ಮೂಲಕ ಮನೆ ನಿರ್ಮಾಣದ ಕೆಲಸಕ್ಕೆ ಚಾಲನೆ ನೀಡಿದರು. ಅಲ್ಲಿಂದ ಮನೆ ನಿರ್ಮಾಣಕ್ಕೆ ಸಹಾಯಧನ, ವಿದ್ಯಾರ್ಥಿನಿಗೆ ಸಹಾಯಧನ, ಜಿಲ್ಲೆಯಾದ್ಯಂತ ಬಡ ವಿದ್ಯಾರ್ಥಿಗಳಿಗೆ ಸಹಸ್ರ ಪುಸ್ತಕ ವಿತರಣಾ ಅಭಿಯಾನ, ಆರು ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸಂಜೀವಿನಿ ಸಹಾಯಧನ, 10 ಮಂದಿ ಬಡ ಯುವತಿಯರ ಮದುವೆಗೆ ಶುಭಮಸ್ತು ಸಹಾಯಧನ, ಅರ್ಕುಳ, ಪುತ್ತೂರು, ಬೆಳ್ತಂಗಡಿ ಗಾಣಿಗ ಸಂಘಗಳ ಸಭಾಭವನ ನಿರ್ಮಾಣಕ್ಕೆ ಸಹಾಯಧನ, ಕಟೀಲು, ಪೊಳಲಿ, ಅತ್ತಾವರ ಕ್ಷೇತ್ರಗಳಲ್ಲಿ ಸ್ವಯಂಸೇವಕರಾಗಿ, ಕರಸೇವಕರಾಗಿ, ಸ್ವಚ್ಛತಾ ಕಾರ್ಯ ಮತ್ತು ಹೊರಾಂಗಣ ಅಲಂಕಾರದಲ್ಲಿ ಭಾಗಿ, ಮೂಡುಬಿದಿರೆ ಗಾಣಿಗ ಸಂಘದ ವತಿಯಿಂದ ನಡೆದ ಗೂಡುದೀಪ ಸ್ಪರ್ಧೆಯಲ್ಲಿ ಭಾಗಿ, ಬಡ ಯುವತಿಯರ ಮದುವೆ ಸಂದರ್ಭ ಅಂಗಳ ದುರಸ್ತಿ, ಅಲಂಕಾರ, ಪೇಂಟಿಂಗ್ ಸೇವೆ, ನೂರಕ್ಕೂ ಅಧಿಕ ಬಾರಿ ಸದಸ್ಯರಿಂದ ರಕ್ತಸಂಜೀವಿನಿ ಯೋಜನೆಯಡಿ ರಕ್ತದಾನ, ಪೊಳಲಿ ದೀಪಸ್ಥಂಬಕ್ಕೆ ದೇಣಿಗೆ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ನೂರಕ್ಕೂ ಅಧಿಕ ಸದಸ್ಯರಿಂದ ನೇತ್ರದಾನ, ಕುತ್ತಾರು ಶ್ರೀ ಆದಿಸ್ಥಳ ರಕ್ತೇಶ್ವರಿ, ಏಳ್ವೆರ್ ಸಿರಿಕುಲು ಮತ್ತು ಕೊರಗಜ್ಜ ದೇವಸ್ಥಾನದ ಕಾಣಿಕೆಡಬ್ಬಿ ವಿತರಣಾ ಅಭಿಯಾನ, ಸೋಮೇಶ್ವರ ಬೀಚ್ ಸ್ವಚ್ಛತೆ, ಮನೋರಂಜನೆಗಾಗಿ ಗಾಣಿಗ ಸಮುದಾಯದವರಿಗೆ ವರ್ಷಕ್ಕೊಂದು ಪ್ರವಾಸ, ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಂಗಣ ನಿರ್ಮಾಣದಲ್ಲಿ ಕರಸೇವೆ. ಮಾತ್ರವಲ್ಲ ತಂಡದ ಐದನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕಳೆದ 2 ವರ್ಷಗಳ ಹಿಂದೆ ಪ್ರಪ್ರಥಮ ಬಾರಿಗೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಗಾಣಿಗ ಸಮುದಾಯದವರಿಗೆ ಜಿಲ್ಲಾ ಮಟ್ಟದ ವಿಶ್ವ ಗಾಣಿಗ ಟ್ರೋಫಿ ಕ್ರೀಡಾಕೂಟವನ್ನು ಅತಿ. ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ನಿರ್ವಹಿಸಿ, ಅದರಿಂದ ಬಂದ ಉಳಿಕೆ ಹಣವನ್ನು ವಿಶ್ವ ಗಾಣಿಗರ ಚಾವಡಿ ಸಹಾಯನಿಧಿಗೆ ಸಮರ್ಪಿಸಿ, ಅದರ ಮುಖೇನ ಅನೇಕ ಸೇವಾಕಾರ್ಯಗಳನ್ನು ನಡೆಸಲಾಯಿತು. ಮೇ 9, 2021ರಂದು ಭಾನುವಾರ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಗಾಣಿಗ ಸಮುದಾಯದವರಿಗೆ ದ್ವಿತೀಯ ವರ್ಷದ ವಿಶ್ವ ಗಾಣಿಗ ಟ್ರೋಫಿ ಕ್ರಿಕೆಟ್ ಮತ್ತು ಲಗೋರಿ ಪಂದ್ಯಾಟವನ್ನು ಆಯೋಜಿಸಲಾಗಿತ್ತು.

    ಇಷ್ಟೆಲ್ಲ ಸೇವಾಕಾರ್ಯಗಳು ನಿರಂತರವಾಗಿ ನಡೆಯಬೇಕಿದ್ದರೆ ಅದಕ್ಕೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಣವೂ ಅಷ್ಟೇ ಮುಖ್ಯ, ಮೊದಮೊದಲು ಬೇಡಿಕೆ ಬಂದಾಗ ಅದಕ್ಕೆ ಸ್ಪಂದಿಸಲು ಸದಸ್ಯರಲ್ಲಿ ಮನವಿ ಸಲ್ಲಿಸಿ ಆರ್ಥಿಕ ಸಹಕಾರ ಪಡೆಯಲಾಗುತ್ತಿತ್ತು. ಬಳಿಕ ಸದಸ್ಯರು ಹುಟ್ಟುಹಬ್ಬದ ಶುಭದಿನದಂದು ಸ್ವಯಂ ಪ್ರೇರಣೆಯಿಂದ ಸಹಾಯನಿಧಿಗೆ ಸಮರ್ಪಿಸುತ್ತಿದ್ದರು. ವರ್ಷಕ್ಕೊಂದು ಪ್ರವಾಸವನ್ನು ಆಯೋಜಿಸಿ ಅದರಿಂದ ಬರುವ ಉಳಿಕೆ ಹಣವನ್ನು ಸಹಾಯನಿಧಿಗೆ ಸಮರ್ಪಿಸಲಾಗುತ್ತಿದೆ. ಬಳಿಕ ಸದಸ್ಯರಿಂದ ಪ್ರತಿ ತಿಂಗಳು ದೇಣಿಗೆ ಸಂಗ್ರಹಿಸುವ ಯೋಜನೆ ರೂಪಿಸಿ ಅದಕ್ಕೆ ʼತಿಂಗೊಲ್ದ ಬೊಲ್ಪುʼ ಎಂದು ಹೆಸರಿಡಲಾಯಿತು. ಮಾಸಿಕ 100 ರೂ. ಅಥವಾ ವಾರ್ಷಿಕ 1200 ದೇಣಿಗೆ ನೀಡುವ ಮೂಲಕ ನೂರಕ್ಕೂ ಅಧಿಕ ಸದಸ್ಯರು ನಿರಂತರವಾಗಿ ತಮ್ಮ ಕೊಡುಗೆಯನ್ನು ಸಮರ್ಪಿಸಿ ತಂಡದ ಏಳಿಗೆಗೆ ಕಾರಣೀಕರ್ತರಾಗಿದ್ದಾರೆ.

    ಆರನೇ ವರ್ಷದ ವಾರ್ಷಿಕೋತ್ಸವವನ್ನು ಸರಳವಾಗಿ ಆಯೋಜಿಸಿ ಮುಂದಿನ ದಿನಗಳಲ್ಲಿ ಯಾವ ರೀತಿ ಸಮಾಜಮುಖಿಯಾಗಿ ಸೇವೆಗಳನ್ನು ನೀಡುತ್ತಾ ಸಾಗಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ನಮ್ಮೆಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲು ಸಹಕಾರ ನೀಡಿದ ದಾನಿಗಳಿಗೂ, ಸದಸ್ಯರಿಗೂ, ಹಿತೈಷಿಗಳಿಗೂ, ಹಿರಿಯರಿಗೂ ಹಾಗೂ ನಮ್ಮನ್ನು ಆಶೀರ್ವದಿಸಿದ ಫಲಾನುಭವಿಗಳಿಗೂ ಧನ್ಯವಾದಗಳು ಎಂದು ವಿಶ್ವ ಗಾಣಿಗ ಚಾವಡಿ ಹೇಳಿಕೊಂಡಿದೆ.

    ವಿಶ್ವ ಗಾಣಿಗರ ಚಾವಡಿ ತಂಡವನ್ನು ಈ ಬಾರಿ ರಿಜಿಸ್ಟ್ರೇಷನ್ ಮಾಡುವ ಮೂಲಕ ಇನ್ನಷ್ಟು ಸೇವಾಕಾರ್ಯಗಳು ಮುಂದಿನ ದಿನಗಳಲ್ಲಿ ಬಡವರಿಗೆ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ಎಲ್ಲರಿಗೂ ಧನ್ಯವಾದಗಳು. ಮುಂದಿನ ದಿನಗಳಲ್ಲಿಯೂ ನಿಮ್ಮೆಲ್ಲರ ತುಂಬುಹೃದಯದ ಸಹಕಾರವನ್ನು ಬೇಡುತ್ತೇವೆ ಎಂದು ಚಾವಡಿಯ ಸದಸ್ಯರು ತಿಳಿಸಿದ್ದಾರೆ.

    ವಿಶ್ವ ಗಾಣಿಗರ ಚಾವಡಿ (ರಿ.) ಕುರಿತ ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಪಿಡಿಎಫ್‌ ಓದಿ.

    ಸಂಬಂಧಿತ ಸುದ್ದಿ: ಜ.2ರಂದು ನಡೆಯಲಿದೆ ವಿಶ್ವ ಗಾಣಿಗ ಟ್ರೋಫಿ-2022

    ಸಂಬಂಧಿತ ಸುದ್ದಿ: ಭಾರತದ ಬಲಾಢ್ಯ ಪುರುಷನ ಬಾಲರ್ಕಕ್ಕೀಗ ಮತ್ತೊಂದು ತಾಣ, ಮತ್ತಷ್ಟು ತ್ರಾಣ…

    ಸಂಬಂಧಿತ ಸುದ್ದಿ: ಕರಾವಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹೋದರ ಸೋಮಭಾಯಿ; 4 ದಿನಗಳ ಪ್ರವಾಸದ ಬಳಿಕ ಗುಜರಾತ್‌ಗೆ ನಿರ್ಗಮನ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!