Saturday, September 21, 2024
spot_img
More

    Latest Posts

    ಯಾರಾಗುತ್ತಾರೆ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಚೊಚ್ಚಲ ಅಧ್ಯಕ್ಷ?

    ಬೆಂಗಳೂರು: ಗಾಣಿಗ ಸಮುದಾಯದ ಹಲವಾರು ವರ್ಷಗಳ ಬೇಡಿಕೆ ಆಗಿದ್ದ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಕೊನೆಗೂ ಸ್ಥಾಪನೆಗೊಂಡಿದೆ. ಈ ಮೂಲಕ ಗಾಣಿಗ ಸಮುದಾಯದಲ್ಲಿ ಹೊಸ ನಿರೀಕ್ಷೆಯೊಂದು ಕುಡಿಯೊಡೆದಿದೆ. ಇನ್ನಾದರೂ ಈ ಸಮಾಜಕ್ಕೆ ಸರ್ಕಾರದಿಂದ ಅಗತ್ಯವಿರುವ ಸಹಾಯ-ಸೌಲಭ್ಯಗಳು ಸಮರ್ಪಕವಾಗಿ ಸಿಗಲಿವೆ ಎಂಬ ಭರವಸೆಯೊಂದು ಮೂಡಿದೆ. ಆದರೆ ಇವೆಲ್ಲವೂ ನಿಗಮದ ಅಧ್ಯಕ್ಷರ ನೇತೃತ್ವದಲ್ಲಿ ಆಗಬೇಕಾದ್ದರಿಂದ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷರು ಯಾರಾಗುತ್ತಾರೆ ಎಂಬುದರ ಕುರಿತು ಕುತೂಹಲವನ್ನೂ ಹುಟ್ಟಿಸಿದೆ.

    ಅಷ್ಟಕ್ಕೂ ಇದು ಹೊಸ ನಿಗಮವಾಗಿದ್ದು, ಚೊಚ್ಚಲ ಅಧ್ಯಕ್ಷರಿಗೆ ಸಾಕಷ್ಟು ಸವಾಲುಗಳು ಇರುವುದರಿಂದ ಅಧ್ಯಕ್ಷರಾಗಿ ಆಯ್ಕೆ ಆಗಬೇಕಾದವರು ಸಮಾಜದ ಕುರಿತು ಅಪಾರ ಅರಿವು, ಸಂಪರ್ಕ, ಪ್ರಭಾವ ಹೊಂದಿರಬೇಕಾದ್ದಲ್ಲದೆ ಸಮಾಜದವರೊಂದಿಗೆ ಮುಕ್ತವಾಗಿ ಬೆರೆತು ಸ್ಪಂದಿಸುವವರೂ ಆಗಿರಬೇಕಾಗಿದೆ. ಹೀಗಾಗಿ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಚೊಚ್ಚಲ ಅಧ್ಯಕ್ಷರು ಯಾರು ಎನ್ನುವ ಕುರಿತು ಸಮಾಜದವರಲ್ಲಿ ಒಂದು ಜಿಜ್ಞಾಸೆ ಮೂಡಿದೆ. ಅಲ್ಲದೆ ಅಧ್ಯಕ್ಷರಾಗುವ ಕುರಿತು ಕೆಲವರು ಈಗಾಗಲೇ ತೆರೆಮರೆಯ ಪ್ರಯತ್ನದಲ್ಲಿ ತೊಡಗಿರುವುದು ಕೂಡ ಕೇಳಿಬಂದಿದೆ. ಏನೇ ಆದರೂ ಈ ಹೊಸ ನಿಗಮಕ್ಕೆ ಒಬ್ಬ ಸಮರ್ಥ ಅಧ್ಯಕ್ಷರ ಅಗತ್ಯವಿದೆ.

    ಗಾಣಿಗ ಸಮಾಜದ ನಿಗಮಕ್ಕೆ ಒಬ್ಬರು ಸಮರ್ಥ ಅಧ್ಯಕ್ಷ ಬೇಕಾಗಿರುವುದು ಎಷ್ಟು ಅವಶ್ಯವೋ ಅಂಥವರ ಆಯ್ಕೆಯಲ್ಲಿ ಸಮಾಜದವರೂ ಪಾಲ್ಗೊಳ್ಳುವುದು ಕೂಡ ಅಷ್ಟೇ ಅಗತ್ಯ. ಸಮಾಜ ಬಾಂಧವರು ಪರೋಕ್ಷವಾಗಿ ಇಲ್ಲವೇ ಪ್ರತ್ಯಕ್ಷವಾಗಿ ಈ ಪ್ರಕ್ರಿಯೆಯಲ್ಲಿ ಆಸಕ್ತಿ ತೋರುವುದು ಬಹುವರ್ಷಗಳ ಪ್ರಯತ್ನದ ಫಲವಾಗಿ ಲಭಿಸಿರುವ ನಿಗಮದ ಭವಿಷ್ಯದ ದೃಷ್ಟಿಯಿಂದ ಅತ್ಯವಶ್ಯ. ಹೀಗಾಗಿ ಗ್ಲೋಬಲ್‌ ಗಾಣಿಗ.ಕಾಂ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಚೊಚ್ಚಲ ಅಧ್ಯಕ್ಷರು ಯಾರಾಗಬೇಕು ಎಂಬ ಕುರಿತು ಸಮಾಜದವರಿಂದ ಅನಿಸಿಕೆಗಳನ್ನು ಆಹ್ವಾನಿಸುತ್ತಿದೆ.

    ನಿಗಮದ ಸಮರ್ಥ ಅಧ್ಯಕ್ಷರಾಗಬಹುದಾದ ಸೂಕ್ತ ವ್ಯಕ್ತಿ ನಮ್ಮ-ನಿಮ್ಮೆಲ್ಲರಲ್ಲಿ ಒಬ್ಬರಾಗಿರುವಂಥವರೇ ಆಗಿರುತ್ತಾರೆ. ಅವರು ರಾಜ್ಯದ ಯಾವ ಮೂಲೆಯಲ್ಲಿಯೂ ಇರಬಹುದು, ಈಗಾಗಲೇ ಗುರುತಿಸಿಕೊಂಡವರಾಗಿರಬಹುದು ಅಥವಾ ಸಮಾಜಕ್ಕಾಗಿ ಸಾಕಷ್ಟು ಕಾರ್ಯಗಳನ್ನು ಮಾಡಿ ಇನ್ನೂ ತೆರೆಮರೆಯಲ್ಲೇ ಇರುವವರೂ ಆಗಿರಬಹುದು. ಆದರೆ ಅಂಥ ಸಮರ್ಥ ವ್ಯಕ್ತಿ ಅಧ್ಯಕ್ಷರಾಗಲಿ ಎಂದು ಬೆಳಕು ಚೆಲ್ಲುವಂಥ ಕೆಲಸವನ್ನು ಸಮಾಜದವರೇ ಮಾಡಬೇಕು. ಇಂಥವರು ಅಧ್ಯಕ್ಷರಾದರೆ ನಿಗಮಕ್ಕೆ ಹಾಗೂ ಸಮಾಜಕ್ಕೂ ಶಕ್ತಿ ಎಂದು ಸಮುದಾಯದವರೇ ಬಲವಾಗಿ ತಮ್ಮ ಅಭಿಪ್ರಾಯ ಮಂಡಿಸಬೇಕು. ಅದಕ್ಕಾಗಿ ಗ್ಲೋಬಲ್‌ ಗಾಣಿಗ.ಕಾಂ ವೇದಿಕೆಯನ್ನು ಒದಗಿಸಲಿದೆ.

    ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗುವವರು ಹೇಗಿರಬೇಕು, ಎಂಥವರು ಅಧ್ಯಕ್ಷರಾದರೆ ಒಳ್ಳೆಯದು ಎಂಬಿತ್ಯಾದಿ ಕುರಿತು ತಾವು ಸುಮಾರು 200 ಪದಗಳಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಬಹುದು. ಜೊತೆಗೆ ಅಂಥ ವ್ಯಕ್ತಿಯ ಕಿರು ಪರಿಚಯದ ವಿವರವನ್ನೂ ನೀಡಿದರೆ ಒಳ್ಳೆಯದು. ಆಸಕ್ತರು ತಮ್ಮ ಅಭಿಪ್ರಾಯವನ್ನು [email protected] ಗೆ ಕಳುಹಿಸಬೇಕು. ಮೇಲ್‌ ಜೊತೆಗೆ ನಿಮ್ಮ ಹೆಸರು, ಮೊಬೈಲ್‌ಫೋನ್‌ ನಂಬರ್‌, ಊರನ್ನು ಕಡ್ಡಾಯವಾಗಿ ನಮೂದಿಸಿರಬೇಕು. ಆಯ್ದ ಅಭಿಪ್ರಾಯಗಳನ್ನು www.globalganiga.com ತಾಣದಲ್ಲಿ ಪ್ರಕಟಿಸಲಾಗುವುದು. ಅಭಿಪ್ರಾಯಗಳನ್ನು ಕಳುಹಿಸಲು ಜುಲೈ 15 ಕೊನೆಯ ದಿನ.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ‌ ಸ್ಥಾಪನೆ; ಕೊನೆಗೂ ಈಡೇರಿತು ಬಹುಕಾಲದ ಪ್ರಾರ್ಥನೆ

    ಸಂಬಂಧಿತ ಸುದ್ದಿ: ಗಾಣಿಗ ನಿಗಮ ಸ್ಥಾಪನೆ: ಸಮುದಾಯದ ಸಂಘ-ಸಂಸ್ಥೆಗಳಿಂದ ಸಂಭ್ರಮಾಚರಣೆ, ಸಿಎಂಗೆ ಅಭಿನಂದನೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!